ಕಗ್ಗತ್ತಲ ನಡುವೆ ಬೆಳ್ಳಿಯ ಗೆರೆ

ಕಗ್ಗತ್ತಲ ನಡುವೆ ಬೆಳ್ಳಿಯ ಗೆರೆ

ಬರಹ

- ನಗೆ ಸಾಮ್ರಾಟ್


 

ತುಂಬಾ ದಿನಗಳಿಂದ ನಮ್ಮ ಕನ್ನಡದ ಪತ್ರಿಕಗಳನ್ನು, ಸುದ್ದಿ ವಾಹಿನಿಗಳನ್ನು ಗಮನಿಸುವುದನ್ನು ಮರೆತು ನಾವು ಇಂಗ್ಲೀಷ್ ಪೇಪರನ್ನು, ಟಿವಿ ಚಾನೆಲ್ಲುಗಳನ್ನು ಹುಚ್ಚರಂತೆ ಗಮನಿಸುತ್ತಿದ್ದೆವು. ಕಾರಣವಿಷ್ಟೇ, ಎಲ್ಲದರೂ ಒಂದೇ ಒಂದು ಕ್ಷಣಕ್ಕಾದರೂ ಬೆಳಕಿನ ಕಿರಣಗಳು ಮೂಡಬಹುದೇನೋ ಎಂದು!


 

ಇಡೀ ದೇಶವೇ ಸಮೂಹ ಸನ್ನಿಯ ಕಪಿಮುಷ್ಟಿಯಲ್ಲಿ ನರಳುತ್ತಿರುವುದನ್ನು,ನಮ್ಮ
ಸುತ್ತ ಮುತ್ತಲಿನ ಜನರೆಲ್ಲರೂ ಯಾವುದೋ ಹಿಪ್ನಾಟಿಸಂಗೆ ಒಳಗಾದವರಂತೆ
ವರ್ತಿಸುತ್ತಿರುವಾಗ ಈ ಭೂಮಿಯ ಮೇಲೆ ಆ ದೇವರು ಸ್ಯಾಂಪಲ್ಲಿಗಾಗಿಯಾದರೂ ಇರಲಿ ಎಂದು
ಸೃಷ್ಟಿಸಿದ ವಿವೇಕಿಗಳು ಎಲ್ಲಿಹೋದರು ಎಂದು ಹುಡುಕುತ್ತಿದ್ದೆವು
. ಸಮೂಹ ಸನ್ನಿಗೆ ಬಲಿಯಾಗಿ ನಮ್ಮ ಮಾಧ್ಯಮಗಳೂ ಸಹ ಅವರ ದಿಟ್ಟ ಧ್ವನಿಯನ್ನು, ಸ್ಪಷ್ಟ ನಿಲುವನ್ನು ಪ್ರಕಟಿಸಲು ಹಿಂದೇಟು ಹಾಕಿದವೇನೋ ಎಂದು ಆತಂಕವಾಯ್ತು. ಸಂವಿಧಾನ ಬದ್ಧವಾಗಿ ಬಂದ ವಾಕ್ ಸ್ವಾತಂತ್ರ್ಯಕ್ಕೆ ಈ ಸಾಮೂಹಿಕ ಒಗ್ಗಟ್ಟಿನಿಂದ ಎಲ್ಲಿ ಅಪಾಯವಾಗಿ, ಒಂದು ಮಾತನ್ನು ಸಾರ್ವಜನಿಕವಾಗಿ ಹೇಳುವುದೂ ಅಪರಾಧವಾಗುತ್ತದೆಯೋ ಎಂದು ಕಳವಳಗೊಂಡಿದ್ದೆವು. ಸಾವಿರಾರು ವರ್ಷಗಳಿಂದ ಎಲ್ಲಾ ಬಗೆಯ ವಿರುದ್ಧ ಅಭಿಪ್ರಾಯಗಳನ್ನು, ಎಲ್ಲಾ ವರ್ಗದ ಹಿಪಾಕ್ರಸಿಯನ್ನು ಸಹಿಸಿಕೊಂಡು ಬಂದ ದೇಶ ಈ ಒಂದು ಘಟನೆಯಿಂದ ಎಲ್ಲಿ ಬದಲಾಗಿಬಿಡಬಹುದೋ ಎಂದು ಆತಂಕಗೊಂಡಿದ್ದೆವು. ಎಲ್ಲಕ್ಕಿಂತಲೂ
ಹೆಚ್ಚು ಕಾಡಿದ ಭಯವೆಂದರೆ ‘ಈ ಭೂಮಿಯ ಮೇಲಿರುವ ಆ ಕೆಲವೇ ಕೆಲವು ಶ್ರೇಷ್ಠ ಮೇಧಾವಿಗಳೂ
ಸಹ ಈ ಸಂದರ್ಭದಲ್ಲಿ ಸಮಾಜದ ಭಾವನೆಯನ್ನು ಒಪ್ಪಿಕೊಂಡು ಬಿಟ್ಟವೇ
? ಎನ್ನುವುದಾಗಿತ್ತು.


