ಒಂದು ಪೋಸ್ಟ್ ಮಾರ್ಟಂ ಸುತ್ತ
ಮುಂಜಾನೆಯಿಂದಲೂ ಆ ಹೆಣಕ್ಕಾಗಿ ಕೆರೆಯಲ್ಲಿ ತಡಕಾಡಿದ್ದರು. ಕೆರೆಗೆ ಬೀಳುವ ಒಂದೈದು ನಿಮಿಷ ಮುಂಚೆ ಆತ ಬರೆದಿದ್ದ ಪತ್ರವೇ ಈ ಕೆರೆಯ ವಿಳಾಸ ಹೇಳಿತ್ತು. ಸಿಕ್ಕಿರಲಿಲ್ಲ, ಹೌದು ಮುಂಜಾನೆಯ ಎಳೆ ಚಳಿಯಲ್ಲಿ ಘಂಟೆಗಟ್ಟಲೇ ಹುಡುಕಾಡಿದ್ದರೂ ಸಿಕ್ಕಿರಲಿಲ್ಲ. ಆತ ಸತ್ತಿಲ್ಲ, ಹೆದರಿಸಲು ನಾಟಕವಾಡುತ್ತಿದ್ದಾನೆ ಎಂದು ಹೆತ್ತವರಿಗೆ ಧೈರ್ಯ ಹೇಳಿದ್ದವರು ಬೆಚ್ಚಿದ್ದು ಮಾತ್ರ ಹೆಣವನ್ನು ಮೇಲಕ್ಕೆ ತಂದಾಗ. ಜೀವ ಮೇಲಕ್ಕೆ ನೆಗೆವಾಗ ದೇಹ ಕೆಳಕ್ಕೆ ಜಗ್ಗಿ ಯಾವುದೋ ಕಲ್ಲಿನ ಸಂಧಿಗೆ ಕೈ ಸಿಕ್ಕಿಸಿಕೊಂಡಿತ್ತು. ಆಗ ಚೀರಿಕೊಂಡ ಕೆಲವರ ಗಂಟಲಿಗೆ ಇನ್ನೂ ನೋವಾಗಿಲ್ಲ, ಚೀರಾಡುತ್ತಿದ್ದಾರೆ, ಸಾವಿನ ಮುಂಚೆಯೂ ಚೀರಾಡಿದ್ದರು.
ಆ ಕೆರೆ ಆತನಿಗೆ ನೆಮ್ಮದಿ ಕೊಡುವ ದೇವಾಸ್ಥಾನದಂತೆ ಕಂಡಿತೋ ಏನೋ? ಚಪ್ಪಲಿಯನ್ನು ತಡಿಯಲ್ಲಿ ಬಿಟ್ಟು ಒಳ ಹೊಕ್ಕಿದ್ದಾನೆ. ದೇಹವನ್ನು ನುಂಗಿಕೊಂಡ ನೀರು ನಿನ್ನೆ ಮೊನ್ನೆಯೆಲ್ಲಾ ಶಾಂತವಾಗಿತ್ತು. ಈಗೇನು ಅಲ್ಲಿ ಸುನಾಮಿಯೆದ್ದಿಲ್ಲ. ನಿನ್ನೆಯಷ್ಟೇ ಶಾಂತವಾಗಿದೆ. ನಿನ್ನೆವರೆವಿಗೂ ನೂರಾರು ಕಾರಣಗಳಿಂದ ಒದ್ದಾಡಿದ್ದ ಈ ದೇಹ ಇಂದು ಸಾವೆಂಬ ಒಂದೇ ಕಾರಣಕ್ಕೆ ನೆಮ್ಮದಿಯಾಗಿ ಮಲಗಿಬಿಟ್ಟಿದೆ.
ಕೆರೆಯ ನೀರು ಮತ್ತು ಕೆರೆಯ ಮೇಲೆ ತೇಲುತ್ತಿದ್ದ ಆತನ ಬಟ್ಟೆ ಪ್ರಶಾಂತವಾಗಿದ್ದರೂ ಜನಗಳ ಅಳುವಿನ ಕಟ್ಟೆ ಹೊಡೆದುಹೋಯಿತು. ಒಂದಷ್ಟು ಜನ ಹೆಣದ ಕೈಕಾಲು ಹಿಡಿದುಕೊಂಡು ಜಗ್ಗಿದರು. ಒಂದಷ್ಟು ಜನ ಅದರೆದೆ ಮೇಲೆ ಬಿದ್ದು ಒರಳಾಡಿ ಅತ್ತು ಹಗುರಾದರು. ತಡಮಾಡದ ಪೋಲೀಸರು ಹೆಣವನ್ನು ಜೀಪಿನೊಳಗೆ ತುರುಕಿ ಆಸ್ಪತ್ರೆಯೆಡೆಗೆ ಧಾವಿಸಿದರು.
ಹೆಣವಾಗಿ ಬರುವವರು ಹೇಗಾದರೂ ಸತ್ತಿರಲಿ ಈ ಡಾಕ್ಟರಿಗಳಿಗೇನು ಚಿಂತೆ? ಪೋಸ್ಟ್ ಮಾರ್ಟಂಗೆಂದು ಹೆಣ ತೆವಳಿ ಬಂದರೆ ನಿರ್ವಿಕಾರರಾಗಿ ಕೊಯ್ದುಬಿಡುತ್ತಾರೆ. ಈ ಪ್ರಪಂಚವನ್ನು ತೂಗಿದ ಶಕ್ತಿಯೊಂದನ್ನು ನಿರಾಕಾರ ಆದರೆ ನಿರ್ವಿಕಾರ ಎಂದು ಕರೆಯುತ್ತಾರೆ. ಆದರೆ, ಗೋಳಾಡುವ ನೂರಾರು ಜನಗಳ ನಡುವೆ ಸಮಸ್ಥಿತಿಯಲ್ಲಿ ಹೆಣ ಕೊಯ್ಯುವ ಈ ಇಬ್ಬರೂ ಡಾಕ್ಟರುಗಳು ಕೂಡ ನಿರ್ವಿಕಾರರೆ. ಹಣ್ಣನ್ನು ಕೊಯ್ದು ಮಕ್ಕಳಿಗೆ ಕೊಟ್ಟಂತೆ ಹೆಣವನ್ನು ತುಂಡು ಮಾಡಿ ಕೊಟ್ಟುಬಿಡುತ್ತಾರೆ.
