ಅವನತಿ
ಅತ್ಯದ್ಭುತ ದೂರದೃಷ್ಟಿ, ಸಾಹಸೀ ಮನೋವೃತ್ತಿ, ಮಹೋನ್ನತ ಸಾಮರ್ಥ್ಯ ಇರುವ ವ್ಯಕ್ತಿಗಳು, ತಮ್ಮ ವ್ಯಾಪಾರ ವಹಿವಾಟನ್ನು ಅಗಾಧ ರೀತಿಯಲ್ಲಿ ಬೆಳೆಸಿ ಜಾಗತಿಕವಾಗಿ ತಮ್ಮದೇ ಛಾಪನ್ನು ಮೂಡಿಸಿದ ಉದ್ಯಮಿಗಳು, ತಮ್ಮ ಪ್ರಮಾದ, ತಪ್ಪು ನಿರ್ಣಯಗಳಿಂದ ತಾವೇ ಕಟ್ಟಿದ ಸಾಮ್ರಾಜ್ಯದ ಅವನತಿಗೆ ಹೇಗೆ ಕಾರಣರಾದರು ಎಂದು ಯೋಚಿಸಿದರೆ ಅವರ ಬಗ್ಗೆ ತಾತ್ಸಾರ ಕ್ಕಿಂತಲೂ ಹೆಚ್ಚಾಗಿ ಆಶ್ಚರ್ಯ, ಕನಿಕರ ಮೂಡುತ್ತದೆ. ತೀಕ್ಷ್ಣ ಬುದ್ಧಿಶಕ್ತಿ, ಬೃಹತ್ ಸಾಮರ್ಥ್ಯ ಪಡೆದ ಅದ್ಭುತ ವ್ಯಕ್ತಿಗಳು ತಮ್ಮದೇ ತಪ್ಪಿನಿಂದ ಹೇಗೆ ನಾಶವಾದರು ಎಂಬುದಕ್ಕೆ ಹಲವಾರು ನಿದರ್ಶನಗಳು ನಮ್ಮ ಕಣ್ಣ ಮುಂದಿವೆ.
ಇತ್ತೀಚಿನ ಉದಾಹರಣೆಗಳನ್ನು ಅವಲೋಕಿಸೋಣ.
01. zee ಎಂಟರ್ ಟೈನ್ಮೆಂಟ್ ನ ಸುಭಾಷ್ ಚಂದ್ರ:
ತಮ್ಮ ಸ್ವಂತ ಬುದ್ಧಿಶಕ್ತಿಯಿಂದ, ಶ್ರಮಪಟ್ಟು, ಏಕಾಂಗಿಯಾಗಿ ಹುಟ್ಟುಹಾಕಿದ ಜೀ ಎಂಟರ್ಟೈನ್ಮೆಂಟ್ ಮೂಲಕ ಭಾರತೀಯರ ಮನರಂಜನಾ ದಿಕ್ಕನ್ನೇ ಬದಲಾಯಿಸಿದ ಸುಭಾಶ್ಚಂದ್ರ. ದೇಶಿಯ ರಲ್ಲದೆ ವಿದೇಶದಲ್ಲಿರುವ ಭಾರತೀಯರು ಸಹ ದಶಕಗಳ ಕಾಲ ಈ ವಾಹಿನಿಯ ವೀಕ್ಷಕರಾಗಿ ಮನರಂಜನೆಯನ್ನು ಆಸ್ವಾದಿಸಿದರು. ಎಲ್ಲರನ್ನೂ ರಂಜಿಸಿದ ಸುಭಾಶ್ಚಂದ್ರ ಅದರಿಂದ ಪ್ರತ್ಯೇಕ ರಾದರು.
