ಹಾಗೇ ಸುಮ್ಮನೇ...!

ಹಾಗೇ ಸುಮ್ಮನೇ...!

ಯಾವುದೋ ಪೊಸ್ಟ್ ಲೈಕ್ ಮಾಡಿದ್ದು ನೋಡಿ, ಅವಳ ವಾಟ್ಸ್ ನಂ. ಹುಡುಕಿ ಮೆಸೆಜ್ ಮಾಡಿದ್ದೆ. ಎರಡೇ ಸೆಕೆಂಡ್ ಅವಳು ಯೆಸ್ ಎನ್ನುತ್ತಿದ್ದರೆ, 

" ಎಲ್ಲಿದ್ದಿ.. ಎಷ್ಟು ವರ್ಷ ಆಯ್ತಲ್ಲ " ಎಂದಿದ್ದೆ.

" ಇಲ್ಲೆ ... ಊರಲ್ಲೇ ಇದೀನಿ. ಪ್ರೊಗ್ರಾಂ ಇತ್ತು ಬಂದಿದ್ದೆ " 

" ಹೌದಾ.. ಎಲ್ರೂ..? ಈಗಲೂ ಲಗೇಜ್ ತಗೊಂಡೆ ಓಡಾಡ್ತೀದೀಯಾ..? " ಎಂದು ಛೇಡಿಸಿದ್ದೆ. 

" ಇಲ್ಲ ಇಲ್ಲ. ನಾನೇ ಬಂದೆ. ಕಾರ್ ತಗೊಂಡು. ಇನ್ನು ನಾಲ್ಕು ದಿನ ಇರ್ತೀನಿ " 

" ..ಅರೆ ಹೌದಾ .. ನೀನು ಇಷ್ಟು ಹತ್ತಿರ ಇದ್ದೆ ಅಂತಾದರೆ.. ಅಲ್ಲೆ ಬರ್ತಿದ್ದೆ ನೋಡು " ಎಂದೆ. 

" ಹ ಹ - ಖುಷಿಯಾಯ್ತು. ಆದರೂ ಬಂದು ಏನ್ ಮಾಡ್ತಿ.. ? "

" ಯಾವಾಗಲೋ ಸಿಗಬೇಕಿತ್ತು. ಈಗಲಾದರೂ ಸಿಗಬೋದಲ್ಲ. ತುಂಬಾ ವರ್ಷ ಕಳೆದುಬಿಟ್ವಿ " ಎಂದೆ. 

" ಹ ಹ ಅಂತಾ ಇಂಟರೆಸ್ಟಿಂಗ್ ಏನೂ ಇಲ್ಲ ಬಿಡು ಈಗ. ಅದೆಲ್ಲ ಮುಗೀತಲ್ಲ. "

" ಅರೆ ಅದೆಗೆ ಹಾಗೆ ಆಗುತ್ತೆ. ಫ಼ೀಲಿಂಗ್ಸ್ ಸಾಯೋದಿಲ್ವಲ್ಲ, ನೀನೇ ಹೇಳ್ತಿದ್ದೆ " ಎಂದಿದ್ದೆ ಹಳೆಯ ಕತೆ ನೆನಸಿಕೊಳ್ಳುತ್ತಾ, 

" ಹಾ.. ಆದರೆ ಈಗ ಸಿಕ್ಕಿದ್ರೂ ಏನೂ ಯೂಸ್ ಇಲ್ಲ. ನೀನು ಅಷ್ಟು ದೂರದಿಂದ ಬಂದು ನನ್ನ ಭೇಟಿಯಾಗುವಷ್ಟು ವರ್ತ್ ಉಳಿದಿಲ್ಲ. ಈಗ. "

" ಅಂದರೆ...?"

