"ಕುಹೂ! ಕುಹೂ! " ಕೋಕಿಲವಾಣಿ !

"ಕುಹೂ! ಕುಹೂ! " ಕೋಕಿಲವಾಣಿ !

"ಕುಹೂ! ಕುಹೂ! " ಕೋಕಿಲವಾಣಿ !
ಜಗ ಜುಮ್ಮೆಂದುದು ಅದ ಕೇಳಿ!
ನೀರವ ಪರ್ವತ ಕಾನನ ಶ್ರೇಣಿ
ಮರುದನಿಗೈದಿತು ಮುದತಾಳಿ.

ಗಾನವ ಕೇಳಿ ಮಹಾಂಬರ ಸುಮ್ಮನೆ
ಮಾತಾಡದೆ ಬಣ್ಣಿಸುತ್ತಿತ್ತು!
ಕಂದರದಲ್ಲಿದ್ದೊಂದು ಸರೋವರ
ತೆರೆಗಳ ಕೈಪರೆಯಿಕ್ಕಿತ್ತು!
ಮಾಧುರ್ಯದಿ ಪಿಕ ತನ್ನನೆ ಮರೆಯುತೆ
"ಕುಹೂ! ಕುಹೂ! " ಕೂಗಿತ್ತು!

ಆಲಿಸಿದೊರ್ವನು ಗಾನಕೆ ನೊಂದು
ಸೂಚನೆ ಕೊಟ್ಟನು ಇಂತೆಂದು
"ಮಲೆಗಳಲುಲಿಯುವ ಓ ಕೋಗಿಲೆಯೇ,
ಬಲು ಚೆಲುವಿದೆ ನಿನ್ನೀ ಗಾನ;
ಇಂಗ್ಲೀಷಿಗೆ ತರ್ಜುಮೆ ಮಾಡಿದರೆ
ಸಿಗುವುದು ನೋಬೆಲ್ ಬಹುಮಾನ!
ಅರಣ್ಯ ರೋದನ! ಸುಮ್ಮನೆ ಹಾಡುವೆ!
ಕೇಳುವರಾರಿಲ್ಲಿ?"

ಕೂಗಿತು ಕೋಗಿಲೆ "ಕುಹೂ! ಕುಹೂ! " ಎಂದು!
ತಲ್ಲಣಿಸಿತು ಜಗ ಜುಮ್ಮೆಂದು
****************

ರಾಷ್ಟ್ರಕವಿ ಕುವೆಂಪುರವರ ವಿಚಾರಕ್ರಾಂತಿಗೆ ಆಹ್ವಾನ ಎನ್ನುವ ಪುಸ್ತಕದ ಪುಟಗಳಲ್ಲಿ ಕಂಡು ಬಂದ ಕವಿತೆ.
ಈ ಕವಿತೆಯನ್ನು ೧೯೭೦ರ ದಶಕದಲ್ಲಿ, ಶ್ರೇಷ್ಟ ಗಾಯಕ ಪಿ. ಕಾಳಿಂಗ ರಾವ್ ಅವರ ಧ್ವನಿಯಲ್ಲಿ ಕೇಳಿದ ನೆನಪು ಈಗಲೂ ಹಸಿರಾಗೇ ಇದೆ.
ಈ ಆಸ್ಕರ್ ಪ್ರಶಸ್ತಿಗಳ ಸುದ್ದಿ ಇನ್ನೂ ಜೀವಂತವಾಗಿರುವಾಗ, ಇಲ್ಲಿ ಈ ಕವಿತೆಯನ್ನು ಸಂಪದಿಗರೊಂದಿಗೆ ಹಂಚಿಕೊಳ್ಳುವುದು ಸೂಕ್ತವೆನಿಸಿತು.

Rating
No votes yet

Comments