ಉಪ್ಪು ಮಿಶ್ರಿತ ಹಿನ್ನೀರು ಸಿಗಡಿ ಕೃಷಿ
ಭಾರತದ ಕರಾವಳಿಯಲ್ಲಿ ಕಡಲಿನ ಚಿನ್ನದ ಗಣಿ ಎಂದು ಕರೆಯುವ ಸಿಗಡಿ ಸಂಪನ್ಮೂಲವು ಹೇರಳವಾಗಿ ದೊರೆಯುತ್ತದೆ. ನಮ್ಮ ದೇಶದ ಸಿಗಡಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಭಾರತವು ಅತಿಹೆಚ್ಚು ಸಿಗಡಿ ಉತ್ಪಾದಿಸುವ ದೇಶಗಳಲ್ಲಿ ಒಂದಾಗಿದ್ದು ಸಾಗರೋತ್ಪನ್ನಗಳ ರಪ್ತಿನಿಂದ ದೊರೆಯುವ ವಿದೇಶಿ ವಿನಿಮಯ ಗಳಿಕೆಯಲ್ಲಿ ಸಿಗಡಿಯದು ಸಿಂಹ ಪಾಲು. ದೇಶಕ್ಕೆ ೨೦೨೨-೨೩ ರ ಸಾಲಿನಲ್ಲಿ ಸುಮಾರು ೫೫,೪೨೦.೦೦ ಕೋಟಿ ರೂಪಾಯಿ ವಿದೇಶಿ ವಿನಿಮಯವು ಸಾಗರ ಉತ್ಪನ್ನದಿಂದ ಲಭ್ಯವಾಗಿರುತ್ತದೆ.
ಇನ್ನೂ ಹೆಚ್ಚು ವಿದೇಶಿ ವಿನಿಮಯ ದೇಶಕ್ಕೆ ಲಬಿಸಲು ಮತ್ತು ಅಧಿಕ ಆಹಾರ ಉತ್ಪಾದನೆಗಾಗಿ ದೇಶದಲ್ಲಿ ಹೇರಳವಾಗಿ ದೂರೆಯುವ ಉಪ್ಪು ನೀರಿನ ಹಿನ್ನೀರು ಪ್ರದೇಶಗಳಲ್ಲಿ ವೈಜ್ಞಾನಿಕ ಸಿಗಡಿ ಕೃಷಿ ಕೈಗೂಳ್ಳಬೇಕಾಗಿದೆ. ಕರ್ನಾಟಕ ರಾಜ್ಯದ ಕರಾವಳಿಯ ಸುಮಾರು ೩೨೦ ಕಿ.ಮಿ ಗಳಷ್ಟು ಉದ್ದವಿದ್ದು, ಅದನ್ನು ಹೊಂದಿಕೊಂಡು ೮೦೦೦ ಹೆಕ್ಟೇರನಷ್ಟು ಪ್ರದೇಶ ಸಿಗಡಿ ಕೃಷಿಗೆ ಯೋಗ್ಯವಾಗಿದೆಯೆಂದು ಸಮೀಕ್ಷೆಯಿಂದ ತಿಳಿದು ಬಂದಿರುತ್ತದೆ. ಇಂತಹ ಪ್ರದೇಶವನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯವಾಗಿ “ಗಜನಿ” ಪ್ರದೇಶ ಎಂದು ಕರೆಯತ್ತಾರೆ.ಈ ಪ್ರದೇಶವು ಸಿಗಡಿ ಕೃಷಿಗೆ ಸೂಕ್ತವಾಗಿವೆ.
ವೈಜ್ಞಾನಿಕ ಸಿಗಡಿ ಕೃಷಿ: ವೈಜ್ಞಾನಿಕ ಸಿಗಡಿ ಕೃಷಿಯಲ್ಲಿ ಒಂದು ವರ್ಷದಲ್ಲಿ ಎರಡರಿಂದ ಮೂರು ಬೆಳೆಗಳನ್ನು ತೆಗೆಯಬಹುದು. ಕೊಳಗಳ ನಿರ್ಮಾಣವನ್ನು ಕನಿಷ್ಟ ಒಂದು ಮೀಟರ್ ಆಳದಷ್ಟು ನೀರು ನಿಲ್ಲುವಂತೆ ಮಾಡಿಕೊಂಡು ನಂತರ ಆಯ್ದ ಶೀಘ್ರ ಬೆಳೆವಣಿಗೆಯುಳ್ಳ ಸಿಗಡಿ ಮರಿಗಳನ್ನು ಬಿತ್ತನೆಮಾಡಿ ಅವುಗಳಿಗೆ ಪೂರಕವಾಗುವಂತಹ ಪೌಷ್ಟಿಕ ಆಹಾರ, ನೀರು, ಕೃತಕ ಗಾಳಿ ಮತ್ತು ಇನ್ನಿತರ ಅವಶ್ಯಕತೆಗಳನ್ನು ಸಮರ್ಪಕವಾಗಿ ಪೂರೈಸಿ ನಿರೀಕ್ಷಿತ ಉತ್ಪನ್ನ ಮತ್ತು ಆದಾಯ ಪಡೆಯಬಹುದಾಗಿದೆ.