ಒಂದು ಕಡೆ ಹೆಣ ಕೊಯ್ಯುತ್ತಿದ್ದರೆ, ಶವಾಗಾರದ ಜವಾನ ಬೀಡಿ ಸೇದುತ್ತ ನಿಂತುಕೊಳ್ಳುತ್ತಾನೆ. ದಿನಕ್ಕೆ ಬರುವ ಹತ್ತಾರು ಹೆಣಗಳನ್ನು, ಹೆಣದ ವಾರಸುದಾರರ ಗೋಳನ್ನು ಪ್ರಾರಂಭದಲ್ಲಿ ನೋಡಿ ನೊಂದುಕೊಳ್ಳುತ್ತಿದ್ದ ಆತ ಈಗೀಗ ಜಿಡ್ಡಾಗಿದ್ದಾನೆ. ಒಂದು ಬೀಡಿಯಲ್ಲಿ ಎಲ್ಲಾ ಗೊಂದಲ, ನೋವನ್ನು ಉರಿದುಬಿಡುತ್ತಾನೆ. ಆತನೂ ಒಮ್ಮೊಮ್ಮೆ ನಿರಾಕಾರನಂತೆ, ಸಮಚಿತ್ತದವನಂತೆ ಕಾಣುತ್ತಾನೆ. ದಿನಕ್ಕೆ ನೂರು ಕೋಳಿ ಕೊಯ್ಯುವ ವ್ಯಾಪಾರಿಗೆ ಮತ್ತು ಕೇಜಿಗಿಷ್ಟು ಎಂದು ದುಡ್ಡು ಕಿತ್ತುಕೊಳ್ಳುವ ಮಾಲೀಕನಿಗೆ ಸಾವೆಂಬುದೊಂದು ಹವ್ಯಾಸವಲ್ಲವೇ? ಕೋಳಿಗಳಿಗೆ ಮಾತು ಬರುವುದಿಲ್ಲವೆಂಬುದೊಂದೇ ಈ ವ್ಯತ್ಯಾಸಕ್ಕೆ ಕಾರಣವಷ್ಟೆ. ಹಾಗೆಯೇ ಈ ಜವಾನನೂ ಕೂಡ. ಪೋಸ್ಟ್ ಮಾರ್ಟಂ ವೇಳೆ ಯಾರಾದರೂ ಗೋಳಾಡಿಕೊಂಡು ಬಂದರೂ ಹೆಣ ನೋಡಲು ಬಿಡುವುದಿಲ್ಲ, ನಂತರ ಬಟ್ಟೆ ಹೊಲೆದಂತೆ ಡಾಕ್ಟರ್ಗಳು ಕೊಯ್ದ ಚರ್ಮವನ್ನು ಎಳೆದು ಎಳೆದು ಹೊಲೆದುಬಿಡುತ್ತಾನೆ. ಹೆಣಕ್ಕೆ ನೋವಾಗುವುದೇನೋ ಎಂದುಕೊಳ್ಳಲು ಅವನೇನೂ ಆ ಹೆಣವನ್ನು ಹೆತ್ತ ತಾಯಿಯಲ್ಲವಲ್ಲ!
ಅದೆಷ್ಟು ಜಿಗಿದಾಡಿ, ನೆಗೆದಾಡಿತ್ತೋ ಈ ದೇಹ. ಇಂದು ಈ ಬೆಂಚಿನ ಮೇಲೆ ಹೆಣವಾಗಿ, ಅಲುಗಾಡದೆ ಮಲಗಿದೆ. ಈ ಇಬ್ಬರು ಡಾಕ್ಟರುಗಳಿಗೆ ಹೆಣ ಕೊಯ್ಯುವುದು ಎಂದರೆ ಅವರವರ ಮನೆಯ ಉದ್ಯಾನವನಗಳಿಗೆ ಪ್ರತಿನಿತ್ಯ ನೀರೆರೆದಷ್ಟೇ ಸಲೀಸು. ಇಬ್ಬರಲ್ಲಿ ಒಬ್ಬ ವಯಸ್ಸಾದವನು, ಹೆಸರು ಡಾ. ಶರ್ಮಾ, ಮಾತು ಮಾತಿಗೂ ಹೂಂಕರಿಸಿ ತನ್ನ ಬಿಗಿತನವನ್ನು ಕಳೆದುಕೊಳ್ಳದಿದ್ದವನು,ಆದರೆ, ಕದ್ದು ನೋಡಿದರೆ ಅವನೊಬ್ಬ ಎಲ್ಲಾ ಬಲಹೀನತೆಯಿರುವ ಪಕ್ಷಪಾತಿಯಷ್ಟೇ. ಅಂತಹವರನ್ನು ಪ್ರಿನ್ಸಿಪಲ್ಡ್ ಮ್ಯಾನ್ ಎಂದು ಈ ಸಮಾಜ ಕರೆಯುತ್ತದೆ. ಮತ್ತೊಬ್ಬ ಆತನೊಡನೆ ಅಭ್ಯಾಸ ಮಾಡುತ್ತಿರುವ ಆತನ ಶಿಷ್ಯ. ಹೆಣ ಕೊಯ್ಯುವುದರಲ್ಲಿ ಆತನಷ್ಟೇ ಸಬಲ, ಹೆಸರು ಡಾ. ನಂದೀಶ್.
ಜವಾನ, ಕ್ಷಮಿಸಿ, ಆ ರೀತಿ ವಿಂಗಡಿಸುವುದು ಸರಿಯೇ? ಈ ವೃತ್ತದಲ್ಲಿ ಡಾಕ್ಟರ್ ಎಂದು ಕರೆಯುವುದಕ್ಕೆ ಅವರ ವಿದ್ಯಾರ್ಹತೆ ಕಾರಣ. ಜವಾನ ಎಂದು ಈ ಪ್ರಪಂಚದಲ್ಲಿ ಅದೆಷ್ಟೋ ಜನರನ್ನು ಕರೆದಿದ್ದಾರೆ, ಅದಕ್ಕೆ ಯಾವುದೇ ವಿದ್ಯಾರ್ಹತೆ ಕಾರಣವಲ್ಲ, ಬದಲಾಗಿ ತುಳಿದವರು ಮತ್ತು ತುಳಿದವರನ್ನು ಕೇವಲ ತೆಗಳುತ್ತಾ ಬಂದವರು ಕಾರಣ.
ಇರಲಿ,
ಇಲ್ಲಿ ಜವಾನನೆನಿಸಿಕೊಂಡಾತ ಮೌನವಾಗಿ ಮಲಗಿದ್ದ ಆ ಹೆಣದ ಬಟ್ಟೆಯನ್ನೆಲ್ಲಾ ಬಿಚ್ಚಿದ. ಹೆಣದ ವಯಸ್ಸು ಹೆಚ್ಚೆಂದರೆ ಮೂವ್ವತ್ತಿರಬಹುದು. ಇಷ್ಟು ಹೊತ್ತು ನಿರುಮ್ಮಳವಾಗಿ ಮಲಗಿದ್ದ ಹೆಣ ಈಗ ಸರ್ವಸಂಗ ಪರಿತ್ಯಾಗಿಯಂತೆ ಕಾಣುತ್ತಿದೆ. ನಿಜಕ್ಕೂ ಈ ಪ್ರಪಂಚದಲ್ಲಿ ಹೆಣಗಳನ್ನಷ್ಟೇ ಸರ್ವಸಂಗ ಪರಿತ್ಯಾಗಿಗಳೆಂದು ಕರೆಯಬಹುದು. ಜಗತ್ತಿನ ಈ ಜಂಜಡಗಳಿಂದ ನಿಜವಾದ ಮುಕ್ತಿ ದೊರಕುವುದು ಹೆಣಗಳಿಗಷ್ಟೆ ಅನಿಸುತ್ತದೆ.
