ಅನಂತ 1(ಕಥೆ)

ಅನಂತ 1(ಕಥೆ)

ನಂಗೆ ಇಗ್ಲೂ ನೆನಪೈತೆ, ನಮ್ ಸ್ಕೂಲ್​ನಗೆ ಯಾರಾದ್ರೂ ಗಲಾಟೆಗೆ ಬಂದ್ರೆ, ರೇಗಿಸಿದ್ರೆ, ತೊಂದ್ರೆ ಕೊಟ್ರೆ, ತೀಟೆ ಮಾಡಿದ್ರೆ ಅವ್ನಿಗೆ ಹೇಳಿ ಬಡಿಸ್ಬೇಕು ಅನ್ನುಸ್ತಿತ್ತು. ಅವ್ನೇನೂ ಭೀಮ ಅಲ್ಲ, ಆದ್ರೂ ಅವ್ನ ಹೆಸ್ರ್ಹೇಳಿ ತಪ್ಸೋಕೋಬೋದಿತ್ತು. ಅವನು ನನ್ನ ದೂರದ ಸಂಬಂಧಿಕ. ನನ್ನ ತಾಯಿಯ ತಾಯಿಯ ಅಣ್ಣನ ಮಗನ ಮಗಳ ಮಗ. ಅರ್ಥಾತ್ ನನ್ನ ಅತ್ತೆ ಮಗ. ಹೆಸ್ರು ಅನಂತ ಅಲಿಯಾಸ್​ ಅನಂತರಾಜು. ಹುಟ್ಟಾ ಮೂಗ. ಅವನನ್ನ ಕಂಡ್ರೆ ನಂಗೇನೋ ಕುತೂಹಲ. ಅವ್ನೂ ಅಷ್ಟೇ ನನ್ನ ಕಂಡ್ರೆ ಒಂದ್ರೀತಿಯ ಪ್ರೀತಿ-ವಾತ್ಸಲ್ಯ. ಅದಕ್ಕಿಂತ ಮಿಗಿಲಾಗಿ ನಾನು ಅವ್ನಿಗಾಗಿ ಕಬ್ಬು, ಬಿಸಿ ಬೆಲ್ಲ ತಗೊಂಡ್ ಹೋಗ್ತಿದ್ದೆ. ನಮ್ಮೂರು ಕ್ಯಾಶವಾರ ಅಂದ್ರೆ ನನ್ನ ತಾತ ಸಂಜೀವರಾಯಪ್ಪನವರ ಮನೆಯವ್ರಿಗೆ ಮಂಡ್ಯ ಥರ. ನಮ್ಮಪ್ಪ ಸ್ವಂತದ ಜಮೀನಲ್ಲಿ ಅಲ್ದೇ ಬೇರೆಯವ್ರ ಜಮೀನ್​ನಲ್ಲೂ ಪಾಲಿಗೆ ಅಂತ ಕಬ್ಬು ಹಾಕ್ತಿದ್ದ. ಆಗ್ಲೂ ಸಕ್ಕರೆ ಙ್ಯಾಕ್ಟರಿ ಇದ್ದ್ರೂ ಕೂಡ ಕಬ್ಬನ್ನು ದೂರದ ಶಿರಾಗೋ, ಗೌರಿಬಿದನೂರಿಗೋ ಹಾಕ್ತಿರ್ಲಿಲ್ಲ. ಬದ್ಲಾಗಿ ತೋಟದ ಮೂಲೇಲಿ ಆಲೆಮನೆ ಮಾಡ್ತಿದ್ದ್ರು. ಅದು ನಂಗೂ ಖುಷಿಯಾಗ್ತಿತ್ತು. ನಮ್ಮಪ್ಪ ಕೇವಲ ಸಣ್ಣ ಜಮೀನಿನ್ದಾರನ ಥರ ಆಡ್ತಿರ್ಲಿಲ್ಲ. ನಮ್ ಹೊಲದಲ್ಲಿ ದುಡ್ದು ಬೇರೆ ಅವ್ರ ಜಮೀನ್​ನಲ್ಲೂ ಕೂಲಿ ಮಾಡ್ತಿದ್ದ. ಆಲೆಮನೆಲ್ಲೂ ದುಡೀತಿದ್ದ. ಅಲ್ಲಿ ಅವ್ನ ಕೆಲ್ಸ ದೊಡ್ಡ ಒಲೆ ಮೇಲೆ ಬೇಯೋ ಕೊಪ್ಪರಿಗೆಗೆ ಬೆಂಕಿ ಹಾಕೋ ಕೆಲ್ಸ. ಆ ಕಾಲ್ದಲ್ಲಿ ಚಳಿಗೋ, ಚಟವೋ ಬೀಡಿ ಸೇದ್ತಿದ್ದ. ಈಗ ಬಿಟ್ಬಿಟ್ವ್ನೆ. ವಿಷ್ಯ ಎಲ್​ಎಲ್ಗೋ ಹೋಯ್ತು.