ವೈಜ್ಞಾನಿಕ ಸಿಗಡಿ ಕೃಷಿಯಲ್ಲಿ ಪಾಲಿಸಬೇಕಾದ ಮುಖ್ಯ ಅಂಶಗಳು: ಸಿಗಡಿ ಮರಿಗಳ ಆಯ್ಕೆ : ಶೀಘ್ರ ಬೆಳೆವಣಿಗೆಯುಳ್ಳ ಸಿಗಡಿ ಮರಿಗಳ ಮತ್ತು ಅತ್ಯಂತ ಬೇಡಿಕೆ ಹಾಗೂ ಬೆಲೆಯುಳ್ಳ ಸಿಗಡಿ ಮರಿಗಳನ್ನು ಆಯ್ಕೆ ಮಾಡಿಕೂಳ್ಳಬೇಕು.
ಪಾಲನಾ ಅವಧಿ ಮತ್ತು ಮಾರುಕಟ್ಟೆಯ ಬೆಲೆ: ಪ್ರಚಲಿತ ಮಾರುಕಟ್ಟೆಯಲ್ಲಿ ಆರ್ಥಿಕವಾಗಿ ಲಾಭದಾಯಕವಾಗುವಂತಹ ಮತ್ತು ಗಾತ್ರಕ್ಕೆ ಅನುಗುಣವಾಗಿ ಪಾಲನೆ ಅವಧಿಯನ್ನು ನಿರ್ಧರಿಸುವುದು.
ಭಕ್ಷಕ ಮತ್ತು ಇನ್ನಿತರ ಜಲಚರಗಳನ್ನು ನಿರ್ಮೂಲನೆ : ಪಾಲನೆಗೆ ಮೊದಲು ಭಕ್ಷಕ ಹಾಗೂ ಇನ್ನಿತರ ಜಲಚರಗಳನ್ನು ನಿರ್ಮೂಲನೆ ಮಾಡುವುದರಿಂದ ಹೆಚ್ಚು ಉತ್ಪಾದನೆ ಪಡೆಯಬಹುದು.
ಸಿಗಡಿ ಮರಿಗಳ ದಾಸ್ತಾನು ಪ್ರಮಾಣ ಮತ್ತು ಕೊಳದ ವಿಸ್ತಾರ : ಸಿಗಡಿ ಮರಿಗಳ ದಾಸ್ತಾನು ಪ್ರಮಾಣವನ್ನು ಕೊಳದ ವಿಸ್ತಾರ ಅನುಸಾರ ಮತ್ತು ಪಾಲನಾ ವಿಧಾನದ ಅನುಸಾರ ಬಿತ್ತನೆ ಮಾಡುವುದು.
ನೀರಿನ ಮತ್ತು ಆಹಾರ ನಿರ್ವಹಣೆ : ಉತ್ತಮ ನೀರಿನ ಮತ್ತು ಆಹಾರ ನಿರ್ವಹಣೆ ಹಾಗೂ ನಿಯತಕಾಲಿಕ ಬೆಳಣಿಗೆಯ ಪರಿಶೀಲನೆಯಿಂದ ಹೆಚ್ಚಿನ ಉತ್ಪನ್ನ ಮತ್ತು ಆದಾಯ ಪಡೆಯಬಹುದು.
ಸಿಗಡಿ ಕೃಷಿಯ ವಿವಿಧ ವಿಧಾನಗಳು: ಸಿಗಡಿ ಕೃಷಿ ನಿರ್ವಹಣೆ ಅನುಗುಣವಾಗಿ ಮುಖ್ಯವಾಗಿ ನಾಲ್ಕು ವಿಧಾನಗಳಿವೆ
ಸಾಂಪ್ರದಾಯಿಕ ವಿಧಾನ : ಈ ವಿಧಾನವನ್ನು ಹಲವಾರು ದಶಕಗಳಿಂದ ಪಶ್ಚಿಮ ಬಂಗಾಳದ ಬರ್ರಿಗಳಲ್ಲಿ, ಕೇರಳದ ಪೋಕ್ಕಾಲಿ ಗದ್ದೆಗಳಲ್ಲಿ ಮತ್ತು ಕರ್ನಾಟಕದ ಕರಾವಳಿಯ ಗಜನಿಗಳಲ್ಲಿ ಕೈಗೊಳ್ಳಲಾಗುತ್ತದೆ. ಭರತದ ಪ್ರವಾಹದೊಂದಿಗೆ ಬರುವ ಮೀನು,ಸಿಗಡಿ ಇನ್ನಿತರ ಜಲಚರಗಳು, ಅಳಿವೆ ಕೋಡಿಗಳ ಮೂಲಕ ಹಿನ್ನೀರು ಪ್ರದೇಶ ಅಥವಾ ಗಜನಿಗಳನ್ನು ಪ್ರವೇಶಿಸುತ್ತವೆ. ಹೀಗೆ ಬಂದ ಮರಿಗಳನ್ನು ನೀರಿನೊಂದಿಗೆ ತಡೆಹಿಡಿಯಲಾಗುತ್ತದೆ. ಆ ನಂತರ ನಿಯತಕಾಲಿಕವಾಗಿ ಇಳಿತದ ಸಮಯದಲ್ಲಿ ನೀರನ್ನು ಹಿಡುವಳಿ ಮಾಡಲಾಗುತ್ತದೆ. ಈ ವಿಧಾನದಲ್ಲಿ ಯಾವುದೇ ರೀತಿ ಸಿಗಡಿ ಮೀನುಗಳ ಜಾತಿ, ಗಾತ್ರ, ದಾಸ್ತಾನು ಪ್ರಮಾಣ, ಬೆಳವಣಿಗೆಗಳ ಮೇಲೆ ಹಿಡಿತವಿರುವುದಿಲ್ಲ ಮತು ಭಕ್ಷಕ ಹಾಗೂ ಅನುಪಯುಕ್ತ ಮೀನು ಮತ್ತು ಜಲಚರ ಪ್ರಾಣಿಗಳು ಸಹ ಸೇರಿಕೊಂಡಿರುತ್ತವೆ. ಈ ವಿಧಾನದಲ್ಲಿ ಉತ್ಪಾದನೆ ತುಂಬಾ ಕಡಿಮೆ.
