ಹಿಮಾ-ಲಯ

ಹಿಮಾ-ಲಯ

ಬರಹ

ಈ ವರ್ಷದ ನೊಬೆಲ್ ಪುರಸ್ಕಾರವನ್ನು ಶ್ರೀಮಾನ್ ಲ.ನಾ.ಭಟ್ ರವರಿಗೆ ನೀಡಲಾಗಿದೆ. ತೀರ ಪ್ರದೇಶದ ಜೀವಿಗಳು ಸಮುದ್ರ ಮಟ್ಟದ ಏರಿಕೆಯಿಂದಾಗಿ ಮೃತಪಟ್ಟಿದ್ದು ಅದು ಇನ್ನು 1000 ವರ್ಷಗಳ ನಂತರ ನಮಗೆ ಇಂಧನವಾಗಿ ದೊರಕಲಿದ್ದಾರೆ ಎನ್ನುವ ಮಹತ್ತರವಾದ ಸಂಶೋಧನೆಗೆ ಅವರಿಗೆ ಪುರಸ್ಕಾರ ದೊರಕಿದೆ. ಎಲ್ಲ ತೀರ ಪ್ರದೇಶಗಳು ಮುಳುಗಿ ಪರ್ವತ ಪ್ರದೇಶಗಳೆಂದು ಬಿಂಬಿತವಾಗಿದ್ದ ಭೂ ಪ್ರದೇಶಗಳು ಮಾತ್ರ ಉಳಿದಿದ್ದು ಎಲ್ಲ ಜನರು ಅಲ್ಲಿಗೆ ಲಗ್ಗೆ ಇಟ್ಟು ಕುಳಿತಿದ್ದಾರೆ. ಭಾರತದ ಹಿಮಾಲಯ ಪರ್ವತವು ಹಿಮವನ್ನು
ಕಳೆದುಕೊಂಡು ಹಿಮಾ-ಲಯವಾಗಿ ಈಗ ವಾಸಯೋಗ್ಯವಾಗಿದೆ. ಅಲ್ಲಿ ಭಾರತದ ಮಹಾಜನತೆಯೂ, ಪಾಕಿಸ್ತನ, ಚೀನಾ ಮತ್ತು ಅಕ್ಕಪಕ್ಕದ ದೇಶಗಳ ಮಹಾಜನರು ಜೀವಿಸುತ್ತಿದ್ದಾರೆ. ಎಲ್ಲ ಖಂಡಗಳ ಎತ್ತರದ ಭಾಗಗಳು ಮಾತ್ರ ಉಳಿದಿದ್ದು ಮತ್ತೆಲ್ಲ ಜಲಪ್ರಳಯದಲ್ಲಿ ಮುಳುಗಿಹೋಗಿವೆ. ಅಲ್ಲಿಗೆ ಹಿಂದೂಗಳು, ಮುಸ್ಲಿಮರು, ಬೌದ್ಧರು, ಕ್ರಿಶ್ಚಿಯನ್ನರು, ಯಹೂದಿಗಳು, ಪ್ಯಾಲಿಸ್ತೇನಿಯನ್ನರು ಮುಂತಾದ ಮತ ಭಾಂದವರೆಲ್ಲರು ಲಗ್ಗೆ ಇಟ್ಟು ಸಂಸಾರ ನಡೆಸುತ್ತಿದ್ದಾರೆ. ಹಿಂದಿನ ಹಾಗಲ್ಲದೆ ತಮ್ಮ ಮತ ಭಾಂದವರ ಸಂಖ್ಯೆಯನ್ನು ವೃದ್ಧಿಸಲು ಕೆಲವರಿಗೆ ಈಗ ಅನುಕೂಲವಾಗಿದೆ. ತಮ್ಮ ಜಾಗವೆಂದು ಹೇಳಿ ಭಯೋತ್ಪಾದನೆಯನ್ನು ಮಾಡುತ್ತಿದ್ದವರಿಗೆ ಅವರ ಜಾಗವೆಲ್ಲ ನೀರಿನಲ್ಲಿ ಮುಳುಗಿ ಕೆಲಸವಿಲ್ಲದಂತಾಗಿದೆ. ಹಿಮಾ-ಲಯಕ್ಕೊಸ್ಕರ ಭಾರತ, ಪಾಕಿಸ್ತಾನ, ಚೀನಾ ಮುಂತಾದವೆಲ್ಲ ಹೊಸ ಯುದ್ಧಗಳನ್ನು ಪ್ರಾರಂಭಿಸಿವೆ. ಓಂದು ತಮಾಶೆಯೆಂದರೆ ಈಗ ಇವುಗಳಿಗೆಲ್ಲ ಖಂಡಾಂತರ ಕ್ಷಿಪಣಿಗಳ ಅಗತ್ಯವಿಲ್ಲ. ಎಲ್ಲರು ಅಲ್ಲಲ್ಲೆ ಹೊಡೆದಾಡಿಕೊಂಡು ಸಾಯುತ್ತಿದ್ದಾರೆ.

