ಆಫ್ರಿಕಾದ ಹಳ್ಳಿಗರ ಪಾರಂಪರಿಕ ಜ್ನಾನ


ಆಫ್ರಿಕಾದ ಗಿನಿ ದೇಶದ ಸೆಕೋ ಕಮರ ಅವರು ಲಾಮಿಕೌರೆ ಹಳ್ಳಿಯ ರೈತ. ಕೃಷಿಯಲ್ಲಿ ಹಲವು ದಶಕಗಳ ಅನುಭವ. ಹಳ್ಳಿಯ ಹೊರವಲಯದಲ್ಲಿರುವ ಅವರ ಹೊಲದಲ್ಲಿ ಗೆದ್ದಲು ಕಾಟ ವಿಪರೀತ. ಹೊಲಗಳಲ್ಲಿ ಭತ್ತ, ಜೋಳ, ನೆಲಗಡಲೆ ಸಸಿಗಳ ಮತ್ತು ಕರಿಮೆಣಸು ಬಳ್ಳಿಗಳ ಬೇರು ಹಾಗೂ ಕಾಂಡಗಳಿಗೆ ಗೆದ್ದಲುಗಳಿಂದ ಬಹಳ ಹಾನಿ.
ದುಬಾರಿ ರಾಸಾಯನಿಕ ಕೀಟನಾಶಕಗಳನ್ನು ಖರೀದಿಸಲು ಅವರಲ್ಲಿ ಹಣವಿಲ್ಲ. ಗೆದ್ದಲು ಕಾಟಕ್ಕೆ ಸರಳ ಪರಿಹಾರದ ಚಿಂತನೆ ಅವರದು. ಕೊನೆಗೊಂದು ಯುಕ್ತಿ ಹೊಳೆಯಿತು ಅವರಿಗೆ. ಬಿದಿರಿನ ಗಳಗಳನ್ನು ಒಂದು ಮೀಟರ್ ಉದ್ದದ ತುಂಡುಗಳಾಗಿ ಕತ್ತರಿಸಿದರು. ಈ ತುಂಡುಗಳನ್ನು ಒಂದು ಮೀಟರ್ ಅಂತರದಲ್ಲಿ ತನ್ನ ಭತ್ತದ ಹೊಲದಲ್ಲಿ ಎಲ್ಲ ದಿಕ್ಕುಗಳಲ್ಲಿ ಊರಿದರು.
ನಾಲ್ಕೈದು ದಿನಗಳ ನಂತರ ನೋಡಿದಾಗ ಅವರ ಹೊಲದಲ್ಲೊಂದು ಚಮತ್ಕಾರ. ಹೊಲದ ಸಸಿಗಳಲ್ಲಿದ್ದ ಗೆದ್ದಲುಗಳು ಅವನ್ನು ತೊರೆದು, ಟೊಳ್ಳಾದ ಬಿದಿರಿನ ತುಂಡುಗಳ ಒಳಗೆ ನೆಲೆಸಿದ್ದವು! ಅವರು ಆ ಬಿದಿರಿನ ತುಂಡುಗಳನ್ನು ಕಿತ್ತು, ಉರಿಯುತ್ತಿದ್ದ ಬೆಂಕಿಯ ಮೇಲೆ ಕೊಡವಿದರು; ಅವುಗಳಲ್ಲಿದ್ದ ಗೆದ್ದಲುಗಳೆಲ್ಲ ಬೆಂಕಿಯಲ್ಲಿ ಸುಟ್ಟು ಹೋದವು. ಇದೇ ತಂತ್ರ ನೆಲಗಡಲೆ ಮತ್ತು ಜೋಳದ ಹೊಲಗಳಲ್ಲಿ ಹಾಗೂ ಕರಿಮೆಣಸಿನ ತೋಟದಲ್ಲಿಯೂ ಇದೇ ಫಲಿತಾಂಶ ನೀಡಿತು. ಅನಂತರ ಭತ್ತ ಮತ್ತು ನೆಲಗಡಲೆ ಹೊಲಗಳಲ್ಲಿ ಬಿದಿರಿನ ತುಂಡುಗಳ ಜೊತೆ ಕಿರಿಜೋಳದ ಕಾಂಡ ಊರಿ ಪರೀಕ್ಷಿಸಿದಾಗಲೂ ಇದೇ ಫಲಿತಾಂಶ. ಗೆದ್ದಲಿನ ಕಾಟದಿಂದ ಬೇಸತ್ತಿದ್ದ ತನ್ನ ಅಕ್ಕಪಕ್ಕದ ರೈತರಿಗೆ ಈ ತಂತ್ರ ತಿಳಿಸಿದರು ಕಮರ. ಈ ತಂತ್ರ ಬಳಸಿದ ಅವರಿಗೂ ಗೆದ್ದಲು ಕಾಟದಿಂದ ಮುಕ್ತಿ. ಈಗ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಈ ತಂತ್ರ ಜನಪ್ರಿಯ.
