ಆಟದ ಮೂಲಕ ಪಾಠ

ಆಟದ ಮೂಲಕ ಪಾಠ

ಬರಹ

(ಇ-ಲೋಕ-52)(10/12/2007) 

Udayavani

 

ಕಂಪ್ಯೂಟರ್ ಆಟಗಳು ಜನರ ಮನಸ್ಸು ಗೆದ್ದಿವೆ.ಮಕ್ಕಳಂತೂ ಕಂಪ್ಯೂಟರ್ ಆಟಗಳಿದ್ದರೆ ಜಗತ್ತನ್ನೇ ಮರೆಯುತ್ತಾರೆ.ಆಟವನ್ನು ಆಡುವುದರಲ್ಲೇ ಮನರಂಜನೆ ಪಡೆಯುವ ಜತೆಗೆ ಅವರು ಶಿಕ್ಷಣವನ್ನೂ ಪಡೆಯುವ ಹಾಗಿದ್ದರೆ,ಮಕ್ಕಳು ಕಂಪ್ಯೂಟರ್ ಆಟವಾಡಿ ಸಮಯ ಕಳೆಯುತ್ತಾರೆ ಎಂದು ಹಪಹಪಿಸುವ ಅಪ್ಪ-ಅಮ್ಮಂದಿರಿಗೆ ತುಸುವಾದರೂ ಸಮಾಧಾನವಾದೀತು.ಥಾಮಸ್ ಎನ್ನುವ ಕ್ಯಾಲಿಫೊರ್ನಿಯಾದ ಪ್ರಾಧ್ಯಾಪಕರು ಮಕ್ಕಳ ಕಂಪ್ಯೂಟರ್ ಆಟಗಳಲ್ಲಿ ಪಾಠವನ್ನೂ ಸೇರಿಸುವ ಪ್ರಯತ್ನದಲ್ಲಿದ್ದಾರೆ.ಆಟವನ್ನು ಆಡುವಾಗ ಮಕ್ಕಳು ಹಲವಾರು ನಿರ್ಣಯಗಳನ್ನು ತೆಗೆದು ಕೊಳ್ಳಬೇಕಾಗುತ್ತದೆ.ಇದರ ಮೂಲಕ ಅವರ ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯ ಅಭಿವೃದ್ಧಿ ಆಗುತ್ತದೆ.
ಐಬಿಎಂನಿಂದ ಒಂದೇ ಚಿಪ್‍ನ ಸೂಪರ್ ಕಂಪ್ಯೂಟರ್
 ಐಬಿಎಂ ಕಂಪೆನಿ ಒಂದೇ ಚಿಪ್‍ನಲ್ಲಿ ಸೂಪರ್ ಕಂಪ್ಯೂಟರ್ ಅಭಿವೃದ್ಧಿ ಪಡಿಸಿದೆ.ಇದರ ವಿಶೇಷತೆ ಎಂದರೆ ಚಿಪ್‍ನ ನಡುವಿನ ಸಂವಹನಕ್ಕೆ ತಾಮ್ರದ ತಂತಿಗಳ ಬದಲಿಗೆ ಬೆಳಕಿನ ಕಿರಣಗಳನ್ನು ಬಳಸಲಾಗುತ್ತಿದೆ.ಬೆಳಕಿನ ಕಿರಣಗಳ ಮೂಲಕ ದತ್ತಾಂಶವನ್ನು ಚಿಪ್‍ನ ಒಂದು ಭಾಗದಿಂದ ಮತ್ತೊಂದೆಡೆಗೆ ಸಾಗಿಸಿದಾಗ ದತ್ತಾಂಶ ವರ್ಗಾವಣೆಗೆ ತಗಲುವ ಸಮಯ ಕಡಿಮೆಯಾಗುತ್ತದೆ.ಅಲ್ಲದೆ ಚಿಪ್‍ನ ತಾಪ ಕಡಿಮೆಯಾಗಿರುತ್ತದೆ.ತಂತಿಯ ಮೂಲಕ ದತ್ತಾಂಶ ವಿದ್ಯುತ್ ಅಲೆಯಾಗಿ ಸಾಗುವಾಗ ಅಧಿಕ ಶಕ್ತಿ ವ್ಯಯವಾಗಿ ಚಿಪ್‍ನ ತಾಪ ಏರುತ್ತದೆ.