" ಬಿಡು.. ಇಷ್ಟು ವರ್ಷವಾದರೂ ನೆನಪಾಗ್ತಿದ್ದಂತೆ ಒಬ್ಳೆ ಇದೀನಿ ಅಂದರೆ ನೋಡೊಕೆ ಬರ್ಲಾ ಅಂತೀಯಲ್ಲ. ವಯಸ್ಸು ಸಮಯ ಎಲ್ಲ ಕಳೆದ ಮೇಲೆ ಏನಿರುತ್ತೇ ಹೇಳು..? ಆಗಿನ ಕಾಲಕ್ಕೆ ಆ ಹರೆಯ ಇತ್ಯಾದಿ ಎಲ್ಲ ಇತ್ತು. ನಿನಗೆ ಊರಿಗಿಲ್ಲದ ಧೈರ್ಯ ಮತ್ತು ವೇಗ ಎರಡೂ ಇದ್ದವು. ನನಗೂ ರೆಕ್ಕೆ ಕಟ್ಟಿ ಹಾರಿಸುತ್ತಿದ್ದಿ.. ಈಗ ಏನು ಮಾಡ್ತೀಯ. ಬಂದು ಕಾಲ ವಯಸ್ಸು ಆಸೆ, ಹರೆಯ ಎಲ್ಲ ಕಳ್ದಿದೆ. ಇತ್ತಿಚೆಗೆ ನಾವು ಭೇಟಿ ನೂ ಆಗಿಲ್ಲ- ಹತ್ರತ್ರ ಹತ್ತು ವರ್ಷ ಕಳೀತು. ಆದರೂ ಈಗಲೂ ಅದೇ ಆಸೆಯಿಂದ ಬರ್ತೀನಿ ಅನ್ನೊದು ಆಶ್ಚರ್ಯ ಕಣೊ.. ಗಂಡಸರು ಬದಲೇ ಆಗಲ್ಲ ಅಲ್ವಾ..? ಆಸೆ ತೀರೋದೆ ಇಲ್ಲ ಅನ್ಸುತ್ತೆ..? ಹ ಹ ಅದೆಲ್ಲ ಮುಗಿದು ಹೋದ ಕತೆ ಬಿಡು. ಬಂದು ಏನ್ ಮಾಡ್ತಿ.? ಮೊದಲಿನ ಹಾಗೆ ಇಬ್ರೂ ಇರೋಕೆ ಆಗುತ್ತಾ..? ಆ ಪ್ರೈವೇಸಿ ಇದ್ರೂ ಸಿಕ್ಕಿದ್ರೂ ಏನ್ ಯೂಸ್ .. ಅರಾಮಾಗಿರು .." ಎನ್ನುತ್ತಿದ್ದರೆ ಮಧ್ಯದಲ್ಲೆ ನಾನು ಬಾಯಿ ಹಾಕುತ್ತಾ..? 

" ಅಲ್ಲ ಬಂದರೆ ಏನಾಗುತ್ತೆ..? ಸಿಗಬಹುದಿತ್ತಲ್ವಾ..? ಏನು ನಾವು ಅಪರಿಚಿತರಾ..? " 

" ಅದೇ ಆಗಲ್ಲ ಅಂದೆ ಅಪರಿಚಿತರಲ್ಲ ದೇಹದ ಕಣ ಕಣಾ ಪರಿಚಿತರಾದರೂ ಆಗುತ್ತಾ ಈಗ. ಕಾಲ ದೇಹ ಎರಡೂ ಬದಲಾಗಿರುತ್ತೆ ಅಲ್ವಾ. ಸಿಗೋದು ದೊಡ್ಡದಲ್ಲ ಆದರೆ ಅದಕ್ಕೆಲ್ಲ ವರ್ತ್ ಇಲ್ಲ ಬಿಡು "

" ಯಾವುದಕ್ಕೆಲ್ಲ..? " 

