ಈ ಎಂಕ್ಟೇಸಪ್ಪನ್ ಕಂತೆ ಪುರಾಣಕ್ಕೆ ತೆರೆ ಎಳ್ಯಾಣೇನು ? ಏ, ಸಾಕಾತ್ ಬಿಡೋ ನಮ್ಮಪ್ಪ, ನೀನೊಳ್ಳೆ !

ಈ ಎಂಕ್ಟೇಸಪ್ಪನ್ ಕಂತೆ ಪುರಾಣಕ್ಕೆ ತೆರೆ ಎಳ್ಯಾಣೇನು ? ಏ, ಸಾಕಾತ್ ಬಿಡೋ ನಮ್ಮಪ್ಪ, ನೀನೊಳ್ಳೆ !

ಬರಹ

ನನ್ನ ಅಮೆರಿಕದ ಯಾತ್ರೆ, ಯ ವಿವರಗಳನ್ನು ಬರೆಯುತ್ತಿರುವ, ದಿನಪ್ರತಿದಿನದ ಸನ್ನಿವೇಷಕ್ಕೆ ಸುಮಾರಾಗಿ ತೆರೆಯೆಳೆಯಬಹುದೇನೋ, ಅನ್ನಿಸಿದೆ. ಹೇಳಲು ಇನ್ನೂ ಸುಮಾರು ವಿಷಯಗಳಿವೆ. ತೆಗೆದ ಚಿತ್ರಗಳೂ ಇವೆ. ಈಗ ಅಮೆರಿಕಕ್ಕೆ ಯಾರು ಹೋಗಲ್ಲಾ , ಹೇಳಿ ?

ವೆಂಕಟೇಶ್ ಹೋಗಿಬಂದರು ಅಂದಮೇಲೆ ಅದೆಷ್ಟು ಸುಲಭವಾಗಿದೆ, ಎನ್ನುವ ಮಾತನ್ನು ನಾನು ಇಲ್ಲಿ ಪ್ರಸ್ತಾಪಿಸುತ್ತಿರುವುದು. ಇದುವರೆಗೆ ಆ ದೇಶಕ್ಕೆ ಹೋದವರು, ಒಂದು ಪ್ರವಾಸಕಥನವನ್ನು ಬೆರೆದಿದ್ದಾರೆ, ಇಲ್ಲವೇ ತಮ್ಮ ಬಂಧುಮಿತ್ರರಲ್ಲಿ, ಸ್ನೇಹಿತರಲ್ಲಿ ತಮ್ಮ ಅನುಭವಗಳನ್ನು ಹೇಳಿಕೊಂಡಿದ್ದಾರೆ. ಒಳ್ಳೆಯ ಪ್ರಭಾವೀ ಲೇಖಕರಾದರೆ, ಯಾರೂ ಕಾಣದ ಹಲವಾರು ವಿಶೇಷ ಸಂದರ್ಭಗಳನ್ನು, ರಸವತ್ತಾಗಿ ಕೇಳುವವರಿಗೆ, ಓದುಗರಿಗೆ ತಿಳಿಯಪಡಿಸಿದ್ದಾರೆ. ಆದರೆ, ನನ್ನಂತಹ ಅಲ್ಪಜ್ಞನಿಗೆ ಆ ವಿಶೇಷ-ಕಲೆ ಎಲ್ಲಿ ಬರಬೇಕು ? ಆದರೆ, ಬರೆಯುವ ಹುಚ್ಚು ಇದೆಯಲ್ಲಾ ?ಅದಕ್ಕೇನು ಮಾಡಬೇಕು. ಅದಕ್ಕೇ ನಮ್ಮ ಮಕ್ಕಳು ನನಗೆ ಒಂದು ಲ್ಯಾಪ್ ಟಾಪ್ ಕೊಡಿಸಿ, ತಮ್ಮ ಕೈತೊಳೆದುಕೊಂದರು ಅನ್ನಿಸುತ್ತಿದೆ. ಇಲ್ಲವಾದರೆ ಅವರ ತಲೆ ತಿನ್ನುತ್ತಿದ್ದನೇನೋ. ಅದೇನು ಇದೇನು ಎಂದು ನಮ್ಮ ಮಕ್ಕಳನ್ನು ಕೇಳಿತಿಳಿದುಕೊಳ್ಳುವ ಮಗುವಿನಂತಹ ಸ್ವಭಾವದವನಾದ ನಾನು. ಮಕ್ಕಳಿಗೋ ತುರು........ ಪುರುಸೊತ್ತಿಲ್ಲ. ಅವರು ತಾನೇ ಎನುಮಾಡಿಯಾರು ! ಕೊನೆಗೆ ಸಂಪದವೆಂಬ ಸುಂದರ ಕನ್ನಡ ತಾಣದ ಪರಿಚಯವಾದದ್ದು ನನ್ನ ಮಗ, ಪ್ರಕಾಶನಿಂದಾಗಿ !