ಜವಾನನೆನಿಸಿಕೊಂಡಾತ ಹೆಣದ ಬಟ್ಟೆ ಬಿಚ್ಚಿದ್ದೇ ಡಾ.ಶರ್ಮಾ ಮತ್ತು ಡಾ.ನಂದೀಶ್ ಚೂಪು ಮಾಡಿದ್ದ ಚಾಕು ಚೂರಿ ಎಳೆದುಕೊಂಡರು.ಸೂರ್ಯನನ್ನು ನೋಡದೆ ಯಾವುದೇ ಹೆಣಕ್ಕೂ ಚಾಕು ಹಾಕದಿರುವುದು ಇವರಿಬ್ಬರ ಅಭ್ಯಾಸ. ಮೋಡದ ಮರೆಯಲ್ಲಿ ಅವಿತಿದ್ದ ಸೂರ್ಯದೇವ ಕೊನೆಗೂ ಕಿಟಕಿಯ ಬಳಿ ಬಂದು ಕುಳಿತು ಹೆಣ ಕೊಯ್ಯಲು ಹೇಳಿದ. ಹಿರಿಯ ವೈದ್ಯರಾದ ಡಾ.ಶರ್ಮಾ ಹೆಣದ ಎದೆಗೆ ಚಾಕು ಹಾಕಿ ಚರ್ಮವನ್ನು ಹರಿಯಬೇಕು, ಅಷ್ಟರಲ್ಲಿಯೇ ಡಾ.ನಂದೀಶ್ ‘ಡಾಕ್ಟರ್, ಪ್ಲೀಸ್ ವೇಯ್ಟ್’ ಎಂದು ಕೂಗಿಕೊಂಡರು.
ಡಾ.ಶರ್ಮಾ: ‘ಏನಾಯ್ತು?’
‘ಆ ಹೆಣದ ಮೇಲಿರುವ ಹಚ್ಚೆಯನ್ನು ಗಮನಿಸಿ’
‘ಯಾವ ಹಚ್ಚೆ ಇದ್ದರೆ ನಮಗೇನು, ಆ ಹಚ್ಚೆಯನ್ನು ಕೊಯ್ದರೆ ಹೆಣವೇನು ಕೈ ಹಿಡಿದುಕೊಳ್ಳುವುದಿಲ್ಲವಲ್ಲ, ಬೇಗ ಕೆಲಸ ಮುಗಿಸೋಣ, ಮತ್ತೆರಡು ಹೆಣವನ್ನು ಕೊಯ್ಯುವ ಕೆಲಸವಿದೆ’
ಬೇಗ ಕೊಯ್ದುಬಿಡಿ ಎಂದ ಸೂರ್ಯದೇವ ಸ್ವಲ್ಪ ಜಾಸ್ತಿ ಬೆಳಕು ಚೆಲ್ಲಿದ.
ಆತ ಡಾಕ್ಟರುಗಳಿಗಿಂತ ಮೊದಲೇ ಈ ಹಚ್ಚೆಯನ್ನು ಗಮನಿಸಿದ್ದ.
ಡಾ.ನಂದೀಶ್: ‘ನೋ ಡಾಕ್ಟರ್, ಅಲ್ಲಿ ಹೃದಯದ ಚಿತ್ರ ಇದೆ, ಚಿತ್ರದೊಳಗೆ ಚಿತ್ರ ಅನ್ನೋ ಒಂದು ಹೆಸರಿದೆ, ಆ ಚಿತ್ರವನ್ನು ವಿಚಿತ್ರ ಮಾಡಬೇಡಿ’
ಡಾ.ಶರ್ಮಾ: ‘ಹೌದು, ಇದೆ, ಇರಲಿ. ಏನೀಗ? ಚಿತ್ರವನ್ನು ಹೊತ್ತುಕೊಂಡಿರುವ ಚರ್ಮದೊಳÀಗಿರುವ ನಿಜವಾದ ಹೃದಯವೇ ಬಡಿಯದೇ ಬಿದ್ದಿದೆ, ನಾನು ಚಾಕು ಎತ್ತಿಕೊಳ್ಳುವಾಗ ಈ ದೇಹವೇ ಅಲುಗಲಿಲ್ಲ, ಆ ದೇಹದ ಮೇಲಿರೋ ಚಿತ್ರದ ಬಗ್ಗೆ ನಿನಗೇಕೆ ಇಷ್ಟು ಕಾಳಜಿ?’
‘ಹೃದಯದ ಚಿತ್ರದೊಳಗಿರುವುದು ಈ ಹೆಣದ ಲವರ್ ಹೆಸರು ಎನಿಸುತ್ತಿದೆ, ಈತ ಆತ್ಮಹತ್ಯೆ ಮಾಡಿಕೊಳ್ಳಲು ಆಕೆ ಮತ್ತೊಬ್ಬನನ್ನು ಮದುವೆ ಆದದ್ದೇ ಕಾರಣ, ಈತ ಅಷ್ಟು ಗಾಢವಾಗಿ ಪ್ರೀತಿಸಿ ಕೊನೆಗೆ ಸಾವಿನಲ್ಲಿ ಆಕೆಯನ್ನು ಮರೆಯೋಕೆ ಇಷ್ಟ ಪಟ್ಟಿದ್ದರಿಂದ ಈ ಹೆಣವನ್ನು ಕೊಯ್ಯುವುದೇ ಬೇಡ’
‘ಇವರೆಲ್ಲಾ ಬುದ್ಧಿಗೇಡಿಗಳಷ್ಟೇ, ಆತ್ಮಹತ್ಯೆ ಮಾಡಿಕೊಳ್ಳದಿದ್ದರೆ ಇಂಥಹವರನ್ನೆಲ್ಲಾ ಹೊಡೆದು ಸಾಯಿಸಿಬಿಡಬೇಕು, ತನ್ನನ್ನು ತಾನು ಕೊಂದುಕೊಳ್ಳಲು ಹೊಂಚಿದ ಇವನಿಗೆ ಹೆತ್ತವರು ಕಾಣಲಿಲ್ಲವೇ?’
‘ಹೆತ್ತವರು ಕಂಡಿರಬಹುದು, ಹಾಗಾದರೆ ಆತ ಪ್ರೀತಿಸಿದ್ದು ತಪ್ಪೇ?’
‘ಹೌದು, ಮದುವೆ ಸಂಪ್ರದಾಯಗಳು ಇರುವುದು ಈ ದಡ್ಡರಿಗೆ ಯಾಕೆ ಅರ್ಥವಾಗುವುದಿಲ್ಲ?’