 

ಮುಂಬೈ
ಎಂಬ ಭಾರತದ ಆರ್ಥಿಕ ರಾಜಧಾನಿಯ ಮೇಲೆ ತನ್ನ ಬೇನಾಮಿ ಸೈನ್ಯದ ಮೂಲಕ ಪಾಕಿಸ್ತಾನವು
ಫಿದಾಯೇ ಯುದ್ಧವನ್ನು ಘೋಷಿಸಿರುವ ಸಂದರ್ಭದಲ್ಲಿ ಇಡೀ ದೇಶಕ್ಕೆ ದೇಶವೇ
ಮತಿಭ್ರಾಂತವಾದಂತೆ ವರ್ತಿಸುತ್ತಿತ್ತು
. ದೇಶದ ಜನಸಮೂಹಕ್ಕೆ ತಾವೇನು ಮಾಡುತ್ತಿದ್ದೇವೆ ಎಂಬುದರ ಅರಿವೇ ಇರಲಿಲ್ಲ. ಮುಂಬೈ ನಗರಿಯನ್ನು ಬಂದರುಗಳ ಮೂಲಕ ಪ್ರವೇಶಿಸಿ  ಹಣದ ಉನ್ಮಾದದ ಪ್ರತೀಕದಂತೆ, ವಾಕರಿಕೆ ತರಿಸುವ ಶ್ರೀಮಂತಿಕೆಯ ಅಮಲಿನ ಸಂಕೇತದಂತೆ, ಬಡವರ ರಕವ ಹೀರುವ ಆಕ್ಟೋಪಸ್ಸುಗಳ ನಕಲಿನಂತೆ ಕಾಣುವ ತಾಜ್ , ಒಬೆರಾಯ್ ಹೊಟೇಲುಗಳ ಮೇಲೆ ಫಿದಾಯೆ ವೀರರು ದಾಳಿ ಮಾಡಿದರು. ಹಣದ ಮದದಲ್ಲಿ ಮೆರೆಯುತ್ತಿದ್ದ, ಜಾಗತೀಕರಣದ ಪಾಯಸವನ್ನು ಕೆನಯ ಸಮೇತ ಮೆಲ್ಲುತ್ತಿದ್ದ ಶ್ರೀಮಂತ ವರ್ಗಕ್ಕೆ ಬಿಸಿ ಮುಟ್ಟಿಸಿದರು. ಇಂತಹ ಸಾಮ್ರಾಜ್ಯ ಶಾಹಿ ವಿರೋಧಿ ಹೋರಾಟಗಾರರನ್ನು ನೂರು ಕೋಟಿ ಜನರಿರುವ ಭಾರತ ಕಂಡಿದ್ದಾದರೂ ಹೇಗೆ? ದೇಶದ ಜನರನ್ನು ಬಡಿದೆಬ್ಬಿಸಲು ಪ್ರಾಣದ ಹಂಗನ್ನು ತೊರೆದು ಬಂದ ಆ ಯೋಧರನ್ನು ನಮ್ಮ ದೇಶದ ಜನರು ಭಯೋತ್ಪಾದಕರು ಎಂದರು. ಕೊಲೆಗಡುಕರು ಎಂದು ಅಪಮಾನಿಸಿದರು. ಎಲ್ಲೋ ಸಿಕ್ಕುವ ಸ್ವರ್ಗವನ್ನು ಹಾಗೂ ಅಲ್ಲಿನ ಕನ್ಯೆಯರನ್ನು ಪಡೆಯುವುದಕ್ಕಾಗಿ ತಮ್ಮ ಇಪ್ಪತ್ತು, ಇಪತ್ತೊಂದರ ವಯಸ್ಸಿನಲ್ಲೇ ಸಾವಿನ ಕುಣಿಕೆಗೆ ಕತ್ತು ಒಡ್ಡಲು ತಯಾರಾದ ಯುವಕರನ್ನು ರಾಕ್ಷಸರು ಎಂದು ಕರೆದರು. ದೇಶಕ್ಕೆ ದೇಶವೇ ಹುಚ್ಚು ಹಿಡಿದಂತೆ ವರ್ತಿಸಿತು.