ಅಮೆರಿಕಕ್ಕೆ ಬೇರೆ ಹೋಗಿದ್ದಾಗಿದೆ. ಒಂದೆರಡು ಮಾತು ಬರೆಯದೆ ಇದ್ದರೆ ಹೇಗಾದೀತು ! ಬರೆದಿದ್ದು ಬರೆದದ್ದೆ. ಬರೆದದ್ದೆ. ಪುಣ್ಯಕ್ಕೆ ಅಲ್ಲಿಗೆ ಹೋದಾಗ ಅಲ್ಲಿ ಅಕ್ಕ ವಿಶ್ವ ಕನ್ನಡ ಸಮ್ಮೇಳನ ನಡೆಯುತ್ತಿತ್ತು. ನನಗೆ ಅದೊಂದು ಹೆಮ್ಮೆಯಸಂಗತಿ. ಅಲ್ಲದೆ ಏನೊ ಸಾಧಿಸಿದ ಸಂಭ್ರಮ. ಅದಕ್ಕೆ ನನ್ನ ತಮ್ಮ, ಟಿಕೆಟ್ ಬುಕ್ ಮಾಡಿಟ್ಟಿದ್ದರು. ನನ್ನ ತಮ್ಮನಿಗೆ ಕೂಡ ಅದರಲ್ಲಿ ಭಾಗವಹಿಸಲು ಆಹ್ವಾನಬಂದಿತ್ತು. ನನಗಂತೂ ಆ ವಿಶಾಲ ಪ್ರಾಂಗಣ, ಬೆಳಕಿನ ಸಂಯೋಜನೆ, ವಸ್ತು-ಪ್ರದರ್ಶನಗಳು, ಮೆರವಣಿಗೆಯ ಆನಂದ, ಹೊಸಜಾಗ ಹೊಸ ಜಗತ್ತು, ಆದರೆ, ಅಲ್ಲೆಲ್ಲಾ ಕಣ್ಣುಹಾಯಿಸಿದ ಕಡೆಯಲ್ಲೆಲ್ಲಾ ಕನ್ನಡಿಗರು, ನೂರಲ್ಲಾ, ಒಟ್ಟಾರೆ ನಾಲ್ಕುಸಾವಿರಜನ. ಅಲ್ಲಿ ಬಂದಿದ್ದ ಕನ್ನಡ ನಟರು, ಕವಿಗಳು, ಹಾಡುಗಾರರು, ಮಾನ್ಯ ಮುಖ್ಯ-ಮಂತ್ರಿ ಯಡಿಯುರಪ್ಪನವರ ಭಾಷಣ, ಕಾಸರವಳ್ಳೀ ಸೋದರಿಯರ ಮಧುರ ಹಾಡುಗಾರಿಕೆ, ಸಿ. ಅಶ್ವಥ್ ರವರ ಅದ್ಬುತ ಶೈಲಿಯ ರಸವತ್ತಾದ ಗಾಯನ, ಪುಸ್ತುಕಬಿಡುಗಡೆಯ ಕಾರ್ಯಕ್ರಮಗಳು, ಎಸ್. ಎಲ್. ಭೈರಪ್ಪನವರ ಮಾತು, ಕಂಬಾರರ, ಜಯಂತ್ ಕಾಯ್ಕಿಣಿಯವರ, ಕುಂ ವೀರಭದ್ರಪ್ಪನವರ, ಗೌಡರ ಹಾಸ್ಯ, ಸ್ವಾಮಿಗಳ, ಭಾಷಣಗಳು, ಇತ್ಯಾದಿಗಳು ಹರ್ಷತಂದವು. ಗೀತೋಪದೇಶದ ನೃತ್ಯರೂಪಕ, ಸೊಗಸಾಗಿತ್ತು. ಒಟ್ಟಿನಲ್ಲಿ ನನ್ನ ಅಮೆರಿಕಯಾತ್ರೆಗೆ ಅರ್ಥಬಂದಿತ್ತು. ಬಹಳ ಸಂತೋಷಪಟ್ಟೆವು. ಬಂಧು ಮಿತ್ರರನ್ನೆಲ್ಲಾ ಭೆಟ್ಟಿಯಾದೆವು. ಹೊಸಹೊಸ ಜಾಗಗಳನ್ನು ಇರುವ ಸಮಯದ ಮಿತಿಯಲ್ಲಿ ನೋಡಿ ಆನಂದಿಸಿದೆವು.

