ಅಯ್ಯಯ್ಯೋ ಇವರು ಕನ್ನಡ ಕೊಲ್ತಾ ಇದ್ದಾರಪ್ಪೋ !!

ಅಯ್ಯಯ್ಯೋ ಇವರು ಕನ್ನಡ ಕೊಲ್ತಾ ಇದ್ದಾರಪ್ಪೋ !!

ಡಿ.ಎನ್.ಶಂಕರ ಭಟ್ಟರು ಕನ್ನಡ ಬರಹದಲ್ಲಿರುವ ತೊಂದರೆಗಳ ಬಗ್ಗೆ, ಅದನ್ನು ಸರಿಪಡಿಸುವ ಬಗ್ಗೆ, ಕೆಲವು
ಮಹಾಪ್ರಾಣಗಳನ್ನು ಬಿಟ್ಟುಬಿಡುವ ಬಗ್ಗೆ ಮಾತನಾಡಿರುವುದರ ಬಗ್ಗೆ ನಮ್ಮ ಸಂಸ್ಥೆಯಲ್ಲಿ ಒಂದು ಚರ್ಚೆ ಆಯ್ತು. ಆಗ ಕೆಲವು ಮೂಢರು "ಅಯ್ಯಯ್ಯೋ ಇವರು ಕನ್ನಡ ಕೊಲ್ತಾ ಇದ್ದಾರಪ್ಪೋ !!" ಅಂತ ಬಾಯಿ ಬಾಯಿ ಬಡಕೊಂಡ್ರು. ಅಲ್ಲದೇ, ಮಹಾ ಪ್ರಾಣಗಳನ್ನು ಬಿಟ್ರೆ, ಕನ್ನಡ 
ಸಂಸ್ಕೃತಿಯೇ
ನಾಶ ಮಾಡ್ತಾ ಇದ್ದಾರೆ ಅಂತ ಹಲವರು ವಾದಿಸಿದರು. ಆಗ DNS ಅವರ ಕನ್ನಡ ಬರಹವನ್ನು
ಸರಿಪಡಿಸೋಣ ಪುಸ್ತಕದಲ್ಲಿನ ಕೆಲ ವಾಕ್ಯಗಳನ್ನು ಹಾಕಿ ಅವರಿಗೆ ಈ ಬಗ್ಗೆ ಅರಿವು
ಮೂಡಿಸಲು ಯತ್ನಿಸಿದೆ. ಅದನ್ನು ನಿಮ್ಮೊಂದಿಗೂ ಹಂಚಿಕೊಳ್ಳೋಣ ಅನ್ನಿಸಿತು.

ಕನ್ನಡ ಬರಹವನ್ನು ಸರಿಪಡಿಸುವ ಬಗ್ಗೆ, ಕೆಲವು ಮಹಾಪ್ರಾಣಗಳನ್ನು ಬಿಟ್ಟುಬಿಡುವ ಬಗೆಗಿನ ಅವರ ಮಾತುಗಳು ಇಲ್ಲಿ ಕೆಲವು ಜನರಿಗೆ
ತೊಂದರೆಯಾಗಿ ಕಂಡಿದೆ. ಆದ್ರೆ ಅದರ ಹಿಂದಿರುವ ಉದ್ದೇಶವನ್ನು DNS ( ಅವರ ಕನ್ನಡ
ಬರಹವನ್ನು ಸರಿಪಡಿಸೋಣ ಪುಸ್ತಕದಿಂದ ಆಯ್ದ ಮಾತುಗಳು) ಅವರ ಮಾತುಗಳಲ್ಲಿ ಕೇಳೋಣ:

ಕನ್ನಡ
ಬರಹ ಇವತ್ತು ಒಂದು ಸಂಧಿಕಾಲವನ್ನು ಎದುರಿಸುತ್ತಿದೆ. ಕರ್ನಾಟಕದ ನಗರಗಳಲ್ಲಿ ವಾಸಿಸುವ
ಮೇಲ್ವರ್ಗದವರ ಮಕ್ಕಳಿಗೆಲ್ಲ ಈಗಾಗಲೇ ಅದು ಅನವಶ್ಯಕವಾಗಿದೆ. ಬರಹದ ಮೂಲಕ ಎಂತಹ
ಪ್ರಯೋಜನಗಳನ್ನೆಲ್ಲ ( ಮುಖ್ಯವಾಗಿ ಅನ್ನ ) ಪಡೆಯಲು ಸಾಧ್ಯವೋ ಅವನ್ನೆಲ್ಲ ಇಂಗ್ಲಿಷ್
ಬರಹದ ಮೂಲಕವೇನೇ ಅವರು ಈಗ ಪಡೆಯಬಲ್ಲವರಾಗಿದ್ದಾರೆ. ನಮ್ಮ ಸಮಾಜದ ಉಳಿದ ಮಕ್ಕಳೂ ಇದೇ
ದಾರಿಯನ್ನು ಹಿಡಿದರೆ, ಕ್ರಮೇಣ ಕನ್ನಡ ಬರಹಕ್ಕೆ ಸಂಸ್ಕೃತ ಬರಹದ ಅವಸ್ಥೆಯೇ ಬಂದೀತು.
ಇದೇ ಗತಿಯಲ್ಲಿ ಮುಂದುವರಿದಲ್ಲಿ, ನಗರದ ಮಕ್ಕಳಂತೆ, ಉಳಿದವರಿಗೂ ಕನ್ನಡ ಬರಹ
ಅನವಶ್ಯಕವಾಗಬಲ್ಲುದು ಮತ್ತು ಕ್ರಮೇಣ ಕೆಲವೇ ಕೆಲವು ವಿದ್ವಾಂಸರ ಅವಶ್ಯಕತೆಗಳನ್ನು
ಮಾತ್ರ ಪೂರೈಸುವ ಕೆಲಸ ಕನ್ನಡ ಬರಹಕ್ಕೆ ಉಳಿದೀತು.

ಹಾಗೆಂದು
ಮೇಲಿನ ಬೇಡಿಕೆಯನ್ನು ಪೂರೈಸದಿರುವುದೂ ( ಹೊಟ್ಟೆಗೆ ಹಿಟ್ಟು) ಸರಿಯಲ್ಲ. ಕನ್ನಡ ಬರಹ
ಸಂಸ್ಕೃತದ ದಾರಿಯನ್ನು ಹಿಡಿಯದ ಹಾಗಾಗಾಬೇಕಿದ್ದಲ್ಲಿ ಬರಹದ ಮೇಲೆ ಮಡಿವಂತಿಕೆಯನ್ನು
ಹೊರಿಸಹೋಗದೆ, ಜೀವಂತಿಕೆಯನ್ನು ತುಂಬುವ ಮೂಲಕ ಅದು ಎಲ್ಲರಿಗೂ ಬೇಕಾಗುವ ಹಾಗೆ
ಮಾಡಬಹುದು. ಕನ್ನಡ ಬರಹ ಎಲ್ಲರ ಸ್ವತ್ತಾಗಬೇಕಿದ್ದಲ್ಲಿ ನಾವು ಮಾಡಬೇಕಾಗಿರುವ ಕೆಲಸಗಳು
ಹಲವಿವೆ. ಎಲ್ಲಾ ಕನ್ನಡಿಗರೂ, ಓದಲು, ಬರೆಯಲು ಕಲಿಯುವಂತೆ ಮಾಡಬೇಕು ಮತ್ತು ಆ ಕಲಿಕೆಯ
ಮೂಲಕ ತಮ್ಮ ಜೀವನದಲ್ಲಿ ಎಲ್ಲ ಪ್ರಯೋಜನಗಳನ್ನು ಪಡೆಯುವಂತಾಗಬೇಕು. ಆದ್ರೆ ಇದಕ್ಕಿರುವ
ತೊಡಕುಗಳು:

  • ನಾವು ಬಳಸುತ್ತಿರುವ ಕನ್ನಡ ಬರಹದ
    ಸ್ವರೂಪವೂ ಕೆಳವರ್ಗದ ಜನರನ್ನು ಕಲಿಕೆಯಿಂದ ದೂರ ಉಳಿಯುವಂತೆ ಮಾಡುತ್ತಿದೆ. ಯಾಕೆಂದರೆ,
    ದಿನದಿಂದ ದಿನಕ್ಕೆ ಈ ಬರಹ ಸಾಮಾನ್ಯ ಜನರಿಂದ ದೂರವಾಗುತ್ತಾ ಹೋಗುತ್ತಿದೆ, ಅವರು
    ಮಾತಿನಲ್ಲಿ ಬಳಸುವ ವಾಕ್ಯಗಳಿಗೂ ಕನ್ನಡದ ಬರಹಗಳಲ್ಲಿ ಬಳಕೆಯಾಗುತ್ತಿರುವ ವಾಕ್ಯಗಳಿಗೂ
    ನಡುವಿರುವ ಅಂತರ ಹೆಚ್ಚುತ್ತಾ ಹೋಗುತ್ತಿದೆ. ಇದರಿಂದ ಕನ್ನಡ ಬರಹವನ್ನು ಕಲಿಯುವ ಕೆಲಸ
    ಸಾಮಾನ್ಯ ಕನ್ನಡಿಗರಿಗೆ, ಅದರಲ್ಲೂ ಕೆಳವರ್ಗದ ಕನ್ನಡಿಗರಿಗೆ, ದಿನದಿಂದ ದಿನಕ್ಕೆ
    ಜಟಿಲವಾಗುತ್ತಾ ಸಾಗುತ್ತಿದೆ.

ಈ ರೀತಿ ಕನ್ನಡ ಬರಹಕ್ಕೂ ಸಾಮಾನ್ಯ ಕನ್ನಡಿಗರ ಮಾತಿಗೂ ನಡುವಿರುವ ಅಂತರ ಜಾಸ್ತಿಯಾಗುತ್ತಿರುವುದಕ್ಕೆ ಎರಡು ಕಾರಣಗಳಿವೆ.

  1. ಕನ್ನಡದವೇ ಆದ ಪದಗಳನ್ನು
    ಬರೆಯಲು ಒಟ್ಟು 33 ಅಕ್ಷರಗಳಿದ್ದರೆ ಸಾಕು. ಆದರೆ ಇವತ್ತು ಬಳಸುವ ಕನ್ನಡ ಬರಹದಲ್ಲಿ 50
    ಅಕ್ಷರಗಳಿವೆ. ಸಂಸ್ಕೃತದಿಂದ ಎರವಲಾಗಿ ಪಡೆದ ಪದಗಳನ್ನು (ಉದಾ: ವಿಧಾನ ಸಭೆ) ಕನ್ನಡ
    ಬರಹಗಳಲ್ಲಿ ನಾವು ಉಚ್ಚರಿಸುವ ಹಾಗೆ (ವಿದಾನ ಸಬೆ) ಬರೆಯುವ ಬದಲು ಸಂಸ್ಕೃತದಲ್ಲಿರುವ
    ಹಾಗೆಯೇ ಬರೆಯಬೇಕೆಂಬ ಅನವಶ್ಯಕ ನಿರ್ಬಂಧದಿಂದಾಗಿ ಈ ರೀತಿ ಬೇಕಾದುದಕ್ಕಿಂತ ಜಾಸ್ತಿ
    ಅಕ್ಷರಗಳನ್ನು ಕನ್ನಡ ಬರಹಗಳಲ್ಲಿ ಬಳಸಬೇಕಾಗಿದೆ ಮತ್ತು ಇದರಿಂದಾಗಿ ಕನ್ನಡ ಬರಹವನ್ನು
    ಕಲಿಯುವ ಕೆಲಸ ಬಹಳ ಕ್ಲಿಷ್ಟವಾದುದಾಗಿದೆ.
  2. ಅವಶ್ಯ ಇದ್ದರೂ, ಇಲ್ಲದಿದ್ದರೂ ಕನ್ನಡ ಬರಹಗಳಲ್ಲಿ ಹೆಚ್ಚೆಚ್ಚು ಸಂಸ್ಕೃತ
    ಪದಗಳನ್ನು ಬಳಸುವ ಪ್ರವೃತ್ತಿ ನಮ್ಮ ಬರಹಗಾರರಲ್ಲಿ ಕಾಣಿಸುತ್ತಿದೆ. ಇದಲ್ಲದೆ, ಈ
    ಪದಗಳನ್ನು ಆದಷ್ಟು ಮಟ್ಟಿಗೆ ಸಂಸ್ಕೃತದಲ್ಲಿರುವ ಹಾಗೆಯೇ ಉಳಿಸಿಕೊಳ್ಳುವ ಪ್ರಯತ್ನವೂ
    ನಡೆಯುತ್ತಿದೆ. ಆದರೆ ಸಾಮಾನ್ಯ ಕನ್ನಡಿಗರ ಮಾತಿನಲ್ಲಿ, ಅದರಲ್ಲೂ ಕೆಳವರ್ಗದ ಜನರ
    ಮಾತಿನಲ್ಲಿ ಸಂಸ್ಕೃತ ಪದಗಳು ಜಾಸ್ತಿ ಬಳಕೆಯಾಗುವುದಿಲ್ಲ ಮತ್ತು ಬಳಕೆಯಾಗುವುವುಗಳೂ
    ಹಲವು ರೀತಿಯಲ್ಲಿ ಬದಲಾಗಿರುತ್ತದೆ.   ಸಾಮಾನ್ಯ ಕನ್ನಡಿಗರಿಗೆ ಕನ್ನಡ ಬರಹ
    ಕ್ಲಿಷ್ಟವಾಗಿ ಕಾಣಿಸಲು ಇದು ಇನ್ನೊಂದು ಮುಖ್ಯ ಕಾರಣ.

