ಕಡೂರಿನ ದಿನಗಳು - ರಾಯರು ಮತ್ತು ನಾನು (ರಾಘವೇಂದ್ರ - ರಾಯರ ಮಠ!!)

ಕಡೂರಿನ ದಿನಗಳು - ರಾಯರು ಮತ್ತು ನಾನು (ರಾಘವೇಂದ್ರ - ರಾಯರ ಮಠ!!)

ಕಡೂರಿನ ದಿನಗಳು - ರಾಯರು ಮತ್ತು ನಾನು (ರಾಘವೇಂದ್ರ - ರಾಯರ ಮಠ!!)

ಡಾ: ಮೀನಾ ಸುಬ್ಬರಾವ್, ಸಲಿನಾಸ್, ಕ್ಯಾಲಿಫೋರ್ನಿಯ.

ಕಡೂರಿನ ಕೋಟೆಯಲ್ಲಿದ್ದ ನಮ್ಮ ಮನೆಯ ಸುತ್ತಲೂ ದೇವಸ್ಥಾನಗಳಿದ್ದವು. ದೇವರುಗಳ ಮಧ್ಯದಲ್ಲಿ ನಾವು ವಾಸ ಇದ್ದೆವು ಅಂದರೆ ತಪ್ಪಾಗಲಾರದು. ಮುಂಬಾಗಿಲಿನ ಎದುರುಗಡೆ ಕೇಶವ ದೇವರ ದೇವಸ್ಥಾನವಾದರೆ, ಹಿತ್ತಲ ಬಾಗಿಲ ಎದುರು ಆಂಜನೇಯ ದೇವರ ಗುಡಿ, ಒಂದು ಪಕ್ಕದಲಿ ರಾಯರ ಮಠ, ಮತ್ತೊಂದು ಪಕ್ಕದಲ್ಲಿ ಈಶ್ವರನ ಗುಡಿ ಮತ್ತು ಅದರ ಮುಂದೆ ಹೊಂಡವಿತ್ತು. ಕಾರ್ತೀಕ ಮಾಸ, ಧನುರ್ಮಾಸ, ಶ್ರಾವಣ ಮಾಸ ಎಲ್ಲ ಮಾಸಗಳಲ್ಲೂ ಒಂದಲ್ಲ ಒಂದು ವಿಶೇಷ ಪೂಜೆಗಳು ನಡೆಯುತ್ತಿತ್ತು. ನಾವು ಸಣ್ಣವರಾಗಿದ್ದಾಗ ಎಲ್ಲ ಪೂಜೆಗಳಿಗೂ ಹೋಗಿ, ಪ್ರಸಾದವನ್ನು ಇಸ್ಕೊಂಡು ತಿಂದು ಬರುತ್ತಿದ್ದೆವು. ಕೆಲವೊಮ್ಮೆ ಮೊದಲಿಂದ ಪೂಜೆ ನೋಡಲಾಗದಿದ್ದರೂ ಮಂಗಳಾರತಿ, ಹೊತ್ತಿಗೆ ಹೋಗಿ ಆಮೇಲೆ ಪ್ರಸಾದ ಪಡೆಯುವುದನ್ನು ಮರೆತಿರಲಿಲ್ಲ. ರಾಘವೇಂದ್ರ ಮಠದಲ್ಲಿ ಗುರುವಾರ ವಿಶೇಷ ಪೂಜೆ, ಭಜನೆ, ಮಂಗಳಾರತಿ, ಆಮೇಲೆ ಪ್ರಸಾದ ಇದೆಲ್ಲ ಮುಗಿದ ಮೇಲೇ ಮನೆಗೆ ಬರುತ್ತಿದ್ದಿದ್ದು.