‘ಪ್ರೀತಿ ಮಾಡುವಾಗ ಸಂಪ್ರದಾಯ ಅಡ್ಡ ಬರುವುದಿಲ್ಲ ಡಾಕ್ಟರ್, ಪ್ರೀತ್ಸೋರು ಮದುವೆ ಸಂಪ್ರದಾಯದ ಮೂಲಕ ಎಲ್ಲರ ಮುಂದೆ ಒಂದಾಗೋಕೆ ಅಲ್ವೆ ಲವ್ ಮಾಡೋದು, ಯಾಕೆ ನೀವು ದೊಡ್ಡವರು ಒಪ್ಪಿಗೆ ನೀಡೋಲ್ಲ, ಇಂತಹ ಸಾವುಗಳಿಗೆ ದೊಡ್ಡವರೆನಿಸಿಕೊಂಡ ನೀವುಗಳೇ ಕಾರಣ’
‘ನಮ್ಮ ಸಂಬಂಧಿಕರಲ್ಲೇ ನೂರಾರು ಜನರಿರುವಾಗ ಯಾರ್ಯಾರನ್ನೋ ಕರೆದುಕೊಂಡು ಬಂದುಬಿಟ್ಟರೆ ಅಪ್ಪ ಅಮ್ಮ ಒಪ್ಪಿಕೊಳ್ಳೋದಾದರೂ ಹೇಗೆ?’
‘ವಾಟ್ ಇಸ್ ದಿಸ್ ಡಾಕ್ಟರ್? ಬಿಯಿಂಗ್ ಎನ್ ಎಜುಕೇಟೆಡ್, ನೀವೂ ಈ ರೀತಿ ಹೇಳೋದೆ?’
‘ನಾವು ಅಷ್ಟು ಕಷ್ಟ ಪಟ್ಟು ಬೆಳೆಸಿರ್ತೀವಿ, ಕೊನೆಗೆ ಅವರು ಕೊಟ್ಟು ಹೋಗೋ ನೋವು ಯಾವ ಶತ್ರುವಿಗೂ ಬೇಡ’
‘ಅವರು ನೋವು ಕೊಟ್ಟರು, ಆ ನೋವಿಗೆ ಕಾರಣವನ್ನು ಹುಡುಕಿಕೊಂಡು ಹೋದಾಗ, ಆ ಎಲ್ಲಾ ಕಾರಣಗಳಿಗೆ ನೀವೇ ಕಾರಣರಾಗಿರುತ್ತೀರಿ’
‘ಕಾರಣವೇನೇ ಇರಲಿ, ಹೆತ್ತು ಹೊತ್ತು ಸಾಕಿದವರಿಗೆ ನೋವು ಕೊಡುವುದು ದುರುಳತನ’
‘ಅವರು ನೋವು ಕೊಟ್ಟರು ಎಂದುಕೊಳ್ಳೋಣ, ಬದಲಾಗಿ ಅವರನ್ನು ಕಷ್ಟಪಟ್ಟು ಬೆಳೆಸಿ ನೀವು ಕೊಟ್ಟದ್ದು ಸಾವು, ಎರಡಡಿ ಮಗುವನ್ನು ಐದಡಿ ಮನುಷ್ಯನನ್ನಾಗಿ ನೀವು ಮಾಡಿರಬಹುದು, ಆದರೆ, ಆ ಮನುಷ್ಯ ಇನ್ನೆರಡು ದಿನಗಳಲ್ಲಿ ಕೊಳೆತುಹೋಗುವ ಹಳಸಲು ವಸ್ತುವಾದದ್ದೆಷ್ಟು ಸರಿ?’
ಡಾ.ಶರ್ಮಾ ಯಾಕೋ ಬೆವರಲು ಪ್ರಾರಂಭಿಸಿದರು. ಕೈಗೆ ಹಾಕಿಕೊಂಡಿದ್ದ ಗ್ಲೌಸ್ ಕಿತ್ತು ಬಿಸಾಡಿ ಕರ್ಚಿಫ್ ಒದ್ದೆಯಾಗುವವರೆವಿಗೂ ಮೈ ಒರೆಸಿಕೊಂಡರು. ಯಾಕೋ ಸುಸ್ತಾಗಿ ಕಂಡ ಶರ್ಮಾ ತಣ್ಣನೆಯ ಗಾಳಿಗೋಸ್ಕರ ಕಿಟಕಿ ತೆರೆದರು, ಒಮ್ಮೆಲೆ ಒಳನುಗ್ಗಿದ ಗಾಳಿಗೆ ಮನಸ್ಸು ಮೈ ಸ್ವಲ್ಪ ನಿರಾಳವಾಯಿತು. ಅವರು ಬಂದ ಪ್ರಾರಂಭದಲ್ಲಿ ಆಸ್ಪತ್ರೆಯ ಸುತ್ತಲೆಲ್ಲಾ ಒಣ ಹುಲ್ಲು ತುಂಬಿಕೊಂಡ ಜಾಗವಿತ್ತಷ್ಟೇ. ಆದರೆ, ಸಸ್ಯಪ್ರಿಯರಾದ ಶರ್ಮಾ ಬಂದ ಮೇಲೆ ಇಲ್ಲೆಲ್ಲಾ ಹಸಿರು ತುಂಬಿಕೊಂಡಿತ್ತು. ಹಸಿರು ಹಾಸಿಗೆಯ ನಡುವೆಯೇ ಹೆಣ ಕೊಯ್ಯುವ ಈ ಮನೆಯಿತ್ತು. ಆದರೆ ಇಂದೇಕೋ ಬೆಳಗ್ಗೆಯಷ್ಟೇ ನೀರುಂಡಿದ್ದ ಹಸಿರೆಲ್ಲಾ ಒಣಗಿಹೋಗಿದ್ದವು. ಆಗಸದ ತುಂಬೆಲ್ಲಾ ಮಾಂಸ ಕಿತ್ತು ತಿನ್ನುವ ರಣಹದ್ದುಗಳ ಶಬ್ದ.
ಸೂರ್ಯನ ಬಿಸಿ ಬೆಳಕು ಶರ್ಮಾರಿಗೆ ತಾಕಲಿಲ್ಲ. ಆಶ್ಚರ್ಯವಾಯಿತು, ಕಿಟಕಿ ತೆರೆಯುವ ರಭಸಕ್ಕೆ ಆತ ಕೆಳಗೆ ಬಿದ್ದುಹೋಗಿಬಿಟ್ಟನೆ ಎಂದುಕೊಂಡವರು ಕಿಟಕಿಲ್ಲಿಣುಕಿದರು. ಹೆಣದ ಮನೆಯ ಗೋಡೆ ಅಡ್ಡಬಂದು ಆತ ಕಾಣಲಿಲ್ಲ. ‘ನೀನೆಂತ ದೇವನು? ಕಷ್ಟಕಾಲದಲ್ಲಿಯೇ ಓಡಬೇಕೆ?’ ಎಂದುಕೊಂಡರು. ಗೋಡೆ ಮೇಲೆ ತೂಗು ಹಾಕಿದ್ದ ಮಗುವಿನ ಫೋಟೋವೊಂದು ಸುಮ್ಮನೇ ನಗುತ್ತಿತ್ತು. ಈ ಹೆಣವನ್ನು ಮಗುವಾಗಿ ಹೆತ್ತ ಆ ತಾಯಿಯೇ ಈ ಸಾವಿಗೆ ಕಾರಣವಾದಳೇ ಎಂದುಕೊಳ್ಳುವಷ್ಟರಲ್ಲಿ ಈ ಹೆಣವನ್ನು ಹೆತ್ತ ತಾಯಿಯ ಗೋಳು ಜೋರಾಗಿ ಕಿವಿಗಪ್ಪಳಿಸುತ್ತಿತ್ತು. ಡಾಕ್ಟರ್ ಶರ್ಮಾ ಆ ತಾಯಿಯ ಮುಖ ನೋಡಲಿಲ್ಲ. ಕರ್ತವ್ಯನಿಷ್ಠೆ ಎನ್ನುವುದಕ್ಕಿಂತ ತಮ್ಮನ್ನು ತಾವು ಬಗೆಸಿಕೊಳ್ಳಲು ಆ ಕ್ಷಣಕ್ಕೆ ಕಾದು ಕುಳಿತಿದ್ದ ಮತ್ತೆರಡು ಹೆಣಗಳು ಡಾ. ಶರ್ಮಾರವನ್ನು ಕೂಗಿಕೊಂಡವು.