" ಹ ಹ ಏನಿಲ್ಲ.. ಸುಮ್ಮನೆ ಸಿಗುವುದರಿಂದ ಏನ್ ಯೂಸ್ ಇಲ್ಲ ಈ ಸಂಧಿಕಾಲದಲ್ಲಿ.. ನಿನ್ ಪಾಡಿಗ್ ಇರು. ಆದರೆ ಇಷ್ಟು ಸಮಯದ ಮೇಲೂ ಬರ್ತೀನಿ ಅನ್ನೋದು ಆಶ್ಚರ್ಯವೇ..? " 

ಈಗ ನಾನು ಮಾತಾಡಲೇ ಬೇಕಿತ್ತು, 

ಆಕೆಯ ದನಿಯಲ್ಲಿನ ಭಾವ ಗುರುತಿಗೆ ಸಿಕ್ಕದ್ದೇನಲ್ಲ ನನಗೆ - 

ಹಲವು ವರ್ಷ ಕಳೆದ ಸಂಬಂಧ ಅದು. 

ಆದರೇನಂತೆ ..?

" ಅದೇನು ಸಿಕ್ಕಿದರೆ ಮೊದಲಿನಂತೆ ಖಾಸಗಿಯಾಗಿ ಸಮಯ ಕಳೆಯಲಾರೆವು.. ಇನ್ ಅಲ್ ದಿ ವೇ ಅಂತಾನಾ..? " ಎಂದಿದ್ದೆ. 

" ಅಲ್ವಾ ಮತ್ತೆ ನಿಮಗೇನು ಗಂಡಸರಿಗೇ ಹೇಗಿದ್ದರೂ ನಡೆಯುತ್ತೆ. ಆದರೆ ನಮಗೆ ಹಾಗೆ ಆಗಲ್ಲ. ಇನ್ನೆಂತಾ ಅದೆಲ್ಲ ಸೇರೋದು ಇತ್ಯಾದಿ.. ? "

ಎಲ್ಲ ಭಾವಗಳ ನಂತರವೂ ನಾನು ಮಾತಾಡಲೇಬೇಕಿತ್ತು. 

"ನಿಲ್ಸು.. ಬಂದರೆ ಮತ್ತೆ ಅದೇ ರೀತಿ ಒಂದು ಕಾಟೇಜ್ ತಗೋ -ಇಬ್ಬರೂ ಜಗತ್ತೆ ಮರೆಯುವಂತೆ ಇರೋಣ - ಇತ್ಯಾದಿ ಅನ್ಕೊಂಡ್ಯಾ..? " 

" ಅಲ್ವಾ ಮತ್ತೆ - ಅದೆಲ್ಲ ಆಗುತ್ತಾದರೂ ನಿಮಗೆ ಸರಿ ಗಂಡಸರಿಗೆ, .." 

" ನಿಲ್ಸು " ಎಂದಿದ್ದೆ ಮಧ್ಯದಲ್ಲೆ. ದನಿಯೂ ಬದಲಾಗಿತ್ತು ನನಗೆ ಹಿಡಿತಕ್ಕೆ ಸಿಗದಷ್ಟು 

" ಅಲ್ಲ ನಿನ್ನ ನೋಡುತ್ತೇನೆ  ಎನ್ನುವ ಭಾವಕ್ಕೆ ಪಕ್ಕಾಗಿ ನಾನು ಬರಲಾ ಎನ್ನುತ್ತಿದ್ದರೆ ಎಷ್ಟೆಲ್ಲ ನೀನು ಯೋಚನೆ ಮಾಡ್ತಿದ್ದಿಯಲ್ಲ. ಸಿಗೋದು ಅಂದರೆ ನಾವಿಬ್ಬರೂ ಈಗಲ್ಲೂ ಇಷ್ಟು ವರ್ಷಗಳ ನಂತರವೂ ಮತ್ತೆ ಅದೇ ರೀತಿ ತೆಕ್ಕೆಗೆ ಬಿದ್ದು ಸುಖಿಸಿ ಸಂಭ್ರಮಿಸಿ - ಒಮ್ಮೆ ಆಯಾಸ ತೀರಿಸಿಕೊಳ್ಳೊದೆ ಅಂತ ಯಾಕೆ ನಿನ್ನ ತಲೆಲಿ ಬಂತು. ಕಾಲ ಕಾಲಕ್ಕೆ ಮನುಶ್ಯ ಬೆಳೆಯಬೇಕು ಅನ್ನೋದು ಬರೀ ಹೇಳಿಕೆ ಅಲ್ಲ ಅದು ಎಲ್ಲರಿಗೂ ಅಪ್ಲೈ ಆಗಬೇಕು. 