ಪ್ರತೀ ಗುರುವಾರ ತಪ್ಪದೇ ಹೋಗುತ್ತಿದ್ದೆ ನಾನು. ಅಲ್ಲಿ ಮಾಡುವ ಭಜನೆಗಳನ್ನೆಲ್ಲಾ ಮತ್ತು ಹಾಡುಗಳನ್ನೆಲ್ಲಾ ಚೆನ್ನಾಗಿ ಕಲಿತಿದ್ದೆ. ಮನೆಯಲ್ಲಿ ಕೂಡ ಕೆಲವೊಮ್ಮೆ ನಾವು ಗೆಳತಿಯರು ಮತ್ತು ಅಕ್ಕ ತಂಗಿಯರು ಹಾಡುಗಳನ್ನೆಲ್ಲಾ ಹೇಳಿಕೊಳ್ಳುತ್ತಿದ್ದೆವು. ಮನಸ್ಸಿಗೆ ಒಂದು ತರಹ ಹಿತ ತರುತ್ತಿತ್ತು ಈ ಅಭ್ಯಾಸಗಳು. ನನಗೆ ಮಠದ ಗೀಳು ಜಾಸ್ತಿನೇ ಇತ್ತು ನಮ್ಮ ಮನೆಯವರ ಪೈಕಿ. ಒಂದು ಥರಾ ಮಠ ನನ್ನದೇ ಅನ್ನೋತರಹ ಅನ್ನಿಸುತ್ತಿತ್ತು, ಅದು ಹಾಗೆ ಆಡಿಸುತ್ತಿತ್ತು ಕೂಡಾ. ನಮ್ಮ ಮನೆಯವರೊಂದಿಗೆ ನಾನು ಮಠಕ್ಕೆ ಹೋದಾಗ ಹಾಗೆ ಆಡುತ್ತಿದ್ದೆ. ನಮ್ಮ ಅಮ್ಮ ನನ್ನ ಜೊತೆ ಮಠಕ್ಕೆ ಹೋದಾಗ, ಅಮ್ಮ ಹೀಗೆ ಬಾ, ಅಲ್ಲಿ ನಿಂತ್ಕೋಬೇಕು ತೀರ್ಥ ತಗೊಳಕ್ಕೆ, ಆಚಾರ್ರು, ಒಳಗಡೆ ಕ್ಲೀನ್ ಮಾಡ್ತಾ ಇದಾರೆ, ಬರ್ತಾರೆ, ಹೀಗೆಲ್ಲ ಹೇಳುತ್ತಿದ್ದೆ. ನಾನಷ್ಟೇ ಮಠಕ್ಕೆ ಹೋದಾಗ, ಒಂದು ಸ್ಟೀಲ್ ಲೋಟವನ್ನು ತಗೊಂಡು ಹೋಗಿ, ಎಲ್ಲರಿಗೂ ತೀರ್ಥ, ಮಂತ್ರಾಕ್ಷತೆಯನ್ನು ತಂದು ಮನೆಯವರಿಗೆಲ್ಲಾ ಕೊಡುತ್ತಿದ್ದೆ. ಹೀಗೆ ಏಷ್ಟೊಂದು ಸಲ ಲೋಟ ಅಲ್ಲೇ ಮರೆತುಬಿಡುತ್ತಿದ್ದೆ. ನಮ್ಮ ಅಮ್ಮ ಮಠಕ್ಕೆ ಹೋದಾಗ, ಆಚಾರ್ಯರು "ಮೀನ ಈ ಲೋಟಗಳನ್ನೆಲ್ಲ ಇಲ್ಲೇ ಮರೆತುಬಿಟ್ಟೀದ್ದಾಳೆ" ಅಂತ ಹೇಳಿ ಅಮ್ಮನ ಹತ್ತಿರ ಕೊಡುತ್ತಿದ್ದರು. ಅವರಿಗೆ ಚೆನ್ನಾಗಿ ಗೊತ್ತಿತ್ತು ನನ್ನ ಲೋಟಗಳು ಯಾವುದು ಅಂತ. ನಾವೇನಾದರೂ ರಾತ್ರಿ ನಿದ್ದೇ ಸರಿಯಾಗಿ ಮಾಡದಿದ್ದರೆ, ಬೆಚ್ಚಿದ್ದಾರೆ ಅಂತ ನಮ್ಮ ಅಮ್ಮ ನಮ್ಮನ್ನೆಲ್ಲಾ ಮಠಕ್ಕೆ ಕರೆದು ಕೊಂಡು ಹೋಗಿ ರಾಯರಿಗೆ ಪೂಜೆ ಮಾಡಿಸುತ್ತಿದ್ದರು. ಆಗ, ಆಚಾರ್ಯರು ಮಂತ್ರ ಹೇಳಿ ನಮಗೆಲ್ಲ ತೀರ್ಥ, ಮತ್ತು ಮಂತ್ರಾಕ್ಷತೆ ಯನ್ನು ತಲೆಯ ಮೇಲೆ ಹಾಕುತ್ತಿದ್ದರು. ನಮ್ಮ ಅಮ್ಮನಿಗೆ ಆವಾಗಲೇ ಸಮಾಧಾನವಾಗುತ್ತಿದ್ದಿದ್ದು. ಆಮೇಲೆ ನಾವು ಸರಿಯಾಗಿ ನಿದ್ದೆ ಮಾಡುತ್ತಿದ್ವಂತೆ. ಮಠದ ಅಚಾರ್ಯರಿಗೂ, ನಮಗೂ (ಮಕ್ಕಳೊಂದಿಗೆ) ತುಂಬಾ ಸ್ನೇಹವಿತ್ತು. ಅವರು ಎಲ್ಲ ಮಕ್ಕಳೊಡನೆ ತುಂಬಾ ತಾಳ್ಮೆಯಿಂದ, ಸ್ನೇಹದಿಂದ ವರ್ತಿಸುತ್ತಿದ್ದರು. ನಾನು ಮುಂಚೆ ಹೋದರೆ ಕೆಲವು ಸಲ, ಅಲ್ಲಿ ಕಸಗುಡಿಸಿ, ಹೂವುಗಳನ್ನೆಲ್ಲಾ ಕಟ್ಟಿ ಹಾರ ಮಾಡಿ ಸಹಾಯ ಮಾಡುತ್ತಿದ್ದೆ. ಇದೆಲ್ಲಾ ತುಂಬಾ ಖುಷಿ ಕೊಡುತ್ತಿತ್ತು ಮನಸ್ಸಿಗೆ.

