ಊರಿಗೊಂದು ಶಾಲೆಯ ಅಗತ್ಯವಿದೆಯಲ್ಲಾ!
ಬಿಜೈ ಎಂದಾಕ್ಷಣ ಸಿಗುವ ಆಪ್ತತೆ ಇನ್ನುಳಿದ ಯಾವ ಊರಲ್ಲೂ ಸಿಗಲಿಲ್ಲ ಎನ್ನುವುದು ಪೂರ್ಣ ಸತ್ಯವಲ್ಲ. ಆದರೆ ಬಾಲ್ಯ ಕಳೆದ ಊರಲ್ಲಿ ಮುಗ್ಧತೆಯ ದಿನಗಳು ನನ್ನದಾಗಿದ್ದುದರಿಂದಲೇ ಆ ಪ್ರೀತಿ ವಿಶ್ವಾಸಗಳಿಗೆ ತನ್ನದೇ ಆದ ವೈಶಿಷ್ಟ ಇದೆ ಎನ್ನುವುದೂ ಸತ್ಯ. ಅಮ್ಮ ಅಜ್ಜಿಯರೊಂದಿಗೆ ಬಾಲದಂತೆ ಓಡಾಡಿದ ವಯಸ್ಸು ಇನ್ನೂ ಚಿಕ್ಕದು ಎನ್ನುತ್ತಲೇ ಶಾಲೆಗೆ ಹೋಗಲು ಶುರು ಮಾಡಿದ ಬಳಿಕ ನನ್ನದೇ ಸಹಪಾಠಿಗಳು, ಹಿರಿಯ ಕಿರಿಯ ಸ್ನೇಹಿತರು ಶಾಲೆಯ ದಾರಿಯಲ್ಲಿ ಬೆಳಗ್ಗೆ, ಮಧ್ಯಾಹ್ನ, ಸಂಜೆಯ ಒಡನಾಡಿಗಳು. ಅವರ ನೆನಪಿನೊಂದಿಗೆ ಅವರ ಮನೆಮಂದಿಯೂ ನೆನಪಿನಂಗಳ ದಲ್ಲಿ ನೆರೆದು ಸಭೆ ಸೇರಿದಂತೆಯೇ ಸೇರುತ್ತಿದ್ದಾರೆ. ನನ್ನ ಮನೆಯಿಂದ ಶಾಲೆಗಿದ್ದ ದೂರ ಬಹಳ ಚಿಕ್ಕದು, ಒಂದೇ ಕಿಲೋ ಮೀಟರ್ ಇರಬಹುದು. ಆದರೆ ಆ ದಾರಿ ನಡೆಯುವುದಕ್ಕೆ ನನಗೆ ಬೇಕಾಗಿದ್ದ ಸಮಯ ಮಾತ್ರ ಬಹಳ ಹೆಚ್ಚು. ಪ್ರಾರಂಭದಲ್ಲಿ ಬಹುಶಃ ಚಿಕ್ಕಪ್ಪನ ಜತೆಗೆ ಶಾಲೆಗೆ ಹೋಗುತ್ತಿದ್ದವಳು. ಚಿಕ್ಕಪ್ಪ ನನ್ನ ಶಾಲೆಯಲ್ಲಿಯೇ ದೊಡ್ಡ ತರಗತಿಯ ವಿದ್ಯಾರ್ಥಿಗಳಿಗೆ ಅಧ್ಯಾಪಕರು. ಅಂದರೆ 6, 7, 8ನೆಯ ತರಗತಿಯವರಿಗೆ. ಯಾಕೆಂದರೆ ಅವರು ಕಲಿಸುತ್ತಿದ್ದುದು ಹಿಂದಿ ವಿಷಯ. ಅವರು ನನ್ನ ಶಾಲೆಯಿಂದ ವರ್ಗಾವಣೆಗೊಂಡ ಬಳಿಕ ಬಹುಶಃ ನನ್ನ ಮೂರನೆಯ ತರಗತಿಯ ವೇಳೆಗೆ ನಾನು ಉಳಿದ ನನ್ನ ಶಾಲೆಯ ಹಿರಿಯ ವಿದ್ಯಾರ್ಥಿಗಳ ಜತೆಗೆ ಹೋಗುತ್ತಿದ್ದೆ ಎಂದು ನೆನಪು. ಆ ಹಿರಿಯರಲ್ಲಿ ನೆನಪಾಗುತ್ತಿರು ವವರು ಬಾಳಿಗಾ ಸ್ಟೋರ್ನಿಂದಾಚೆ ಅಂದು ಇದ್ದ ಸ್ಮಶಾನ ರಸ್ತೆಯಿಂದ ಒಳಬದಿಗೆ ಇದ್ದ ಮನೆಗಳಿಂದ ಹಾಗೆಯೇ ಆ ರಸ್ತೆಯ ಎದುರುಗಡೆಯ ಕೆಲವು ಮನೆಗಳಿಂದ ಮತ್ತು ಮುಖ್ಯವಾಗಿ ಬಾಳಿಗಾ ಸ್ಟೋರ್ನ ಹಿಂಬದಿ ಮತ್ತು ಎದುರುಗಡೆಯಿಂದ ಮಕ್ಕಳು ನನ್ನ ಶಾಲೆಗೆ ಹೋಗುತ್ತಿದ್ದುದೇ ಹೆಚ್ಚು. ನನ್ನ ನೆರೆ-ಕರೆಯಿಂದ ಯಾರೂ ನನಗಿಂತ ದೊಡ್ಡವರು ನನ್ನ ಶಾಲೆಗೆ ಬರುತ್ತಿರಲಿಲ್ಲ. ಆದ್ದರಿಂದ ಅಮ್ಮ ಅಥವಾ ಅಜ್ಜಿ ನಮ್ಮ ಗುಡ್ಡೆ ಮನೆಯಿಂದ ರಸ್ತೆ ಬದಿಯವರೆಗೆ ಕರೆದುಕೊಂಡು ಬಂದು ಯಾರಾದರೂ ಹಿರಿಯ ವಿದ್ಯಾರ್ಥಿಗಳು ಸಿಕ್ಕರೆ ಅವರ ಜತೆಗೆ ಕಳುಹಿಸುತ್ತಿದ್ದರು. ಬಹುಶಃ ಈ ಒಂದು ವರ್ಷವಷ್ಟೇ ನಾನು ಈ ಹಿರಿಯ ವಿದ್ಯಾರ್ಥಿಗಳ ಜತೆಗೆ ಹೋಗಿರಬಹುದು. ನಾಲ್ಕನೆ ತರಗತಿಯ ವೇಳೆಗೆ ನಾವು ನನ್ನ ತರಗತಿಯವರೇ ಸೇರಿಕೊಂಡು ಪಟ್ಟಾಂಗ ಹೊಡೆಯುತ್ತಾ ಹೋಗುತ್ತಿದ್ದುದು ನೆನಪಿದೆ. ನನ್ನನ್ನು ಜತೆಗೆ ಕರೆದೊಯ್ದ ಹಿರಿಯ ಅಕ್ಕಂದಿರಂತೆ ಇದ್ದವರು ಶ್ಯಾಮಲಾ, ಮಂದಾಕಿನಿ, ಲೀಲಾ, ರಾಧಾ, ಜಾನಕಿ, ದೇವಕಿ ಇವರಾದರೆ ಮುಂದೆ ದಾರಿಯಲ್ಲಿ ಇವರ ಜತೆ ಸೇರಿಕೊಳ್ಳುತ್ತಿದ್ದವರು ಲಲಿತಾ, ಪುಷ್ಪಾ, ಶಶಿಕಲಾ. ಇವರಲ್ಲಿ ಒಂದಿಬ್ಬರು 8ನೆ ತರಗತಿಯ ಓದಿಗೆ ನಿಲ್ಲಿಸಿದರೆ ಉಳಿದವರು ಹೈಸ್ಕೂಲ್ ಓದಿದವರು, ಇವರಲ್ಲಿಯೂ ಲೀಲಾ, ಶಶಿಕಲಾ ಪ್ರಾಥಮಿಕ ಶಾಲೆಯ ಅಧ್ಯಾಪಕಿಯರಾದವರು.