 

hypocrite

 

ಇನ್ನು ಹತ್ತು ಮಂದಿ ಅಬೋಧ ಬಾಲಕರು ಇನ್ನೂರು ಮಂದಿಯನ್ನು ಕೊಂದ ಮಾತ್ರಕ್ಕೆ ನಮ್ಮ ಸರಕಾರ ಅಮಾನವೀಯ ಕೆಲಸಕ್ಕಿಳಿಯಿತು. ನರ ಭಕ್ಷಕ ಸೈನ್ಯವನ್ನು ಕರೆಸಿ ಅದರ ರಕ್ತ ಪೀಪಾಸು ಕಮಾಂಡೊಗಳನ್ನು ಛೂ ಬಿಡಲಾಯ್ತು. ಏಳೆಂಟು ಮಂದಿ ಅಮಾಯಕ ಫಿದಾಯೇ ಹೋರಾಟಗಾರರ ಧ್ವನಿಯನ್ನು ಹತ್ತಿಕ್ಕುವುದಕ್ಕೆ ನೂರಾರು ಮಂದಿ ಕ್ರೂರ ಕಮ್ಯಾಂಡೊಗಳನ್ನು ಕರೆಸಲಾಯ್ತು. ವ್ಯವಸ್ಥೆಯ
ಕ್ರೌರ್ಯಕ್ಕೆ ಸಾಕ್ಷಿಯಾಗಿ ಆ ಹತ್ತು ಮಂದಿಯಲ್ಲಿ ಒಂಭತ್ತು ಮಂದಿ ಹೋರಾಟಗಾರರು
ಕಮ್ಯಾಂಡೊಗಳ ಜೀವ ಭಕ್ಷಕ ಬುಲೆಟುಗಳಿಗೆ ಆಹಾರವಾಗಿ ಕಣ್ಮುಚ್ಚಿದರು
. ಇಷ್ಟಕ್ಕೂ ಆ ಘಟನೆಯಲ್ಲಿ ಸತ್ತವರ ಸಾವಿಗೆ ಈ ಒಂಭತ್ತು ಮಂದಿ ಫಿದಾಯೆಗಳೇ ಕಾರಣ ಎನ್ನುವುದಕ್ಕೆ ಏನಿತ್ತು ಸಾಕ್ಷಿ? ಅವರೇ ಕೊಂದರು ಎನ್ನುವುದಕ್ಕೆ ಇದ್ದ ಪುರಾವೆಗಳು ಯಾವುವು? ಒಂದು ವೇಳೆ ಅವರು ತಪ್ಪನ್ನೇ ಮಾಡಿದ್ದರೂ ಅವರನ್ನು ಶಿಕ್ಷಿಸುವುದಕ್ಕೆ ನಮ್ಮ ಸಂವಿಧಾನ ಬದ್ಧ ನ್ಯಾಯಾಂಗ ವ್ಯವಸ್ಥೆಯಿದೆ. ಅವರನ್ನು ಶರಣಾಗುವಂತೆ ಮನವೊಲಿಸಿ ಇಲ್ಲವೇ ಅವರೊಂದಿಗೆ ಮಾತು ಕತೆಗೆ ಕುಳಿತು ಅವರನ್ನು ನ್ಯಾಯಾಂಗದ ತನಿಖೆಗೆ ಒಳಪಡಿಸಬೇಕಿತ್ತು. ಅದು ಬಿಟ್ಟು ಅವರನ್ನು ಅಮಾನವೀಯವಾಗಿ ಕೊಂದು ಬಿಸಾಕುವುದರ ಮೂಲಕ ನಮ್ಮ ಸೈನ್ಯ, ಪೊಲೀಸರು ಹಾಗೂ ಸರಕಾರ ತಾನೆಂಥ ರಕ್ತ ಪೀಪಾಸು ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ.