ಎಲ್ಲವನ್ನೂ ಮರೆತ ಡಾ. ಶರ್ಮಾ ಹೆಣ ಕೊಯ್ಯಲು ಗ್ಲೌಸ್ ಹಾಕಿಕೊಂಡವರೇ ‘ನಿನ್ನ ಸಹಾಯ ಇಂದೆನಗೆ ಬೇಕಾಗಿಲ್ಲ, ಹೆಣವನ್ನು ನಾನೇ ಕೊಯ್ದುಬಿಡುತ್ತೇನೆ, ರಿಪೋರ್ಟ್ ತಯಾರು ಮಾಡುವಾಗಷ್ಟೇ ಸಹಾಯ ಮಾಡಿದರಷ್ಟೇ ಸಾಕು, ಹೆಣ ಕೊಯ್ದು ಮುಗಿಸುವವರೆವಿಗೂ ನೀನು ಏನು ಮಾತನಾಡದೆ ನಿಂತುಕೊಂಡರೆ ಉಪಕಾರವಾದೀತು’ ಎಂದು ಡಾ. ನಂದೀಶ್ರವರನ್ನು ಕೇಳಿಕೊಂಡರು. ಸರಿಯೆಂದು ತಲೆಯಾಡಿಸಿದ ನಂದೀಶ್ ಯಾಕೋ ತೀರ ಸಪ್ಪೆಯಾದಂತೆ ಕಂಡು ಬಂದರು. ಗೋಡೆಗೆ ಭುಜ ತಾಕಿಸಿಕೊಂಡು ಸುಮ್ಮನೆ ನಿಂತುಬಿಟ್ಟರು.
ಒಮ್ಮೆ ದೀರ್ಘ ಉಸಿರನ್ನೆಳೆದುಕೊಂಡು ಎಲ್ಲವನ್ನೂ ಮರೆತ ಡಾ. ಶರ್ಮಾ ಹೆಣದ ಒಪ್ಪಿಗೆಯ ಕೊಲೆಗೆ ನಿಂತರು. ಹರಿತವಾಗಿ ಹರಿದುಕೊಂಡು ಬಂದ ಚಾಕು ಆ ಹಚ್ಚೆಯ ಮೇಲೆ ತನ್ನ ತುದಿ ಸೋಕಿಸಿತು. ಹೃದಯದ ಚಿತ್ರ ಸ್ವಲ್ಪ ಸೀಳಿಕೊಂಡು ‘ಚಿತ್ರ’ ಎಂಬ ಹೆಸರನ್ನು ನುಂಗುವಷ್ಟರಲ್ಲಿ ಶರ್ಮಾ ತಮ್ಮ ಕೈಯನ್ನು ಹಿಂದಕ್ಕೆಳೆದುಕೊಂಡು ಕೇಳಿದರು ‘ನಂದೀಶ್, ಈ ದೇಹದೊಳಗಿದ್ದ ಜೀವ ಆತ್ಮಹತ್ಯೆಯ ನೆಪದಲ್ಲಿ ತನ್ನನ್ನು ತಾನು ಈ ಜಂಜಡಗಳಿಂದ ಮುಕ್ತಗೊಳಿಸಿಕೊಂಡದ್ದಕ್ಕೆ ನೀವು ಹೆತ್ತವರೇ ಕಾರಣ ಎಂದಿರಿ. ಅದಕ್ಕಿಂತ ಮುಂಚೆ ಈ ಹೆಸರು ಆತನ ಲವರ್ ದಿರಬಹುದು ಆಕೆ ಬೇರೆ ಮದುವೆ ಆದದ್ದೇ ಕಾರಣ ಎಂದಿರಿ, ಎರಡರಲ್ಲಿ ಯಾವುದು ಸತ್ಯ?’
ಏನೂ ಮಾತನಾಡುವುದು ಬೇಡ ಎಂದ ಶರ್ಮಾರೇ ಮತ್ತೆ ಮಾತನಾಡಿದ್ದರು.
ಡಾ.ನಂದೀಶ್: ‘ಎರಡೂ ಸತ್ಯ ಡಾಕ್ಟರ್’
‘ಎರಡೂ ಸತ್ಯವಾಗಿದ್ದರೆ, ಆಕೆಯೇನು ಹುಟ್ಟಿನಿಂದ ಜೊತೆ ಇದ್ದವಳಲ್ಲ ಅಲ್ಲವೇ? ಆಕೆಯ ಕೆಟ್ಟ ಕೆಲಸಕ್ಕೆ ಈತ ಛಲದಿಂದ ಬದುಕಿ, ಹೆತ್ತವರನ್ನು ಸಾಕಿಕೊಳ್ಳಬೇಕಾಗಿತ್ತು, ದಿಸ್ ಇಸ್ ಟೂ ಮಚ್’ ಶರ್ಮಾರವರ ಮುಖದಲ್ಲಿ ಕೋಪವಿತ್ತು.
ಡಾ.ನಂದೀಶ್: ‘ಆಕೆ ಬೇರೆ ಮದುವೆಯಾಗಲು, ಈತನ ಹೆತ್ತವರೇ ಕಾರಣ ಡಾಕ್ಟರ್’
ಡಾ.ಶರ್ಮಾ: ‘ಹೆತ್ತವರು ಮೋಸ ಮಾಡುವುದಿಲ್ಲ ಅಲ್ಲವೇ?’