ನನ್ನ 6, 7ನೆಯ ತರಗತಿಯ ವೇಳೆಗೆ ಶಾಲೆಯಲ್ಲಿ ಪ್ರತಿ ತರಗತಿಯಲ್ಲೂ ಅಂದರೆ ಒಂದರಿಂದ ಏಳನೆಯವರೆಗೆ ಎ ಮತ್ತು ಬಿ ಎಂಬ ಎರಡು ವಿಭಾಗಗಳಿದ್ದು ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿತ್ತು. ಈ ಕಾರಣದಿಂದಲೇ ಕಾಪಿಕಾಡು ಶಾಲೆಯಲ್ಲಿ ನಾನು ಕಲಿಯುತ್ತಿದ್ದ ವೇಳೆ ಎರಡು ಕಟ್ಟಡಗಳು ನಿರ್ಮಾಣಗೊಂಡಿದ್ದವು. ನನ್ನ ತರಗತಿಯ ವಿದ್ಯಾರ್ಥಿನಿಯರ ಸಂಖ್ಯೆಯೂ ಕಡಿಮೆ ಯದೇನಲ್ಲ. ಈಗಾಗಲೇ ಹೇಳಿದಂತೆ ನಾಲ್ಕನೆಯ ತರಗತಿಯ ಹೊತ್ತಿಗೆ ನಾವೇ ಹಿರಿಯವರಾಗಿ ಕಿರಿಯರನ್ನು ಜತೆಗೆ ಕರೆದೊಯ್ಯುತ್ತಿದ್ದೆವು. ನನ್ನ ತರಗತಿಯ ಇಂದಿರಾ, ಜಯಲಕ್ಷ್ಮೀ, ಶ್ಯಾಮಲಾ, ಶಶಿಕಲಾ, ವಿಮಲಾ, ನಳಿನಿ, ಗಂಗಾ, ಶ್ರೀಧರ್, ರಾಜ, ರಾಜೀವ್, ಬಾಬು, ಅಶೋಕ, ಶಿವರಾಮ ಇವರೆಲ್ಲಾ ಬಾಳಿಗಾ ಸ್ಟೋರ್ಸ್ನ ಆಸುಪಾಸಿನಿಂದ ಬರುತ್ತಿದ್ದರೆ ನನ್ನ ಮನೆಯಿಂದ ಶಾಲೆಗೆ ಹೋಗುವ ದಾರಿಯ ಮನೆಗಳಿಂದ ಸಾವಿತ್ರಿ, ಜಯಂತಿ, ಉಷಾ, ದಯಾ, ಶೀನಾ, ಗೋಪಾಲ, ಯಾದವ, ಮಾಧವ, ಶ್ರೀನಿವಾಸ, ಉಮಾಸುಂದರಿ, ಶಶಿಕಲಾ ಇವರೆಲ್ಲಾ ಬರುತ್ತಿದ್ದರು. ಹಾಗೆಯೇ ಕಾಪಿಕಾಡು ಕಾಲನಿ ಯಿಂದಲೂ ಹಿಂದೆಯೇ ಹೇಳಿದಂತೆ ಸಾಕಷ್ಟು ಮಕ್ಕಳು ನನಗಿಂತ ದೊಡ್ಡವರೂ, ನನ್ನ ಓರಗೆಯವರೂ, ಕಿರಿಯರೂ ಇದ್ದರು. ಅವರಲ್ಲಿ ಅನೇಕರ ಹೆಸರು ಮರೆತು ಶಾಲಿನಿ, ವಿನೋದ, ಜಯಂತಿ, ಮೀರಾ ಇವರು ನೆನಪಲ್ಲಿ ಉಳಿದಿದ್ದಾರೆ. ನನ್ನ ಓರಗೆಯ ಹುಡುಗರು, ಹುಡುಗಿಯರೆಲ್ಲರೂ ಹೈಸ್ಕೂಲ್ ತರಗತಿಗಳಿಗೆ ಹೋದವರು ಮುಂದೆ ಕೆಲವರು ಹುಡುಗರು ಐಟಿಐಗೆ ಸೇರಿದರೆ ಇನ್ನು ಕೆಲವರು ಕಾಲೇಜಿಗೆ ಸೇರಿಕೊಂಡರು. ನನ್ನ ತರಗತಿಯ ಮೂವರು ನನ್ನನ್ನು ಸೇರಿದಂತೆ ಸ್ನಾತಕೋತ್ತರ ಪದವಿ ಪಡೆದಿದ್ದೇವೆ ಎಂದು ಹೇಳಲು ತುಂಬಾ ಸಂತೋಷವಾಗುತ್ತದೆ. ನನ್ನ ಆತ್ಮೀಯ ಗೆಳತಿ ಜಯಲಕ್ಷ್ಮೀ ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರವಾಗಿದ್ದ ಮಂಗಳಗಂಗೋತ್ರಿಯ `ಬಯೋಸಾಯನ್ಸ್'ನಲ್ಲಿ ಎಂ.