ಆತ್ಮವಿಶ್ವಾಸವೆಂಬ ಅಗೋಚರ ಶಕ್ತಿ ! (ಭಾಗ 2)
ಪ್ರತಿಯೊಬ್ಬ ಮನುಷ್ಯನ ಹುಟ್ಟೇ ಒಂದು ಅತ್ಯದ್ಭುತ. ಸುಮಾರು 30 ರಿಂದ 40 ಲಕ್ಷದಷ್ಟು ತನ್ನ ಸಹೋದರರನ್ನು ಸ್ಪರ್ಧೆಯಲ್ಲಿ ಸೋಲಿಸಿ ಅಂಡಾಶಯ ಪ್ರವೇಶಿಸಿ ಗೆದ್ದು, ಈ ಪ್ರಪಂಚಕ್ಕೆ ಕಾಲಿಟ್ಟವರು ನಾವು. ತಾನಾಗಿ ಸೋಲನ್ನು ಒಪ್ಪಿಕೊಳ್ಳುವ ತನಕ ಸೋಲಲು ಸಾಧ್ಯವೇ ಇಲ್ಲ. ಸುನೀತಾ ಕೃಷ್ಣನ್ ಎಂಬ ಹೆಣ್ಣು ಮಗಳು ಶಾಲೆಯಿಂದ ಮನೆಕಡೆ ಹೊರಟಿದ್ದಾಳೆ. ಆಕೆಗೆ ಹದಿನಾರರ ಹರೆಯ. ಜೀವನದಲ್ಲಿ ನೂರಾರು ಕನಸು ಹೊತ್ತ ಹೆಣ್ಣುಮಗಳು. ಆದರೆ ದಾರಿ ಮಧ್ಯೆ 8 ಮಂದಿ ಯುವಕರು ಆಕೆಯ ಮೇಲೆ ಮೃಗದಂತೆ ಎರಗುತ್ತಾರೆ. ಆಕೆಯನ್ನು ಅತ್ಯಾಚಾರ ಮಾಡಿ ತಿಪ್ಪೆಗೆಸೆಯುತ್ತಾರೆ. ಮಾಂಸದ ಮುದ್ದೆಯಂತಾಗಿದ್ದ ಸುನೀತಾ ಮನೆಯ ಕೋಣೆಯೊಳಗೆ ಬಿದ್ದುಕೊಳ್ಳುತ್ತಾಳೆ. ಅಪ್ಪ- ಅಮ್ಮ ಹತಾಶರಾಗುತ್ತಾರೆ. ನೆರೆಕರೆಯವರು ಇವರ ಮನೆಕಡೆ ಮರ್ಯಾದೆಗೆ ಅಂಜಿ ಹೆಜ್ಜೆ ಹಾಕುವುದನ್ನು ಬಿಡುತ್ತಾರೆ. ಸಂಬಂಧಿಕರು ದೂರವಾಗುತ್ತಾರೆ. ಹೀಗೇ ದಿನಗಳು ಕಳೆದವು. ಸುನೀತಾ ಮಾತನಾಡದೆ ಕೋಣೆಯಲ್ಲಿ ಕುಳಿತುಕೊಳ್ಳುತ್ತಿದ್ದ ದೃಶ್ಯ ಕಾಣಲು ಅಪ್ಪನಿಂದ ಸಾಧ್ಯವಾಗುತ್ತಿರಲಿಲ್ಲ. ಆತ ಒಂದು ದಿನ ಮನೋವೇದನೆ ತಾಳಲಾರದೆ ಮಗಳ ಬಳಿ ಬಂದು “ಮಗಳೇ ಎಷ್ಟು ದಿನಾಂತ ಹೀಗೆ ಇರುತ್ತಿ, ಏನಾದರೂ ಮಾಡು” ಅಂದಾಗ ಸುನೀತಾ ಅಪ್ಪನಿಗೆ, “ಅಪ್ಪಾ ನಾನು ಕಾಲೇಜಿಗೆ ತೆರಳುತ್ತೇನೆ” ಎನ್ನುತ್ತಾಳೆ. ಅಪ್ಪನಿಗೆ ಸಂತೋಷವಾಗುತ್ತದೆ. ಒಪ್ಪಿಗೆ ಸೂಚಿಸುತ್ತಾನೆ. ಆದರೆ ಯಾವ ಕಾಲೇಜು ಆಕೆಯನ್ನು ಸೇರಿಸಿಕೊಳ್ಳಲು ಒಪ್ಪಲಿಲ್ಲ. ವಿದ್ಯಾಭ್ಯಾಸದ ಕನಸು ತೊರೆದ ಆಕೆ ಕೆಲಸಕ್ಕಾಗಿ ಪ್ರತ್ನಿಸುತ್ತಾಳೆ. ಆದರೆ ಅತ್ಯಾಚಾರಕ್ಕೆ ಒಳಗಾಗಿದ್ದ ಆಕೆಗೆ ಯಾರೊಬ್ಬರೂ ಕೆಲಸಕೊಡಲು ಮುಂದೆ ಬರಲಿಲ್ಲ. ವಿಷಯ ತಿಳಿದ ಅಪ್ಪ ಕುಸಿದು ಹೋಗುತ್ತಾನೆ. ಮನಸ್ಸಿನಲ್ಲಿ ಯೋಚಿಸಿ ಒಂದು ದಿನ ಅಪ್ಪನ ಬಳಿಗೆ ಬಂದ ಮಗಳು ಧೈರ್ಯ ತುಂಬುತ್ತಾಳೆ. “ಅಪ್ಪಾ ನನ್ನ ಜೀವನದಲ್ಲಿ ಮೂರು ಆಯ್ಕೆಗಳಿದ್ದವು. ಒಂದು ಸಾವು. ಮತ್ತೊಂದು ಜೀವಂತವಾಗಿರುವುದು. ಮೂರನೆಯದು ಜೀವನ ಸಾಗಿಸುವುದು. ಸಾಯುವುದಿದ್ದರೆ ನಾನು ಅಂದೇ ಸಾಯುತ್ತಿದ್ದೆ. ಆದರೆ ನಾನು ಸಾಯಲಾರೆ. ಇನ್ನು ಜೀವಂತವಾಗಿರುವುದು ನನ್ನಿಂದ ಸಾಧ್ಯವಿಲ್ಲ. ಮೂರುಹೊತ್ತು ತಿಂದೋ ತಿನ್ನದೆಯೋ ನಾಯಿಕೂಡಾ ಜೀವಂತವಿರಬಲ್ಲದು. ನಾನು ಹಾಗಾಗಲಾರೆ. ನಾನು ಜೀವನ ಸಾಗಿಸಬೇಕು. ಅದಕ್ಕಾಗಿ ಸ್ವಂತ ಸಂಸ್ಥೆಯೊಂದನ್ನು ಆರಂಭಿಸುತ್ತೇನೆ. ನನ್ನಂತಹ ನತದೃಷ್ಟರಿಗೆ ಆಶ್ರಯ ಕೊಡುತ್ತೇನೆ.” ಅಂದಾಗ ಅಪ್ಪನ ಕಣ್ಣುಗಳು ತೇವಗೊಂಡವು. ಆತ ಸಮ್ಮತಿ ಸೂಚಿಸಿದ. ಏಕೆಂದರೆ ಆತನಿಗೆ ಮಗಳು ಎದ್ದು ನಿಲ್ಲಬೇಕಿತ್ತು.
“ಪ್ರಜ್ವಲ” ಎಂಬ ಸಂಸ್ಥೆ ಸ್ಥಾಪಿಸಿದ ಸುನೀತಾ ಕೃಷ್ಣನ್, ಈ ತನಕ ತನ್ನಂತೆ ಅದೃಷ್ಟಹೀನವಾಗಿ ಬದುಕಿದ ಸುಮಾರು 10,000 ಹೆಣ್ಣುಮಕ್ಕಳಿಗೆ ಆಶ್ರಯ ನೀಡಿದ ಮಹಾತಾಯಿಯಾದಳು. ಅವರಿಗೆ ಶಾಲೆಗಳಿಗೆ ಪ್ರವೇಶ ದೊರೆಯುವುದು ಕಷ್ಟ ಎಂದು ತನ್ನ ಅನುಭವದಿಂದ ಅರಿತಿದ್ದ ಆಕೆ ಅವರಿಗಾಗಿಯೇ 16 ಶಾಲೆಗಳನ್ನು ತೆರೆದು ಸಾಧಕಿಯಾದಳು. ಅವಳ ಅಪ್ರತಿಮ ಸೇವೆಯನ್ನು ಗುರುತಿಸಿದ ಕೇಂದ್ರ ಸರ್ಕಾರ ಆಕೆಗೆ “ಪದ್ಮಶ್ರೀ” ಪ್ರಶಸ್ತಿ ನೀಡಿ ಗೌರವಿಸಿತು.
