ಒಂದು ಒಳ್ಳೆಯ ನುಡಿ - 82

ನಮ್ಮಲ್ಲಿರುವ ಅಂಧಕಾರವನ್ನು ಹೊಡೆದೋಡಿಸಲು ದೀಪದ ಬೆಳಕು ಸಾಲದು. ಮನದ ಒಳಗೆ ಅಡಗಿಹ ಒಳಗತ್ತಲನ್ನು ಪರಿಹರಿಸಲು, ಬೆಳಗಿಸಲು ಬರಿಯ ವೇದಾಂತ, ಪ್ರವಚನ ಕೇಳಿದರೆ, ಹೇಳಿದರೆ ಸಾಲದು. ದೀಪದ ಹೆಸರನ್ನು ಹೇಳಿದ ತಕ್ಷಣವೇ ಕತ್ತಲೆಯೋಡದು. ಆ ದೀಪಕ್ಕೆ ಬತ್ತಿ, ಎಣ್ಣೆ ಎಲ್ಲಾ ಹಾಕಿ, ಉರಿಸಿದಾಗ ಜ್ಯೋತಿ ಬೆಳಗಿ ಕತ್ತಲು ಹೋಗಬಹುದು. ಹಾಗೆಯೇ ಒಳಗಿನ ಕತ್ತಲು, ಅಂಧಕಾರ ಹೋಗಲು ಬೇರೆ ಬೇರೆ ಸಾಧನೆಗಳನ್ನು ಮಾಡಬೇಕು. ಸತತ ಪ್ರಯತ್ನ ಮಾಡಬೇಕು. ಸುಮ್ಮನೆ ಕೈಕಟ್ಟಿ ಕುಳಿತರೆ ಏನೂ ಸಾಧಿಸಲಾಗದು. ಹಾಗಾದರೆ ಏನು ಮಾಡಬಹುದು? ನಮಗೆ ಎಷ್ಟು ಸಾಮರ್ಥ್ಯವಿದೆಯೋ ಅದನ್ನು ಬಳಸಿಕೊಂಡು ಉತ್ತಮ ಯೋಜನೆಗಳು, ಸಮಾಜಮುಖಿ ಕೆಲಸಕಾರ್ಯಗಳನ್ನು ಮಾಡಬಹುದು. ತುಂಬಾ ಕಷ್ಟ ಬಡತನದಲ್ಲಿರುವ ಕುಟುಂಬದ ಮಕ್ಕಳಿಗೆ ಕಲಿಕೆಗೆ ಸಹಕರಿಸಬಹುದು. ಕಲಿಕೆ ಆ ಮಗುವಿನ ಜೀವನ ರೂಪಿಸಬಹುದು. ಬದುಕಿನ ದಾರಿಯಲ್ಲಿ ಎದುರಾಗುವ ಸಮಸ್ಯೆಗಳನ್ನು ದಾಟಿಕೊಂಡು ಮುಂದೆ ಹೋಗಲು ಆರ್ಥಿಕವಾಗಿ, ನೈತಿಕವಾಗಿ ಬಲ ತುಂಬಬಹುದು. ಯಾರ ಹತ್ತಿರವಾದರೂ ಆತ ದುಡಿದು ಸಂಪಾದನೆ ಮಾಡುವಲ್ಲಿ ಹೇಳಿ ಸಹಕರಿಸಬಹುದು. ಸಾಂತ್ವನದ ಮಾತುಗಳು ಜೀವಕಳಕೊಳ್ಳಲು ಪ್ರಯತ್ನಿಸಿದವನಲ್ಲಿ ಬದುಕಿನ ಆಶಾಕಿರಣ ಮೂಡಿಸಬಹುದು. ತನ್ನಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಂಡು, ಇತರರಿಂದಲೂ ಸಹಕಾರ ಪಡೆದುಕೊಂಡು ತನ್ನ ಕಾಲಮೇಲೆ ತಾನು ನಿಲ್ಲಲು ಪ್ರಯತ್ನಿಸಬೇಕು. ಪ್ರಯತ್ನವೇ ಇಲ್ಲದೆ ಫಲ ಎಲ್ಲಿಯದು? ತರಗತಿಯೊಳಗೆ ಅಧ್ಯಾಪಕರು ಏನು ಕಲಿಸುತ್ತಾರೆ ಅದಕ್ಕೆ ಸ್ವಂತದ್ದನ್ನು ಸೇರಿಸಿದರೆ ಯಶಸ್ಸು ಖಂಡಿತಾ. ಇಲ್ಲದಿದ್ದರೆ ಪುಸ್ತಕದ ವಿದ್ಯೆ ಮಾತ್ರ. ಕಟ್ಟಿ ಕೊಟ್ಟ ಬುತ್ತಿ ಹೆಚ್ಚು ದಿನ ಬಾರದು. ದೀಪ ತೈಲದಿ ಬೆಳಗುವಂತೆ ಒಳ್ಳೆಯ ಗುಣನಡತೆ, ಕೆಲಸಕಾರ್ಯಗಳಿಂದ ನಾವು ಬೆಳಗೋಣ.
-ರತ್ನಾ ಕೆ.ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