ಬರಹ ಅಷ್ಟು ಮುಖ್ಯವೇ?
ಇವತ್ತಿನ
ಕಾಲದಲ್ಲಿ ಬರಹವೆಂಬುದು ಒಂದು ಅತ್ಯಮೂಲ್ಯವಾದ ಆಸ್ತಿಯಾಗಿ ಬೆಳೆದು ಬಂದಿದೆ. ಅದನ್ನು
ಪಡೆಯದವರು ಜೀವನದಲ್ಲಿ ಮುಂದೆ ಬರಲು ಸಾಧ್ಯವೇ ಇಲ್ಲ ಎಂಬಷ್ಟರ ಮಟ್ಟಿಗೆ ಅದು
ಮಹತ್ವವನ್ನು ಪಡೆದಿದೆ. ಬರಹ ತಿಳಿಯದವರು ಅಡಿಗಡಿಗೂ ಬರಹ ಗೊತ್ತಿರುವವರ ಸಹಾಯವನ್ನು
ಬೇಡಬೇಕಾಗುತ್ತಿದೆ.  ಬರಹಕ್ಕೆ ಬಂದಿರುವ ಈ ಮಹತ್ವದಿಂದಾಗಿ ಇವತ್ತು ಹಿಂದಿನ ಹಾಗೆ ಸಮಾಜದ ಕೆಲವೇ ಕೆಲವು ಮಂದಿ ಮಾತ್ರ ಬರಹವನ್ನು ಕಲಿತಿದ್ದರೆ ಸಾಕಾಗುವುದಿಲ್ಲ. ಬರಹ ಬಲ್ಲವರೂ ಬಡವರಾಗಿರಲು ಸಾಧ್ಯವೆನೋ ನಿಜ; ಆದರೆ ಇವತ್ತು
ಸಮಾಜದಲ್ಲಿ ಅತ್ಯಂತ ಬಡವರಾಗಿರುವವರಲ್ಲಿ ಹೆಚ್ಚಿನವರು ಬರಹ ಬಾರದವರೇ. ಹಾಗಾಗಿ, ಒಂದು
ಸಮಾಜದಿಂದ ಬಡತನವನ್ನ ಹೋಗಲಾಡಿಸಬೇಕಿದ್ದಲ್ಲಿ ಅದರಲ್ಲಿರುವ ಎಲ್ಲಾ ವ್ಯಕ್ತಿಗಳನ್ನೂ
ಬರಹ ಬಲ್ಲವರನ್ನಾಗಿ ಮಾಡುವ ಕೆಲಸವನ್ನು ಮೊದಲು ಎತ್ತಿಕೊಳ್ಳಬೇಕಾಗುತ್ತದೆ.
ಇಂದಿನ
ದಿನ, ಬರಹ ತಿಳಿದಿದ್ದರೆ ಮಾತ್ರ, ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ತನ್ನ
ಹೊಣೆಗಾರಿಕೆಯನ್ನು ಮತ್ತು ಹಕ್ಕು ಬಾಧ್ಯತೆಗಳನ್ನು ತಿಳಿಯಲು ಸಾಧ್ಯ. ಈ ಎಲ್ಲ
ಕಾರಣದಿಂದ, ಬರಹ ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಸ್ವತ್ತಾಗುವುದು ವೈಯಕ್ತಿಕವಾಗಿ
ಮಾತ್ರವಲ್ಲ, ಸಾಮಾಜಿಕವಾಗಿಯೂ ಅತ್ಯಂತ ಅವಶ್ಯವಾದ ಕೆಲಸವಾಗಿದೆ. ಅದನ್ನು
ಸಾಧಿಸಬೇಕಿದ್ದಲ್ಲಿ, ನಮ್ಮ ಬರಹವನ್ನು ಎಲ್ಲರಿಗೂ ತಲುಪುವಂತೆ, ಅರಿಯುವಂತೆ ಮಾಡುವುದು
ತುಂಬಾ ಮುಖ್ಯ.