ವಿಸ್ತಂತ ವಿಧಾನ : ಈ ವಿಧಾನವು ಮೊದಲು ತಿಳಿಸಿದ ವಿಧಾನಕಿಂತ ಒಂದು ಸುಧಾರಿತ ಸಿಗಡಿ ಕೃಷಿಯಾಗಿದ್ದು ಒಂದು ಅಥವಾ ಹೆಚ್ಚಿನ ಹೆಕ್ಟೇರ ವಿಸ್ತೀರ್ಣದ ಕೊಳಗಳಿರುತ್ತವೆ. ಶೀಘ್ರವಾಗಿ ಬೆಳೆಯುವ ಸಿಗಡಿ ಮರಿಗಳನ್ನು ನೈಸರ್ಗಿಕವಾಗಿ ಸಂಗ್ರಹಿಸಿ ಅಥವಾ ಮರಿ ಉತ್ಪಾದನಾ ಕೇಂದ್ರಗಳಿಂದ ತಂದ ಮರಿಗಳನ್ನು ಕಡಿಮೆ ಸಾಂದ್ರತೆಯಲ್ಲಿ ಅಂದರೆ ಪ್ರತಿ ಹೆಕ್ಟೇರ್ಗೆ ೪೦,೦೦೦ ದಿಂದ ೫೦,೦೦೦ ದ ವರೆಗೆ ದಾಸ್ತಾನು ಮಾಡಿ ಸಿಗಡಿ ಬೆಳವಣಿಗೆಗಾಗಿ ವಿಶೇಷವಾಗಿ ಯಾವುದೇ ಆಹಾರ ಒದಗಿಸಲಾಗುವುದಿಲ್ಲವಾದರೂ ಉಬ್ಬರ ಇಳಿತದ ಸಮಯದಲ್ಲಿ ನೀರಿನ ಬದಲಾವಣೆ ಕೈಗೊಳ್ಳುವುದರಿಂದ ನೀರಿನ ಫಲವತ್ತತೆಗನುಗುಣವಾಗಿ ಸಿಗಡಿ ಉತ್ಪನ್ನ ಅವಲಂಬಿತವಾಗಿರುತ್ತದೆ. ಈ ವಿಧಾನದಿಂದ ಪ್ರತಿ ಹೆಕ್ಟೇರ್ಗೆ ವರ್ಷಕ್ಕೆ ೨ ರಿಂದ ೩ ಟನ್ ಸಿಗಡಿ ಉತ್ಪನ್ನವನ್ನು ಪಡೆಯಬಹುದಾಗಿದೆ.
ಅರೆತೀವ್ರ ವಿಧಾನ: ಈ ವಿಧಾನದಲ್ಲಿ ಮರಿ ಉತ್ಪಾದನಾ ಕೇಂದ್ರಗಳಿಂದ ಆಯ್ದ ಒಳ್ಳೆ ಜಾತಿಯ ಮರಿಗಳನ್ನು ೦.೨೦ ರಿಂದ ೦.೫೦ ಹೆಕ್ಟೇರ್ ಮಣ್ಣಿನ ಕೊಳಗಳಲ್ಲಿ ಪ್ರತಿ ಹೆಕ್ಟೇರಿಗೆ ೧ ರಿಂದ ೪ ಲಕ್ಷದವರೆಗೆ ದಾಸ್ತಾನಿಕರಿಸಿ, ಸಿಗಡಿ ಬೆಳವಣಿಗೆಗೆ ಈ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.
ಅ. ಕೊಳದ ನೀರನ್ನು ಪ್ರತಿದಿನ ಪ್ರತಿಶತ ೧೫ ರಿಂದ ೨೦ ರವರೆಗೆ ಬದಲಾಯಿಸುವುದು.
ಬ. ನೀರಿನಲ್ಲಿಯ ಕರಗಿದ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸಲು ಹಲವಾರು ಗಾಳಿ ಯಂತ್ರಗಳನ್ನು ಅಳವಡಿಸುವುದು.