 

ಆಗುವ
ಅನಿಷ್ಟಕ್ಕೆಲ್ಲಾ ಶನೇಶ್ವರನೇ ಕಾರಣ ಎನ್ನುವಂತೆ ನಮ್ಮ ದೇಶದಲ್ಲಿ ನಡೆಯುವ ಪ್ರತಿಯೊಂದು
ಭದ್ರತೆಯ ಲೋಪಕ್ಕೆ ನೆರೆಯ ಪಾಕಿಸ್ತಾನವನ್ನು ದೂರುವ ಚಟ ನಮಗೆ ತುಂಬಾ ಹಿಂದಿನಿಂದಲೇ ಇದೆ
. ಪಾಪ ಆ ದೇಶ ತಮ್ಮ ದಿಕ್ಕೆಟ್ಟ ರಾಜಕೀಯ, ಬರಗೆಟ್ಟ ಆರ್ಥಿಕತೆ, ಅನಕ್ಷರತೆ, ನಿರುದ್ಯೋಗದಿಂದ ತನ್ನ ತಾನು ರಕ್ಷಿಸಿಕೊಳ್ಳಲು ಒದ್ದಾಡುತ್ತಿದೆ. ಆ ದೇಶದಲ್ಲಿ ಸರಕಾರಕ್ಕೆ ಜನರ ಹಸಿವನ್ನು ತಣಿಸಲು ಸಾಧ್ಯವಾಗಿಲ್ಲ ಇನ್ನು ಅದು ಭಾರತವನ್ನು ಹಾಳು ಮಾಡುವುದಕ್ಕೆ ಇಷ್ಟೆಲ್ಲಾ ಖರ್ಚು ಮಾಡಲು ಸಾಧ್ಯವೇ? ಅಲ್ಲಿನ ಜನರಾದರೂ ತಮ್ಮ ಹಸಿವಿಗಿಂತ ತಮ್ಮ ದ್ವೇಷ ಮುಖ್ಯ ಎಂದು ಎಂದಾದರೂ ಭಾವಿಸಲು ಸಾಧ್ಯವಿದೆಯೇ? ಗೌರವಯುತವಾಗಿ ಈ ದೇಶದಿಂದ ಬೇರೆಯಾದ ನಮ್ಮ ಬಂಧುಗಳು ಅವರು ನಾವು ಅವರನ್ನು ಶತ್ರುಗಳಂತೆ ಕಾಣುವುದು ಅಮಾನವೀಯ. ನಮ್ಮ ಯುದ್ಧ ದಾಹಿ ಸರಕಾರಗಳು, ರಕ್ತಪೀಪಾಸು ಸೈನ್ಯ ಪ್ರತಿಯೊಂದು ಭಯೋತ್ಪಾದಕ ದಾಳಿಗೂ ಪಾಕಿಸ್ತಾನ, ಬಾಂಗ್ಲಾ ದೇಶಗಳನ್ನು ದೂರುತ್ತವೆ.