ಬೀಜಗಳ ರಕ್ಷಣೆಗೆ ಹುಣಿಸೆ ಎಲೆಗಳ ಬಳಕೆ
ಮಾಲಿ ದೇಶದ ರೈತ ಮಹಿಳೆ ಶ್ರೀಮತಿ ತಾತಿ ದಿಯಾಸ್ಸನ. ಭತ್ತ ಬೆಳೆಸುವ ತಾತಿ, ಭತ್ತದ ಬೀಜಗಳ ಸಂರಕ್ಷಣೆಗೆ ಬಳಸುವುದು ಹುಣಿಸೆ (ಟಾಮರಿಂಡಸ್ ಇಂಡಿಕ) ಮರದ ಎಲೆಗಳನ್ನು. ಭತ್ತದ ಬೀಜಗಳನ್ನು ನೆಲದಲ್ಲಿ ಹರಡಿ, ಹುಣಿಸೆ ಗೆಲ್ಲುಗಳಿಂದ ಮುಚ್ಚಿ, ಬಿಸಿಲಿನಲ್ಲಿ ಒಣಗಿಸುತ್ತಾಳೆ. ಭತ್ತದ ಬೀಜಗಳು ಚೆನ್ನಾಗಿ ಒಣಗಿದ ನಂತರ, ಹುಣಿಸೆ ಗೆಲ್ಲುಗಳಿಂದ ಎಲೆಗಳನ್ನು ಬೇರ್ಪಡಿಸುತ್ತಾಳೆ.
ಅನಂತರ ಭತ್ತದ ಬೀಜಗಳನ್ನೂ ಒಣಗಿದ ಹುಣಿಸೆ ಎಲೆಗಳನ್ನೂ ಬೆರಸಿ, ಪಾತ್ರೆಯಲ್ಲಿ ಹಾಕಿ, ಗಾಳಿಯಾಡದಂತೆ ಬಿಗಿಯಾಗಿ ಮುಚ್ಚಿಡುತ್ತಾಳೆ ತಾತಿ. ಮುಂದೆ ಬಿತ್ತನೆಗೆ ಬೀಜ ಬೇಕಾದಾಗ ಮಾತ್ರ ಪಾತ್ರೆಯ ಮುಚ್ಚಳ ತೆಗೆಯುತ್ತಾಳೆ.
ಕಳೆದ ಹಲವಾರು ವರುಷಗಳಿಂದ ಕೀಟಬಾಧೆ ತಡೆಯಲು ತಾತಿ ಬಳಸಿದ ವಿಧಾನ ಇದು. ಈಗ, ಈ ವಿಧಾನ ಬಳಸಿ ಭತ್ತ, ಜೋಳ, ಸೋಯಾಬೀನ್ಸ್, ನೆಲಗಡಲೆ ಹಾಗೂ ಸಿರಿಧಾನ್ಯಗಳ ಬೀಜಗಳನ್ನು ರೈತರು ರಕ್ಷಿಸುತ್ತಿದ್ದಾರೆ.
ಎಲೆಕತ್ತರಿಸುವ ಹುಳಗಳ ಹತೋಟಿ
ಗಿನಿ ದೇಶದ ರೈತ ಫಾಸ್ಸೊ ಹಬಾ ತನ್ನ ಭತ್ತದ ಹೊಲದಲ್ಲಿ ಎಲೆಕತ್ತರಿಸುವ ಹುಳಗಳ ಹತೋಟಿಗೆ ಬಳಸುವ ವಿಧಾನ ಕುತೂಹಲಕಾರಿ. ಗಿನಿಯ ಬಟೌಟಾ ಹಳ್ಳಿಯ ರೈತ ಹಬಾ ಬಾಲ್ಯದಲ್ಲಿ ಈ ತಂತ್ರವನ್ನು ಕಲಿತದ್ದು ತನ್ನ ಮಾವನಿಂದ. ಭತ್ತದ ಹೊಲಗಳಲ್ಲಿ ಎಲೆಕತ್ತರಿಸುವ ಹುಳಗಳು ಕಾಣಿಸಿಕೊಂಡಾಗ, ಅವನ ಮಾವ ಹೊಲದ ಕೆಲವೆಡೆಗಳಲ್ಲಿ ಮಣ್ಣನ್ನು ಕೆದಕುತ್ತಿದ್ದ. ಹಬಾ ಮತ್ತು ಇತರ ಮಕ್ಕಳು ಅಲ್ಲೇ ಮೂತ್ರ ಹೊಯ್ಯಬೇಕೆಂದು ಹೇಳುತ್ತಿದ್ದ. ಕೆಲವು ದಿನಗಳ ನಂತರ, ಅಲ್ಲಿಗೆ ತೀವ್ರ ವಿಷದ ಮರ ಎರಿಥ್ರೋಫ್ಲೀಯಮ್ ಗಿನೀನ್‌ಸಿಸ್ ಇದರ ತೊಗಟೆಯ ಪುಡಿ ಎರಚುತ್ತಿದ್ದ. ಅನಂತರ ಮಣ್ಣು, ಮೂತ್ರ ಮತ್ತು ಪುಡಿಯನ್ನು ಚೆನ್ನಾಗಿ ಮಿಶ್ರ ಮಾಡುತ್ತಿದ್ದ.
