ಇಂದ್ರೀಯಗಳಿಗೆ ಮನವಿ
ಇಂದ್ರೀಯಗಳಿಗೆ ಮನವಿ
ಕೇಳಿ ಓ ಇಂದ್ರೀಯಗಳೆ ನಮ್ಮ ಬಿನ್ನಹ,
ಆನಂದದಿ ಧರೆಯಲಿಂದು ಜೀವಿಸಲೊಸುಗ.
ಪಂಚಾಕ್ಷರಿ ಪರಮಶಿವನ ನೋಡುವ ತನಕ,
ಅಷ್ಟಾಕ್ಷರಿ ಶ್ರೀನಿವಾಸನೊಲಿಸುವ ತನಕ.//ಪ//.
ಸಕಲ ಜೀವಕೋಟಿಗಳ ಉಸಿರನೀಗೊ ನಾಸಿಕಾ,
ಆಸ್ತಿ ಮೇಲೆ ಮೋಹ ತೊರೆದು ಆಗು ನೀನು ಆಸ್ತಿಕ.
ಗಮಗಮಿಸುವ ವೈಕುಂಟದ ಗಮ್ಯ ನೋಡು ನಾಸಿಕಾ,
ಹರಿಯ ಪಾದ ತಾಕಲೆಂದು ಆಗು ಸೌಗಂಧಿಕಾ.//೧//.
ರುಚಿಯ ಹೇಳೊ ಮಾತನಾಡೊ ಎರಡು ಗುಣದ ನಾಲಿಗೆ,
ದೇಹವನ್ನು ಆಳುತಿರುವ ಎರಡಿಂಚಿನ ನಾಲಿಗೆ,
ಅರಸನಲ್ಲ ಆಳು ನೀನು ನಿಜದಿ ಬದುಕೊ ನಾಲಿಗೆ,
ಅಡುಗೆಮನೆಯ ತೊರೆದು ಹರಿಯ ಅಡಿಗೆ ಬೀಳೊ ನಾಲಿಗೆ.//೨//.
ಖಗನ ಕಣ್ಣ ಕಿರಣದಿಂದ ಜನುಮಪಡೆದ ಕಣ್ಣು ನೀ,
ಕಾಮ ತೊರೆದು ಕಾಣಬೇಕು ಜಗದಿ ಭಗದ ರೂಪ ನೀ,
ಸಾಕ್ಷಿಭಾವ ಧಕ್ಷತನದಿ ವಿಶ್ವವೀಕ್ಷಿಸಕ್ಷಿ ನೀ,
ಕಮಲನಯನ ನಾರಾಯಣನ ನೋಡಬಯಸು ನಯನ ನೀ.//೩//.
ದಿವಿಯ ವಾಯು ಧರೆಯ ಜೀವರನ್ನು ಬೆರೆಸೊ ಚರ್ಮವೇ,
ಶೀತ ಉಷ್ಣ ಧುಃಖ ಸುಖವ ಸಮದಿ ಸ್ವೀಕರಿಸುವಾ,
ಸ್ಪರ್ಷದಾಸೆಯಿಂದ ಯಾರ ದಾಸನಾಗ ಬೇಡವೇ,
ಮಾಧವನಾ ಪಾದಪೂಜೆಗಾಗಿ ತಪಿಸೊ ಪವನವೇ.//೪//.
ಆಕಾಶದಿ ಹುಟ್ಟಿಬಂದ ಶಬ್ದಕೇಂದ್ರ ಕರ್ಣಗಳೇ,
ಶುಭಾಶುಭದ ಸುದ್ದಿಗಳನು ಸಮತೋಲನದಾಲಿಸಿರಿ,
ಸುಪ್ತಮನಕೆ ಸಪ್ತಸ್ವರದ ಸಾಮವೇದ ಶ್ರಾವಿಸಿರಿ,
ಸಪ್ತಗಿರಿಯ ಒಡೆಯ ನುಡಿವ ವಾಣಿಗಾಗಿ ಶ್ರಮಿಸಿರಿ.//೫//.
-:ಅಹೋರಾತ್ರ.