ರಾಯರ ಮಠ ನಮ್ಮ ಮನೆ ಪಕ್ಕದಲ್ಲೇ ಇದ್ದಿದ್ದರಿಂದ ಯಾವಾಗಬೇಕೋ ಆಗ ಹೋಗಲು ಅನುಕೂಲ ಮಾಡಿಕೊಟ್ಟಿತ್ತು. ನನ್ನ ಆಪ್ತ ಗೆಳತಿ ಸಾವಿತ್ರಿ, ಅವಳ ತಂದೆ ನರಸಿಂಹಯ್ಯನವರು ಮಠದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಅವಳು ಚೆನ್ನಾಗಿ ಓದುತ್ತಿದ್ದಳು, ಹಾಗೇ ಒಳ್ಳೇ ಮಾರ್ಕ್ಸ್ಗಳನ್ನು ಪಡೆಯುತ್ತಿದ್ದಳು. ಅವರು ಒಂದು ಹೊಸ ಮನೆ ಕಟ್ಟಿದ್ದರು, ಅದನ್ನ ನೋಡಲು ಸಾವಿತ್ರಿ ನಮ್ಮನ್ನೆಲ್ಲಾ ಕರೆದಿದ್ದಳು. ಮನೆ ಸುಮಾರು ಮುಗಿದಿತ್ತು, ಸ್ವಲ್ಪ ಕೆಲಸ ಬಾಕಿ ಇತ್ತು. ಮನೆಯ ಮುಂದಿನ ವೃಂದಾವನ ಸೀಮೆಂಟ್ ನಲ್ಲಿ ದೊಡ್ಡದಾಗಿ ಕಟ್ಟಿಸುತ್ತಿದ್ದರು. ನರಸಿಂಹಯ್ಯನವರು ನಮಗೆಲ್ಲ ಮನೆ ತೋರಿಸಿ, ನಮ್ಮನ್ನೆಲ್ಲಾ ಹೊರಗೆ ಕರೆದು ತೋರಿಸಿ ಹೇಳಿದರು "ಸಾವಿತ್ರಿ, ಇಲ್ಲೇ ವೃಂದಾವನ ಬರತ್ತೆ, ನಿನಗೆ ಪ್ರದಕ್ಷಿಣೆ ಹಾಕಲು ತುಂಬಾ ಜಾಗ ಇರುತ್ತೋ ಇಲ್ಲವೋ ಎಂದರು". ಸಾವಿತ್ರಿ ದಿನಾ ಎದ್ದ ತಕ್ಷಣ ವೃಂದಾವನಕ್ಕೆ ನಮಸ್ಕಾರ ಮಾಡದೇ ಬೇರೇನನ್ನೂ ಮಾಡುತ್ತಿರಲಿಲ್ವಂತೆ. ಅವಳು ವೃಂದಾವನ ಬೇಗ ಇಡಿಸಿ ಅಂತ ಅವಳಪ್ಪನಿಗೆ ಹೇಳಿದಳು. ಆಮೇಲೆ, ಅವತ್ತೇ ನಮ್ಮ ಪರೀಕ್ಷೆ ಫಲಿತಾಂಶ ಬಂದಿತ್ತು. ನಮ್ಮೆಲ್ಲರನ್ನೂ ಅವಳಪ್ಪ ರಿಸಲ್ಟ್ ಕೇಳಿದರು. ಸಾವಿತ್ರಿ ಫಸ್ಟ್ ಕ್ಲಾಸ್ ಬಂದಿದ್ದಳು, ಅವರ ಅಪ್ಪ ತಕ್ಷಣ ಹೇಳಿದರು: "ನೋಡು ನೀನು ದಿನಾ ವೃಂದಾವನಕ್ಕೆ ನಮಸ್ಕಾರ ಮಾಡಿದ್ದರಿಂದ ನಿನಗೆ ಒಳಿತಾಗಿದೆ, ನೀವು