ಇದೇಕೆ ಹೀಗೆ ಪತಿ ಪತ್ನಿಯರ ನಡುವೆ
ಈ ವಿಷಯ ಅರ್ಥವೇ ಆಗುವುದಿಲ್ಲ
ಅಲ್ಲಿಯವರೆಗೂ ಇದ್ದ ಕದ್ದು ಕದ್ದು ನೋಡುವ ಕಾತುರ, ಕಣ್ನಲ್ಲೇ ಏನೇನೋ ಹೇಳುವ ತುಂಟತನ, ಒಂದು ಕಿರುನಗೆಗಾಗಿ,ಗಾಳಿಯಲ್ಲಿ ಬರುವ ಸಿಹಿ ಮುತ್ತಿಗಾಗಿ ಗೋಗರೆತ, ಪ್ರೀತಿ, ವಿರಹ ಇವೆಲ್ಲಾ ಎಲ್ಲಿ ಹೋಗುತ್ತವೆ ?
ಕೇವಲ ಮದುವೆ ಎಂಬ ವ್ಯವಸ್ಥೆಗೆ ಇವೆಲ್ಲವನ್ನು ನಾಶ ಪಡಿಸುವ ಶಕ್ತಿ ಇದೆಯೇ?
ಮದುವೆಯಾದ ಒಂದು ಮೂರು ತಿಂಗಳಲ್ಲಿ ಸ್ವಾತಂತ್ರ, ಇಗೋ, ಸರ್ವಾಧಿಕಾರತ್ವ, ಎಂಬೆಲ್ಲಾ ಪದಗಳು ಬೇರೆ ಬೇರೆ ಹೆಸರಲ್ಲಿ ತಾಂಡವವಾಡತೊಡಗುತ್ತವೆ.
ಇಲ್ಲಿಯವರೆಗೆ ಅಮ್ಮನ ಮನೆಯಲ್ಲಿ ತಾಯಿ ಹೇಳಿದ್ದ ಚಾಚೂ ತಪ್ಪದೆ ಮಾಡುತ್ತಿದ್ದ ಹುಡುಗಿಗೆ ಇದ್ದಕಿದ್ದಂತೆ ತಾನೇಕೆ ಗಂಡನ ಮಾತ ಕೇಳಬೇಕೆಂಬ ಪ್ರಶ್ನೆ ಹೊಳೆಯುತ್ತದೆ . ಅಂದೇ ಮನೆಯಲ್ಲಿ ರಣರಂಗವೊಂದು ಸದ್ದಿಲ್ಲದೆ ರೂಪುಗೊಂಡಿರುವುದು ಇಬ್ಬರ ಅರಿವಿಗೂ ಬರುವುದಿಲ್ಲ.
ತನ್ನ ಸಂಪಾದನೆಯ ಬಗ್ಗೆ ಗಂಡನ ಪ್ರತಿಯೊಂದು ಪ್ರಶ್ನೆ ಅವಳಿಗೆ ಲೋಭಿಯೂಬ್ಬನ ದರ್ಶನವನ್ನೇ ಮಾಡುತ್ತದೆಯೇ ಹೊರತು ಅದರ ಹಿಂದಿರುವ ಹಿತಚಿಂತಕ ಕಾಣುವುದಿಲ್ಲ.
"ಏಕೆ ತಡ " ಎಂಬ ಹೆಂಡತಿಯ ಕಾಳಜಿಯ ಮಾತು ಗಂಡನಿಗೆ ಇನ್ವೆಸ್ಟಿಗೇಷನ್ ಮಾಡುವ ಅಧಿಕಾರಿಯೊಬ್ಬರ ವಾಣಿಯಂತೆ ಅನ್ನಿಸುತ್ತದೆಯೇ ಹೊರತು ಆ ಮಾತಿನ ಹಿಂದಿನ ಕಾಳಜಿ, ಕಾತುರ ತಿಳಿಯುವುದಿಲ್ಲ.
ಅಡಿಗೆ ಸರಿ ಇಲ್ಲ ಎಂಬ ಮಾತು ಅವಮಾನದಂತೆ ಭಾವಿಸುತ್ತಾಳೆ ಹೊರತು ತನ್ನನ್ನು ಇನ್ನಷ್ಟು ಚಿನ್ನವನ್ನಾಗಿ ಮಾಡುವ ಮಾತೆಂದು ತಿಳಿಯುವುದಿಲ್ಲ.
ಹೆಂಡತಿಯ ಸೀರೆ, ಮೇಕಪ್ ಕಿಟ್ ಇತ್ಯಾದಿಗಳ ಖರ್ಚಿಗೆ ಗೊಣಗುವ ಗಂಡನಿಗೆ ಅದು ತನ್ನನ್ನು ಮೆಚ್ಚಿಸಬೇಕೆಂದು ಕೊಂಡುಕೊಂಡಿರುವ ವಸ್ತುಗಳೆಂಡು ಹೊಳೆಯುವುದೇ ಇಲ್ಲ.
ಗಂಡನ ಬೈಕ್ನ ಹಿಂದಿನ ಸೀಟಲ್ಲಿ ಕೂತಿದ್ದ ಹೆಣ್ನು ಯಾರು ಎಂದು ಕೇಳುವ ಹೆಂಡತಿ ಅನುಮಾನ ಪಿಶಾಚಿಯಂತೆ ಕಾಣುತ್ತಾಳೆ ಹೊರತು, ಗಂಡನ ಮೇಲಿನ ಅವಳ ಪೊಸೆಸ್ಸೀವ್ನೆಸ್ ಅಭಿಮಾನ ಕಾಣುವುದಿಲ್ಲ
ಒಂದು ಚಾನೆಲ್ ಬದಲಾವಣೆಯಿಂದ ಹಿಡಿದು ಯಾವ ಮನೆ ಕೊಳ್ಲಬೇಕು ಎಂಬ ವಿಷಯದವರೆಗೂ ಭಿನ್ನಾಭಿಪ್ರಾಯವೇ .
ಎಲ್ಲಿ ಹೋಗುತ್ತದೆ ಮದುವೆಗೆ ಮುಂಚಿನ ಆ ಕಾತುರತೆ, ಒಬ್ಬರಿಗೊಬ್ಬರಿಗಾಗಿ ಕಾಯುವ ಆ ತನ್ಮಯತೆ, ಆ ತ್ಯಾಗ , ಎಲ್ಲವೂ ?
[ ಈ ಮೇಲಿನ ಸನ್ನಿವೇಶಗಳು ಇಬ್ಬರೂ ದುಡಿಯುವ ಮನೆಗಳಲ್ಲಿ ತುಂಬಾ ಕಾಣುತ್ತವೆ , ಎಲ್ಲರೂ ಅಂತ ಹೇಳಿಲ್ಲ ಆದರೆ ಸಾಮಾನ್ಯವಾಗಿ ಗಂಡ ಹೆಂಡತಿಯರ ನಡುವೆ ಜಗಳಗಳೇಕೆ ಎಂದಷ್ತೇ ]