ಕ. ಪೂರಕ ಸಿಗಡಿ ಆಹಾರವನ್ನು ನೀಡುವುದಲ್ಲದೆ, ಕೊಳದ ನೀರಿನ ಫಲವತ್ತತೆಯನ್ನು ಉತ್ತಮಗೊಳಿಸಲು ಗೊಬ್ಬರ ನೀಡುವುದು.
ತೀವ್ರ ಮಾದರಿಯ ವಿಧಾನ: ವೈಜ್ಞಾನಿಕವಾಗಿ ನಿರ್ಮಿಸಿದ ೦.೦೩ ಯಿಂದ ೦.೧೦ ಹೆಕ್ಟೇರ್ ವಿಸ್ತೀರ್ಣದ(ಸಿಮೆಂಟ್ನ) ಕಾಂಕ್ರೀಟ್ ಕೊಳಗಳಲ್ಲಿ ಆಯ್ದ ಅತೀ ಶೀಘ್ರ ಬೆಳೆಯುವ ಸಿಗಡಿ ಮರಿಗಳನ್ನು ಪ್ರತಿ ಹೆಕ್ಟೇರಿಗೆ ೫ ರಿಂದ ೧೦ ಲಕ್ಷದವರೆಗಿನ ಸಾಂದ್ರತೆಯಲ್ಲಿ ಬಿತ್ತನೆಮಾಡಿ ಪ್ರತಿದಿನ, ಪ್ರತಿಶತ ೩೦೦ ರಷ್ಟು ನೀರನ್ನು ಬದಲಾವಣೆ ಮಾಡಲಾಗುತ್ತದೆ. ಅಧಿಕ ಶಕ್ತಿಯ ಸಿಗಡಿ ಆಹಾರವನ್ನು ಶೀಘ್ರ ಬೆಳವಣೆಗಾಗಿ ಮತ್ತು ನೀರಿನಲ್ಲಿ ಕರಗಿದ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸಲು ಗಾಳಿ ಹಾಗೂ ಆಮ್ಲಜನಕವನ್ನು ಹರಿಯ ಬಿಡಲಾಗುತ್ತದೆ. ಈ ವಿಧಾನದಲ್ಲಿ ವರ್ಷಕ್ಕೆ ಪ್ರತಿ ಹೆಕ್ಟೇರ್ಗೆ ೨೦ ರಿಂದ ೩೦ ಟನ್ ಸಿಗಡಿಯನ್ನು ಉತ್ಪಾದಿಸಬಹುದಾಗಿದೆ.
ವೈಜ್ಞಾನಿಕ ಸಿಗಡಿ ಕೃಷಿಯಲ್ಲಿ ಪಾಲಿಸಬೇಕಾದ ಉತ್ತಮ ನಿರ್ವಹಣಾ ವಿಧಾನಗಳು:
ಕೊಳಗಳ ತಯಾರಿ. ಸಿದ್ಧಗೊಳಿಸಿದ ಕೊಳದ ಆಳವು ಕಡಿಮೆ ಇದ್ದಲ್ಲಿ ಸೂರ್ಯನ ಕಿರಣಗಳು ಭೂಮಿಗೆ ನೇರವಾಗಿ ತಲುಪಿ ಉಷ್ಣತೆ ಹೆಚ್ಚುತ್ತದೆ. ಹೆಚ್ಚು ಉಷ್ಣತೆಯಿಂದ ನೀರಿನ ಆಮ್ಲಜನಕದ ಪ್ರಮಾಣವು ಕಡಿಮೆಯಾಗುತ್ತದೆ. ಆದ್ದರಿಂದ ಕೊಳದ ಆಳ ೨ ರಿಂದ ೩ ಮೀಟರಿನಷ್ಟು ಇರಬೇಕು. ಕೊಳದಲ್ಲಿ ಜಲಸಸ್ಯಗಳು ಹೆಚ್ಚಿಗೆ ಇದ್ದಲ್ಲಿ ಸಿಗಡಿ ಕೃಷಿ ಮಾಡಲು ಯೋಗ್ಯವಾಗಿರುವುದಿಲ್ಲ. ಇವು ಸಿಗಡಿಯ ಚಲನವಲನಕ್ಕೆ ತೊಂದರೆಪಡಿಸುವುದಲ್ಲದೇ, ಈ ಜಲಸಸ್ಯಗಳು ನೀರಿನ ಪೌಷ್ಟಿಕಾಂಶಗಳನ್ನು ಹೀರಿಕೊಂಡು ಕೊಳದ ಫಲವತ್ತತೆಯನ್ನು ಕಡಿಮೆಮಾಡಿ ಹಾಗೂ ಇವುಗಳಿಂದ ಹಿಡುವಳಿ ಸಮಯದಲ್ಲಿ ಅಡಚಣೆಯಾಗುತ್ತದೆ. ಜಲಸಸ್ಯಗಳು ಇಂಗಾಲದ ಡೈ- ಆಕ್ಸೈಡ್ ದೊರೆಯದ ಸಮಯದಲ್ಲಿ ನೀರಿನಲ್ಲಿರುವ ಆಮ್ಲಜನಕವನ್ನು ಉಪಯೋಗಿಸಿ ಸಿಗಡಿಗಳ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಆದ್ದರಿಂದ ಅನಾವಶ್ಯಕ ಜಲಸಸ್ಯಗಳನ್ನು ಕೈ ಹಾಗೂ ಇತರೆ ಸಲಕರಣೆಯಿಂದ ಪೂರ್ಣವಾಗಿ ಮುಕ್ತಗೊಳಿಸಿ, ಕೊಳಗಳನ್ನು ಶುಚಿಗೊಳಿಸಬೇಕು.