ಎಲ್ಲ ವೃಂದಾವನಕ್ಕೆ ದಿನಾ ನಮಸ್ಕರಿಸಿದರೆ, ಎಲ್ಲರಿಗೂ ಒಳ್ಳೇದಾಗತ್ತೆ. ದೇವರು ನಿಮಗೆ ಎಲ್ಲ ಶಕ್ತಿಯನ್ನು ಕರುಣಿಸುತ್ತಾನೆ." ಎಂದರು. ಅವತ್ತು ಅದನ್ನು ಕೇಳಿದ ತಕ್ಷಣ ನನ್ನ ಮನಸ್ಸಿನಲ್ಲಿ ಅದು ಹೊಕ್ಕಿತು. ಅದೂ ಅಲ್ಲದೇ ನಮ್ಮ ಮನೆಯಿಂದ ಎಡವಿ ಬಿದ್ದರೆ ರಾಯರ ಮಠ ಇದ್ದಿದರಿಂದ ಇನ್ನು ಕಷ್ಟವೇನು ದೇವರನು ನೋಡಲು? ಅಥವಾ ರಾಯರು ಸುಮ್ಮನೆ ಬಿಟ್ಟಾರೆ ನಮ್ಮನ್ನೆಲ್ಲಾ? ಅವತ್ತೇ ನಿರ್ಧಾರಮಾಡಿದೆ ಮನಸ್ಸಿನಲ್ಲಿ ವೃಂದಾವನಕ್ಕೆ ನಮಸ್ಕಾರ ಮಾಡುವುದು, ಅದಾಗಾದಾಗ ರಾಯರ ಮಠಕ್ಕೆ ಹೋಗುವುದು. ಹಾಗಾಗಿ ಪ್ರತಿ ಗುರುವಾರನೂ ಹೋಗುತ್ತಿದ್ದೆ. ತುಂಬಾ ಜನರ ಪರಿಚಯವಾಯಿತು. ಸಾವಿತ್ರಿನೂ ಪ್ರತೀ ಗುರುವಾರ ಮತ್ತು ವಿಶೇಷ ಪೂಜೆಗಳಿದ್ದಾಗ ಬರುವಳು. ಒಟ್ಟಿಗೇ ಕೂತು ದೇವರ ಭಜನೆಯನ್ನು ಮಾಡುತ್ತಿದ್ದೆವು. ಪ್ರತೀ ಗುರುವಾರ "ಪಾಹಿ ಪಾಹಿ ರಾಘವೇಂಧ್ರ ಗುರು, ತ್ರಾಹಿ ತ್ರಾಹಿ ಗುಣಸಾಂಧ್ರ ಗುರು ಇಂದ ಹಿಡಿದು ಮಂಗಳ ವರೆಗೂ, ಕೀರ್ತನ, ಲಾಲಿ, ಎಲ್ಲ ಹಾಡಿ ಮಹಾ ಮಂಗಳಾರತಿವರೆಗೂ ಇದ್ದು, ಪ್ರಸಾದ ಪಡೆದು ಮನೆಗೆ ಬರುತ್ತಿದ್ದೆ. ನಾನೊಬ್ಬಳೇ ಹೋಗಿದ್ದ ದಿನ, ಪ್ರಸಾದವನ್ನು ಒಂದು ಸಲ ತಿಂದು, ಇನ್ನೊಮ್ಮೆ ಇಸ್ಕೊಂಡು ಮನೆಗೆ ತರುತ್ತಿದ್ದೆ. ನಮ್ಮ ಅಮ್ಮ ನನ್ನ ಹೊಗಳಿದಾಗ, ನನ್ನ ಅಣ್ಣ ತಮಾಷೆ ಮಾಡುತ್ತಿದ್ದ "ಅವಳು ತಿಂಡಿ ಪೋತಿ, ಚರಪಿಗೆ, ಕೊಬ್ಬರಿ ಸಕ್ರೆ ಎಲ್ಲ ತಿನ್ನಕ್ಕೆ ಹೋಗ್ತಾಳೆ" ಅಂತ.

