ಅವಧೂತ ಅನಂತ್ ನಾಗ್...!

ಅವಧೂತ ಅನಂತ್ ನಾಗ್...!

ಅನಂತ್​ ನಾಗ್. ಚಾರ್ಮಿಂಗ್ ಹೀರೋ. ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗಬಲ್ಲ ಮಹಾನ್ ನಟ. ಈ ನಟ, ಹೊಸಬರ  ಪ್ರಾಯೋಗಿಕತೆಗೆ ತೆರೆದುಕೊಳ್ಳುತ್ತಾರೆ. ಪಾತ್ರದೊಳಗೇ ಪಾತ್ರವಾಗಿ ಅದಕ್ಕೇನೆ, ನೈಜತೆ ತಂದುಕೊಡ್ತಾರೆ. ನೋಡುಗ ಪ್ರೇಕ್ಷಕರಿಗೂ ಅನಂತ್​ ನಾಗ್ ಪಾತ್ರವಾಗಿ ಕಾಣಿಸುವುದಿಲ್ಲ. ಜೀವಂತ ವ್ಯಕ್ತಿತ್ವದಂತೆ ಮನಸ್ಸಿಗೆ ಇಳಿದು ಬಿಡ್ತಾರೆ. ಅದುವೇ ‘ಅನಂತ್’ ಶಕ್ತಿ...

-----
ಅನಂತ್​ ನಾಗ್. ಎಲ್ಲ ಪಾತ್ರಕ್ಕೂ ಜೀವ ತುಂಬಲ್ಲ ನಟ. ಮಾತು ಕಮ್ಮಿ. ಭಾವಾವೇಷವೂ ಕಡಿಮೆ. ಆದರೆ, ಅಭಿನಯದಲ್ಲಿ ಪರಿಣಾಮ ಜಾಸ್ತಿ. ಇಲ್ಲಿವರೆಗೂ ನಿರ್ವಹಿಸಿದ ಪಾತ್ರಗಳು ಸರ್ವ ಕಾಲಕ್ಕೂ ಸೂಕ್ತ. ಆಗಿನಿಂದ ಹಿಡಿದು. ಈಗಿನವರಿಗೂ ಸಲ್ಲಬ್ಬಲ ಏಕೈಕ ನಟ.  ಆದ್ರೂ, ಆಯ್ಕೆ ಮಾಡೊ ಪಾತ್ರಗಳು ಏಜ್​ಗೆ ತಕ್ಕನಾಗಿಯೇ ಇರುತ್ತವೆ. ಆದರೆ, ಇಲ್ಲಿವರೆಗೂ ಅನಂತ್​ ನಾಗ್, ಚಿತ್ರಗಳಲ್ಲಿ ಹಾಡಿದಿಲ್ಲ. ಅಬ್ಬರದಿಂದ ಡೈಲಾಗ್ ಹೊಡೆದದ್ದು ಇಲ್ಲ. ಉಪದೇಶವನ್ನೂ ಮಾಡಿದ್ದಲ್ಲ. ಅನಂತ್​ ನಾಗ್ ಈಗ ಯೋಗರಾಜ್ ಭಟ್ಟರ ನಿರ್ಮಾಣದ ಚಿತ್ರದಲ್ಲಿ ಅನಂತ್​ ನಾಗ್ ಆ ಅವಧೂತರಾಗಿ, ಉಪದೇಶ ಮಾಡಿದ್ದಾರೆ. ಮದಿರೆಯ ಸುತ್ತ ವೇದಾಂತ ಹೇಳ್ತಾನೇ, ಎಲ್ಲೇ ಇದ್ದರೂ ನೀನು..ನೀನಾಗಿರು ಅಂತ ಹೇಳ್ತಾ ಹೋಗಿದ್ದಾರೆ.

ಮಧುವಿನಲು...ಮದಿರೆಯಲು,
ಸದನದಲು, ಸಲುಗೆಯಲು, ನೀನು ನೀನಾಗಿರು....