ಮಹಾಜನರಿಗೆಲ್ಲ ಊಟದ ಕೊರತೆ ಉಂಟಾಗಿದೆ. ಗಾಂಧಿ ತಮ್ಮ ಉಪವಾಸವನ್ನು ಪುನ: ಪ್ರಾರಂಭಿಸಿದ್ದಾರೆ. ಊಟದ ಕೊರತೆಯನ್ನು ನೀಗಿಸಲು ಎಲ್ಲರು ಪ್ರತಿ ಸೋಮವಾರ ಉಪವಾಸ ಕೈಗೊಳ್ಳಿರೆಂದು ಉಪದೇಶಿಸುತ್ತಿದ್ದಾರೆ. ಮುಸಲ್ಮಾನ ಹಿಂದೂಗಳೆಲ್ಲ ಒಂದೆಂದು, ಒಟ್ಟಿಗೆ ಬಾಳಿದರೆ ಮಾತ್ರ ನೆಮ್ಮದಿ ಸಾಧ್ಯ ಎಂದು ಚಳುವಳಿ ಸಾರಿದ್ದಾರೆ. ತೆರೇಸಾ ಹೊಸ ಹೊಸ ಸಾಂಕ್ರಮಿಕ ರೋಗಗಳಿಂದ ಜರ್ಜರಿತರಾದವರ ಶುಶ್ರೂಷೆ ಕೈಗೊಂಡಿದ್ದಾರೆ. ನಾಸಾದವರು ಸಮಸ್ಯೆಗೆ ಪರಿಹಾರ ಅನ್ಯ ಗ್ರಹಗಳ ಆಕ್ರಮಣದಿಂದ ಮಾತ್ರ ಸಾಧ್ಯವೆಂದು ನಂಬಿದ್ದಾರೆ. ಮತ್ತು ಆ ದಿಶೆಯಲ್ಲಿ ಸತತ ಪ್ರಯತ್ನ ನಡೆಸಿದ್ದಾರೆ. ಉಪಗ್ರಹಗಳು ಮಾತ್ರ ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಯಾವ ಭಗಗಳು ಹಿಮವನ್ನು ಯಾವ ಯಾವ ಪ್ರಮಾಣದಲ್ಲಿ ಕಳೆದುಕೊಳ್ಳುತ್ತಿವೆ ಮತ್ತು ಎಷ್ಟು ವಾಸಯೋಗ್ಯವಾಗಿ ಪರಿವರ್ತಿತವಾಗುತ್ತಿವೆ ಎಂಬ ಮಾಹಿತಿಯನ್ನು ತಪ್ಪದೆ ರವಾನಿಸುತ್ತಿವೆ. ಹಿಮಾ-ಲಯ, ಆಲ್ಫ್ಸ್ ಮುಂತಾದ ಪರ್ವತಗಳನ್ನು ನೋಡಿದರೆ ಜಾತ್ರೆಯ ನೆನಪಾಗುತ್ತಿದೆ. ಹಿಂದೊಮ್ಮೆ ಶಾಂತವಾಗಿ ಅನೇಕ ಋಷಿ ಮುನಿಗಳ ಜ್ಞಾನ ವೃದ್ಧಿಯ ಸ್ಥಳಗಳಾಗಿದ್ದವಿಂದು ಕೊಲೆ, ಕಳ್ಳತನ, ಸುಲಿಗೆ, ವ್ಯಭಿಚಾರ, ಯುದ್ಧ, ರಾಜಕೀಯ, ಕಪಟ, ಮೋಸಗಳ ಆಗರವಾಗಿದೆ.