ಯಾಕೆ ಗಂಡಸರು ಹಾಗೆ ಅಲ್ವ …. ಅಂತ ಮಾತಾಡ್ತೀಯಲ್ಲ. ಈಗಲೂ ಇಷ್ಟು ವರ್ಷಗಳ ನಂತರದ ಭೇಟಿಯಲ್ಲಿ ಬರೋದು “ಅದಕ್ಕೆ” ಅಂತಾ ಯಾಕನ್ಕೊಂಡೆ..? ದೊಡ್ಡ ಗ್ಯಾಪ್ ನಂತರ ಅದನು ಎಕ್ಸ್ ಪೆಕ್ಟ್ ಮಾಡೋಕೆ ನಾನೂ ನಿನ್ನ ಹಾಗೆ ದಶಕ ಪೂರೈಸಿದ್ದೇನೆ, ಅನುಭವ ಹಿರಿತನ ಎಲ್ಲದಕ್ಕೆ ದಕ್ಕಿದ್ದೇನೆ ಎಂದ್ಯಾಕೆ ಅನ್ನಿಸಲಿಲ್ಲ. ತೀರ ಬರ್ಲಾ ಎನ್ನುವ ಮಾತಿನ ಹಿಂದೆ ಮತ್ತೊಮ್ಮೆ ಅದೇ ಹಳೆಯ ಪ್ರೇಮಿಗಳಂತೆ ಸೇರೋಣ ಎನ್ನೋದೆ ಇರುತ್ತೆ ಅಂತಾ ಯಾಕಾದರೂ ಅನ್ನಿಸಿಬಿಡುತ್ತೆ ನಿನ್ನನ್ನು ಸೇರಿಸಿ ಈ ಜಗತ್ತಿನಲ್ಲಿ ಹೆಚ್ಚಿನ ಹೆಂಗಸರಿಗೆ. ನಿನಗೊಂದು ಗೊತ್ತಿರಲಿ.

ಹೆಂಗಸು ಹೇಗೆ ಸಾವಿರ ಬಾರಿ ಎಲ್ಲವನ್ನೂ ಯೋಚಿಸಿ ನಿರ್ಧರಿಸುತ್ತಾಳೆ ಅಂತಿರೋ ಗಂಡಸು ಅದಕ್ಕೂ ಹೆಚ್ಚು ಯೋಚಿಸಬಲ್ಲ. ಯಾಕೆ ಒಂದು ಚೆಂದದ ಪ್ರೇಮ ಅನುಭವಿಸಿದ ಸಮಯ, ಆ ಮಹತ್ತರ ಕಾಲಘಟ್ಟ, ಆ ನವಿರು ಬಿಸುಪು ಇವೆಲ್ಲ ಒಂದು ಕಪ್ ಕಾಫಿ ಜೊತೆ ಕೂತು ನೆಮ್ಮದಿಯಾಗಿ ಮಾತಾಡಿ ಒಬ್ಬರಿಗೊಬ್ಬರು ಚೆಂದವಾಗಿರು ಕಣೋ / ಣೇ ಎಂದು ಹಾರೈಸಿ - ಅದಕ್ಕೂ ಮಿಗಿಲೆಂದರೆ ಒಂದು ಮೊಗೆ ಬಿಯರ್ ಜೊತೆ ಒಂದೆರಡು ಗಂಟೆ ಆಪ್ತತೆ ವಿಚಾರಿಸಿಕೊಳ್ಳೊದು ಒಂದಿಷ್ಟು ಆಪ್ತ ಮಾತುಕತೆ ಮುಗಿಸಿ ನಮ್ಮ ನಮ್ಮ ಪಾಡಿಗೆ ಎದ್ದು ಹೋಗಬೋದಿತ್ತಲ್ವಾ. 