02. ಕಿಂಗ್ ಫಿಶರ್ ನ ವಿಜಯ್ ಮಲ್ಯ:
ಭಾರತೀಯ ವಿಮಾನಯಾನದ ಬದಲಾವಣೆಯನ್ನು ಅವಲೋಕಿಸಿ. ಹಲವಾರು ದಶಕಗಳ ಹಿಂದೆ ಕೇವಲ ಸರ್ಕಾರಿ ಸ್ವಾಮ್ಯದ ಸಂಸ್ಥೆಯೊಂದು ಅಸ್ತಿತ್ವದಲ್ಲಿತ್ತು. ವಿಜಯ ಮಲ್ಯ ತಮ್ಮ ಕಿಂಗ್ ಫಿಶರ್ ಸಂಸ್ಥೆ ಪ್ರಾರಂಭಿಸಿ ವಿಮಾನಯಾನದ ಗುಣಮಟ್ಟದ ದಿಕ್ಕನ್ನೇ ಬದಲಿಸಿದರು. ಹಲವಾರು ಖಾಸಗಿ ಸಂಸ್ಥೆಗಳು ಪೈಪೋಟಿಯ ನೆಪದಲ್ಲಿ ಅಸ್ತಿತ್ವಕ್ಕೆ ಬಂದು, ಸಾಧ್ಯತೆ ಭಾಧ್ಯತೆಯ ಬಗ್ಗೆ ತಲೆಕೆಡಿಸಿಕೊಳ್ಳದೆ ವೈಭವೋಪೇತ ಸೇವೆಗಳನ್ನು ಒದಗಿಸಿದವು. ಅದೇ ವಿಜಯ್ ಮಲ್ಯ ಈಗ ತಲೆ ಮರೆಸಿಕೊಂಡು ಓಡಾಡುತ್ತಿದ್ದಾರೆ.
03. ಜೆಟ್ ಏರ್ವೇಸ್ ನ ನರೇಶ್ ಗೊಯಲ್:
ವಿಮಾನಯಾನ ಸಂಸ್ಥೆಗಳು ಯಾವ ರೀತಿ ವೃತ್ತಿಪರತೆ ಮತ್ತು ಸಮಯಪ್ರಜ್ಞೆಯನ್ನು ಹೊಂದಿರಬೇಕೆಂದು ಮೇಲ್ಪಂಕ್ತಿ ಯಾದವರು, ಈ ದಿನ ದಿವಾಳಿಯಾಗಿ ಅಳಿವಿನಂಚಿನಲ್ಲಿದ್ದಾರೆ.
04. ಕಾಫಿ ಡೇ ಯ ಸಿದ್ದಾರ್ಥ,;
ಭಾರತೀಯರಿಗೆ ಕಾಫಿ ಸೇವನೆಯನ್ನು ಆನಂದಿಸುವ, ಆಸ್ವಾದಿಸುವ ರೀತಿಯನ್ನು ಕಲಿಸಿಕೊಟ್ಟ ಸಿದ್ಧಾರ್ಥ ತಾವೇ ತಮ್ಮ ಸಾಧನೆಯನ್ನು ಆಸ್ವಾದಿಸದೇ ಅಕಾಲಿಕ ಸಾವಿಗೆ ಶರಣಾದರು.
05. I I F L ನ ಹರಿ ಶಂಕರನ್:
(ಮೂಲಸೌಕರ್ಯಗಳು ಗುತ್ತಿಗೆ ಮತ್ತು ಆರ್ಥಿಕ ಸೇವೆ) ಮೂಲಭೂತ ಸೌಕರ್ಯಗಳಿಗೆ ಹಣಕಾಸಿನ ನೆರವು ನೀಡುವ ಹೊಸ ಉದ್ಯಮವನ್ನು ನಮ್ಮ ದೇಶದಲ್ಲಿ ಹುಟ್ಟುಹಾಕಿದ ಅಸಾಧಾರಣ ಬುದ್ಧಿಶಕ್ತಿಯ ಉದ್ಯಮಿ ಹರಿಶಂಕರನ್, ತಮ್ಮದೇ ದುರಹಂಕಾರದಿಂದ ಅವನತಿಗೆ ಕಾರಣ ರಾದರು.