ಅನುಪಯುಕ್ತ ಮೀನು ಮತ್ತು ಪ್ರಾಣ ಗಳ ನಿರ್ಮೂಲನೆ: ವ್ಯವಸ್ಥಿತ ಕೊಳದ ತಯಾರಿಕೆಗೆ ಉತ್ತಮ ಸಿಗಡಿ ಬೆಳೆಗೆಗೆ ಅತ್ಯಗತ್ಯ. ಕೊಳದ ನೀರನ್ನು ಸಂಪೂರ್ಣವಾಗಿ ಬತ್ತಿಸುವುದರಿಂದ ಅನುಪಯುಕ್ತ ಮತ್ತು ಭಕ್ಷಕ ಮೀನುಗಳನ್ನು ನಿರ್ಮೂಲನೆ ಮಾಡಿ ತಳಭಾಗವನ್ನು ಚೆನ್ನಾಗಿ ಒಣಗಿಸಬೇಕು. ಕೊಳದ ನೀರನ್ನು ಸಂಪೂರ್ಣವಾಗಿ ತೆಗೆಯಲು ಆಗದೆ ಇದ್ದ ಸಂದರ್ಭದಲ್ಲಿ ಹಿಪ್ಪೆ ಹಿಂಡಿಯನ್ನು ಹೆಕ್ಟೇರಿಗೆ(ಒಂದು ಮೀಟರ್ ನೀರು ಇರುವಾಗ) ೨೦೦೦ ಕೆ.ಜಿ ಯಂತೆ ಉಪಯೋಗಿಸಿ ನಿರ್ಮೂಲನೆ ಮಾಡಬಹುದು. ಆ ನಂತರ ಅದು ಗೊಬ್ಬರವಾಗಿ ಪರಿವರ್ತನೆಯಾಗುವುದರಿಂದ ಕೊಳದ ಫಲವತ್ತತೆಯನ್ನು ಹೆಚ್ಚಿಸುತ್ತದೆ.
ಕೊಳಗಳನ್ನು ಒಣಗಿಸುವುದು ಹಾಗೂ ಉಳುಮೆ ಮಾಡುವುದು : ತಳ ಭಾಗವನ್ನು ಬಿಸಿಲಿಗೆ ಎರಡು ವಾರಗಳವರೆಗೆ ಒಣಗಿಸುವುದರಿಂದ ಮಣ್ಣಿನ ಮೇಲ್ಪದರವು ಬಿರುಕುಗೊಂಡು ಮಣ್ಣಿನಲ್ಲಿರುವ ಅನುಪಯುಕ್ತ ಅನಿಲವು ಸುಲಭವಾಗಿ ಹೊರ ಬರಲು ಅನುಕೂಲವಾಗುತ್ತದೆ ಮತ್ತು ಕ್ರಿಮಿಕೀಟಗಳು ಹಾಗೂ ರೋಗಾಣುಗಳು ನಿರ್ಮೂಲನೆಯಾಗುವುದರ ಜೊತೆಗೆ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಒಣಗಿದ ಕೊಳದ ಮಣ್ಣನ್ನು ಉಳುಮೆ ಮಾಡುವುದರಿಂದ ಕೆಳ ಪದರದ ಮಣ್ಣು ಸೂರ್ಯನ ಕಿರಣಗಳಿಗೆ ತಾಗಲು ಸಹಕಾರಿಯಾಗುತ್ತದೆ.
ಸುಣ್ಣದ ಬಳಕೆ : ನೀರಿನ ರಸಸಾರಕ್ಕನುಗುಣವಾಗಿ ಸುಣ್ಣವನ್ನು ನೀರಿಗೆ ಗೊಬ್ಬರ ಹಾಕುವ ಮೊದಲು ಕೊಡಬೇಕಾಗುತ್ತದೆ. ಸಾಮಾನ್ಯವಾಗಿ ಪ್ರತಿ ಹೆಕ್ಟೇರಿಗೆ ೨೦೦ – ೨೫೦ ಕೆ.ಜಿ ಸುಣ್ಣ ಹಾಕುವುದು ಉತ್ತಮ. ಸುಣ್ಣವನ್ನು ಹಾಕುವುದರಿಂದ ಮಣ್ಣು ಮತ್ತು ನೀರಿನ ರಸಸಾರವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ.