ಇದರ ಹೊರತಾಗಿ ಇಷ್ಟು ಹಳೆಯ ಕಾಲದ ಮತ್ತು ಕಳೆದ ಮೇಲೆ ಈಗಲೂ ಒಮ್ಮೆಲ್ಲೆ "ಅದಕ್ಕೆ" ಒಬ್ಬಾತ ಯೋಚಿಸುತ್ತಾನೆ ಎಂದೇ ಹೆಂಗಸರೂ ಈಗಲೂ ಯೋಚಿಸುತ್ತೀರಂತಾದರೆ, ಪುರುಷರನ್ನು ಆಗಲೂ ಈಗಲೂ ನೋಡೊದು ನಿಮ್ಮ ದೃಷ್ಟಿ ಕೋನ ಬದಲೇ ಆಗಿಲ್ಲ ಅಂತಾ. ಹೆಚ್ಚಿನವರಲ್ಲಿ ನವಿರುತನ ಇಲ್ಲ ಎನ್ನುವುದಕ್ಕಿಂತ ಅದನ್ನು ಗುರುತಿಸುವಲ್ಲೂ ಫೇಯಿಲು ಆಗಿದ್ದು ನಿಮ್ಮ ಅದೇ ತಪ್ಪು ಗ್ರಹಿಕೆ ಆಗಲೂ ಇತ್ತು ಈಗಲೂ ಇದೆಯಲ್ಲ ಅನ್ನೋದೇ ನನ್ನ ಹಳಹಳಿಕೆ. ಹೆಚ್ಚಿನ ಪುರುಷ ಆಗಲೂ ಅದೇ ಪ್ರೀತಿಯನ್ನು, ಪ್ರೀತಿಯ ಸ್ವರ್ಗವನ್ನು ಇದೇ ಭೂ ಮಿ ಮೇಲೆ ಆಕೆಗೆ ತೋರಿಸಿಬಿಡಬೇಕು ಎನ್ನುವ ಹ್ಯಾಂವಕ್ಕೆ ಬಿದ್ದೇ ಹೇಗೆ ಅಕಾಲಿಕವಾಗಿ ಮುದುಕನಾಗುತ್ತಾ ಸತ್ತುಹೋದನೋ ಈಗಲೂ ಅಷ್ಟೆ. ಅದನ್ನು ಅನುಭವಿಸುವ ಹೆಣ್ತನ ಮಾತ್ರ ಆಗಲಿಂದಲೂ ಪಕ್ವ ಆಗಲೇ ಇಲ್ಲವಲ್ಲ ಎನ್ನೋದೇ ನನ್ನ ಕಳಕಳಿ.. 

ನಾನು ಈಗ ಕೇಳ ಬೇಕಾಗುತ್ತೆ 

ನಾನು ಬರೋದು ಅಥವಾ ನಿನ್ನ ನೋಡಬೇಕು ಅನ್ನೋದು ವರ್ತ್ ಅಲ್ಲ ಅಲ್ವಾ ನೀ ಹೇಳಿದ ಹಾಗೆ.. ಶುಭವಾಗಲಿ " 

ಸುಮ್ಮನೆ ಹತ್ತು ಸೆಕೆಂಡ್ ಸೈಲನ್ಸ್ ನಂತರ ಸಂಪರ್ಕ ಕತ್ತರಿಸಿದ್ದೆ.

-ಸಂತೋಷಕುಮಾರ್ ಮೆಹೆಂದಳೆ, ಬೆಂಗಳೂರು