ಹಾಗಿದ್ದಲ್ಲಿ, ಬೇರೆ ಭಾಷೆಯಿಂದ ಪದ ತೆಗೆದುಕೊಳ್ಳುವುದೇ ತಪ್ಪೇ?
ಖಂಡಿತವಾಗಿಯೂ
ಅಲ್ಲ. ಭಾಷೆ ಬೆಳೆಯುವುದೇ ಹಲವು ಭಾಷೆಗಳಿಂದ ಪದಗಳನ್ನು ಪಡೆಯುತ್ತ. ಕನ್ನಡ ಇಂಗ್ಲಿಷ್,
ಪರ್ಷಿಯನ್, ತಮಿಳು, ಉರ್ದು, ಸಂಸ್ಕೃತ ಹೀಗೆ ಹಲವು ಭಾಷೆಗಳಿಂದ ಪದಗಳನ್ನು ಪಡೆಯುತ್ತ
ಶ್ರೀಮಂತಗೊಂಡಿದೆ. ಇಂಗ್ಲಿಷ್, ಪರ್ಷಿಯನ್, ತಮಿಳು ಮೊದಲಾದ ಇತರ ಭಾಷೆಗಳಿಂದ ಎರವಲಾಗಿ
ಬಂದ ಪದಗಳನ್ನು ನಾವು ನಮ್ಮ ಉಚ್ಚಾರಣೆಗನುಸಾರವಾಗಿ ಬರೆಯುತ್ತೇವಲ್ಲದೆ ಆ
ಭಾಷೆಗಳಲ್ಲಿರುವ ಹಾಗೆ ಬರೆಯುವುದಿಲ್ಲ.  ಉದಾ: ಇಂಗ್ಲಿಷಿನ theatre ಪದವನ್ನು ನಾವು
ಥಿಯೇಟರ್ ಎಂಬುದಾಗಿ ಕನ್ನಡದಲ್ಲಿ ಬರೆಯುತ್ತೇವೆ.  ನಾವು ಈ ಪದವನ್ನು ಥಿಯೇಟರ್
ಎಂಬುದಾಗಿ ಉಚ್ಚರಿಸುವ ಕಾರಣ ಹಾಗೆ ಬರೆಯುತ್ತೇವೆ. ಆದರೆ ಸಂಸ್ಕೃತ ಪದಗಳನ್ನು ನಾವು
ನಮ್ಮ ಉಚ್ಚರಣೆ ಹೇಗಿದೆಯೋ ಹಾಗೆ ಬರೆಯುವ ಬದಲು  ಸಂಸ್ಕೃತ ಬರಹಗಳಲ್ಲಿರುವ ಹಾಗೆ
ಬರೆಯುತ್ತೇವೆ. ವಿಶೇಷ ಎಂಬುದಾಗಿ ಬರೆಯುತ್ತೇವ, ಆದರೆ ವಿಶೇಶ ಎಂಬುದಾಗಿ ಓದುತ್ತೇವೆ. ಕೃತಿ ಎಂಬುದಾಗಿ ಬರೆಯುತ್ತೇವೆ, ಆದರೆ ಕ್ರುತಿ ಎಂಬುದಾಗಿ ಓದುತ್ತೇವೆ. ಭ್ರಮೆ ಎಂಬುದಾಗಿ ಬರೆಯುತ್ತೇವೆ, ಆದರೆ ಬ್ರಮೆ ಎಂಬುದಾಗಿ ಓದುತ್ತೇವೆ.