ಹೀಗೆ ಸಾಗೋ ಸಾಲುಗಳನ್ನ ಬರೆದವ್ರು ಯೋಗರಾಜ್ ಭಟ್ಟರಲ್ಲ. ಬದಲಿಗೆ ಅವರ ಶಿಷ್ಯ ಕ್ರಿಶ್ ಜೋಷಿ. ಶಾಯಿರಿ ಥರದ ಈ ಸಾಲನ್ನ ಸ್ವತ: ಅನಂತ್​ ನಾಗ್ ಆಡಿದ್ದಾರೆ. ಹಾಡಿದ್ದಾರೆ. ಆದರೆ, ಅನಂತ್ ನಾಗ್ ಈ ಹಿಂದೆ ಪಂಚರಂಗಿ ಚಿತ್ರದಲ್ಲಿ ಕೆಲವೇ ಕೆಲವು ಸೀನ್​ಗಳಲ್ಲಿ ಬಂದು ಬದುಕಿನ ಸತ್ಯ ಹೇಳೋ ಕೆಲಸ ಮಾಡಿದ್ದರು. ಹಾಡಲ್ಲಿ ಇಡೀ ಜೀವನದ ಕತೆ ಹೇಳಿದ್ದರು. ಆ  ಹಾಡಿಗೆ ಸ್ತತ: ಯೋಗರಾಜ್ ಭಟ್ಟ ಧ್ವನಿಯಾಗಿದ್ದರು. ಪರಪಂಚದ ಈ ಸತ್ಯ ಭರಿತ ಸಾಹಿತ್ಯಕ್ಕೆ ಸ್ವತ: ಅನಂತ್​ನಾಗ್ ಧ್ವನಿಯಾಗಿದ್ದಾರೆ.

ಮಗು ಮನೆಗಿರುವ ಸಂಭ್ರಮ,
ಮದುವೆ ಮನೆಗಿಲ್ಲ, ಅಲ್ಲಿ ಸಾವಿರ
ಸುಳ್ಳು,ಇಲ್ಲಿ ಹಸಿ ಸತ್ಯ, ಪರಪಂಚ
ಇದು ಪರಪಂಚ....

 
ಚಿತ್ರದಲ್ಲಿ ಬರೋ ಈ ಸಾಲುಗಳು ಹಾಡಾಗಿದ್ದರೂ...ಹಾಡಲ್ಲ. ಮಾತಾಗಿದ್ದರೂ ಮಾತಲ್ಲ. ಅವಧೂತನಂತೆ ಕಾಣಿಸೋ ಅನಂತ್​ನಾಗ್ ಅವರ ಕ್ಯಾರೆಕ್ಟರ್​ನ್ನ ಎತ್ತಿ ಹಿಡಿಯೋ ಬರಹಗಳಿವು.ಜೀವನದ ಅನುಭವನ್ನ ‘ಬಾರ್’’ಗೆ ಹೋಲಿಸಿ ಬುದ್ದಿ ಹೇಳೋ ಒಬ್ಬ ಜೀವಂತ ಅನುಭವಿ. ಇಲ್ಲಿವರೆಗೆ ಭಟ್ಟರು ಇಂತಹ ಸತ್ಯಗಳನ್ನ ಪಾತ್ರಗಳ ಮೂಲಕ ಹೇಳೋ ಕೆಲಸ ಮಾಡ್ತಿದ್ದರು. ಈಗ ಅವರ ಶಿಷ್ಯ ಕ್ರಿಶ್ ಜೋಶಿ ಆ ಪರಪಂಚವನ್ನ ಮುಂದುವರೆಸಿದಂತಿದೆ. ಇನ್ನೇನೂ ಜುಲೈ ತಿಂಗಳಲ್ಲಿ ತೆರೆಗೂ ಬರಲಿರೊ ಪರಪಂಚ ಚಿತ್ರದಲ್ಲಿ ಇಂತಹ ಸುಮಾರು ವಿಶೇಷತೆಗಳಿವೆ. ನಟ ದಿಗಂತ್ ಇದೇ ಚಿತ್ರದಲ್ಲಿ ಅರೆ ಬೆತ್ತಲಾಗಿ ಜೀವವನ್ನ ಹುಡುಕಿಕೊಂಡು ಹೋಗ್ತಾರೆ. ಬಾರ್ ಗರ್ಲ್​ಆಗಿ ರಾಗಿಣಿ ಮೈ ಮತ್ತು ಮನಸ್ಸು ಬಿಚ್ಚಿ ಡ್ಯಾನ್ಸ್ ಮಾಡಿದ್ದಾರೆ. ಇನ್ನೂ ಸಾಕಷ್ಟು ಸಂಗತಿಗಳಿವೆ. ಚಿತ್ರ ಬರೋವರೆಗೂ ವೇಟ್ ಮಾಡಿ..

-ರೇವನ್  ಪಿ.ಜೇವೂರ್​

Comments