ಸಿಂಗಪುರ ಸರ್ಕಾರವು ತಮ್ಮ ಪ್ರಜೆಗಳಿಗೆ ಇನ್ನು ಮಕ್ಕಳನ್ನು ಹೆರಬೇಡಿ. ನೀವು ಮಾತ್ರ ಬದುಕಿ ಸಾಯಿರಿ, ಮಾನವ ಸಂಪತ್ತಿನ ಅವಶ್ಯಕತೆ ಇನ್ನಿಲ್ಲ, ನಿಮ್ಮ ವಿಧಿಗಳ ಖರ್ಚನ್ನು ಸರ್ಕಾರವೇ ಭರಿಸಲಿದೆ ಎಂಬ ಹೊಸ ತೀರ್ಮಾನವನ್ನು ಕೈಗೊಂಡಿದ್ದಾರೆ. ಪಾಕಿಸ್ತಾನದ ಜನತೆ ಜಮ್ಮು ಮತ್ತು ಕಾಶ್ಮೀರದ ತೀರಾ ಅವಶ್ಯಕತೆಯಲ್ಲಿದ್ದಾರೆ, ಹಾಗಾಗಿ ಆ ಭಾಗಗಳನ್ನು ಅವರಿಗೇ ಬಿಟ್ಟುಕೊಡುವ ಬಗ್ಗೆ ಚಿಂತಿಸಲಾಗಿವುದೆಂದು ನೆಹರು ಸರ್ಕಾರ ಹೇಳಿದೆ. ಅಮೆರಿಕವು ಅಣು ಒಪ್ಪಂದದ ವಿಚಾರದಲ್ಲಿ ಹೊಸ ನೀತಿಯನ್ನು ರಚಿಸಲಾಗುವುದೆಂದು ಹೇಳಿದೆ. ಹಲವಾರು ದೇಶಗಳು ನೀರಿನಡಿಯಲ್ಲಿ ಮುಳುಗಿಹೋಗಿರುವುದರಿಂದ ಅಲ್ಲಿನ ಜನರಿಗೆ ಪುನರ್ವಸತಿ ಕಲ್ಪಿಸಲು, ಇರುವ ದೇಶಗಳು ಸಹಾಯಕ್ಕೆ ಮುಂದೆ ಬರಬೇಕೆಂದು ವಿಶ್ವಸಂಸ್ಥೆ ಕೇಳಿಕೊಂಡಿದೆ.

ಈ ಎಲ್ಲಾ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ನಂದಿಬೆಟ್ಟದಲ್ಲಿ ಹೊಸ ಸರ್ಕಾರ ರಚಿಸಿದ ಮಾನ್ಯ ಶ್ರೀ ಯಡಿಯೂರಪ್ಪನವರು ಏನು ತೀರ್ಮಾನ ಕೈಗೊಳ್ಳುತ್ತಾರೆಂದು ಕಾದು ನೋಡಲು ತೀರ್ಮಾನಿಸಲಾಗಿದೆ.

-ಮಾಧವ