ಕನ್ನಡ ಮಾಧ್ಯಮ ಕುರಿತ ಹೈಕೋರ್ಟ್ ತೀ‌ರ್ಪಿಗೆ ಪ್ರತಿಕ್ರಿಯೆ:

ಕನ್ನಡ ಮಾಧ್ಯಮ ಕುರಿತ ಹೈಕೋರ್ಟ್ ತೀ‌ರ್ಪಿಗೆ ಪ್ರತಿಕ್ರಿಯೆ:

ಬರಹ

ಕನ್ನಡ ಮಾಧ್ಯಮ ಕುರಿತ ಹೈಕೋರ್ಟ್ ತೀ‌ರ್ಪಿಗೆ ಪ್ರತಿಕ್ರಿಯೆ:

ಇದು ಸಂಪೂರ್ಣವಾಗಿ ಅನಿರೀಕ್ಷಿತ ತೀರ್ಪೇನಲ್ಲ. ಹೊಸ ಆರ್ಥಿಕ ನೀತಿ ಮಾರುಕಟ್ಟೆಗಳಲ್ಲಿ ತಂದು ಒಟ್ಟಿರುವ ಹೊಸ ಸಂಪತ್ತಿನ ಮರುಳು ನ್ಯಾಯಾಲಯಗಳಿಗೂ ಆವರಿಸಿರುವುದು ಈ ತೀರ್ಪಿನಿಂದ ಗೊತ್ತಾಗುವಂತಿದೆ. ಹಾಗಾಗಿಯೇ ಅದು ಇಂಗ್ಲಿಷ್ ಇಲ್ಲದೆ 'ಪ್ರಗತಿ' ಸಾಧ್ಯವಿಲ್ಲವೆಂಬ ಹಳೆಯ ಅರ್ಧ ಸತ್ಯವನ್ನೇ ಹೊಸ ಹುರುಪಿನಿಂದ ಪೂರ್ಣ ಒಪ್ಪಿಕೊಳ್ಳುತ್ತಾ ಕನ್ನಡ ಮಾಧ್ಯಮ ಜಾರಿಗೆ ಸಂಬಂಧಿಸಿದ ಸರ್ಕಾರಿ ಆಜ್ಞೆಯನ್ನು ಅನೂರ್ಜಿತಗೊಳಿಸಿದೆ. ಬಹಳ ಹಿಂದಿನಿಂದಲೂ ಎಲ್ಲ ಶಾಲೆಗಳಲ್ಲಿ - ಈಗ ಒಂದನೇ ತರಗತಿಯಿಂದಲೇ - ಎಲ್ಲ ಮಕ್ಕಳಿಗೆ ಇಂಗ್ಲಿಷ್ ಕಲಿಸಲಾಗುತ್ತಿದೆ ಎಂಬ ಸಂಗತಿಯನ್ನೇ ಗಮನಕ್ಕೆ ತಂದುಕೊಳ್ಳದೆ, ಇಂಗ್ಲಿಷ್ ಪರವಾಗಿ ವಕ್ತಾರಿಕೆ ಮಾಡಿರುವ ಈ ತೀರ್ಪು, ಮಕ್ಕಳ ಕಲಿಕೆಯ ಬಗೆಗಿರುವ ತಾತ್ವಿಕತೆಯನ್ನೇ ಸಂಪೂರ್ಣವಾಗಿ ತಿರಸ್ಕರಿಸುವ ಮೂಲಕ ಮುಂದಿನ ದಿನಗಳು ಹೇಗೆ ಕೇವಲ ಮಾರುಕಟ್ಟೆ ವಾಸ್ತವತೆಯ ದಿನಗಳು ಮಾತ್ರವಾಗಿರುತ್ತವೆ ಮತ್ತು ಅದಕ್ಕೆ ನ್ಯಾಯಾಂಗದ ಬೆಂಬಲವೂ ಉಂಟು ಎಂಬ ಅಪಾಯದ ಸೂಚನೆಯನ್ನೂ ನೀಡಿದೆ!

