ಪಂಚ್ಲೈನ್ 'ಪಂಚೆ' ಸಿದ್ರಾಮಣ್ಣ..
ಇತ್ತೀಚೆಗೆ ನಮ್ಮ ಮಾನ್ಯ ಮುಖ್ಯಮಂತ್ರಿಗಳು ವಿಶ್ವ ಆರ್ಥಿಕ ಸಮ್ಮೇಳನಕ್ಕೆ ಚೀನಾದ ದಾಲಿಯನ್ನಿಗೆ ಹೋಗಿ ಬಂದಿದ್ದೆ ಮಾಧ್ಯಮದಲೆಲ್ಲ ಸುದ್ಧಿ. ಅದರಲ್ಲು ಬಂದ ಮೇಲಿನ ಪತ್ರಿಕಾಗೋಷ್ಠಿ , ಪಂಚೆ ಕಥೆ, 'ಚೀನಾ ನಾಟಿ ಚಿಕನ್' ಕಥೆ, ಬುಲೆಟ್ ಟ್ರೈನು , ದಾಲಿಯನ್ ರಸ್ತೆ, ನಗರಗಳನ್ನು ಕಂಡ ವಿಸ್ಮಯ - ಇತ್ಯಾದಿ ತುಣುಕುಗಳನ್ನು ಓದುತ್ತಿದ್ದ ಹಾಗೆ ಇತರ ಕೆಲವು ಮಂತ್ರಿಗಳಂತೆ ಬರಿ ಟ್ರಿಪ್ಪು ಹೊಡೆದು 'ಅದು ಫಾರಿನ್ನೂ' ಎಂದು ಆರಾಮ ನಿದ್ರಿಸುವ ಜನರ ಮಧ್ಯೆ, ಸಿದ್ರಾಮಯ್ಯನವರು ಬಹುಶಃ ಅಷ್ಟಿಷ್ಟಾದರೂ ಕಾರ್ಯಗತ ಮಾಡುವ ಮಾತಾದರೂ ಆಡುತ್ತಿದ್ದಾರಲ್ಲ ಅನಿಸಿತು. ಆ ಮಾತುಗಳೆಲ್ಲ ನಿಜವಾಗಿಯೂ ಕಾರ್ಯರೂಪಕ್ಕೆ ಬರಲಿ, ಅಡ್ಡಿಗಳಾವುದು ಭಾಧಿಸದಿರಲಿ, ಹೀಗಾದರೂ ಸರಿ ನಾಡು ಪ್ರಗತಿಯತ್ತ ಸಾಗಲಿ ಎಂಬ ಅನಿಸಿಕೆಯೊಡನೆ ಬರೆದ ಸಾಲುಗಳಿವು. ತುಸು ಹಾಸ್ಯ ಲೇಪನಕ್ಕೆ ಮತ್ತು ವಾಸ್ತವ ಬಿಂಬನಕೆ ಸೂಕ್ತವೆಂದು ನಮ್ಮೂರ ಕಡೆಯ ಗ್ರಾಮ್ಯ / ಆಡುಭಾಷೆ ಬಳಸಿದ್ದೇನೆ (ನನಗೆ ತಿಳಿದ / ನೆನಪಿರುವ ಮಟ್ಟಿಗೆ). ಬಹುಶಃ ತುಸು ಕಲಸು ಮೇಲೋಗರ ಆಗಿದೆಯೊ ಏನೊ...ಆದರೂ ಓದಿಸಿಕೊಳ್ಳುತ್ತದೆಂಬ ಭರವಸೆ. ಅಂದ ಹಾಗೆ ಇದು ಯಾವ ಪಕ್ಷದ ಪರವೂ ಅಲ್ಲ, ವಿರೋಧವೂ ಅಲ್ಲ - ಬರಿ ನಾಡಿನ ಪ್ರಗತಿಯ ಕುರಿತ ಕಳಕಳಿ ಅಷ್ಟೆ :-)
ಭೂನಾರದ ಉವಾಚ: ಸಿದ್ರಾಮಣ್ಣ ತರೊ ಬುಲೆಟ್ ಟ್ರೈನಲಿ ಮೂವತ್ತೆ ನಿಮ್ಸುಕ್ಕೆ ಮೈಸೂರ್ಗೊಗ್ಬೌದಂತೆ ಕಣ್ಲಾ ....ಮೈಸೂರಲ್ ಮನೆ, ಬೆಂಗ್ಳೂರಲ್ ಕೆಲ್ಸ ಬೋ ಚಂದಾಕಿರ್ತೈತೆ..