 

ಇಷ್ಟು ದಿನ ಕೇವಲ ಕೋಮುವಾದಿ ಬಹುಸಾಂಖ್ಯಾತರು ಮಾತಾಡುತ್ತಿದ್ದ ರೀತಿಯಲ್ಲೇ ಇತ್ತೀಚೆಗೆ ಮುಸ್ಲೀಂ ಮುಖಂಡರು, ಎಡಪಂಥೀಯರೂ ಮಾತಾಡಲು ಶುರು ಮಾಡಿದ್ದಾರೆ. ಶಾರುಖ್ ಖಾನ್, ಅಮೀರ್ ಖಾನ್ ರಿಂದ ಹಿಡಿದು ಪ್ರತಿಯೊಬ್ಬ ಮುಸ್ಲಿಂ ಜನಪ್ರಿಯ ವ್ಯಕ್ತಿಗಳು ಭಯೋತ್ಪಾದಕರನ್ನು ಗುಂಡಿಟ್ಟು ಕೊಲ್ಲಿ. ಅವರಿಗೆ ಧರ್ಮವಿಲ್ಲ, ಮಾನವೀಯತೆಯಿಲ್ಲ ಎಂದು ಹೇಳಿಕೆ ಕೊಡುತ್ತಿದ್ದಾರೆ. ಬಹುಸಂಖ್ಯಾತರ ಕೋಮುವಾದದಿಂದ ರೊಚ್ಚಿಗೆದ್ದ, ವ್ಯವಸ್ಥೆಯ ಬಹುಸಂಖ್ಯಾತರ ಓಲೈಕೆಯಿಂದ ಅಭದ್ರತೆ ಒಳಗಾಗುವ ಅಲ್ಪಸಂಖ್ಯಾತರು ಕೋವಿ ಕೈಗೆತ್ತಿಕೊಳ್ಳುತ್ತಾರೆ. ನಮ್ಮ ಸೈನಿಕರ ಹಾಗೆ ಕೊಲ್ಲುವುದಕ್ಕಾಗಿ ಎಂತಲೇ ಗನ್ನು ಕೈಗಿರಿಸಿಕೊಂಡು ತರಬೇತಿ ಪಡೆಯುವಂಥವರಲ್ಲ ಅವರು. ಅವರನ್ನು ಖಂಡಿಸುವ ಮೂಲಕ ಅಲ್ಪಸಂಖ್ಯಾತ ವರ್ಗ ಬಹುಸಂಖ್ಯಾತರ ಬಲೆಗೆ ಬೀಳುತ್ತಿದೆ. ಮುಂಬೈ ಘಟನೆ ನಡೆದ ನಂತರ ದೇಶವಿಡೀ ಕಠಿಣ ಕಾನೂನುಗಳಿಗೆ ಉಗ್ರವಾದ ಕ್ರಮಗಳಿಗಾಗಿ ಸರಕಾರವನ್ನು ಒತ್ತಾಯ ಪಡಿಸುತ್ತಿವೆ. ಪೋಟಾದಂತಹ ಜೀವ ವಿರೋಧಿ, ದುಷ್ಟ
ಕಾನೂನನ್ನು ತೆಗೆದು ಹಾಕಿ ಪ್ರಜ್ಞಾವಂತರಲ್ಲಿ ನೆಮ್ಮದಿಯನ್ನು ಮೂಡಿಸಿದ್ದ ಯುಪಿಎ
ಸರಕಾರ ಸಹ ಒತ್ತಡಕ್ಕೆ ಮಣಿದು ಪೋಟಾದಂತಹ ಕಾಯ್ದೆಯನ್ನು ತರುವ ಬಗ್ಗೆ ಆಲೋಚನೆ
ನಡೆಸುತ್ತಿದೆ
. ಇದು ನಿಜಕ್ಕೂ ದುರದೃಷ್ಟಕರ. ಸಾಯಲು ತಯಾರಾಗಿ ಬರುವ ಹೋರಾಟಗಾರರು ನಮ್ಮ ಕಾಯ್ದೆಗಳಿಗೆ ಹೆದರುತ್ತಾರೆಯೇ? ಇಂತಹ ಕಾಯ್ದೆಗಳಿಂದ ಏನೂ ಉಪಯೋಗವಾಗುವುದಿಲ್ಲ. ಸುಮ್ಮನೆ ಇವನ್ನು ಬಳಸಿಕೊಂಡು ಅಮಾಯಕರನ್ನು ಹಿಂಸಿಸಲಾಗುತ್ತದೆ. ಈಗ ರಾಜ್ಯ ಸರಕಾರಗಳು ಮಾಡಿರುವ ಕೋಕಾ ಕಾನೂನು ಬಳಸಿಕೊಂಡು ಯೂನಿಯನ್ ಮುಖಂಡರನ್ನು ಹಿಂಸಿಸುತ್ತಿರುವುದು ಕಾಣುವುದಿಲ್ಲವೇ?