06. Yes Bank ನ ರಾಣಾಕಪೂರ್;
ಭಾರತದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸಿದ ಎಸ್ ಬ್ಯಾಂಕ್ ಸಂಸ್ಥೆಯ ನಿರ್ಮಾರ್ತೃ ರಾಣಾ ಕಪೂರ್ ತಮ್ಮ ಅನುಚಿತ ಸಾಲ ನೀಡಿಕೆಯ ನೀತಿಗಳಿಂದ ಕೇಂದ್ರ ಬ್ಯಾಂಕ್ ಅವಕೃಪೆಗೆ ಒಳಗಾಗಿ ತಮ್ಮದೇ ನಿರ್ಮಾಣದ ಸಂಸ್ಥೆಯು ಹಾಳಾಗಲು ಕಾರಣರಾದರು.
ಇವರೆಲ್ಲಾ ಅಸಾಧಾರಣ ಬುದ್ಧಿಶಕ್ತಿ ಇರುವ ವ್ಯಕ್ತಿಗಳು. ತಮ್ಮದೇ ಯೋಚನಾ ಶಕ್ತಿಯಿಂದ, ರಚನಾ ಶಕ್ತಿಯಿಂದ ಅತ್ಯದ್ಭುತವಾದ ಕನಸು ಕಂಡು ಯೋಜನೆ ಹಾಕಿದವರು. ಆ ಯೋಜನೆಯನ್ನು ಕಾರ್ಯರೂಪಕ್ಕೆ ತರಲು, ಯಶಸ್ವಿಯಾಗಿಸಲು ಬೇಕಾದ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ದರು. ಶಕ್ತಿ ಮೀರಿ ಶ್ರಮಿಸಿದರು. ಅಪರಮಿತ ಉತ್ಸಾಹದಿಂದ ತಮ್ಮ ಸರಕು ಮತ್ತು ಸೇವೆಗಳನ್ನು ಮಾರುಕಟ್ಟೆಗೆ ತಂದು ಗ್ರಾಹಕರಿಗೆ ಒದಗಿಸಿದರು.
ಇದೆಲ್ಲದರ ಹೊರತಾಗಿಯೂ ಅವರು ಸೋತುಹೋದರು. ಶೋಚನೀಯವಾಗಿ ನಾಶವಾದರು.
ಏನಾಯ್ತು?
ಈ ದುರಂತಕ್ಕೆ ಹಲವಾರು ಕಾರಣಗಳಿರಬಹುದು.
ಜಾಗತಿಕವಾಗಿ ಹಲವಾರು ಬದಲಾವಣೆಗಳಾಗಿರಬಹುದು, ಅವರು ನಿರೀಕ್ಷಿಸಿದ ವಾತಾವರಣ ಇಲ್ಲವಾಗಿರಬಹುದು, ಅವರ ವಹಿವಾಟಿಗೆ ಧಕ್ಕೆ ತರುವಂತಹ ಹಲವಾರು ಕಾರಣಗಳು ಇರಬಹುದು. ಇವುಗಳಲ್ಲಿ ಕೆಲವು ಅವರ ನಿಯಂತ್ರಣದಲ್ಲಿಲ್ಲದಿರಬಹುದು. ಹೊಸ ಪೈಪೋಟಿ ಮತ್ತು ಒತ್ತಡಗಳಿಂದ ಕಷ್ಟಗಳಾಗಿರಬಹುದು. ಸೂಕ್ತ ರೀತಿಯ ಮಾನವ ಸಂಪನ್ಮೂಲ ಸರಿಯಾದ ಸಮಯಕ್ಕೆ ಸಿಗದಿರಬಹುದು. ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರಿಗೆ ಪೈಪೋಟಿಯನ್ನು ಎದುರಿಸಲಾಗದೆ ಇದ್ದಿರಬಹುದು.