ಎಸ್ಸಿ. ಪದವಿ ಪಡೆದು ಈಗ ಸಿಂಗಾಪುರದಲ್ಲಿ ನೆಲೆಸಿದ್ದಾಳೆ. ಇನ್ನೊಬ್ಬ ಶಾಲೆಯ ಪಕ್ಕದಲ್ಲೇ ಇದ್ದ ಶ್ಯಾಮರಾಯ ಮಾಸ್ತರರ ಮೊಮ್ಮಗ ಮನಮೋಹನ್ ಶಾಲೆಯಲ್ಲಿ ಕಂಬ ಆಟದ ಗೆಳೆಯ, ಗಣಿತದಲ್ಲಿ ಎಂ.ಎಸ್ಸಿ. ಪದವಿ ಪಡೆದು ಬ್ರಹ್ಮಾವರದ ಎಸ್ಎಂಎಸ್ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿದ್ದು ಈಗ ನಿವೃತ್ತಿಗೊಂಡು ಬ್ರಹ್ಮಾವರದಲ್ಲೇ ನೆಲೆಸಿದ್ದಾನೆ. ನನ್ನ ಹಿರಿಯ ವಿದ್ಯಾರ್ಥಿಗಳಲ್ಲಿ ನನ್ನ ಮಾಸ್ಟ್ರಾದ ಗುರುವಪ್ಪ ಮಾಸ್ಟರರ ಮಗಳು ಶಶಿಲೇಖಾ ಕೂಡಾ ಮಂಗಳೂರಿನ ಸ್ನಾತಕೋತ್ತರ ಕೇಂದ್ರದಲ್ಲಿ `ಫಿಸಿಕ್ಸ್'ನಲ್ಲಿ ಎಂ.ಎಸ್ಸಿ. ಪದವಿ ಪಡೆದು ಬೆಂಗಳೂರಲ್ಲಿ ಉದ್ಯೋಗಿಯಾಗಿದ್ದು ಮುಂದೆ ವಿವಾಹಿತಳಾದ ಬಳಿಕ ಮಂಗಳೂರಲ್ಲೇ ನೆಲೆಸಿದ್ದು ಗೋಕರ್ಣನಾಥೇಶ್ವರ ಕಾಲೇಜು ಪ್ರಾರಂಭವಾದಾಗ ಅಲ್ಲಿ ಉಪನ್ಯಾಸಕಿಯಾಗಿ ಸೇರಿ, ಪ್ರಾಂಶುಪಾಲೆಯಾಗಿ ನಿವೃತ್ತಿ ಪಡೆದಿರುತ್ತಾಳೆ. ಸುಮಾರಾಗಿ ಇದೇ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಯಾಗಿದ್ದ ನನ್ನ ದೊಡ್ಡಮ್ಮನ ಮಗ ಕೃಷ್ಣಪ್ಪ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೋಮಾ ಇಂಜಿನಿಯರಿಂಗ್ ಪದವಿ ಪಡೆದು ಮುಂಬೈಯಲ್ಲಿ ಉದ್ಯೋಗಿಯಾಗಿದ್ದು ಮುಂದೆ ಆಕಾಶವಾಣಿ ಮಂಗಳೂರು ಪ್ರಾರಂಭವಾದಾಗ ಅದರ ಇಂಜಿನಿಯರ್ ವಿಭಾಗದಲ್ಲಿ ಇಂಜಿನಿಯರ್ ಆಗಿ ಸೇರಿ ನಿವೃತ್ತಿ ಪಡೆದಿರುತ್ತಾನೆ.