ಈ ಅನಂತ ಅಂದ್ನಲ್ಲ ಅವ್ನ ಬಗ್ಗೆ ಹೇಳ್ಲೇ ಬೇಕು. ಅವ್ರಮ್ಮ ಇಂದ್ರಮ್ಮ ಅಂದ್ರೆ ನಮ್ಮತ್ತೆ ಅನಂತ ಹುಟ್ಟಿದ್ ಒಂದೆರಡ್​ ವರ್ಷಕ್ಕೆ ಸತ್ತೋದ್ಳು. ಅವ್ರಪ್ಪಂಗೆ ಮಗನೂ ಬೇಕು, ಊರೂರು ಸುತ್ತು ಚಟವೂ ಆಗ್ಬೇಕು. ಹಂಗಾಗೇ ಅವ್ನು ನಮ್ಮೂರ್ಗೂ ಬರ್ತಿದ್ದ. ನನ್ ಜೊತೆ ಆಡ್ತಿದ್ದ, ತಿಂತಿದ್ದ, ಒಂದೇ ಚಾಪೆ ಮೇಲೆ ಮಲಗ್ತಿದ್ದ ಕೂಡ. ಅವನ ಎಳೆತನ ಎಲ್ಲಾ ಅಲ್ಲಿ ಇಲ್ಲಿ ಅಲೆಯೋದೇ ಆಗೋಯ್ತು. ಅವ್ನಿಗಾಗ್ಲೇ ಹನ್ನೆರಡೋ ಹದ್ಮೂರೋ ವರ್ಷ ವಯಸ್ಸಿರ್ಬೇಕು ಅವಾಗ ಅನಂತನ್ನ ನಮ್ ಚಿಕ್ಕಪ್ಪ ಮೂರ್ತಿ ಮೂಕ ಮಕ್ಕಳ ಶಾಲೆಗೆ ಸೇರ್ಸಿದ್ರು. ಆ ಶಾಲೆ ತುಮ್ಕೂರಲ್ಲಿತ್ತು. ಒಂದ್ ನಾಲ್ಕನೇ ಕ್ಲಾಸ್​ ಓದೋ ತನಕ ಓದ್ಸಿ ಅಲ್ಲಿ ಸೊಳ್ಳೆ ಕಾಟ ಅಂತ ಕರ್ಕೊಂಡ್ ಬಂದ್ರು. ಅವ್ನಿಗೂ ಅದು ಬೇಕಿತ್ತೇನೋ ಅವ್ನೆಂದೂ ನನ್ಜೊತೆ ಹೇಳ್ಲಿಲ್ಲ. ಒಂದ್​ ವಿಷ್ಯ ಮೂಗರ ಜೊತೆ ಹೆಂಗ್ ಮಾತಾಡೋದು ಅಂತ ಹೇಳ್ಕೊಟ್ಟಿದ್ದು ನಮ್ಮ ಅನಂತಿ, ಇದೇನಪ್ಪ ಇನ್ನೊಂದ್ ಹೆಸ್ರು ಅಂದ್ಕೋಬೇಡಿ. ಅನಂತಿ ನನ್ ಚಿಕ್ಕಮ್ಮ, ನಮ್ಮಮ್ಮಂಗೆ ಎಷ್ಟು ಪ್ರೀತಿ-ಗೌರವ ಕೊಡ್ತೀನೋ ಅಷ್ಟೇ ಅವ್ಳಿಗೆ ಕೊಡ್ತೀನಿ. ಅವ್ಳೇ ನಮ್ ಇಂದ್ರಮ್ಮತ್ತೆ ಸತ್ಮೇಲೆ ಅನಂತನ ತನ್ನ ಮಗನ ಥರ ನೋಡ್ಕೊಂಡಿದ್ದು.