ಸುನೀತಾ ಕೃಷ್ಣನ್ ಜೀವನದಲ್ಲಿ ತೋರಿದ್ದು ಆತ್ಮವಿಶ್ವಾಸ. ಅದೇ ಆಕೆಯನ್ನು ಎದ್ದು ನಿಲ್ಲಿಸಿದ್ದು. ಆತ್ಮವಿಶ್ವಾಸ ಮೂಡಿದಾಗ, ಪ್ರಯತ್ನ ತನ್ನಿಂತಾನೆ ಹೊರಹೊಮ್ಮುತ್ತದೆ. ಪ್ರಯತ್ನ ಮಾಡದೆ ಸಾಧಕನಾದ ಇತಿಹಾಸ ಜಗತ್ತಿನಲ್ಲಿ ಕಾಣದು. ಪ್ರಯತ್ನ ಪಡದೇ ಹೋದರೆ ದೊಡ್ಡ ಸಾಧನೆ ಬದಿಗಿರಲಿ, ತಾನು ಧರಿಸುವ ಶೂ ನ ಲೇಷನ್ನೂ ಕಟ್ಟಲಾಗದು. ಸರಿಯಾಗಿ ಟೈ ಕಟ್ಟಲಾಗದು, ದಿನ ನಿತ್ಯ ಹೆಣೆಯುವ ಜಡೆಯನ್ನೂ ಹೆಣೆಯಲಾಗದು. ಇವುಗಳನ್ನು ದಿನ ನಿತ್ಯ ಅಭ್ಯಾಸ ಮಾಡುವುದರಿಂದ ಸುಲಭದಲ್ಲಿ ನಿರ್ವಹಿಸಬಹುದು. ತನ್ನಿಂದ ಸಾಧ್ಯ ಎಂಬ ಒಂದು ಅಂತರಾಳದ ತೀರ್ಮಾನ ನಮ್ಮನ್ನು ಅದೆಷ್ಟೋ ಎತ್ತರಕ್ಕೆ ಕೊಂಡೊಯ್ಯಬಹುದು.
ವಿದ್ಯಾರ್ಥಿಗಳು ಅದೆಷ್ಟೋ ವ್ಯಕ್ತಿಗಳಿಂದ ಬಾಹ್ಯಪ್ರೇರಣೆ ಪಡೆಯಬಹುದು. ಆದರೆ ಬದಲಾವಣೆ ಘಟಿಸಬೇಕಾಗಿದ್ದು ತನ್ನೊಳಗೆ. ತಾನು ಸಾಧಿಸಬೇಕಾದ ವಿಷಯದ ಸ್ಪಷ್ಟತೆ ತನ್ನಲ್ಲಿರಲಿ. ಅದನ್ನು ಸಾಧಿಸಿಯೇ ತೀರುತ್ತೇನೆ, ನನ್ನಿಂದ ಅದು ಖಂಡಿತಾ ಸಾಧ್ಯ ಎಂಬ ಒಂದು ಸಣ್ಣ ನಿರ್ಧಾರ ನಿಮ್ಮ ಬದುಕನ್ನೇ ಬದಲಿಸಬಹುದು. ಆಗ ಮಾತ್ರ ನಾವು ಹೆತ್ತ ತಾಯಿ, ತನ್ನಾಸೆ ಪೂರೈಸಿದ ತಂದೆ, ವಿದ್ಯೆ ಕೊಟ್ಟ ಗುರು, ಹೊತ್ತ ಭೂಮಿಯ ಋಣವನ್ನು ತೀರಿಸಬಹುದು.
(ಮುಗಿಯಿತು)
-ಯಾಕೂಬ್ ಎಸ್ ಕೊಯ್ಯೂರು, ಬೆಳ್ತಂಗಡಿ.
ಚಿತ್ರ ಕೃಪೆ: ಇಂಟರ್ನೆಟ್ ತಾಣ