ಒಟ್ಟಿನಲ್ಲಿ ನಮ್ಮ ಶಾಲೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಹೈಸ್ಕೂಲಿಗೆ ಹೋಗುತ್ತಿದ್ದುದು ಸಾಮಾನ್ಯವಾಗಿತ್ತು. ಆದರೆ ಹಿರಿಯ ವಿದ್ಯಾರ್ಥಿಗಳಲ್ಲಿ ಪಾಸಾದ ಕೆಲವು ಹುಡುಗಿಯರಿಗೆ ಹೈಸ್ಕೂಲಿನ ಅವಕಾಶ ತಪ್ಪಿದರೂ ನನ್ನ ತರಗತಿಯ ಹುಡುಗಿಯರು ಹೈಸ್ಕೂಲಿಗೆ ಹೋದವರೇ ಎಲ್ಲರೂ. ಕಲಿಕೆ ನಿಲ್ಲಿಸಿದ ಹುಡುಗಿಯರು ಅಡುಗೆ ಕೆಲಸ ಕಲಿಯುವುದು ರೂಢಿ. ಆಗಿನ್ನೂ ಬೀಡಿ ಕೆಲಸ ಬಂದಿರಲಿಲ್ಲ. ಹೀಗೆ ಮನೆಯಲ್ಲೇ ಉಳಿದ ಹೆಣ್ಣು ಮಕ್ಕಳು ಮದುವೆಗಾಗಿ ಮಾನಸಿಕವಾಗಿ ಸಿದ್ಧರಾಗು ತ್ತಿದ್ದಂತೆಯೇ ಮದುವೆಯೂ ನಡೆಯುತ್ತಿತ್ತು. ಆದರೆ ನನ್ನ ನೆನಪಿನಂತೆ 16 ವರ್ಷಕ್ಕಿಂತ ಮೊದಲಿಗೆ ಮದುವೆಯಾದವರು ವಿರಳ. ಹೈಸ್ಕೂಲಿಗೆ ಹೋದ ಹುಡುಗಿಯರೂ, ಹುಡುಗರೂ ಎಸ್.ಎಸ್.ಎಲ್.ಸಿ. ತರಗತಿಯವರೆಗೆ ಹೋದರೂ ಕೆಲವರಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಕುಳಿತುಕೊಳ್ಳುವ ಅವಕಾಶವಿರುತ್ತಿರಲಿಲ್ಲ. ಆಗೆಲ್ಲಾ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಮುನ್ನ ಅರ್ಹತಾ ಪರೀಕ್ಷೆ ನಡೆಸಿ ಅರ್ಹತಾ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಪರೀಕ್ಷೆಗೆ ಕುಳಿತುಕೊಳ್ಳುವ ಅವಕಾಶವನ್ನು ನೀಡಲು ಶಾಲೆಯವರು ನಿರಾಕರಿಸುತ್ತಿದ್ದರು ಎಂದು ಕೇಳಿದ್ದೇನೆ. ಇನ್ನೂ ಕೆಲವರು ತಾವೇ ಪರೀಕ್ಷೆ ಬರೆಯುವ ನಿರ್ಧಾರ ಕೈ ಬಿಡುತ್ತಿದ್ದರು. ಇಂತಹವರು ಮತ್ತೆ ಉದ್ಯೋಗ ಅರಸಿ ದೂರದ ಊರುಗಳಿಗೆ ಅಂದರೆ ಆಗ ಬಹಳ ಮುಖ್ಯವಾಗಿ ಮುಂಬೈಗೆ ಹುಡುಗರು ಹೋಗುತ್ತಿದ್ದರೆ, ಹುಡುಗಿಯರಿಗೆ ಮನೆಕೆಲಸಗಳ ಜವಾಬ್ದಾರಿಯೊಂದಿಗೆ ಮದುವೆಯ ಕನಸು ಕಾಣುವುದಕ್ಕೆ ಸಕಾಲವಾಗಿತ್ತು. ಊರಿನಲ್ಲೇ ಉಳಿದು ಹೈಸ್ಕೂಲ್ವರೆಗೆ ಓದಿದ, ಪಾಸಾದ ವಿದ್ಯಾರ್ಥಿಗಳಲ್ಲಿ ಹುಡುಗರು ಕೈ ಕೆಲಸಗಳನ್ನು ಉದಾಹರಣೆಗೆ ಪೈಂಟಿಂಗ್, ಕಾರ್ಪೆಂಟರಿ, ಟೈಲರಿಂಗ್ ಗಳೊಂದಿಗೆ ಆಗಷ್ಟೇ ಪ್ರಾರಂಭಗೊಂಡ ಸಾರಿಗೆ ವ್ಯವಸ್ಥೆಯಲ್ಲಿ ಕಂಡಕ್ಟರ್, ಡ್ರೈವರ್ ವೃತ್ತಿಗಳಿಗೆ ಹೋಗುತ್ತಿದ್ದರು. ಇವುಗಳನ್ನು ಕಲಿಸುವ ಸಂಸ್ಥೆಗಳೇನೂ ಇರದಿದ್ದರೂ, ಯಾರೋ ಹಿರಿಯರ ಬಂಧುತ್ವ, ಸ್ನೇಹ, ಪರಿಚಯದಿಂದಲೇ ಕಲಿಯಬೇಕಾಗಿದ್ದುದು ಅನಿವಾರ್ಯವಾಗಿತ್ತು.
ಟೈಲರಿಂಗ್ ವೃತ್ತಿಯನ್ನು ತಮ್ಮದಾಗಿಸಿಕೊಂಡ ಹುಡುಗರು ವಿರಳವಾದರೂ ಹುಡುಗಿಯರಿಗೆ ಅದು ನೆಚ್ಚಿನ ವೃತ್ತಿಯಾಯಿತು. ಹುಡುಗಿಯರು ಹೈಸ್ಕೂಲಲ್ಲಿ ಕಲಿತ ಟೈಲರಿಂಗ್ನ್ನು ವೃತ್ತಿಯಾಗಿ ಬಳಸಿಕೊಳ್ಳುವಲ್ಲಿ ಸುಲಭದ ದಾರಿಗಳೇನೂ ಇರಲಿಲ್ಲ. ಯಾಕೆಂದರೆ ಹೊಲಿಗೆ ಮೆಷಿನ್ ಕೊಂಡುಕೊಳ್ಳುವುದು ಸುಲಭವಾಗಿರಲಿಲ್ಲ. ಶ್ರೀಮಂತ ರೆನಿಸಿಕೊಂಡವರ ಮನೆಗೆ ಹೊಲಿಗೆ ಮಿಶನ್ಗಳು ಪ್ರವೇಶವಾದ ದಿನಗಳವು. ಈ ಕಾರಣದಿಂದ ತಮ್ಮ ನೆರೆಕರೆಯ, ಇಲ್ಲವೇ ಸ್ನೇಹಿತರ, ನೆಂಟರ ಮನೆಗಳಲ್ಲಿದ್ದ ಹೊಲಿಗೆ ಮಿಶನ್ಗಳಲ್ಲಿ ತಾವು ಕಲಿತುದನ್ನು ಇನ್ನಷ್ಟು ಗಟ್ಟಿಗೊಳಿಸಿ ತಮ್ಮದೇ ಬುದ್ಧಿವಂತಿಕೆಯಿಂದ ಹೊಲಿಗೆಯನ್ನು ಸಿದ್ಧಿಸಿಕೊಂಡರು. ಇದರಿಂದ ಮದುವೆಯ ಸಂದರ್ಭದಲ್ಲಿ ಅಡುಗೆ ಕೆಲಸದೊಂದಿಗೆ `ಹೊಲಿಗೆ ಬರುತ್ತದಾ?' ಎಂದು