ಕಸ್ತೂರೀ ತಿಲಕಂ ...
ಹಣೆಯಲ್ಲಿ ಸೊಗಯಿಸುವ ಪುನುಗುಕತ್ತುರಿ ತಿಲಕ
ಎಣೆಯಿರದ ಕೌಸ್ತುಭವು ಅವನೆದೆಯಲಿ
ಕುಣಿಯುತಿರೆ ಮೂಗಿನಲಿ ಮುತ್ತಿನಾ ನತ್ತು ಕಂ
ಕಣದ ಕೈಯಲ್ಲಿ ಮೆರೆವ ಕೊಳಲು!
ನರುಗಂಪು ಬೀರುತಿರಲವನು ಪೂಸಿದ ಗಂಧ
ಕೊರಳಲೋಲಾಡಿ ಮೆರೆಯುತಿರೆ ಸರವು
ನೆರೆದ ಗೋಪಿಯರೆಲ್ಲ ನಡುವಿನಲಿ ಕಂಗೊಳಿಸು
ತಿರುವನೈ ಗೊಲ್ಲನಿವ ರತುನದಂತೆ
ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣಕರ್ಣಾಮೃತ 2-108)
ಕಸ್ತೂರೀ ತಿಲಕಂ ಲಲಾಟ ಪಟಲೆ ವಕ್ಷಸ್ಥಲೇ ಕೌಸ್ತುಭಂ
ನಾಸಾಗ್ರೇ ವರಮೌಕ್ತಿಕಂ ಕರತಲೇ ವೇಣು: ಕರೇ ಕಂಕಣಂ
ಸರ್ವಾಂಗೇ ಹರಿ ಚಂದನಂ ಕಲಯಯನ್ಕಂಠೇ ಚ ಮುಕ್ತಾವಲೀ
ಗೋಪಸ್ತ್ರೀಪರಿವೇಷ್ಠಿತೋ ವಿಜಯತೇ ಗೋಪಾಲ ಚೂಡಾಮಣಿ:
कस्तूरी तिलकं ललाट पटले वक्ष: स्थले कौस्तुभं ।
नासाग्रे वरमौक्तिकं करतले वेणु: करे कंकणं॥
सर्वांगे हरि चन्दनं कलयन्कंठे च मुक्तावली।
गोपस्त्रीपरिवेष्टितो विजयते गोपाल चूडामणि:॥
-ಹಂಸಾನಂದಿ
ಕೊ: ನೆನ್ನೆ-ಇವತ್ತು ಕೃಷ್ಣ ಜಯಂತಿಯಾದ್ದರಿಂದ, ಇದು ತಕ್ಕ ಪದ್ಯವೆಂದು ಅನುವಾದಿಸಿದೆ
ಕೊ.ಕೊ: ಮೂಲ ಪದ್ಯಕ್ಕಿಂತ ಅಲ್ಲಲ್ಲಿ ದೂರವಾಗಿರಬಹುದಾದರೂ ಒಟ್ಟಾರೆ ಭಾವವನ್ನುಳಿಸುವ ಪ್ರಯತ್ನ ಮಾಡಿರುವೆ
ಕೊ.ಕೊ.ಕೊ: ಚಿತ್ರ ಹಿಂದೂ ಪತ್ರಿಕೆ ಕಲಾವಿದರಾದ ಕೇಶವ್ ವೆಂಕಟರಾಘವನ್ ಅವರ ತೈಲಚಿತ್ರ. ಅವರು ಈ ಚಿತ್ರವನ್ನು ಇದೇ ಪದ್ಯವನ್ನು ಮನಸ್ಸಿನಲ್ಲಿಟ್ಟುಕೊಂಡೇ ರಚಿಸಿದ್ದಂತೆ. ಗೋಪಿಯರು ಸುತ್ತುವರಿದಿರುವುದನ್ನು ಅವರು ಕೃಷ್ಣನ ಕಿರೀಟದಲ್ಲಿ ಚಿತ್ರಿಸಿರುವುದು ಬಲುಸೊಗಸು!