ಡಾ.ನಂದೀಶ್: ‘ಇಂತಹ ಘಟನೆಗೆ ಹೊಣೆಯಾಗಿ ತಾವು ಮೋಸ ಮಾಡುತ್ತಿಲ್ಲವೆಂಬುದು ಅವರ ಭ್ರಮೆ’
ಮುಖ ಕೆಂಪು ಮಾಡಿಕೊಂಡ ಶರ್ಮಾ, ನಂದೀಶ್ ಕಡೆಗೆ ತಾತ್ಸಾರದಿಂದ ನೋಡಿ ಕೇಳಿದರು
‘ಹೇಗೆ ಇಲ್ಲಿ ಹೆತ್ತವರು ಹೊಣೆ? ಹೆತ್ತವರನ್ನು ಪ್ರಪಂಚವೇ ಕೊಂಡಾಡುವಾಗ ನಿಮ್ಮದು ಅತಿರೇಕ, ಅಹಂಕಾರದ ಮಾತು ನಂದೀಶ್, ಐ ಎಂ ಸಾರ್ರಿ’
‘ಪ್ರಪಂಚವೇ ಕೊಂಡಾಡುವ ಅನೇಕ ವಿಚಾರಗಳು ಕೇವಲ ಭ್ರಮೆಯಷ್ಟೇ ಸರ್’
‘ಹೇಗೆ?’
‘ಈ ಹೆಣದಲ್ಲಿ ಜೀವವಿತ್ತು, ಏನೋ ಒಂದು ಇದರ ಕೈಕಾಲನ್ನು ಅಲುಗಾಡಿಸುತ್ತಿತ್ತು. ಈಗ?’
‘ಜೀವವಿಲ್ಲ’
‘ನೀವು ನೋಡಿದ್ದೀರಾ? ಈ ಹೆಣವನ್ನು ಕೊಯ್ಯುವ ಈ ಚಾಕು ಚೂರಿ ಕಾಣಬಹುದು, ಆದರೆ, ಆ ಜೀವ?’
‘ಏನೋ ಒಂದು ಒಳಗಿತ್ತು ಅಷ್ಟೇ’
‘ಹಾಗೆಯೇ, ಇಂದಿನ ಮುಗ್ಧ ಜನ ಒಪ್ಪಿಕೊಂಡು ತಮ್ಮ ದೇವರ ಕೋಣೆಯಲ್ಲಿ ಮಡಿಯಂತೆ ಪೂಜಿಸುತ್ತಿರೋ ಅದೆಷ್ಟೋ ವಿಚಾರಗಳು ಕೇವಲ ಭ್ರಮೆ ಸರ್, ಸನಾತನ ಕಾಲದಲ್ಲಿ ಏನೋ ಇತ್ತು ಎಂದು ತಲೆ ಬಾಗಿದ್ದಾರೆ ಅಷ್ಟೆ, ಸಾಕ್ಷಿ ಸಮೇತ ಹುಡುಕುವ ತಾಳ್ಮೆ ಮತ್ತು ಬುದ್ಧಿವಂತಿಕೆ ಅವರಿಗಿಲ್ಲ, ಕಾಣದ ವಿಚಾರಗಳು ಇಂದು ಕಾಣುತ್ತಿರುವ ವಿಚಾರಗಳನ್ನ ವಿಕಾರಗೊಳಿಸುತ್ತಿವೆ’
‘ಅರ್ಥವಾಗಲಿಲ್ಲ ನಂದೀಶ್’
‘ದೊಡ್ಡವರೆನಿಸಿಕೊಂಡವರಿಗೆ ಇವೆಲ್ಲಾ ಅರ್ಥವಾಗುವುದಿಲ್ಲ ಸರ್, ಕ್ಷಮಿಸಿ, ದೊಡ್ಡವರು ದೊಡ್ಡವರಂತೆ ವರ್ತಿಸುವುದಿಲ್ಲ, ನಿಮ್ಮಂತಹವರ ಮುಂದೆ ನಾವು ಚಿಕ್ಕವರು ಚಿಕ್ಕವರಂತೆ ವರ್ತಿಸುವುದಿಲ್ಲವೆಂಬುದೇ ಈ ಪ್ರಪಂಚದ ದುರಂತ’
ಗೋಣನ್ನು ಮುರಿದುಕೊಂಡು ತಲೆ ಬಾಗಿಸಿಕೊಂಡಿದ್ದರೂ ಡಾ. ನಂದೀಶ್ರ ಕಣ್ಣಿನಿಂದ ಜಾರಿದ ಹನಿ ದಪ್ಪವಾಗಿತ್ತು, ಒಮ್ಮೆಲೆ ಒಂದರ ಹಿಂದಂತೆ ಒಂದಾಗಿ ಹತ್ತಾರು ಹನಿಗಳು ತೊಟ್ಟಿಕ್ಕಿದ್ದವು. ಮುಖವನ್ನು ತಗ್ಗಿಸಿಕೊಂಡು ಡಾ. ನಂದೀಶ್ ಜೇಬಿಗೆ ಕೈ ತುರುಕಿ ಕರ್ಚಿಫ್ ಎಳೆದುಕೊಂಡಿದ್ದರು. ಅಷ್ಟಕ್ಕೇ ಸೂರ್ಯ ಬಂದು ಕಿಟಕಿಯ ಬಳಿ ಕುಳಿತಿದ್ದ. ಪ್ರಪಂಚವನ್ನೇ ಬೆಳಗಿ ಕಾಣುವ ಸೂರ್ಯದೇವನಿಗಾದರೂ ಸರಿಯಾದ ಕಾರಣ ಗೊತ್ತಿರಬಹುದೇನೋ ಎಂದುಕೊಂಡ ಶರ್ಮಾ ಆತನನ್ನೇ ಕೇಳಿದರು. ಆತ ಖಡಕ್ಕಾಗಿ ಗೊತ್ತಿಲ್ಲವೆಂದು ತಲೆಯಾಡಿಸಿದ. ಆತನದು ಸುಡುವ ಮೈಯಾದರೂ ಶತ ಶತಮಾನಗಳಿಂದ ಎಲ್ಲಾ ಗೊಂದಲಗಳನ್ನು ನೋಡಿಯೂ ತುಟಿ ತೆರೆಯದ ಮೌನಮನಸ್ಸು.
‘ಏನಾಯಿತು ನಂದೀಶ್’ ಶರ್ಮಾ ಕೇಳಿಕೊಂಡರು
‘ಏನಿಲ್ಲಾ ಸರ್, ಬೇಗ ಕೆಲಸ ಮುಗಿಸಿಬಿಡೋಣ’
ಆಗಲಿ ಎಂದ ಶರ್ಮಾ ಚಿತ್ರ ಎಂಬ ಹೆಸರಿಗೆ ಚುಚ್ಚಿಬಿಟ್ಟರು.
ಹೆಣದ ರಕ್ತ ಜಿನುಗಿತು.
ಡಾ. ಶರ್ಮಾರ ಮನಸ್ಸು ಇದ್ದಕ್ಕಿದ್ದಂತೆ ಬೆಚ್ಚಿತು, ಕೈಯಿಂದ ಚಾಕು ಜಾರಿಕೊಂಡಿತು. ಈ ರೀತಿಯಾಗಿ ಎಷ್ಟು ಬಿಂದಿಗೆ ರಕ್ತ ನೋಡಿಲ್ಲ ಅವರು!