ರಾಯರ ಜೊತೆ ಒಡನಾಟ ದಿನ ದಿನಕ್ಕೆ ಬೆಳೆಯಿತು. ಮಠಕ್ಕೆ ಹೋಗಲು ಸಾಧ್ಯವಾಗದಿದ್ದಾಗ ಮನೆಯಲ್ಲೇ ನೆನೆಯುತ್ತಿದ್ದೆ. ನಮ್ಮ ತಂದೆ ನಾನು ೧೬ ವರುಷವಿದ್ದಾಗಲೇ ತೀರಿಕೊಂಡಾಗ, ರಾಯರ ಮೇಲೆ ಕೋಪ ಬಂದಿತ್ತು. ಅವರ ಕಾಲ ಮುಗಿದಿತ್ತು ಅಂತ ಹೇಳಿ ನನ್ನನ್ನು ಸಮಾಧಾನ ಮಾಡಿದ್ದರು. ಆಮೇಲೆ ಬೆಂಗಳೂರಿಗೆ ಬಂದೆ ನ್ಯಾಶನಲ್ ಕಾಲೇಜ್ ಸೇರಿಕೊಂಡೆ. ನಮ್ಮ ದೊಡ್ಡಮ್ಮನ ಮನೆಯಲ್ಲಿ ಜಯನಗರ ೯ ನೇ ಬ್ಲಾಕ್ ನಲ್ಲಿ ಇದ್ದೆ. ಒಂದು ವರುಷವಾದ ನಂತರ ಜಯನಗರ ೪ ನೇ ಟಿ ಬ್ಲಾಕ್ ನಲ್ಲಿರುವ "ರಾಯರ ಮಠ, ರಾಮ ಮಂದಿರ" ಪಕ್ಕದಲ್ಲಿರುವ ಮನೆಗೇ ಬಾಡಿಗೆಗೆ ಬಂದೆವು. ಇದು ರಾಯರ ಅನುಗ್ರಹ ಅಂತಲೇ ಹೇಳಬೇಕು. ರಾಯರ ಮಠದ ಜೊತೆಗೆ ಪಕ್ಕದಲ್ಲೇ ರಾಮ ಮಂದಿರ. ಹೀಗೆ ಬೆಂಗಳೂರಿಗೆ ಬಂದ ತಕ್ಷಣವೇ ನನ್ನನ್ನು ಪಕ್ಕದಲ್ಲಿ ಕರೆಸಿಕೊಂಡಿದ್ದರು ರಾಯರು. ನಾನು ಮೈಸೂರು ಮೆಡಿಕಲ್ ಕಾಲೇಜ್ಗೆಂದು ಮೈಸೂರಿಗೆ ಬಂದಾಗ, ಕ್ರಿಷ್ಣಮೂರ್ತಿಪುರಂ ನಲ್ಲಿ ಬಾಡಿಗೆ ಮನೆಯಲ್ಲಿದ್ದೆವು. ಅಲ್ಲೂ ರಾಯರ ಮಠ ಗಣೇಶ ಟಾಕೀಸ್ ಹಿಂಬಾಗದಲ್ಲೇ ನಮ್ಮ ಬಡಾವಣೆಯಲ್ಲೇ ಇತ್ತು. ಅಲ್ಲೂ ನಾನು ರಾಯರ ಮಠಕ್ಕೆ ಹತ್ತಿರವಾಗಿರುವ ಯೋಗ ನನ್ನದಾಗಿತ್ತು. ಮೆಡಿಕಲ್ ಕಾಲೇಜ್ ಆದ್ದರಿಂದ ನನಗೆ ಜಾಸ್ತಿ ಹೋಗಲು ಕಾಲಾವಕಾಶ ವಾಗುತ್ತಿರಲಿಲ್ಲ. ಮನೆಯಲ್ಲೇ ರಾಯರನ್ನು ನೆನೆಯುತ್ತಿದ್ದೆ. ಕಡೆಗೆ ಅಮೇರಿಕಾಕ್ಕೆ ಬಂದಮೇಲೆ ಕ್ಯಾಲಿಫೋರ್ನಿಯದಲ್ಲಿ ಸುಮಾರು ದಿನದಿಂದ ರಾಯರ ಮಠ ಇರಲಿಲ್ಲ. ಇತ್ತೀಚೆಗೆ ಈಗ ಸುಮಾರು ಒಂದೂ ವರೆ ವರುಷದಿಂದ ಶ್ರೀ ಕೃಷ್ಣ ವೃಂದಾವನ ಸ್ಯಾನ್ ಹೋಸೆ ಯಲ್ಲಿ ಕಟ್ಟಿದ್ದಾರೆ. ಈಗಾಗಲೇ ೩- ೪ ಸಲ ಭೇಟಿ ಕೊಟ್ಟಿದ್ದೇನೆ.