ಮೂತ್ರದಲ್ಲಿರುವ ಅಮೋನಿಯಾದ ವಾಸನೆಗೆ ಆಕರ್ಷಿತವಾದ ಎಲೆಕತ್ತರಿಸುವ ಹುಳಗಳು ಆ ಜಾಗಗಳಿಗೆ ಬಂದು, ಮಣ್ಣನ್ನು ತಿನ್ನುತ್ತವೆ. ಮಣ್ಣಿಗೆ ಬೆರೆಸಿದ ವಿಷದ ಪ್ರಭಾವದಿಂದಾಗಿ ಹುಳಗಳಿಗೆ ದೂರಕ್ಕೆ ಚಲಿಸಲು ಸಾಧ್ಯವಾಗುವುದಿಲ್ಲ. ಕೆಲವೇ ಮೀಟರ್ ದೂರ ಚಲಿಸಿದ ನಂತರ ನಿಶ್ಶಕ್ತವಾಗಿ ನೆಲದಲ್ಲಿ ಬೀಳುತ್ತವೆ. ಮರುದಿನ ಮಕ್ಕಳು ಹೊಲಕ್ಕೆ ಬಂದು, ನೆಲದಲ್ಲಿ ಬಿದ್ದ ಹುಳಗಳನ್ನೆಲ್ಲ ಹೆಕ್ಕಿ, ಮಣ್ಣಿನಲ್ಲಿ ಹೊಂಡ ಮಾಡಿ, ಹೂತು ಹಾಕುತ್ತಾರೆ. ಹಲವು ರೈತರು ಹಬನಿಂದ ಈ ತಂತ್ರ ಕಲಿತು ಬಳಸುತ್ತಿದ್ದಾರೆ.
ಈ ವಿಧಾನಗಳಿಗೆ ಪೇಟೆಂಟ್ ಇಲ್ಲ. ಇದನ್ನು ಜಗತ್ತಿನಲ್ಲಿ ಯಾರೂ ಬಳಸಬಹುದು. ಆಫ್ರಿಕಾ ಮತ್ತು ಭಾರತದ ಹಳ್ಳಿಗಳ ಜನಸಮುದಾಯದಲ್ಲಿ ಬಳಕೆಯಲ್ಲಿವೆ ಇಂತಹ ಸಾವಿರಾರು ಪರಿಹಾರಗಳು. ತಲೆಮಾರಿನಿಂದ ತಲೆಮಾರಿಗೆ ಸಾಗಿ ಬಂದಿರುವ ಈ ಪಾರಂಪರಿಕ ಜ್ನಾನ ಸಮುದಾಯದ ಸೊತ್ತು. ಆದರೆ ಈಗ ಅನೇಕ ಬಹುರಾಷ್ಟ್ರೀಯ ಕಂಪೆನಿಗಳು, ಈ ಜ್ನಾನವನ್ನು ಕದ್ದು, ಅದಕ್ಕೆ ಪೇಟೆಂಟ್ ಪಡೆದು, ಲಾಭದ ಕೊಳ್ಳೆ ಹೊಡೆಯಲು ಹುನ್ನಾರ ನಡೆಸುತ್ತಿವೆ. ಆದ್ದರಿಂದ, ಇಂತಹ ಪಾರಂಪರಿಕ ಜ್ನಾನ ಖಜಾನೆಯನ್ನು ದಾಖಲಿಸಿ, ಸಮುದಾಯದ ಸೊತ್ತಾಗಿ ಉಳಿಸಲು ನೆರವಾಗೋಣ.
ಫೋಟೋ 1: ಬಿದಿರಿನ ತುಂಡುಗಳು …. ಕೃಪೆ: 123ಆರ್ ಎಫ್.ಕೋಮ್
ಫೋಟೋ 2: ಹುಣಿಸೆ ಎಲೆಗಳು …. ಕೃಪೆ: ಫೀಡಿಪೀಡಿಯಾ.ಆರ್ಗ್