ಆದರೆ ಕೇವಲ ಪೈಪೋಟಿ ಅಥವಾ ಮಾರುಕಟ್ಟೆಯ ಅಂಶಗಳಷ್ಟೇ ಇವರ ಅವನತಿಗೆ ಕಾರಣವಲ್ಲ ಎನ್ನುವುದನ್ನು ನಾವು ಗಮನಿಸಬೇಕು.
ಸರಳವಾದ ಎರಡು ಅಂಶಗಳು ಇವರ ಅವನತಿಗೆ ಕಾರಣ:
01.ಸಾಲದ ಸುಳಿ:
ತಮ್ಮ ಅತ್ಯುತ್ಸಾಹದ ಕನಸಿನ ಕೂಸನ್ನು ಅದ್ಭುತ ರೀತಿಯಲ್ಲಿ ಬೆಳೆಸಬೇಕೆಂಬ ಉತ್ಕಟ ಆಕಾಂಕ್ಷೆ ಯಲ್ಲಿ ಅನುತ್ಪಾದಕ ಉದ್ದೇಶಗಳಲ್ಲಿ ಹಣಹೂಡಿಕೆ, ವೈಭವಿಕರಣ, ಹೊರಜಗತ್ತಿಗೆ ತೋರ್ಪಡಿಕೆ, ಇವುಗಳಿಗೆಲ್ಲ ತಮ್ಮ ಬಳಿಯಿರುವ ಆರ್ಥಿಕ ಸಂಪನ್ಮೂಲ ಸಾಲದಾಗಿ, ಸಾಲದ ಮೊರೆ ಹೋದರು . ಸಾಲ ನೀಡುವ ಆರ್ಥಿಕ ಸಂಸ್ಥೆಗಳು ಸಹ ಇದೇ ರೀತಿಯ ಮನಸ್ಥಿತಿಯಲ್ಲಿ ಇತರ ಸಮಾನ ಸಂಸ್ಥೆಗಳೊಂದಿಗೆ ಪೈಪೋಟಿ ನಡೆಸಿ ಮಿತಿಮೀರಿ ಸಾಲವನ್ನು ನೀಡಿದವು. ಬಂಡವಾಳ ಹೂಡಿಕೆಗೆ ತಕ್ಕಂತೆ ಆದಾಯಗಳಿಸಲು ವಿಫಲವಾಗಿ (ಮೇಲೆ ತಿಳಿಸಿದ ಬಾಹ್ಯ ಕಾರಣಗಳಿಂದಾಗಿ) ಸಾಲದ ಸುಳಿಯಲ್ಲಿ ಸಿಕ್ಕು, ತಮ್ಮ ಭಾರಕ್ಕೆ ತಾವೇ ಕುಸಿದು ನಾಶವಾದವು.
02. ಮಿತಿ ಮೀರಿದ ವಹಿವಾಟು (OVER TRADING)
ತಮ್ಮ ದುರಾಸೆಯ ಫಲವಾಗಿ ತಮ್ಮ ಸಾಮರ್ಥ್ಯ ಮತ್ತು ಮಿತಿಯನ್ನು ಅರಿಯದೆ ತಮ್ಮ ಕನಸಿನ ಸಾಮ್ರಾಜ್ಯವನ್ನು ವಿಸ್ತರಿಸುತ್ತಾ ಹೋಗಿ ಕೊನೆಗೆ ತಮ್ಮ ದುರಾಸೆಗೆ ತಾವೇ ಬಲಿಯಾದರು.
ಯಾವುದೇ ಉದ್ಯಮಿಗಳು ತಮ್ಮ ಇತಿಮಿತಿ ಅರಿತುಕೊಂಡು ದುರಾಸೆಗೊಳಗಾಗದೆ, ನೈಜ ಸ್ಥಿತಿಯ ಅರಿವಿನಲ್ಲಿ, ತಮ್ಮ ಉದ್ಯಮವನ್ನು ನಿಧಾನವಾಗಿ, ಕ್ರಮೇಣವಾಗಿ ಬೆಳೆಸುತ್ತಾ ಹೋದರೆ ಯಶಸ್ಸು ಪಡೆಯಬಹುದು ಎಂದು ತೋರಿಸುವ ಉದಾಹರಣೆಗಳು ನಮ್ಮೆದುರು ಸಾಕಷ್ಟಿವೆ.