ಕನ್ನಡ
ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಹೆಚ್ಚಿನ ಕನ್ನಡಿಗರಿಗೂ ಬಹಳ ಕಷ್ಟವಾದುದೆಂದು
ತೋರುವುದಕ್ಕೆ ಅದರಲ್ಲಿ ಕನ್ನಡದ ಮಟ್ಟಿಗೆ ಅವಶ್ಯವಿಲ್ಲದಂತಹ ಹಲವಾರು ಹೆಚ್ಚಿನ
ಅಕ್ಷರಗಳನ್ನು ಬಳಸುತ್ತಿರುವುದು ಒಂದು ಮುಖ್ಯ ಕಾರಣ. ನಿಜಕ್ಕೂ, ಕನ್ನಡದವೇ ಆದ
ಪದಗಳನ್ನು ಬರೆಯಲು ಒಟ್ಟು 33 ಅಕ್ಷರಗಳಿದ್ದರೆ ಸಾಕು. ಆದರೆ ಇವತ್ತು ಬಳಸುವ ಕನ್ನಡ
ಬರಹದಲ್ಲಿ 50 ಅಕ್ಷರಗಳಿವೆ. ಈ ಹೆಚ್ಚಿನ ಅಕ್ಷರಗಳನ್ನೆಲ್ಲ ಸಂಸ್ಕೃತದಿಂದ ಎರವಲಾಗಿ
ಪಡೆದ ಪದಗಳನ್ನು ಸಂಸ್ಕೃತ ಬರಹಗಳಲ್ಲಿರುವ ಹಾಗೆಯೇ ಬರೆಯುವುದಕ್ಕಾಗಿ
ಬಳಸುತ್ತಿದ್ದೇವೆ. ಉದಾ: ಮಹಾಪ್ರಾಣಾಕ್ಷರಗಳು (ಖ,ಛ,ಠ,ಥ,ಫ ಮತ್ತು ಘ,ಝ,ಢ,ಧ,ಭ ಗಳು)
ಸಂಸ್ಕೃತದಿಂದ ಎರವಲಾಗಿ ಪಡೆದ ಪದಗಳಲ್ಲಿ ( ಸುಖ, ವ್ಯಥೆ, ಪರಿಚ್ಛೇದ, ವಿಘ್ನೇಶ್ವರ,
ಪ್ರಧಾನ, ವಿಫಲ, ಭಯಂಕರ, ಮೊದಲಾದವುಗಳಲ್ಲಿ) ಮಾತ್ರವೇ ಬಳಕೆಯಾಗುತ್ತವೆಯಲ್ಲದೇ
ಕನ್ನಡದವೇ ಆದ ಪದಗಳಲ್ಲಿ ಬರುವುದಿಲ್ಲ. ಇದಲ್ಲದೇ, ಈ ಅಕ್ಷರಗಳಲ್ಲಿರುವ ಪದಗಳನ್ನು
ಉಚ್ಚರಿಸುವಾಗ ಹೆಚ್ಚಿನವರೂ ಅವನ್ನು ಅಲ್ಪಪ್ರಾಣಾಕ್ಷರಗಳಾಗಿಯೇ ಉಚ್ಚರಿಸುತ್ತಾರೆ. ಗ್ರಂಥಾಲಯ ಎಂಬ ಪದ ಹೆಚ್ಚಿನವರ ಉಚ್ಚಾರಣೆಯಲ್ಲೂ ಗ್ರಂತಾಲಯ ಎಂದಾಗುತ್ತದೆ, ವಿಧಾನ ಸಭೆ ಎಂಬುದು ವಿದಾನ ಸಬೆ ಎಂದಾಗುತ್ತದೆ.