ಈ ಹೆಣದ ರಕ್ತ ಕೆಂಪು, ಮುಂಜಾನೆ ಬೆರಳು ಕೊಯ್ದುಕೊಂಡ ಶರ್ಮಾರ ಮಗನ ರಕ್ತವೂ ಕೆಂಪು.
ಗ್ಲೌಸ್ ಕಿತ್ತು ಬಿಸಾಡಿ ನಡುಗುತ್ತಿದ್ದ ಕೈಗಳು ಮೊಬೈಲ್ಗೋಸ್ಕರ ತಡಕಾಡಿದವು.
ಮೊಬೈಲ್ ಆಸ್ಪತ್ರೆಯಲ್ಲಿಯೇ ಉಳಿದುಕೊಂಡಿರುವುದು ನೆನಪಾಗಿ ತರಲು ಜವಾನನಿಗೆ ಹೇಳಿದರು.
ಪೋಸ್ಟ್ ಮಾರ್ಟಂನ ಉಳಿದರ್ಧ ಕೆಲಸವನ್ನು ನಂದೀಶ್ ಮುಂದುವರೆಸಬಹುದು ಎಂದು ಶರ್ಮಾ ಅಂದುಕೊಂಡರೂ ನಂದೀಶ್ ಯಾಕೋ ಭಾವುಕರಾಗಿ ನಿಂತಿದ್ದರು.
ಕರ್ತವ್ಯ ಪ್ರಜ್ಞೆ ಮತ್ತು ಹೆಣದ ವಾರಸುದಾರಿಕೆಯ ಗೋಳಾಟ ಅವರನ್ನು ಕೂಗಿಕೊಂಡವು.
ಮತ್ತೆ ಚಾಕು ಕೈಗೆತ್ತಿಕೊಂಡರು.
‘ಡಾ. ನಂದೀಶ್, ಏನೇ ಆಗಲಿ ಆ ಹುಡುಗಿ ಆತನನ್ನು ಬಿಟ್ಟು ಹೋಗಬಾರದಾಗಿತ್ತು’ ಎಂದು ಹೇಳಿದ ಶರ್ಮಾರ ಮನಸ್ಥಿತಿಯಲ್ಲೇನೋ ಚೂರು ಬದಲಾವಣೆ ಕಂಡಂತನಿಸಿತು.
‘ಆಕೆ ಬಿಡಲಿಲ್ಲ ಡಾಕ್ಟರ್, ಅನ್ಯ ಜಾತಿ ಕಾರಣದಿಂದ ಆಕೆಯನ್ನು ಯಾರಿಗೋ ಬಲವಂತವಾಗಿ ಕಟ್ಟಿ ಬಲತ್ಕಾರಗೊಳಿಸಿದ್ದಾರೆ’ ಎಂದರು ನಂದೀಶ್.
‘ಬಲತ್ಕಾರ? ಯೂ ಮೀನ್ ರೇಪ್?’ ಶರ್ಮಾ ಕಣ್ಣುಗಳು ಅಗಲವಾಗಿ ಹುಬ್ಬಿನ ಕೂದಲು ನೆಟ್ಟಗಾಗಿತ್ತು.
‘ಯೆಸ್ ಡಾಕ್ಟರ್, ಮನಸ್ಸು ಒಪ್ಪದಿದ್ದರೆ ಅದು ರೇಪ್ ಅಲ್ಲವೇ?’ ಎಂದು ಹೇಳಿ ನಂದೀಶ್ ಮತ್ತೆ ಮೌನವಾದರು.
ಕಿಟಕಿಯಿಂದ ತಂಗಾಳಿ ಬೀಸುತ್ತಿದ್ದರೂ ಡಾ.ಶರ್ಮಾ ಯಾಕೋ ಹೆಚ್ಚು ಹೆಚ್ಚು ಬೆವೆತುಕೊಳ್ಳುತ್ತಿದ್ದರು. ಮಾತು ಮುಂದುವರೆಸಿದ ಶರ್ಮಾ ಏನನ್ನೋ ನೆನಪಿಸಿಕೊಂಡು ಕೂಡಲೇ ಕೇಳಿದರು ‘ಮೊನ್ನೆ ಮೊನ್ನೆ ಬಂದಿದ್ದ ಇದೇ ರೀತಿಯ ಕೇಸಿನಲ್ಲಿ ಜಾತಿ ಒಂದೇ ಆಗಿತ್ತಲ್ಲವೇ?’
‘ಅಲ್ಲಿ ಮನೆದೇವರುಗಳು ಬೇರೆ ಬೇರೆ ಎಂಬ ಕಾರಣವಿತ್ತು’ ಡಾ. ನಂದೀಶ್ ಹೇಳಿದರು.
ಡಾ. ಶರ್ಮಾ ಅವಾಕ್ಕಾದರು.
ಪ್ರಪಂಚದ ಒಡಕಿಗೆ ದೇವರು ಎಂಬುದೂ ಒಂದು ಕಾರಣವೇ?
ಸೂರ್ಯದೇವನನ್ನೇ ಕೇಳಿಬಿಡೋಣವೆಂದು ಕಿಟಕಿಯ ಕಡೆ ತಿರುಗಿದರು.
ಆದರೆ ಆತ ಜಾಗ ಖಾಲಿ ಮಾಡಿದ್ದ.
ಮಾತು ಮುಂದುವರೆಸಿದ ನಂದೀಶ್ ‘ಒಂದೇ ದೇವರಾದರೆ, ಬೇರೆ ಬೇರೆ ಜಾತಕವೆಂಬ ತೊಂದರೆ, ಅದೂ ಒಂದೇ ಆದರೆ ವರದಕ್ಷಿಣೆ, ಮೈಬಣ್ಣ, ಆಸ್ತಿ, ಅಂತಸ್ತು... ಹೀಗೆ ತೊಂದರೆ ತೊಂದರೆ. ಒಟ್ಟಿನಲ್ಲಿ ಈ ಪ್ರಪಂಚಲ್ಲಿ ಜನಸಂಖ್ಯೆಗಿಂತ ತೊಂದರೆಗಳ ಸಂಖ್ಯೆಯೇ ಹೆಚ್ಚು’ ಎಂದರು.
‘ಹಾಗಾದರೆ, ಈ ತೊಂದರೆ ಎಲ್ಲಿಯವರೆವಿಗೆ?’ ಶರ್ಮಾ ಕೇಳಿದರು.
‘ಈ ರೀತಿಯ ಹೆಣ ಬೀಳುವವರೆವಿಗೆ ಡಾಕ್ಟರ್, ತೊಂದರೆಗೆ ಕಾರಣವಾದವರೇ ಹೆಣವಾಗಿಬಿಟ್ಟರೆ ಈ ಪ್ರಪಂಚದಲ್ಲಿ ಎಲ್ಲವೂ ಶೂನ್ಯ’ ನಂದೀಶ್ ಭಾವುಕರಾಗಿ ನುಡಿದರು.