ಯಾವುದೇ ಕೆಲಸ ಕಾರ್ಯವನ್ನು ಹೇಗೆ ಮಾಡಬೇಕು ಎಂದು ತಿಳಿದುಕೊಳ್ಳುವುದು ಎಷ್ಟು ಅವಶ್ಯಕವೋ, ಅದೇ ರೀತಿ ಯಾವ ರೀತಿ ಮಾಡಬಾರದು ಎಂದು ತಿಳಿದುಕೊಳ್ಳುವುದು ಸಹ ಅಷ್ಟೇ ಅವಶ್ಯಕ. ಯಶಸ್ವಿ ಉದ್ಯಮಿಗಳನ್ನು ನೋಡಿ ಕಲಿಯುವಂತೆ, ವಿಫಲವಾದ ಉದ್ಯಮಿಗಳನ್ನು ನೋಡಿ ಕಲಿಯುವುದೂ ಸಾಕಷ್ಟಿರುತ್ತದೆ.
MAKE IN INDIA ದ ಉದ್ಘೋಷಣೆ ಯಲ್ಲಿ ಸಾಕಷ್ಟು ಸಂಘ-ಸಂಸ್ಥೆಗಳು, ಆರ್ಥಿಕ ಸಂಸ್ಥೆಗಳು, ಹಣಕಾಸು ಸಹಾಯ ಮಾಡಲು ಮುಂದಾಗುತ್ತವೆ. ಈ ಸಂಸ್ಥೆಗಳ ಉದ್ದೇಶ ಸಹಾಯ ಮಾಡುವುದಕ್ಕಿಂತಲೂ ಹೆಚ್ಚಾಗಿ ತಮ್ಮ ವಹಿವಾಟನ್ನು ಹೆಚ್ಚಿಸಿಕೊಳ್ಳುವುದು ಆಗಿರುತ್ತದೆ ಎನ್ನುವುದನ್ನು ಮರೆಯಬಾರದು. ಸಾಲ ಕೊಡುತ್ತಾರೆಂದು ತೆಗೆದುಕೊಳ್ಳಬಾರದು. ಹಣದ ಅವಶ್ಯಕತೆ ಇದೆಯೇ ಇದ್ದರೆ ಎಷ್ಟಿದೆ, ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ತಮ್ಮ ಗಮನ ಮತ್ತು ಏಕಾಗ್ರತೆ ತಮ್ಮ ಉದ್ಯಮದ ಕಡೆಗೆ ಇರಬೇಕು ಮತ್ತು ಹಣವನ್ನು ಯಾವ ಉದ್ದೇಶಕ್ಕಾಗಿ ಬಳಸಬೇಕೋ ಅದಕ್ಕೆ ಮಾತ್ರ ಬಳಸಬೇಕು. ಆ ಆರ್ಥಿಕ ನೆರವಿನಿಂದ ಅನುತ್ಪಾದಕ ಉದ್ದೇಶಗಳಾದ, ಮನೆ ಕಾರು ಇಂತಹ ವೈಭವೋಪೇತ ಉದ್ದೇಶಕ್ಕೆ ಬಳಸಿದರೆ, ಆರ್ಥಿಕ ಸಂಪನ್ಮೂಲ ದುರ್ವಿನಿಯೋಗವಾಗಿ, ಅಪಾಯ ಕಟ್ಟಿಟ್ಟ ಬುತ್ತಿ.
(ಸ್ಪೂರ್ತಿ: ಆಂಗ್ಲ ದಿನ ಪತ್ರಿಕೆಯಲ್ಲಿ ಪ್ರಕಟ ವಾದ ಬರಹ)