ಚಿಪ್‍ನ ಕಾರ್ಯನಿರ್ವಹಣೆಯ ವೇಗವೂ ಹೆಚ್ಚುತ್ತದೆ.ವಿದ್ಯುತ್ ಸಂಕೇತವನ್ನು ಬೆಳಕಾಗಿ ಪರಿವರ್ತಿಸಲು ಮೊಡ್ಯುಲೇಟರ್ ಎನ್ನುವ ಸಾಧನ ಬಳಕೆಯಾಗುತ್ತದೆ.ಈಗ ಪ್ರಾಯೋಗಿಕ ಹಂತದಲ್ಲಿರುವ ಚಿಪ್ ತಾಂತ್ರಿಕತೆಯನ್ನು ಮುಂದೆ ಚಿಪ್ ತಯಾರಿಕೆಗೆ ಬಳಸಿದಾಗ,ಲ್ಯಾಪ್‍ಟಾಪ್‍ಗಳೂ ಸೂಪರ್ ಕಂಪ್ಯೂಟರ್‌ಗಳ ತರ ಭಾರೀ ಗಣಕ ಸಾಮರ್ಥ್ಯವನ್ನು ಪಡೆಯಲಿವೆ.ಎರಡು ಸಂಸ್ಕಾರಕ,ನಾಲ್ಕು ಸಂಸ್ಕಾರಕಗಳು ಒಂದೇ ಚಿಪ್‍ನಲ್ಲಿ ಅಳವಡಿಕೆಯಾದಾಗ,ಸಂಸ್ಕಾರಕಗಳ ನಡುವಣ ದತ್ತಾಂಶ ವರ್ಗಾವಣೆ ಅಗತ್ಯವಾಗುತ್ತದೆ.
ಪಿಟೀಲು ರೊಬೊಟಯ್ಯ!
 ಟೊಯೋಟಾ ಕಂಪೆನಿ ರೊಬೋಟ್ ತಯಾರಿಕೆಗೆ ಕಡೆಗೆ ಗಮನ ಹರಿಸಿದೆ.ಕಂಪೆನಿ ಈ ನಿಟ್ಟಿನಲ್ಲಿ ಸಾಧಿಸಿರುವ ಪ್ರಗತಿ ಮೂಗಿನ ಮೇಲೆ ಬೆರಳೇರಿಸುವಂತಿದೆ.ವಯಲಿನ್ ಬಾರಿಸಲು ಸಮರ್ಥವಾಗಿರುವ ಐದಡಿ ಎತ್ತರದ ಬಿಳಿ ಬಣ್ಣದ ರೊಬೋಟ್ ಈಗ ಸುದ್ದಿಯಲ್ಲಿದೆ.ಎಡಗೈಯಲ್ಲಿ ಕುಶಲ ವಯಲಿನ್ ವಾದಕನಂತೆ ವಯಲಿನ್ ಹಿಡಿದು ಬಲಗೈಯಿಂದ ವಯಲಿನ್ ತಂತಿಗಳನ್ನು ಕಡ್ಡಿಯಿಂದ ಮೀಟಿ ನುಡಿಸುವ ಸಂಗೀತ ಕೇಳಿದವರಿಗೆ ಅದು ಕುಶಲ ವಾದಕನ ಕರಾಮತ್ತು ಎಂಬ ಭ್ರಮೆ ಹುಟ್ಟಿಸುತ್ತದೆ.ಜಪಾನೀ ಸರಕಾರ ತನ್ನ ಕಂಪೆನಿಗಳು ರೊಬೋಟ್ ತಯಾರಿಕೆ ಗಮನ ಕೊಡಬೇಕೆಂದು ಬಯಸಿದೆ.ಅದರ ಪ್ರಕಾರ ಜನರ ದೈನಂದಿನ ಚಟುವಟಿಕೆಗಳಿಗೆ ನೆರವಾಗುವ ರೊಬೋಟ್‌ಗಳನ್ನು ಮುಂದಿನ ಐದು ವರ್ಷಗಳ ಅವಧಿಯಲ್ಲಿ ತಯಾರಿಸುವ ಗುರಿಯನ್ನು ಟೊಯೋಟಾ ಕಂಪೆನಿ ಹೊಂದಿದೆ.ರೋಗಿಗಳನ್ನು ಅಡೆ ತಡೆಗಳಿರುವ ಏರುತಗ್ಗು ಸ್ಥಳದಲ್ಲೂ ಯಾವುದೇ ತೊಂದರೆಯಾಗದಂತೆ ಸಾಗಿಸುವ ವೀಲ್‌ಚೇರ್ ರೊಬೋಟ್‌ವನ್ನೂ  ಕೂಡಾ ಟೊಯೊಟಾ ತಯಾರಿಸಿದೆ.