ಅಷ್ಟರಲ್ಲಿ ಜವಾನ ಹೆಣವನ್ನು ಹೊಲೆದು ಬಿಳಿಬಟ್ಟೆಯಲ್ಲಿ ಮುದ್ದೆ ಕಟ್ಟಿ ಇಟ್ಟಿದ್ದ.
ನೂರಾರು ಹೆಣಗಳನ್ನು ಕೊಯ್ದಿದ್ದ ಅನುಭವವಿದ್ದ ಈ ಇಬ್ಬರು ಡಾಕ್ಟರುಗಳಿಗೆ ಇಂದು ಹೆಣವನ್ನು ನೋಡಲು ಯಾಕೋ ಧೈರ್ಯ ಸಾಲಲಿಲ್ಲ.
‘ಇಷ್ಟೆಲ್ಲಾ ನೋವು ಕಾರಣಗಳಿಂದ ಈತ ಹೆಣವಾಗಿ ಬಿದ್ದಿರಬಹುದು, ಆದರೆ ಯಾರನ್ನೋ ಮದುವೆಯಾಗಿ ಬಲವಂತವಾಗಿ ಬಾಳುತ್ತಿರುವ ಆ ಹುಡುಗಿ ಈ ಸಾವಿನಿಂದ ಸುಖವಾಗಿರಬಲ್ಲಳೇ?’ ಶರ್ಮಾ ಮತ್ತೆ ಮಾತನಾಡಿದರು.
‘ಯಾರಿಗ್ಗೊತ್ತು ಡಾಕ್ಟರ್? ಆಕೆಯೂ ಮುಂದೊಮ್ಮೆ ತನ್ನ ಒಪ್ಪಿತ ಕೊಲೆಗಾಗಿ ಹೀಗೆ ಬಂದು ಮಲಗಬಹುದು’ ಎಂಬ ಮಾತು ಡಾ. ನಂದೀಶ್ ಕಡೆಯಿಂದ ಚಿಮ್ಮುತ್ತಿದ್ದಂತೆ ಡಾ. ಶರ್ಮಾ ಮತ್ತೆ ಬೆವೆತುಕೊಂಡರು. ತೂಗು ಹಾಕಿದ್ದ ಫೋಟೋ ನೋಡಿದರು. ಮಗು ನಗುತ್ತಿತ್ತು. ಈ ಹೆಣವನ್ನು ಮಗುವಾಗಿ ಹೆತ್ತಿದ್ದ ತಾಯಿಯ ಗೋಳು ಕಿವಿಗೆ ಬಡಿಯುತ್ತಿತ್ತು. ಆಕೆ ಮಗುವಾಗಿ ಹೆತ್ತಿದ್ದ ದೇಹ, ಇಂದು ಇಷ್ಟು ಬೆಳೆದರೂ ತನ್ನನ್ನು ತಾನು ಹರಿದುಕೊಂಡು ಮುದ್ದೆಯಾಗಿ ಮಲಗಿತ್ತು. ಹಾಲುಣಿಸಿದ ತಾಯಿಗೆ ತನ್ನ ಮಗುವನ್ನು ಉಳಿಸಿಕೊಳ್ಳಲಾಗಲಿಲ್ಲ. ಇಲ್ಲಿ ಸಾವಿಗೆ ಕಾರಣವಾದ ವಿಚಾರಗಳು ಬದುಕದಿರಲು ಕಾರಣಗಳೇ ಅಲ್ಲ. ಆ ತಾಯಿ ಹೆತ್ತ ಮಗುವಿನಲ್ಲಿದ್ದ ಪಕ್ವತೆ ಆಕೆಗೆ ಸಿಕ್ಕಿರಲಿಲ್ಲ.
‘ಹೆಣ ಅಳುತ್ತಿರುವಂತೆ ಕಾಣುತ್ತಿದೆ ಡಾಕ್ಟರ್’, ಜವಾನ ಅಪರೂಪಕ್ಕೆ ಈ ಮಾತುಗಳನ್ನು ಹೇಳಿದ. ಡಾ. ಶರ್ಮಾ ಕೂಡಲೇ ಜವಾನನ ಬಳಿಯಿದ್ದ ತಮ್ಮ ಮೊಬೈಲ್ ತೆಗೆದುಕೊಂಡು ಮನೆಗೆ ಫೋನಾಯಿಸಿ ತಮ್ಮ ಮಗನ ಆರೋಗ್ಯ ವಿಚಾರಿಸಿಕೊಂಡವರೇ ‘ಆತನಿಗೆ ಇಷ್ಟವಾದ ಹುಡುಗಿಯ ಜೊತೆಯಲ್ಲಿಯೇ ಮದುವೆ ಮಾಡಿಬಿಡೋಣ, ಆ ಹುಡುಗಿಯ ಮನೆಗೆ ಫೋನಾಯಿಸಿ ದುಡುಕದಿರಲು ಹೇಳು, ಹಾಗೆಯೇ ಮಗಳಿಗೂ ‘ಅಪ್ಪ ಇದ್ದಾರೆ, ಧೈರ್ಯದಿಂದಿರು’ ಎಂದು ಹೇಳು’ ಎಂದು ಹೇಳಿ ಫೋನ್ ಕಟ್ ಮಾಡಿದರು. ಡಾ. ನಂದೀಶ್ ಮಾತ್ರ ಯಾವುದೋ ಫೋಟೋ ನೋಡಿಕೊಂಡು ಕಣ್ಣೀರಿಡುತ್ತಿದ್ದರು. ಅವರ ಕಣ್ಣಿಂದ ಜಾರಿದ್ದ ಹನಿ ಫೋಟೋದ ಮೇಲೆ ಬಿದ್ದು ಫೋಟೋದಲ್ಲಿರುವಾಕೆಯೂ ಅಳುತ್ತಿದ್ದಾಳೇನೋ ಎಂದೆನಿಸುತ್ತಿತ್ತು. ಮುಂಜಾನೆ ಪ್ರಖರವಾಗಿ ಹುಟ್ಟಿದ್ದ ಸೂರ್ಯ ಪಶ್ಚಿಮದ ಮಡಿಲಲ್ಲಿ ಸತ್ತುಹೋದ. ಹೆಣದ ಮನೆ ಮಾತ್ರ ನಿರ್ವಾತಗೊಂಡಂತೆನಿಸಿ ಮೌನಕ್ಕೆ ಶರಣಾಯಿತು.
Comments
ಪೋಸ್ಟ್ ಮಾರ್ಟಮ್ ಕಥೆ ಚೆನ್ನಾಗಿದೆ
ಧನ್ಯವಾದಗಳು ಸರ್... ಆ ಜಾಗದಲ್ಲಿ
ಧನ್ಯವಾದಗಳು ಸರ್... ಆ ಜಾಗದಲ್ಲಿ
ಮೋಹನ್ ವಿ ಕೊಳ್ಳೆಗಾಲ ರವರೆ
ಧನ್ಯವಾದ ಪಾರ್ಥ ಸರ್... ನಿಮ್ಮ
ಧನ್ಯವಾದಗಳು... :)