ನೋವಲ್ಲೂ ಸಂತಸ

ನೋವಲ್ಲೂ ಸಂತಸ

ನಿನ್ನೆ (ಶನಿವಾರ) ಅದೇಕೋ ಮನಸ್ಸು ಭಾರ ಆಗಿತ್ತು. ಏನೋ ಒಂಥರ ತಳಮಳ. ಬಹುಶಃ ದೀಪಾವಳಿಗೆ ಊರಿಗೆ ಹೋಗಲಾಗದ್ದಕ್ಕೋ ಏನೋ. ಎಂಜಿನಿಯರಿಂಗ್ , ಕೆಲಸ ಅಂತ ಈ ೮ ವರ್ಷದಲ್ಲಿ ಇದೇ ಮೊದಲ ಬಾರಿಗೆ ನನಗೆ ಮನೆಯಲ್ಲಿ ಆಚರಿಸೋ ದೀಪಾವಳಿ ತಪ್ಪಿತ್ತು. ಇದನ್ನೇ ನನ್ನ ಗೆಳೆಯನಲ್ಲಿ ಹೇಳಿಕೊಂಡಾಗ ,ನಾಳೆ (ಭಾನುವಾರ) ಹಾಸನಾಂಬಾ ದೇವಸ್ಥಾನಕ್ಕೆ ಹೋಗಿ ಬರೊಣ. ಹಾಗೆಯೇ, ಅಲ್ಲಿ ಎಲ್ಲಾ ಸಹಪಾಠಿಗಳೂ ಸೇರ್ತಾ ಇದ್ದಾರೆ ಅವರ ಭೇಟಿನೂ ಆಗುತ್ತೆ ಅಂದ. ನನಗೋ ಹೇಗೂ ಮನೆಗಂತೂ ಹೋಗಲಾಗಲಿಲ್ಲ, ಹಾಸನಕ್ಕಾದರೂ ಹೋಗಿ ಬರೋಣ ಎಂದೆನಿಸಿ ಸರಿ ಅಂದೆ. ಇಂದು (ಭಾನುವಾರ) ಬೆಳಿಗ್ಗೆ ನಾನು, ನನ್ನ ಗೆಳೆಯ(ಸಹಪಾಠಿ) ಮತ್ತಿಬ್ಬರು ಗೆಳೆಯರು ಸೇರಿ ಕಾರಿನಲ್ಲಿ ಮುಂಜಾನೆಯೇ ಹೊರಟು ಹಾಸನವನ್ನು ೯.೩೦ಕ್ಕೆ ತಲುಪಿದೆವು. ಮೊದಲು ಹೋಗಿದ್ದು ಉದ್ಭವ ಗಣಪತಿ ಇರುವ ಸ್ಥಳಕ್ಕೆ. ಇದು, ನಾವು ಓದ್ತಾ ಇರಬೇಕಿದ್ರೆ ಸುಮಾರಾಗಿ ಪ್ರತಿದಿನವೂ ಹೋಗಿಬರುತ್ತಿದ್ದ ಪ್ರಶಾಂತವಾದ ಜಾಗ. ಒಂದುಸಲ ಹಳೆಯ ನೆನಪೆಲ್ಲವನ್ನೂ ಮತ್ತೆ ಮೆಲುಕು ಹಾಕುವಂತಾಯಿತು. ಮನಸ್ಸು ನಿರಾಳವಾಯ್ತು. ಅಷ್ಟೇ. ನಮ್ಮ ಹೊಟ್ಟೆ ತಾಳ ಹಾಕ್ತಾ ಇತ್ತು. ಆಗ ನೆನಪಾದದ್ದು, ಮತ್ತದೇ ನಮ್ಮ ಹಳೆ ಜಾಗವಾದ ವೆಂಕಟೇಶ್ವರ ದೋಸಾ ಕ್ಯಾಂಟೀನ್. ನಾವು ಇಲ್ಲಿಗೆ ಬರುವ ಸಮಯದಲ್ಲೇ, ನಮ್ಮ ಸಹಪಾಠಿಗಳು ಬಂದರು. ಎಷ್ಟು