 ಇದೇ ವೇಳೆ ಹೊಂಡ ಕಂಪೆನಿ ಅಸಿಮೋ ಎನ್ನುವ ಮಾನವ ಸದೃಶ ರೊಬೊಟನ್ನು ತಯಾರಿಸಿದೆ.ಇದು ನಡೆದಾಡುವ,ಓಡುವ ಸಾಮರ್ಥ್ಯ ಪಡೆದಿದ್ದು,ಸಂದರ್ಭಾನುಸಾರ ಮಾತನ್ನಾಡಲೂ ಸಮರ್ಥವಾಗಿದೆ.ಹೊಂಡ ಕಂಪೆನಿಯ ಶೋರೂಮುಗಳಲ್ಲಿ ಇದು ಮಾರಾಟಗಾರನಂತೆ ಕಾರ್ಯನಿರ್ವಹಿಸುತ್ತಿದೆ.ಟೊಯೊಟಾದ ರೊಬೋಟ್ ಸೇಲ್ಸ್ ಮೇನ್ ರೊಬಿನಾಕ್ಕೆ ಕಾಲಿಲ್ಲ.ಗಾಲಿಗಳ ಮೂಲಕ ಚಲಿಸುವ ರೊಬಿನಾ ಆರಡಿ ಎತ್ತರವಿದ್ದು,ತನ್ನ ತೂಕ ಎಷ್ಟೆನ್ನುವುದು ಗುಟ್ಟು ಎಂಬಂತಹ ಮಾತನ್ನಾಡುತ್ತದೆ!
ಮರ ಉಳಿಸಲಿರುವ ಮಲ!
 ಮನೆಯ ಬಾಗಿಲು ಮತ್ತು ಕಿಟಕಿಯನ್ನು ಮರದಿಂದ ತಯಾರಿಸುವ ಬದಲಿಗೆ ಪ್ಲಾಸ್ಟಿಕ್,ಕಾಂಕ್ರೀಟಿನಿಂದ ತಯಾರಿಸುವುದನ್ನು ನೋಡಿದ್ದೇವೆ.ಆದರೆ ಮಾನವನ ಮಲದಿಂದ ಕಿಟಕಿ ಬಾಗಿಲು ತಯಾರಿಸ ಬಹುದೇ?ದೇಶದ ಮೂಲೆ ಮೂಲೆಗಳಲ್ಲಿ ಶುಚಿಯಾದ ಶೌಚಾಲಯಗಳನ್ನು ಜನರಿಗೆ ಒದಗಿಸುವ ಸುಲಭ್ ಇಂಟರ್ನ್ಯಾಶನಲ್ ತನ್ನ ಶೌಚಾಲಯದ ಗುಂಡಿಗಳಲ್ಲಿ ಒಟ್ಟಾದ ಮಲದಿಂದ ತಯಾರಿಸಿದ ವಸ್ತುವಿನಿಂದ ಕಿಟಕಿ ಬಾಗಿಲುಗಳನ್ನು ತಯಾರಿಸಿ ಪ್ರದರ್ಶನಕ್ಕಿಟ್ಟಿದೆ.ಅಂದ ಹಾಗೆ ಸುಲಭ್ ಇಂಟರ್ನ್ಯಾಶನಲ್ಸ್ ಹಿಂದಿರುವ ವ್ಯಕಿ ಬಿಂದೇಶ್ವರ ಪಾಠಕ್,ಮತ್ತು ವಿನ್ಯಾಸಕಾರರು ಮೆಕ್ಸಿಕೋನ ಸಿಯೆರಾ ಮತ್ತು ಡೇವಿಡ್.