ಮೇಲಾಗಿ ಅವುಗಳಬಗ್ಗೆ ನಮ್ಮ ಸಂಪದೀಯರು ಬೇಸರಪಟ್ಟುಕೊಳ್ಳುವಷ್ಟು ಬರೆದಿದ್ದೇನೆ. ಎಲ್ಲವೂ ಒಂದಾದರೊಂದು ದಿನ ಕೊನೆಗಾಣಬೇಕಲ್ಲವೇ. ಇನ್ನೇನಾದರು ಅಮೆರಿಕದ ಬಗ್ಗೆ ಬರೆದರೆ, ನಿಧಾನವಾಗಿ, ತಡವಾಗಿ ಅತಿಮುಖ್ಯವಾದದ್ದನ್ನು ಮಾತ್ರ ಬರೆಯುತ್ತೇನೆ. ಏಕೆಂದರೆ, ನಾನು ಹೇಳಬೇಕಾದ್ದನ್ನೆಲ್ಲಾ ಸುಮಾರಾಗಿ ಹೇಳಿ ಆಗಿದೆಯಲ್ಲಾ ! ನನ್ನ ಕಂತೆ ಪುರಾಣಗಳನ್ನೆಲ್ಲಾ ಆದಾಗ ಓದಿ, ಸಮಯಸಿಕ್ಕಾಗ ಅದರಬಗ್ಗೆ ಒಂದೆರಡು ಒಳ್ಳೆಯ ಮಾತಾಡಿ ಪ್ರೋತ್ಸಾಹಿಸಿದ ಮಿತ್ರರೆಲ್ಲರಿಗೂ ಚಿರಋಣಿಯಾಗಿದ್ದೇನೆ. ಕೊನೆಯಲ್ಲಿ, ನನ್ನ ಗೆಳೆಯ, ನಾಡಿಗ್, ರವರು ಸೃಷ್ಟಿಸಿದ ಈ ಸುಂದರ ಮಾದ್ಯಮವನ್ನು ನಾನು ಅತಿಯಾಗಿ [ದುರಪಯೋಗ] ಉಪಯೋಗಪಡಿಸಿಕೊಂಡಿದ್ದೇನೇನೋ. ನನಗೇ ಹಾಗೆ ಅನ್ನಿಸಿದೆ. ಬೇರೆಯವರಿಗೂ ಖಂಡಿತ ಅನ್ನಿಸಿದೆಯಿರದು. ಅಲ್ಲವೇ ? ಪಾಪ ; ಸಂಕೋಚ, ಯಾರ್ತಾನೆ ಬಾಯ್ಬಿಟ್ಟು ಹೇಳ್ತಾರೆ, ಹೇಳಿ ? !

ನಿಮ್ಮ ವಿಶ್ವಾಸಿ.

ವೆಂಕಟೇಶ.

-ಚಿತ್ರ.