ಖುಷಿ ಆಯ್ತು ಅಂದ್ರೆ, ಅವರಲ್ಲಿ ಕೆಲವರನ್ನು ನೋಡಿ ೪ ವರುಷಗಳೇ ಕಳೆದಿದ್ದವು. ಹಾಗೆ ದೋಸೆ ತಿನ್ನುತ್ತ (ಇಲ್ಲಿ ತುಪ್ಪ ಸೆಟ್ ತುಂಬಾ famous) ವಿಚಾರ ವಿನಿಮಯ ಮಾಡಿಕೊಳ್ಳುತಿರುವಾಗ, ಏನೋ ಒಂತರ ಖುಷಿ, ಸಂತೋಷ ಆಗಿತ್ತು. ಸಹಪಾಠಿಗಳನ್ನೆಲ್ಲ ಬೀಳ್ಕೊಟ್ಟು, ನಾವು ಹಾಸನಾಂಬಾ ದೇವಸ್ಥಾನದ ಕಡೆ ಹೊರಟೆವು. ಇಲ್ಲಿ ಒಂದು ವಿಶೇಷತೆ ಇದೆ.ಸುಮಾರು ೧೨ನೆ ಶತಮಾನದ ಈ ದೇವಸ್ಥಾನ ದೀಪಾವಳಿ ಸಮಯದಲ್ಲಿ ಮಾತ್ರ ೧೦ ದಿನಗಳವರೆಗೆ ತೆರೆದಿರುತ್ತೆ. ಹಾಗಾಗಿ ಸಾಕಷ್ಟು ಜನಜಂಗುಳಿಯೂ ಇತ್ತು. ಅಂತೂ ಇಂತೂ ದೇವಿಯ ದರುಶನವನ್ನು ಮುಗಿಸಿಕೊಂಡು ಮತ್ತೆ ಉದ್ಭವ ಗಣಪತಿಯನ್ನು ನೋಡಿ ಹಾಸನ ಬಿಡುವಾಗ ೨.೩೦. ಹಿಂತಿರುಗಿ ಬರುವ ದಾರಿಯಲ್ಲಿ ಶಾಂತಿಗ್ರಾಮದ ಬಳಿ ಇರುವ ಹೊಯ್ಸಳ ಕಾಲದ ಎರಡು (ಶ್ರೀಲಕ್ಷ್ಮೀ ವರದಾ ಯೋಗ ಭೋಗ ನರಸಿಂಹ ಸ್ವಾಮಿ ಮತ್ತು ಸೌಮ್ಯ ಕೇಶವ)ದೇವಸ್ಥಾನಕ್ಕೆ ಹೋಗಿ ಬಂದಿದ್ದಾಯಿತು.ಅದರ ಹಿಂಭಾಗದಲ್ಲೇ ವಿಶಾಲವಾದ ಕೆರೆ, ಸುತ್ತ ಹಸಿರು,ಜೊತೆಗೆ ಪರಿಸರ ತುಂಬಾ ಪ್ರಶಾಂತವಾಗಿತ್ತು. ಮನಸ್ಸಿಗೂ ಹಿತವಾಗಿತ್ತು. ಅಲ್ಲೇ ಸ್ವಲ್ಪ ಹೊತ್ತು ಕಳೆದು, ವಿಶ್ರಮಿಸಿ ಬೆಂಗಳೂರು ಕಡೆಗೆ ಹೊರೆಟೆವು. ಅಂತೂ, ವಾಪಸು ಬೆಂಗಳೂರು ತಲುಪಿದಾಗ ರಾತ್ರಿ ೯ ಘಂಟೆ.
ಹೀಗೆ ಕೂತ್ಕೊಂಡು ರಾತ್ರಿ ಈ ಬರಹ ಬರೆಯುತ್ತಿರುವಾಗ ಮನಸ್ಸು ಹಗುರಾಗಿತ್ತು.

Rating
No votes yet

Comments