ಕಲಹಪ್ರಿಯ ಉವಾಚ : ವಸಿ ತಡ್ಕಳ್ಲಾ..ಎಲೆಕ್ಸನ್ನು ಮುಗೀಲಿ..ಸೆಂಟರ್ನಾಗೆ ಕಾಂಗ್ರೇಸ್ ಒಂಟೋದ್ರೆ, ಬರೋವ್ರು ಸಿದ್ರಾಮಣ್ಣಂಗೆ ಅವೆಲ್ಲಾ ಮಾಡಕ್ ಬುಡ್ತಾರ, ಇಲ್ವಾ ಏನ್ ಗ್ಯಾರಂಟೀ?
ಪಂಚ್ಲೈನ್ 'ಪಂಚೆ' ಸಿದ್ರಾಮಣ್ಣ..
__________________
ಚೆನ್ನೈ ಎಕ್ಸ್ಪ್ರೆಸ್ಸು ಲುಂಗಿ ಬಿಡ್ಲೆ
ನಾ ಯೋಳಾದು ಪಂಚೆ ಕಣ್ಲೆ
ದಲಿಯಾನ್ದಾಗೆ ನಮ್ಸಿದ್ರಾಮಣ್ಣ
ಪಂಚೆಯಿಲ್ದೆ ಸೂಟಲ್ಲೆ ಕಣಣ್ಣ |
ಮಾತುಕಥೆ ಆಡಾಕೆ ಫಾರಿನ್ನಿಂದ
ಡೆಲಿಗೇಸನ್ನು ಚೈನಾ ಸೇರಿದ್ಚಂದ
ನಮ್ಮೂರ್ಗು ಬನ್ನಿ ದುಡ್ ಹಾಕಿಂತ
ಯೋಳಾಕೆ ಸಿದ್ದು ಹೋಗಿದ್ರಂತ..|
ದಾಲಿಯನ್ನಾಗೆ ಬೀದಿ ಬೀದಿನೂ
ಫಳಫಳ ಹೊಳ್ಯೊ ಕನ್ನಡಿ ಪ್ಲಾನು
ಪೆಚ್ಚಾಗಿ ಹಿಡಿಯೋಕೆ ಬಟ್ಟೆ ಅಂಚೆ
ಎತ್ಕಟ್ಟೋಕ್ ಪಾಪ ಇರ್ಲಿಲ್ವೆ ಪಂಚೆ |
ಊರಿಗ್ಬಂದು ದಬಾಯ್ಸಿದ್ದೆ ಮಕ್ಳಾ
ನಮ್ರಸ್ತೆ ಎಲ್ಲಾ ಹಳ್ಳಾಕೊಳ್ಳ ಯಾಕ್ಲ?
ದುಡ್ಡಂತು ಸರ್ಕಾರ ಸುರುದ್ರೂ ಪೆಟ್ಟಿ
ಯಾಕ್ರಯ್ಯ ಕೊಚ್ಚೆ ಗುಂಡಿ ರಸ್ತೆಲೆ ಗಟ್ಟಿ?
ಮೂವತ್ತೆ ನಿಮುಸ್ದಾಗೆ ಮೈಸುರ್ಗೆ ರೈಲು
ತಂದ್ಬಿಡ್ತೀನಾಮೇಲೆ ಬುಲೆಟ್ಟಲ್ಲೆ ಕೊಯ್ಲು
ಬಂದ್ ಬಂಡ್ವಾಳ ಹಾಕ್ರಪ್ಪ ಕೈಮುಗ್ದಾಯ್ತು
ನೋಡ್ತಿರಿ ಮಾಡ್ತೀನಿ ನಮ್ಮೂರ್ನ್ ಸ್ಮಾರ್ಟೂ|
ಚೀನಾದಲ್ ನಮ್ ಚಿಕನ್ನು ಹಾಕ್ದ ಪುಣ್ಯಾತ್ಮ
ಸೂಟಲ್ಲೆ ಮಿಂಚಿದ್ರೂ ನಮ್ಪಂಚೇಲೆ ನನ್ನಾತ್ಮ
ಏನ್ನಾಗ್ಲಿ ಆವೂರಂಗ್ ಆಗ್ ಬೇಕ್ಲ ನಮ್ಮೂರು
ಅದ್ಕೇಯ ಮುಂದ್ಲೊರ್ಸ ಇಲ್ಗೂನು ಹಾಜರು|
ಫಾರಿನ್ ಟ್ರಿಪ್ಪ್ ಹೊಡ್ಕೊಂಡು ತೇಗ್ದವ್ರೆ ಜಾಸ್ತಿ
ಸಿದ್ರಾಮಣ್ಣ ನಾಚ್ಕೊಂಡು ತತ್ತಾರಂತೆ ಪ್ರಗತಿ
ಮಾಡೊ ಮನಸಿನ್ ಮನ್ಸಾ, ಹರಸಪ್ಪ ಸಿವನೆ
ಸೆಂಟರ್ನಾಗೆ ಕಿರ್ಕಿರಿ, ಬರದಂಗೆ ಹೊಸ್ ಬವ್ಣೆ!