ಕನ್ನಡ ಪತ್ರಿಕಾ ಲೋಕ (ಭಾಗ ೧೮೪) - ಪ್ರಜಾರಂಗ
ವಿಠಲ ಗಟ್ಟಿ ಉಳಿಯ ಅವರ "ಪ್ರಜಾರಂಗ".
ಕವಿ, ಕಥೆಗಾರ, ಕಾದಂಬರಿಕಾರ, ನಾಟಕಕಾರ, ಲೇಖಕ, ಚಲನಚಿತ್ರ ಚಿತ್ರಕಥೆ - ಸಂಭಾಷಣೆ ರಚನೆಗಾರ, ಗಾಯಕ, ಪತ್ರಕರ್ತ ವಿಠಲ ಗಟ್ಟಿ ಉಳಿಯ ಅವರು ಸುಮಾರು ಏಳೆಂಟು ವರ್ಷಗಳ ಕಾಲ ಮಂಗಳೂರಿನಲ್ಲಿ ನಡೆಸಿದ ಪಾಕ್ಷಿಕ ಪತ್ರಿಕೆಯಾಗಿದೆ "ಪ್ರಜಾರಂಗ".
ಪ್ರಜಾರಂಗ ಆರಂಭವಾದುದು 1999ರಲ್ಲಿ. 2002ರವರೆಗೆ ಪ್ರಕಟವಾಯಿತು. 2002ರಲ್ಲಿ ನಿಂತ ಪತ್ರಿಕೆ ನಂತರ 2004ರಲ್ಲಿ ಮತ್ತೆ ಆರಂಭವಾಗಿ 2006ರ ವರೆಗೆ ನಡೆದು ಸ್ಥಗಿತಗೊಂಡಿತು. ಟ್ಯಾಬ್ಲಾಯ್ಡ್ ಮಾದರಿಯಲ್ಲಿ, 12 ಪುಟಗಳಲ್ಲಿ ಬರುತ್ತಿದ್ದ ಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ ಐದು ರೂಪಾಯಿಗಳಾಗಿತ್ತು.
ಪ್ರಜಾರಂಗದ ಸಂಪಾದಕರು, ಪ್ರಕಾಶಕರು, ಮುದ್ರಕರು, ಮಾಲಕರು ಎಲ್ಲವೂ ವಿಠಲ ಗಟ್ಟಿ ಉಳಿಯ ಅವರೇ ಆಗಿದ್ದರು. ಮಂಗಳೂರು ನಗರದ ಹೊರವಲಯವಾದ ಮೂಡುಶೆಡ್ಡೆಯಿಂದ ಪ್ರಕಾಶನಗೊಳ್ಳುತ್ತಿದ್ದ ಪತ್ರಿಕೆ ಮಂಗಳೂರು ನಗರದ ತುಳಸಿ ಆಫ್ ಸೆಟ್ ನಲ್ಲಿ ಮುದ್ರಣವಾಗುತ್ತಿತ್ತು. ರಾಜಕೀಯ, ಸಾಮಾಜಿಕ, ಅಪರಾಧ, ಸಾಹಿತ್ಯ, ಸಿನಿಮಾ ಇತ್ಯಾದಿ ವಿವಿಧ ವಿಷಯಗಳಿಗೆ ಸಂಬಂಧಿಸಿದ ವೈವಿಧ್ಯಮಯ ಬರಹಗಳು ಪ್ರಜಾರಂಗದಲ್ಲಿ ಪ್ರಕಟವಾಗುತ್ತಿತ್ತು.
ಪ್ರಜಾರಂಗದ ಸಂಪಾದಕರಾಗಿದ್ದ ವಿಠಲ ಗಟ್ಟಿ ಅವರು ಕೆ. ಜೆ. ಶೆಟ್ಟಿ ಕಡಂದಲೆಯವರ "ಚಂದನ" ವಾರಪತ್ರಿಕೆಯ ಮುಖ್ಯ ಸಹಸಂಪಾದಕ, "ಚಂದನ" ಮಾಸಪತ್ರಿಕೆಯ ಉಪಸಂಪಾದಕ, "ಮಾಯಾನಗರಿ ಬೆಂಗಳೂರು" ವಾರಪತ್ರಿಕೆಯಲ್ಲಿ ಮುಖ್ಯ ಉಪಸಂಪಾದಕ, "ಹಾಯ್ ಬೆಂಗಳೂರ್ !" ಮತ್ತು "ಕರ್ಮವೀರ" ವಾರಪತ್ರಿಕೆಗಳಲ್ಲಿ ಮತ್ತು "ಓ ಮನಸೇ..." ಮಾಸ ಪತ್ರಿಕೆಯಲ್ಲಿ ಸಹಸಂಪಾದಕರಾಗಿ ಸೇವೆಸಲ್ಲಿಸಿದ್ದರು.
~ ಶ್ರೀರಾಮ ದಿವಾಣ