ಸಿಗಡಿ ಕೃಷಿಗೆ ಆಯ್ಕೆ ಮಾಡಿದ ಪ್ರದೇಶದಲ್ಲಿ ಸದಾಕಾಲ ಹಿನ್ನೀರು(ಉಪ್ಪು ನೀರು) ಲಭ್ಯವಿರಬೇಕು. ಆರುವಿಕೆಯಿಂದ , ಇಂಗುವಿಕೆಯಿಂದ ಮತ್ತು ಸೋರುವಿಕೆಯಿಂದ ಕಡಿಮೆಯಾಗುವ ನೀರನ್ನು ತುಂಬಿಕೊಳ್ಳಲು ಅನುಕೂಲವಾಗುತ್ತದೆ. ಕೊಳದ ನಕ್ಷೆ ತಯಾರಿಸುವಾಗ ಜಲಸಂಪತ್ತು, ನೀರು ಹರಿಯುವಿಕೆಯ ರೀತಿ ಹಾಗೂ ದಿಕ್ಕು, ಉಬ್ಬರವಿಳಿತವಿದ್ದಲ್ಲಿ ನೀರು ಮತ್ತು ಮಣ್ಣಿನ ಪರಿಶೀಲನೆ ಬಹುಮುಖ್ಯವಾಗಿರುತ್ತದೆ. ನೀರು ರಾಸಾಯನಿಕ ಮಾಲಿನ್ಯದಿಂದ ಮುಕ್ತವಾಗಿರಬೇಕು. ಸಿಗಡಿ ಕೃಷಿಗೆ ಆಯ್ಕೆ ಮಾಡಿದ ಭೂಮಿಯ ಮಣ್ಣಿನ ಭೌತಿಕ ಮತ್ತು ರಾಸಾಯನಿಕ ಗುಣಗಳನ್ನು ಪರಿಕ್ಷೀಸುವುದು ಅವಶ್ಯಕ ಹಾಗೂ ಮಣ್ಣಿನ ರಸಸಾರ ೬.೫ ರಿಂದ ೭.೫ ರವರೆಗೆ ಇರುವುದು ಯೋಗ್ಯವಾಗಿರುತ್ತದೆ. ನೀರನ್ನು ಕೊಳದ ಒಳಗೆ ತೆಗೆದುಕೊಳ್ಳುವ ತೂಬುದ್ವಾರ(ಸ್ಲೂಇಸ್ ಗೇಟ್) ಬಹು ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದ ಕೊಳದ ನಿರ್ವಹಣೆ ಮತ್ತು ಕೊಳದಲ್ಲಿರುವ ಸಿಗಡಿ ಮರಿಗಳು ಹೊರಗೆ ಹೋಗದ ಹಾಗೆ ಹಾಗೂ ಹೊರಗಿನ ಅನುಪಯುಕ್ತ ಮೀನುಮರಿ ಮತ್ತು ಇತರೆ ಜಲಚರಗಳು ಕೊಳದ ಒಳಗಡೆ ಬರದಂತೆ ತಡೆಹಿಡಿಯಲು ಇದಕ್ಕೆ ಸಣ್ಣಕಣ್ಣಿನ ಜಾಳಿಗೆ ಪರದೆಯನ್ನು ಜೋಡಿಸಬೇಕು.
ಕೊಳವನ್ನು ಫಲವತ್ತತೆ ಗೊಳಿಸುವುದು : ನೈಸರ್ಗಿಕ ಆಹಾರ ಕೊಳದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದರೆ ಸಿಗಡಿಯ ಬೆಳವಣ ಗೆ ಉತ್ತಮವಾಗಿರುತ್ತದೆ. ನೈಸರ್ಗಿಕ ಆಹಾರ ಉತ್ಪಾದನೆ ಮಾಡಲು ಪ್ರತಿ ಹೆಕ್ಟೇರಿಗೆ ದನದ ಸಗಣ ಗೊಬ್ಬರ ೩೦೦೦ ಕೆ.ಜಿ , ಕೋಳಿ ಗೊಬ್ಬರ ೫೦೦ ಕೆ.ಜಿ ಮತ್ತು ಸೂಪರ್ ಪಾಸ್ಪೇಟ್ ೧೦೦ ಕೆ.ಜಿ ಪ್ರಮಾಣದಲ್ಲಿ ಗೊಬ್ಬರವನ್ನು ಹಾಕಬೇಕು. ನೀರಿನಲ್ಲಿರುವ ಲವಣಾಂಶ, ರಸಸಾರ,ಕರಗಿದ ಆಮ್ಲಜನಕ ಮತ್ತು ಉಷ್ಣತೆ ಮುಂತಾದವುಗಳ ಬಗ್ಗೆ ಸತತ ಗಮನವಿಡಬೇಕು ಹಾಗೂ ಇವುಗಳಲ್ಲಿ ಏರು - ಪೇರು ಕಂಡು ಬಂದರೆ ಕೊಳದ ನೀರನ್ನು ಶೇ.೧೦ -೨೦ ರಷ್ಟು ಬದಲಿಸಬೇಕು.