ತೋರ್ಬೆರಳ್ನ ಮೂಗಿನ ಮೇಲಿಟ್ಟರೇ ಅಮ್ಮ, ಹೆಂಗಸು ಅನ್ನೋ ಅರ್ಥ. ಅದೇ ಮೂಗಿನ ಕೆಳ್ಗೆ ಮೀಸೆ ತಿರಿವಿದ್ರೆ ಅಪ್ಪ, ಗಂಡ್ಸು ಅಂತ ಅರ್ಥ. ಹಣೆಯ ಮೇಲಿನ ಬೆವರು ತೆಗೆಯೋ ನಾಟಕ ಆಡಿದ್ರೆ ಕೆಲಸ. ತೋರ್ಬೆರಳು ಮತ್ತು ಹೆಬ್ಬಟ್ಟನ್ನ ಸೇರಿಸಿ ವೃತ್ತ ಮಾಡಿದ್ರೆ ಸಿನಿಮಾ ಅಥ್ವಾ ಟಿ.ವಿ. ನೋಡೋದು ಹೀಗೆ ಹಲವಾರು ಸಂಜ್ಱೆಗಳನ್ನ ನನ್ ಚಿಕ್ಕಮ್ಮ ಅನಂತಿ ಹೇಳ್ಕೊಡಿದ್ಳು. ಆ ಸಂಜ್ಱೆಯೊಂದಿಗೆ ನಾನು ಅನಂತನೊಂದಿಗೆ ಮಾತಾಡ್ತಿದ್ದೆ. ಶಾಲೆ ಕಲ್ತು ಬಂದನಲ್ಲ ಈಗ ಬರ್ದು ತೋರ್ಸೋಕೆ ಶುರು ಮಾಡ್ದ ನಂಗೆ ತುಂಬಾ ಖುಷಿಯಾಯ್ತು. ಇದೀಗ ಅನಂತ ಎಲ್ಗೇ ಹೋಗ್ಲಿ ಬರ್ದು ತೋರ್ಸಿ ಅವ್ನ ಹೊಟ್ಟೆ ಹೊರೆಯುವಷ್ಟು ಶಕ್ತಿ ಹೊಂದಿದ್ದಾನೆ. ಅವ್ನಿಗೆ ಶಾಲೆ ಬಿಡ್ಸೋಕೆ ಮುಖ್ಯ ಕಾರಣ ಅಂದ್ರೆ ನಮ್ಮಜ್ಜಿ ಲಕ್ಷ್ಮಕ್ಕ, ನಮ್​ ಸಂಜೀವರಾಯಪ್ಪ ತಾತನ ಮುದ್ದಿನ ಮಡದಿ. ಇವ್ರಿಬ್ಬ್ರದ್ದೂ ಒಂಥರ ಜೋಡಿ. ಅಜ್ಜಿ ಅವಾಜ್​ ಹಾಕಿದ್ರೆ ತಾತ ಠುಸ್​ ಅಂತಿದ್ದ.

ಇವತ್ತು ಅನಂತನ ಸ್ಥಿತಿ ನೆನ್ಸೊಕೊಂಡ್ರೇನೆ ಭಯ ಆಗುತ್ತೆ. ಯಾಕಂದ್ರೆ ಇವತ್ತು ಅವ್ಪ್ಪಪ್ಪನೂ ಇಲ್ಲ, ಅವ್ನ ಮುದ್ದಿನ ಅಜ್ಜಿ ಲಕ್ಷ್ಮಕ್ಕನೂ ಇಲ್ಲ. ಅನಂತಿ ಇದಾಳೆ ಆದ್ರೆ ಅವ್ಳು ತನ್ನ ಮೊಮ್ಮಕ್ಕಳ ಬಗ್ಗೆ ಯೋಜಿಸ್ತಾಳೆ. ಅದಕ್ಕಿಂತ ಮಿಗಿಲಾಗಿ ನನ್ನ ಚಿಕ್ಕಪ್ಪ ಕೂಡ ಇಲ್ಲ. ಅವ್ಳೇ ತೊಂದ್ರೆಯಲ್ಲಿದ್ದಾಳೆ. ಆದ್ರೂ ಅವನ ಬಗ್ಗೆ ಅನಂತಿಗೆ ಬಲು ಮಮಕಾರ. ನಾನು ಅವಳ ಅಕ್ಕನ ಮಗನಾದ್ರೂ ನನಗಿಂತ ಆ ಅನಂತನ ಮೇಲೆ ಬಲು ಮಮಕಾರ. ನನಗಿಂತ ಐದಾರು ವರ್ಷ ದೊಡ್ಡವನಾದ ಅನಂತನಿಗೆ 30 ವರ್ಷ ವಯಸ್ಸು. ನನ್ನ ಚಿಕ್ಕಪ್ಪನ ಮನೆಯಲ್ಲಿದ್ಕೊಂಡು ಯಾವ್ದೋ ಪ್ಯಾಕ್ಟರಿಯಲ್ಲಿ ಕೆಲಸ ಮಾಡ್ತಿದ್ದಾನೆ. ಯೌವನ ನಮ್ಮನ್ನು ತೀರ ಸಂಕೀರ್ಣರನ್ನಾಗಿ ಮಾಡುತ್ತೆ ಅನ್ನೋಕೆ ನಾನೇ ನಿದರ್ಶನ. ನಾನು ಸಣ್ಣವ್ನಿದ್ದಾಗ ಅಪ್ಪ-ಅಮ್ಮ ಕಾಸ್ ಕೊಟ್ಟು, ಕಬ್ಬು-ಬೆಲ್ಲ ಬ್ಯಾಗಿಗೆ ತುಂಬಿ ತಾತರೋ ಊರ್ಗೆ ಹೋಗು ಅಂದ್ರೆ ಓಡ್ತಾ ಇದ್ದೆ. ಇದೀಗ ಯಾರು ಹೇಳೋ, ಕಾಸು ಕೊಡೋ ಅಗತ್ಯವೇ ಇಲ್ಲ ಆದ್ರೂ ಅನಂತನ ನೋಡಿ 15 ವರ್ಷ ಆಗಿದೆ. ನೋಡ್ಬೇಕು ಅನ್ಸುತ್ತೆ. ಆದ್ರೂ ಕಳೆದ ಹದ್ನೈದು ವರ್ಷಗಳಲ್ಲಿ ಒಂಸಾರಿ ಅವನನ್ನ ನೋಡ್ದೆ.

ನಾನು ಮಾಸ್ಟರ್ ಡಿಗ್ರಿ ಓದ್ಬೇಕಾದ್ರೆ ನಮ್ ಕಮ್ಯೂನಿಟಿ ಹಾಸ್ಟಲ್​ನಲ್ಲಿದ್ದೆ. ಅಲ್ಲಿ ಪ್ರತಿ ವರ್ಷ ವಧು-ವರರ ಸಮಾವೇಶ ನಡಸ್ತಾರೆ. ಅವತ್ತು ಅವ್ನೂ ಬಂದಿದ್ದ ನಮ್​ ಚಿಕ್ಕಪ್ಪ ರಾಮಣ್ಣನವರ ಜೊತೆ. ನನ್ನ ನೋಡಿ, ನಕ್ಕು, ಸಂಕೋಚಪಟ್ಕೊಂಡ. ಜನ ಜಾಸ್ತಿ ಇದ್ರೂ ಹೇಗೋ ಮಾಡಿ ಒಳ್ಗೆ ಕರ್ಕೊಂಡ್ಹೋಗಿ ಊಟ ಹಾಕ್ಸಿ, ಹೊರ್ಕೆ ಕರ್ಕೊಂಡ್ ಬಂದೆ. ಎಲ್ಲಾ ಸರ್ಯಾಗೆ ಇತ್ತು. ಆದ್ರೊಂದು ಸಮಸ್ಯೆಯಿತ್ತು. ಅವ್ನು ಸ್ಟೇಜ್ ಮೇಲೋಗಿ ಪರಿಚಯ ಮಾಡ್ಕೊಂಡು ತನ್ನ ವಿವರ, ವರಮಾನಗಳನ್ನ ಹೇಳ್ಕೋಬೆಕಿತ್ತು. ಅದು ಅವ್ನಿಂದ ಹೇಗೆ ಸಾಧ್ಯ?
(ಮುಂದುವರೆಸುತ್ತೇನೆ)