ಒಂದು ಒಳ್ಳೆಯ ನುಡಿ - 112

ಈ ಪ್ರಪಂಚದಲ್ಲಿ ಯಾವುದೂ ಶಾಶ್ವತವಲ್ಲ. ಮನುಷ್ಯ ಹುಟ್ಟಬಹುದು, ಕಾಲನ ಕರೆ ಬಂದಾಗ ಹೋಗಬಹುದು. ಆದರೆ ಆತ ಸಮಾಜದಲ್ಲಿ ಕೈಗೊಂಡ ಕೆಲಸಕಾರ್ಯಗಳು ಶಾಶ್ವತ. ನಾವು ಮಾಡಿದ ಕೆಲಸಗಳನ್ನು ನಾಲ್ಕು ಜನ ಮೆಚ್ಚಿದರೆ ಅದೇ ದೊಡ್ಡ ಪ್ರಶಸ್ತಿ. ಇನ್ನು ಬೇರೆ ಪ್ರಶಸ್ತಿಯ ಅಗತ್ಯವಿಲ್ಲ. ಕವಿತೆ, ಕಾವ್ಯ, ಬರವಣಿಗೆಗಳು ಶಾಶ್ವತ. ನಾವು ಪುರಾಣ ಕಾವ್ಯಗಳ ಬಗ್ಗೆ, ಇತಿಹಾಸದ ಕುರಿತು ನೋಡಿದರೆ ಅವರಾರು ಈಗ ಇಲ್ಲ. ಆದರೆ ಬರೆದ ಕಾವ್ಯಗಳು ಈಗಲೂ ಜನಮಾನಸದಲ್ಲಿ ಇದೆಯಲ್ಲವೇ? ನಾವು ಬರೆದ ಲೇಖನ, ಕವನ ರಚನೆಗಳನ್ನು ಒರೆಗೆ ಹಚ್ಚಿದಾಗ ಜಳ್ಳು ಪೊಳ್ಳುಗಳೆಲ್ಲ ಹೋಗಿ ಉತ್ಕೃಷ್ಟ ವಾದ್ದು ಮಾತ್ರ ಉಳಿಯುತ್ತದೆ. ಬರವಣಿಗೆ ವಿಮರ್ಶೆಗೊಡ್ಡಿದಾಗ ಲೋಪದೋಷಗಳನ್ನು ಅರಿಯಲು ಸಹಾಯವಾಗಬಹುದು. ಚೆನ್ನಾಗಿದೆ, ಸೊಗಸಾಗಿದೆ, ಸೂಪರ್, ಶುಭವಾಗಲಿ, ಧನ್ಯವಾದಗಳು ಇದು ನಾವು ವಿಮರ್ಶೆಯಲ್ಲಿ ಓದುವ, ಬರೆಯುವ ಸಾಮಾನ್ಯ ಪದಗಳಾಗಿವೆ. ಇದರಲ್ಲಿ ಕಲಿಯಲು, ತಿದ್ದಿಕೊಳ್ಳಲು ಏನೂ ಇಲ್ಲ. ಬರವಣಿಗೆಯಲ್ಲಿರುವ ತಪ್ಪುಗಳನ್ನು ಬರೆದ ಕವಿಮನಸ್ಸಿಗೆ ನೋವಾಗದಂತೆ ತಿಳಿಸಬಹುದು. ಆಗ ನಮಗೆ ತಿದ್ದಲು, ಇನ್ನೂ ಚೆನ್ನಾಗಿ ಬರೆಯಲು ಪ್ರೇರಣೆ ನೀಡಿದಂತಾಗುತ್ತದೆ. ಹಾಗೆಂದು ಯಾವುದೋ ಘಟನೆಯನ್ನು ಮನದಲ್ಲಿಟ್ಟುಕೊಂಡು ವಿಮರ್ಶೆ ಬರೆದವ ನಿಜವಾದ ಸಾಹಿತಿಯಾಗಲಾರ. ಹೀಗೆ ಬರೆದರೆ ಇನ್ನೂ ಉತ್ತಮವಾಗಿತ್ತು ಎಂದು ಹೇಳಬಹುದು. ಇದರಲ್ಲಿ ಬೇಸರದ ಅಂಶವಿಲ್ಲ. ನಮ್ಮ ಬರವಣಿಗೆ ಹೇಗಿರಬೇಕು ಎಂಬ ಬಗ್ಗೆ ಹಿರಿಯ ಸಾಹಿತಿಗಳು ಬರೆದ ಸಾಲುಗಳು ಹೀಗಿವೆ.
‘ಕವಿಗೆ ಕಟ್ಟುಪಾಡುಗಳು ಬೇಡ. ನ್ಯೂನತೆಯಲ್ಲಿ ಪರಿಪೂರ್ಣತೆ, ಸಮಷ್ಟಿ ಚಿಂತನೆ, ವರ್ತಮಾನ ದರ್ಶನದ ಮೇಲೆ ಬೆಳಕು ಚೆಲ್ಲುವ ಮನೋಭಾವ, ಆದರ್ಶತನ, ರಸಾತ್ಮಕ ಚಮತ್ಕಾರ, ಕಾಗುಣಿತ ತಪ್ಪನ್ನೆಸಗದೆ ಬರೆಯುವ ಕಲೆ, ಭೂತ - ವರ್ತಮಾನ - ಭವಿಷ್ಯತ್ ನ ಸಮ್ಮಿಲನ, ಸತ್ಯಾಸತ್ಯತೆ, ನಿಷ್ಪಕ್ಷಪಾತ ಧೋರಣೆಯ ಬರಹ ಅಭಿವ್ಯಕ್ತಿ ಗೊಳಿಸುವವನೇ ನಿಜವಾದ ಒಬ್ಬ/ಳು ಕವಿ, ಬರಹಗಾರ ಅನಿಸಬಹುದು.’ ಸತ್ಯವಲ್ಲವೇ?
(ಓದಿದ್ದು: ದೇ.ಜವರೇಗೌಡ ಪರಿಚಯ ಲೇಖನ)
ಸಂಗ್ರಹ: ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