ರೀತಿ ಉಚ್ಚಾರಣೆಯಲ್ಲಿಲ್ಲದ ಹಲವು ವ್ಯತ್ಯಾಸಗಳನ್ನು ಬರಹದಲ್ಲಿ ತೋರಿಸುವ ಕಾರಣ,
ಅದನ್ನು ಕಲಿಯುವ ಕೆಲಸ ಮಕ್ಕಳಿಗೂ ಕಷ್ಟ, ವಯಸ್ಕರಿಗೂ ಕಷ್ಟ. ನಿಜಕ್ಕೂ ಮಾತಿನಲ್ಲಿಲ್ಲದ
ಇಂತಹ ವ್ಯತ್ಯಾಸಗಳನ್ನೆಲ್ಲ ಬರಹದಲ್ಲಿ ಕಾಣಿಸುವುದು ತೀರ ಅನಾವಶ್ಯಕ. ಕನ್ನಡ ಬರಹದಲ್ಲಿ
ಬಳಕೆಯಾಗುವ ಸಂಸ್ಕೃತ ಪದಗಳನ್ನೆಲ್ಲ ನಮ್ಮ ಉಚ್ಚಾರಣೆಗನುಸಾರವಾಗಿ ಬರೆಯಲು
ಪ್ರಾರಂಭಿಸಿದಲ್ಲಿ ಕನ್ನಡ ಬರಹಕ್ಕೆ ಬೇಕಾಗುವ ಅಕ್ಷರಗಳ ಸಂಖ್ಯೆ ಬಹಳಷ್ಟು
ಕಡಿಮೆಯಾಗಬಲ್ಲದು. ಹೀಗೆ ಮಾಡುವ ಮೂಲಕ ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ
ಬಹಳಷ್ಟು ಸುಲಭವಾಗುವ ಹಾಗೆ ಮಾಡಲು ಸಾಧ್ಯವಿದೆ.


ಈ ಬದಲಾವಣೆ ಸಂಸ್ಕೃತಿ ವಿರೋಧಿಯೇ?


ಬದಲಾವಣೆಯಿಂದ ನಮ್ಮ ಸಂಸ್ಕೃತಿಯೇ ಅಳಿದು ಹೋಗುವುದು ಎಂದು ಕೆಲವು ಹಿರಿಯ ಸಾಹಿತಿಗಳು,
ವಿದ್ವಾಂಸರು ಇದನ್ನು ವಿರೋಧಿಸುತ್ತಾರೆ. ನಿಜಕ್ಕೂ ಅಂತಹ ವಿರೋಧ ಭಾಷೆಯ ಬಗೆಗಿನ
ಅಜ್ಞಾನದಿಂದ ಮಾತ್ರವೇ ಹುಟ್ಟಿಕೊಂಡಿದೆ. ಯಾಕೆಂದರೆ, ಎರವಲಾಗಿ ಪಡೆದ ಸಂಸ್ಕೃತ
ಪದಗಳನ್ನು ಸಂಸ್ಕೃತದಲ್ಲಿರುವ ಹಾಗೆಯೇ ಬರೆಯುವುದು ಎಂದಿಗೂ ನಮ್ಮ ಸಂಸ್ಕೃತಿಯಾಗಲಾರದು.
ಎರವಲಾಗಿ ಪಡೆದ ಸಂಸ್ಕೃತ ಪದಗಳ ಸ್ವರೂಪವನ್ನು ಕನ್ನಡ ಪದಗಳ ಸ್ವರೂಪಕ್ಕೆ
ಹೊಂದಿಕೊಳ್ಳುವ ಹಾಗೆ ಬದಲಿಸುವುದೂ ನಮ್ಮದೇ ಆದ ಕನ್ನಡ ಸಂಸ್ಕೃತಿ ಎಂಬುದನ್ನು ನಾವು
ಅರಿಯಬೇಕು
. ಉಚ್ಚಾರಣೆಯಲ್ಲಿ ಕಾಣಿಸುವ ಈ ನಮ್ಮದೇ ಆದ ಕನ್ನಡ ಸಂಸ್ಕೃತಿಯನ್ನು
ನಾವು ಬರವಣಿಗೆಯಲ್ಲಿ ಕಾಣಿಸುವುದಿಲ್ಲ. ಅದನ್ನು ಬರಹದಲ್ಲೂ ಕಾಣಿಸೋಣ ಎಂಬುದಾಗಿ ಹೇಳಲು
ನಾವು ಯಾಕೆ ನಾಚಿಕೆ ಪಡಬೇಕು?

ನಿಮಗೇನು ಅನ್ನಿಸುತ್ತೆ ಗೆಳೆಯರೇ?

Rating
No votes yet

Comments