ಕೇಳುವುದು ಕೂಡಾ ರೂಢಿಯಾಯಿತು. ಟೈಲರಿಂಗ್ ಎನ್ನುವುದು ಕಲಿತ ಹುಡುಗಿಯರ ವಿಶೇಷತೆ ಅನ್ನಿಸಿ ಮದುವೆ ಮಾರುಕಟ್ಟೆಯಲ್ಲಿ ಡಿಮಾಂಡ್ ಹೆಚ್ಚಾದುದು ನಿಜವೇ! ಇದರ ಜತೆಗೆ ಸರಕಾರ ವಿಶೇಷ ಯೋಜನೆಗಳಲ್ಲಿ ಹೆಣ್ಣುಮಕ್ಕಳಿಗೆ ಟೈಲರಿಂಗ್ ಕಲಿಸುವ ತರಬೇತಿ ಕೇಂದ್ರಗಳೂ ಬೆರಳೆಣಿಕೆಯಲ್ಲಿ ಪ್ರಾರಂಭ ಗೊಂಡಿತು. ಹೀಗೆ ಕಲಿತ ಹೆಣ್ಣು ಮಕ್ಕಳು ತಾವೇ ಟೈಲರಿಂಗ್ ಕ್ಲಾಸುಗಳನ್ನು ತೆರೆಯುವುದರ ಮೂಲಕ ಟೈಲರಿಂಗ್ ವೃತ್ತಿಯನ್ನು ತಮ್ಮ ಗುತ್ತಿಗೆ ಎಂದು ಸ್ವೀಕರಿಸುವಂತಾದುದು ಕೂಡಾ ಸತ್ಯವೇ! ಹೈಸ್ಕೂಲ್ ಮುಗಿಸಿದ ಹೆಚ್ಚಿನ ಹುಡುಗರು, ಹುಡುಗಿಯರು ಕಾಲೇಜು ಸೇರಿದರು. ಅವರಲ್ಲಿ ಕೆಲವರು ಅಂದಿನ ಇಂಟರ್ ಮೀಡಿಯೆಟ್ ಅಥವಾ (11ನೆ ತರಗತಿ) ಮುಂದೆ ಬದಲಾದ ಪಿಯುಸಿ ತರಗತಿಗೆ ಓದು ನಿಲ್ಲಿಸಿದರೂ ಇಷ್ಟೇ ಓದಿನಿಂದ ಬ್ಯಾಂಕ್ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡವರು ಹಲವರು. ಮುಂದೆ ಪದವಿ ಓದಿದವರು ಬಿ.ಎಡ್. ಮುಗಿಸಿ ಅಧ್ಯಾಪಕರಾದರು. ವಿಜ್ಞಾನ ಪದವೀಧರರು ಅಂದಿನ ಟೆಲಿಗ್ರಾಫ್ ಕಚೇರಿಯಲ್ಲಿ ಉದ್ಯೋಗ ಪಡೆದರು. ಹುಡುಗಿಯರೂ ಸೇರಿದಂತೆ ಸರಕಾರದ ವಿವಿಧ ಕಚೇರಿಗಳಲ್ಲಿ, ಬ್ಯಾಂಕುಗಳಲ್ಲಿ, ಕೋರ್ಟುಗಳಲ್ಲಿ ಒಂದರ್ಥದಲ್ಲಿ `ವೈಟ್ಕಾಲರ್ಡ್' ಉದ್ಯೋಗಗಳಲ್ಲಿ ಊರಲ್ಲೇ ಸೇರಿಕೊಂಡರೆ ಕೆಲವರು ಮುಂಬೈಗೆ ಉದ್ಯೋಗ ಅರಸಿ ಕೊಂಡು ಹೋಗುವುದು ಇಂದಿನಂತೆ ಅಂದು ಕೂಡಾ ಒಂದು ಹೆಗ್ಗಳಿಕೆಯ ವಿಷಯವೇ ಆಗಿತ್ತು. ಆಗ ಬೆಂಗಳೂರು ನಮ್ಮೂರಿನ ಜನರಿಗೆ ರಾಜಧಾನಿಯಾದರೂ ಅಪರಿಚಿತವೇ ಆಗಿತ್ತು.