ಮರಿಗಳ ಆಯ್ಕೆ ಮತ್ತು ಬಿತ್ತನೆ : ಸಿಗಡಿ ಮರಿಗಳ ಆಯ್ಕೆ ಬಹು ಮುಖ್ಯ, ಮರಿಗಳ ಚತುರತೆ, ಬಣ್ಣ , ಅಳತೆಯನ್ನು ಗಮನಿಸಬೇಕು. ಪಿ.ಎಲ್ ೧೫ ರಿಂದ ೨೦ ದಿವಸದ ಮರಿಗಳನ್ನು ದಾಸ್ತಾನು ಮಾಡುವುದು ಸೂಕ್ತ. ಶೀಲಿಂದ್ರ, ಪರಾವಲಂಬಿ ಜೀವಿಗಳ ಸೋಂಕಿರದ ಆರೋಗ್ಯವಂತ ಮರಿಗಳನ್ನು ಆಯ್ಕೆ ಮಾಡುವುದು. ಸಿಗಡಿ ಮರಿಗಳು ಆಹಾರವನ್ನು ಕರುಳು ಭಾಗದುದ್ದಕ್ಕೂ ಹೊಂದಿರುವಂತವುಗಳಾಗಿರಬೇಕು. ಪ್ಲಾಸ್ಟಿಕ್ ಬಕೇಟುಗಳಲ್ಲಿ ಮರಿಗಳನ್ನು ಇಟ್ಟರೆ ಮರಿಗಳು ನೀರು ಸುತ್ತುತ್ತಿರುವ ವಿರುದ್ದ ದಿಕ್ಕಿನಲ್ಲಿ ಚಲಿಸುತ್ತಿರಬೇಕು. ಮರಿಗಳ ಅಸಾಧಾರಣ ಬಣ್ಣವಿದ್ದರೆ ತಿರಸ್ಕರಿಸಬೇಕು.
ಸಿಗಡಿ ಮರಿಗಳ ದಾಸ್ತಾನು: ಸಿಗಡಿ ಮರಿ ಉತ್ಪಾದನಾ ಕೇಂದ್ರದಿಂದ ಮರಿಗಳನ್ನು ಪಾಲಿಥೀನ್ ಚೀಲಗಳಲ್ಲಿ ತುಂಬಿ ತಂದು ದಾಸ್ತಾನು ಮಾಡುವಾಗ ಎಚ್ಚರಿಕೆ ವಹಿಸದಿದ್ದರೆ, ಬಹಳಷ್ಟು ಮರಿಗಳು ಸಾಯುವ ಸಾಧ್ಯತೆಗಳಿರುತ್ತದೆ. ಮರಿಗಳನ್ನು ತುಂಬಿರುವ ಚೀಲಗಳನ್ನು ಬಿಡುಗಡೆ ಮಾಡುವ ಕೊಳಗಳಲ್ಲಿ ಸ್ವಲ್ಪ ಸಮಯ (೨೦-೩೦ ನಿಮಿಷ) ತೇಲಿ ಬಿಡುವುದರಿಂದ ಮರಿಗಳು ಕೊಳದ ಉಷ್ಣತಾಮಾನಕ್ಕೆ ಹೊಂದಿಕೊಳ್ಳುತ್ತವೆ.
ಕೊಳದ ನೀರಿನ ಉಷ್ಣತೆ ಮತ್ತು ಲವಣಾಂಶಕ್ಕೆ ಒಗ್ಗಿಸಿದ ನಂತರ ಮರಿ ಹೊಂದಿರುವ ಚೀಲವನ್ನು ಕೊಳದ ನೀರಿನಲ್ಲಿಟ್ಟು ಬಗ್ಗಿಸುತ್ತಾ ನೀರನ್ನು ಅದರೊಳಗೆ ತೆಗೆದುಕೊಂಡು ಆ ನಂತರ ಮರಿಗಳನ್ನು ನಿಧಾನವಾಗಿ ನೀರಿಗೆ ಬಿಡಬೇಕು.
ಬೆಳಿಗ್ಗೆ ಅಥವಾ ಸಾಯಂಕಾಲದ ಸಮಯದಲ್ಲಿ ಸಿಗಡಿ ಮರಿಗಳನ್ನು ಕೊಳಗಳಿಗೆ ಬಿಡುವುದು ಸೂಕ್ತ. ಒಂದು ಹೆಕ್ಟೇರ್ ಕೊಳದಲ್ಲಿ ಸುಮಾರು ೪೦,೦೦೦ ರಿಂದ ೫೦,೦೦೦ (ಪಿ.ಎಲ್. ೧೬-೨೦) ಬಿತ್ತನೆ ಮಾಡಬಹುದಾಗಿದೆ.
ಆಹಾರ ಪೂರೈಕೆ : ಸಿಗಡಿಯ ಇಳುವರಿ ಸಿಗಡಿಗೆ ನೀಡುವ ಪೌಷ್ಟಿಕ ಆಹಾರವನ್ನು ಅವಲಂಬಿಸಿರುತ್ತದೆ. ಆಧಿಕ ಬೆಳವಣಿಗೆ ಹಾಗೂ ಇಳುವರಿಗೆ ನೈಸರ್ಗಿಕ ಆಹಾರದ ಜೊತೆಗೆ ಕೃತಕ ಆಹಾರವನ್ನು ಒದಗಿಸಬೇಕು. ಸಿದ್ದಪಡಿಸಿದ ಕೃತಕ ಆಹಾರಗಳು ಬೇರೆ ಬೇರೆ ಕಂಪನಿಗಳಿಂದ ಮಾರುಕಟ್ಟೆಯಲ್ಲಿ ಲಭ್ಯವಿವೆ. ಪ್ರತಿ ೧೫ ದಿವಸಕ್ಕೊಮ್ಮೆ ಸಿಗಡಿಯ ಬೆಳವಣಗೆಗೆ ಮತ್ತು ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಸ್ವಲ್ಪ ಸಿಗಡಿಯನ್ನು ಹಿಡಿದು ಅವುಗಳ ಸರಾಸರಿ ತೂಕವನ್ನು ಕಂಡು ಹಿಡಿದು ಕೊಳ್ಳಬೇಕು. ದಿನನಿತ್ಯ ಕೊಡುವ ಆಹಾರದ ಪ್ರಮಾಣವನ್ನು ನಿಯಂತ್ರಿಸಬೇಕು. ೪ ತಿಂಗಳಗಳಲ್ಲಿ ಸಿಗಡಿಯು ಬೆಳೆದು ಮಾರುಕಟ್ಟೆ ಗಾತ್ರಕ್ಕೆ ಬರುತ್ತದೆ.