ವಿಕಲಚೇತನರಿಗಾಗಿ ಅಂತರ್ಜಾಲ ಶೋಧಿಸುವ ಗೂಗಲ್ ಸೇವೆ
 ಗೂಗಲ್ ಅಂತರ್ಜಾಲ ಪುಟಗಳ ಶೋಧದಲ್ಲಿ ಹೆಸರು ಮಾಡಿದೆ.ಈಗ ತನ್ನ ಸೇವೆಗಳ ಪಟ್ಟಿಗೆ ಮತ್ತೊಂದು ವಿನೂತನ ಸೇವೆಯನ್ನು ಸೇರಿಸಿದೆ.ದೃಷ್ಟಿ ಸಾಮರ್ಥ್ಯ ಚೆನ್ನಾಗಿಲ್ಲದವರು ಹುಡುಕುವ ಮಾಹಿತಿ ಇರುವ  ಅಂತರ್ಜಾಲ ಪುಟಗಳಲ್ಲಿ ದೃಷ್ಟಿಯ ತೊಂದರೆ ಇರುವವರಿಗೆ ಸೂಕ್ತ ಪುಟಗಳನ್ನು ಮೊದಲಾಗಿ ಪಟ್ಟಿ ಮಾಡುವ ವಿನೂತನ ಸೇವೆ ಇಲ್ಲಿ ಲಭ್ಯ.http://labs.google.com/accessible/ ತಾಣದಲ್ಲಿ ಈ ಸೇವೆ ಲಭ್ಯ.ಕಡಿಮೆ ಚಿತ್ರಗಳಿರುವ,ಅಕ್ಷರ ದೊಡ್ದದಾಗಿರುವ,ಪುಟದ ಮಾಹಿತಿಯನ್ನು ಓದಿ ಹೇಳುವ ಸೌಲಭ್ಯ ಇದ್ದ ಪುಟಗಳನ್ನು ಗೂಗಲ್ ಸೇವೆ ಮೊದಲಾಗಿ ಪಟ್ಟಿ ಮಾಡುತ್ತದೆ.ಈ ಸೇವೆಯನ್ನು ಒದಗಿಸಲು ಮುತುವರ್ಜಿ ವಹಿಸಿದವರು ಭಾರತೀಯ ಮೂಲದ ಟಿ ವಿ ರಾಮನ್. ಈತನೂ ವಿಕಲಚೇತನ ವ್ಯಕ್ತಿ.
 ವ್ಯಕ್ತಿಗಳ ಬಗ್ಗೆ ಶೋಧ ಕಾರ್ಯ ಕೈಗೊಳ್ಳ ಬೇಕಾದರೆ ಗೂಗಲಿಗಿಂತ ಇತರ ಅಂತರ್ಜಾಲ ತಾಣಗಳು ಸೂಕ್ತ.http://www.pipl.com,http://zabasearch.com,http://www.zoominfo.com ಇಂತಹ ತಾಣಗಳು ನಿಮ್ಮ ಹಳೆಯ ಗೆಳೆಯನ ಬಗ್ಗೆ ಹುಡುಕಾಟ ನಡೆಸಲು ಅನುವು ಮಾಡಿಕೊಡುತ್ತದೆ.
*ಅಶೋಕ್‍ಕುಮಾರ್ ಎ