ಕಡೂರಿನಲ್ಲಿ ದೇವರುಗಳ ಮಧ್ಯೆ ಬೆಳೆದ ನನಗೆ ದೇವರಿರುವ ಅನುಭವ ಚೆನ್ನಾಗಿ ಆಗಿತ್ತು. ಈಗಲೂ ನನಗೆ ಅದೇ ಅನುಭವ ಇದೆ. ರಾಯರು ಸದಾ ನಮ್ಮನ್ನೆಲ್ಲಾ ಕಾಯುತ್ತಿದ್ದಾರೆ. ರಾಯರಿಗೊಂದು ನಮಸ್ಕಾರ ಹಾಕಿ ಈ ಸಂಚಿಕೆಯನ್ನು ಮುಗಿಸೋಣ....

"ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ

ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೆ"

ಶ್ರೀ ರಾಘವೇಂದ್ರಾಯ ನಮಃ!!!!!

Comments

ನಮಸ್ಕಾರ ಕವಿ ನಾಗರಾಜ್ ಅವರೆ, ಧನ್ಯವಾಧಗಳು! ತಡವಾಗಿ ಪ್ರತಿಕ್ರಿಯಿಸಿದ್ದಕ್ಕೆ ಕ್ಷಮೆ ಇರಲಿ. ಸಂಪದ ನೋಡಲು ಸಮಯವೇ ಆಗಿರಲಿಲ್ಲ. ಇವತ್ತೇ ಬಂದಿದ್ದು. ನಿಮ್ಮಂತಹ ದೊಡ್ಡವರ ಪ್ರೋತ್ಸಾಹ ಹೀಗೇ ಇರಲಿ. ವಂದನೆಗಳು!!!