ಕೊಳದ ನೀರು ನಿರ್ವಹಣೆ: ವೈಜ್ಞಾನಿಕ ಮತ್ತು ಸಾಂದ್ರಿಕೃತ ಸಿಗಡಿ ಕೃಷಿಯಲ್ಲಿ ಹೆಚ್ಚಿನ ಇಳುವರಿ ಪಡೆಯುವಲ್ಲಿ ನೀರು ನಿರ್ವಹಣೆ ಬಹುಮುಖ್ಯ ವಾಗಿರುತ್ತದೆ. ಉತ್ತಮ ಪರಿಸರ ಮತ್ತು ಆಹಾರ ಸಿಗಡಿ ಬೆಳವಣ ಗೆಗೆ ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ. ನೀರಿನ ಆಳ ೨ ರಿಂದ ೩ ಮೀಟರ್ ಇದ್ದರೆ ಸೂಕ್ತ. ಕೊಳದಲ್ಲಿ ನೀರು ಯಾವಾಗಲೂ ಕಡಿಮೆಯಾಗದಂತೆ ನಿಗಾವಹಿಸಬೇಕು. ಸಾಮಾನ್ಯವಾಗಿ ಬೆಳಗಿನ ಜಾವ ನೀರಿನಲ್ಲಿ ಕರಗಿರುವ ಆಮ್ಲಜನಕದ ಪ್ರಮಾಣ ಕಡಿಮೆಯಾದಾಗ ಸಿಗಡಿಗಳು ನೀರಿನ ಮೇಲ್ಬಾಗದಲ್ಲಿ ಆಮ್ಲಜನಕಕ್ಕೋಸ್ಕರ ಕಾಣ ಸಿಕೊಳ್ಳುತ್ತವೆ. ಈ ಸಮಯದಲ್ಲಿ ಗಾಳಿಯಂತ್ರಗಳ ಸಹಾಯದಿಂದ ನೀರಿನಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಿಸಬೇಕು. ಕೊಳದ ನೀರಿನ ಬಣ್ಣ ತೀರಾ ಹೆಚ್ಚು ಕಂದು, ಹೆಚ್ಚು ಹಸಿರಾಗಿದ್ದು ಹೊಲಸು ವಾಸನೆ ಬರುತ್ತಿದ್ದರೆ ಕೊಳದ ನೀರನ್ನು ಕಾಲು ಭಾಗ ಬಸಿದು ಹೊಸ ನೀರನ್ನು ತುಂಬಿಸಬೇಕು.
ಸಿಗಡಿ ಹಿಡುವಳಿ ಮತ್ತು ಮಾರಾಟ : ಕೊಳದ ನೀರನ್ನು ಪೂರ್ತಿ ಖಾಲಿ ಮಾಡುವದರಿಂದ ಮತ್ತು ಬಲೆಯನ್ನು ಹಾಕುವುದರಿಂದ ಅಥವಾ ನೀರನ್ನು ಹೊರಬಿಡುವ ತೂಬುದ್ವಾರದಲ್ಲಿ ಬಲೆಯನ್ನು ಕಟ್ಟಿ ಅದರ ಮೂಲಕ ನೀರನ್ನು ಹಾಯಿಸುವುದರಿಂದ ಸಂಪೂರ್ಣ ಸಿಗಡಿಗಳನ್ನು ಹಿಡಿಯಲಾಗುತ್ತದೆ.
ಚಿತ್ರ :೧. ಸಿಗಡಿಯ ಬೆಳೆ
ಚಿತ್ರ ೨. ಕೊಳಗಳನ್ನು ಉಳುಮೆ ಮಾಡುತ್ತಿರುವುದು
ಚಿತ್ರ : ೩. ಕೊಳಗಳಿಗೆ ಗೊಬ್ಬರ ಹಾಕುತ್ತಿರುವುದು
ಚಿತ್ರ : ೪.ಸಿಗಡಿ ಮರಿಗಳ ಬಿತ್ತನೆ
ಮಾಹಿತಿ : ಡಾ.ಚಂದ್ರಕಾಂತ ಲಿಂಗಧಾಳ, ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರ (ಕಡಲ), ಅಂಕೋಲಾ ಮತ್ತು ಡಾ.ಎಸ್.ವಿಜಯಕುಮಾರ್, ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರ, ಭೂತನಾಳ, ವಿಜಯಪುರ