Comments
ಉ: ಕಸ್ತೂರೀ ತಿಲಕಂ ...
ಕೃಷ್ಣ ಜಯಂತಿ ಹೊತ್ತಿಗೆ ಸರಿಯಾದ ಸೇರ್ಪಡೆ - ಚೆನ್ನಾಗಿದೆ.
In reply to ಉ: ಕಸ್ತೂರೀ ತಿಲಕಂ ... by nageshamysore
ಉ: ಕಸ್ತೂರೀ ತಿಲಕಂ ...
ಧನ್ಯವಾದಗಳು :)
ಹಂಸಾನಂದಿ
ಉ: ಕಸ್ತೂರೀ ತಿಲಕಂ ...
ಹಂಸಾನಂದಿಯವರೆ, ಕವನದ ಭಾವನುವಾದ ಬಹಳ ಚೆನ್ನಾಗಿದೆ. "ಕೊ.ಕೊ.ಕೊ" ದಿಂದಾಗಿ ಚಿತವನ್ನು ಎನ್‌ಲಾರ್ಜ್ ಮಾಡಿ ನೋಡಿದಾಗ ಕಿರೀಟದಲ್ಲೇ ಗೋಪಿಕಾ ಸ್ತ್ರೀಯರನ್ನು ಚಿತ್ರಿಸಿರುವುದು ಗಮನಕ್ಕೆ ಬಂತು. ಆದರೆ ಚಿತ್ರದಲ್ಲಿ ಕೊಳಲು ನಾಪತ್ತೆ. ಗೋಪಿಕಾ ಸ್ತ್ರೀಯರು ಎಳಕೊಂಡು ಕೋಲಾಟವಾಡುತಿರಬಹುದೇ?:) ಸುಂದರ ಚಿತ್ರಕ್ಕೆ ಧನ್ಯವಾದಗಳು. ಭಾವಾನುವಾದದಲ್ಲಿ"ಹಣೆಯಲ್ಲಿ ಸೊಗಯಿಸುವ ಪುನುಗುಕತ್ತುರಿ ತಿಲಕ" ಎಂದಿದ್ದೀರಿ. ಪುನುಗು ಬೆಕ್ಕಿನ ಹಾಗೂ ಕಸ್ತೂರಿ ಮೃಗದ ಎರಡನ್ನೂ ಮಿಕ್ಸ್ ಮಾಡಿದ ತಿಲಕ ಎಂದೇ?
In reply to ಉ: ಕಸ್ತೂರೀ ತಿಲಕಂ ... by ಗಣೇಶ
ಉ: ಕಸ್ತೂರೀ ತಿಲಕಂ ...
ಗಣೇಶ ಅವರೆ, ಮೆಚ್ಚುಗೆಗೆ ನಾನು ಆಭಾರಿ. ಇಲ್ಲಿ ಮೂಲದಲ್ಲಿ ಬರಿ ಕಸ್ತೂರಿಯ ಪ್ರಸ್ತಾಪವಿದೆ. ಪುನುಗು ಅನ್ನೋದನ್ನು ನಾನು ಸುಗಂಧ ಅನ್ನೋ ಅರ್ಥದಲ್ಲಿ ಬಳಸಿದ್ದೆ ಅಷ್ಟೇ. ಪುನುಗುಕತ್ತುರಿ =ಸುವಾಸನೆಯುಳ್ಳ ಕಸ್ತೂರಿ. ಇದರ ಬದಲಾಗಿ ಕೆಂಪುಕತ್ತುರಿ ತಿಲಕ ಅಂತ ಕೂಡ ಹೇಳಬಹುದಿತ್ತು (ತಿಲಕದ ಬಣ್ಣ ಸಾಮಾನ್ಯವಾಗಿ ಕೆಂಪೇ ಅಲ್ಲವೆ :) )