ಬರೆಯುತ್ತಿದ್ದಂತೆಯೇ ನೆನಪಾದವರು ಸೈಕಲ್ ಶಾಪ್ ಕೃಷ್ಣಪ್ಪನವರ ಹಿರಿಯ ಮಗ ಎಂ.ಕಾಂ. ಮಾಡಿ ಸೈಂಟ್ ಅಲೋಶಿಯಸ್ ಕಾಲೇಜಲ್ಲಿ ಉಪನ್ಯಾಸಕರಾಗಿದ್ದರು. ಪುರಸಭೆ ಕಚೇರಿಯಲ್ಲಿ ನೀರು ಸರಬರಾಜು ವಿಭಾಗದಲ್ಲಿ ಇಂಜಿನಿಯರ್ ಆಗಿದ್ದವರು ರಮೇಶ್ ಅವರು. ಸ್ನಾತಕೋತ್ತರ ಪದವಿ ಪಡೆದು ಬೆಸೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇರಿ ಪ್ರಾಂಶುಪಾಲೆಯಾಗಿ ನಿವೃತ್ತಿಯಾದ ಸುಶೀಲಾ ಡಿ. ರಾವ್ ಹಾಗೂ ಅವರ ಕಿರಿಯ ಸಹೋದರಿ ಕೂಡಾ ಸ್ನಾತಕೋತ್ತರ ಪದವಿ ಪಡೆದು ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, ಪ್ರಾಂಶುಪಾಲೆಯಾಗಿ ಕಾರ್ಯ ನಿರ್ವಹಿಸಿದವರು ಸುಲೋಚನಾ ರಾವ್. ಅಕ್ಕ ಸುನಂದಾ ರಾವ್ ಪದವೀಧರೆಯಾಗಿ ಉದ್ಯೋಗಸ್ಥೆಯಾಗಿದ್ದರು. ಹೀಗೆ ನನ್ನೂರಿನ ನನ್ನ ಹಿರಿಯ ಕಿರಿಯ ವಿದ್ಯಾರ್ಥಿಗಳೂ ಸೇರಿದಂತೆ ಹೆಚ್ಚಿನವರು ಪದವೀಧರರಾಗಿದ್ದು, ಉತ್ತಮ ಉದ್ಯೋಗಗಳನ್ನು ಪಡೆದು (ಹುಡುಗಿಯರು ಸೇರಿದಂತೆ) ಈ ಊರನ್ನು ವಿದ್ಯಾವಂತರ ಊರನ್ನಾಗಿಸುವಲ್ಲಿ ಸಜ್ಜನರ ಊರಾಗುವಂತೆ ಮಾಡಿದ ಯಶಸ್ಸು ಕಾಪಿಕಾಡು ಶಾಲೆಯ ವಿದ್ಯಾರ್ಥಿಗಳಿಗೆ ಸೇರಿದೆ. ಊರಿನ ಹಿರಿಯ ಕಿರಿಯರಿಗೂ ಸೇರಿದೆ. ಆದರೆ ದುಃಖದ ವಿಚಾರವೆಂದರೆ ಅಂತಹ ಕಾಪಿಕಾಡು ಶಾಲೆ ಇಂದು ಮಕ್ಕಳಿಲ್ಲದೆ ಮುಚ್ಚುವ ಪ್ರಸಂಗ ಬಂದಿದೆ ಎಂದು ಕೇಳಿದಾಗ ಶಾಲೆಯಿಲ್ಲದ ಊರು ಊರಾಗಿರುವುದು ಹೇಗೆ ಸಾಧ್ಯ? ಎಂಬ ಪ್ರಶ್ನೆ ನನ್ನದು. ಜೊತೆಗೆ ಸರಕಾರೀ ಶಾಲೆಗಳು, ಕನ್ನಡ ಮಾಧ್ಯಮ ಶಾಲೆಗಳು ಊರವರಿಗೇ ಬೇಡವಾಗಿದೆಯಲ್ಲಾ?