 

 

ಭಯೋತ್ಪಾದನೆಯ ಬಗ್ಗೆ ಹಿಸ್ಟೀರಿಕ್ ಆಗಿ ದೇಶಕ್ಕೆ ದೇಶವೇ ಆವೇಶದಿಂದ ವರ್ತಿಸುತ್ತಿರುವಾಗ  ಈ ಮೇಲೆ ನಾವು ಕೊಡಮಾಡಿರುವ ವಿವೇಕಯುತವಾದ, ಪ್ರಜ್ಞಾವಂತಿಕೆಯಿಂದ ಕೂಡಿದ ಹೇಳಿಕೆಗಳನ್ನು ನೀಡುವುದಕ್ಕೆ ಯಾರೂ ಮುಂದೆ ಬರದಿದ್ದುದನ್ನು ಕಂಡು ನಾವು ತೀವ್ರವಾಗಿ ಖಿನ್ನರಾಗಿದ್ದೆವು. ಆದರೂ ನಮ್ಮ ದೇಶದ ಗೌರವವನ್ನು, ಮರ್ಯಾದೆಯನ್ನು ಕಾಪಾಡಲು ಒಂಟಿ ಕಾಲಲಿ ನಿಂತು ಶ್ರಮಿಸುತ್ತಿರುವ ಇಂಗ್ಲೀಷ್ ಮಾಧ್ಯಗಳ ಮೇಲೆ ನಾವು ನಂಬಿಕೆಯನ್ನು ಕಳೆದುಕೊಂಡಿರಲಿಲ್ಲ. ಕಡೆಗೂ ಕವಿದ ಕಗ್ಗತ್ತಲ ನಡುವೆ ಬೆಳ್ಳಿಎಯ ರೇಖೆ ಮೂಡಿದೆ. ನಮ್ಮಂತಹ ಸಾವಿರಾರು ಮಂದಿ ಜಾತ್ಯಾತೀತವಾದಿಗಳ, ಪ್ರಗತಿಪರರ, ಹಿಂಸೆ ವಿರೋಧಿಗಳ, ಶಾಂತಿ ದೂತರ, ಅಂತರಾಷ್ಟ್ರೀಯ ಮಾನ್ಯತೆ ಗಳಿಸಿದ ವೀರರ ಧೀಮಂತ ಪ್ರತಿನಿಧಿಯಾಗಿ ನಮ್ಮ ಬುದ್ಧಜೀವಿ ಹಾಗೂ ಸುದ್ದಿಜೀವಿ ಅರುಂಧತಿ ರಾಯ್‌ರವರು ಮಾತಾಡಿದ್ದಾರೆ.


 

ಅವರ ದಿಟ್ಟತನಕ್ಕೆ, ಸತ್ಯ ನಿಷ್ಟುರತೆಗೆ, ಜಾತ್ಯಾತೀತವಾದಕ್ಕೆ ಜಯವಾಗಲಿ. ಅರುಂಧತಿ ಸಂತತಿ ಸಾವಿರವಾಗಲಿ. ಫಿದಾಯೆಗಳು ಅಮರರಾಗಲಿ...

 

 

(ಚಿತ್ರ ಕದ್ದದ್ದು ಇಲ್ಲಿಂದ:

http://neoconexpress.blogspot.com/2006/02/la-times-gutless-offenders-and-cartoon.html)