ಶಿಕ್ಷಣ ಮಾಧ್ಯಮ ಸ್ವಾತಂತ್ರ್ಯವೂ ಅಭಿವ್ಯಕ್ತಿ ಸ್ವಾತಂತ್ರ್ಯದ ಅವಿಭಾಜ್ಯ ಅಂಗವೆಂದು ಉದಾರವಾಗಿ ಅರ್ಥೈಸಿರುವ ಕೋರ್ಟು, ಕರ್ನಾಟಕದ ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವಂತೆ ಮಾಡಿರುವ ಶಿಫಾರ್ಸನ್ನು ಹೇಗೆ ಸಮರ್ಥಿಸಿಕೊಳ್ಳುವುದೋ ತಿಳಿಯದು! ಏಕೆಂದರೆ, ಕೋರ್ಟಿನ ಈ ಅರ್ಥೈಸುವಿಕೆಯ ಪ್ರಕಾರ, ತಮ್ಮ ಮಕ್ಕಳಿಗೆ ಯಾವುದೇ ಭಾಷೆಯನ್ನು ಕಲಿಸದಿರುವ ಸ್ವಾತಂತ್ರ್ಯವನ್ನೂ ಪೋಷಕರು ಹೊಂದಿರುತ್ತಾರೆ ಅಲ್ಲವೆ? ಕೋರ್ಟು ಈಗ ಮಾನ್ಯ ಮಾಡಿರುವ ಪ್ರಗತಿಯ ಹೆಸರಲ್ಲೇ ಈ ಸ್ವಾತಂತ್ರ್ಯವನ್ನೂ ಒತ್ತಾಯಿಸಿ ಪೋಷಕರು ಅಥವಾ ಸಾಹುಕಾರ ಶಾಲೆಗಳ ದಲ್ಲಾಳಿಗಳ್ಯಾರಾದರೂ ಕೋರ್ಟಿನ ಮೊರೆ ಹೋದರೆ, ಈ ಕೋರ್ಟು ಏನು ಹೇಳುವುದು? ಸಂವಿಧಾನ ಪ್ರದಾನ ಮಾಡಿರುವ ಸ್ವಾತಂತ್ರ್ಯದ ಅರ್ಥವನಕಾರಾಷ್ಟ್ರೀಯ ವಿವೇಕದ ಸಾಂಸ್ಕೃತಿಕ ಗಡಿಗಳನ್ನು ಧಿಕ್ಕರಿಸಿ ವಿಸ್ತರಿಸಲಾಗದೆಂಬ ಅರಿವಿನಿಂದಲೇ ಸುಪ್ರೀಂ ಕೋರ್ಟ್ ಐದನೇ ತರಗತಿಯವರೆಗಾದರೂ ಮಾತೃ/ಪ್ರಾದೇಶಿಕ ಭಾಷಾ ಮಾಧ್ಯಮ ಶಿಕ್ಷಣವನ್ನು ಜಾರಿಗೆ ತರುವ ಅಧಿಕಾರವನ್ನು ರಾಜ್ಯ ಸ‌ರ್ಕಾರಕ್ಕೆ ದಯಪಾಲಿಸಿತ್ತು. ಇದಾದ ಒಂದೂವರೆ ದಶಕದ ನಂತರ ನಮ್ಮ ಹೈಕೋರ್ಟು ಬದಲಾದ (ರಾಜಕೀಯ) 'ವಾಸ್ತವ'ಕ್ಕೆ ತಕ್ಕಂತೆ ತಾನೂ ಬದಲಾಗುವ 'ಆಧುನಿಕತೆ'ಯನ್ನು ಪ್ರದರ್ಶಿಸುತ್ತಾ, ಸುಪ್ರೀಂ ಕೋರ್ಟಿನ ತೀರ್ಪಿನ ಹಿಂದಿದ್ದ ರಾಷ್ಟ್ರೀಯ ಭಾವನೆಯೇ ಅಸಂಗತವೆನ್ನುವಂತಹ ತೀರ್ಪು ನೀಡಿದೆ!

ಈ ತೀರ್ಪಿನ ಹಿಂದೆ ಅಂತಹ ಜಟಿಲ ವಿಷಯಗಳ ನಿರ್ವಹಣೆಯೇನೂ ಇದ್ದಂತೆ ತೋರುವುದಿಲ್ಲ. ಅದು ಸರಳವಾಗಿ, ನೇರವಾಗಿದೆ! ಇಂತಹ ಸರಳ, ನೇರ ತೀರ್ಪನ್ನು ಬರೆಯಲು ನ್ಯಾಯಾಧೀಶರಿಗೆ ಎರಡು ವರ್ಷಗಳು ಬೇಕಾಯಿತು ಮತ್ತು ಅದು ಈ ಪ್ರಕರಣವನ್ನು ಆಲಿಸಿದ ನ್ಯಾಯಾಧೀಶರಲ್ಲೊಬ್ಬರಾಗಿದ್ದ ಕೋರ್ಟಿನ ಮುಖ್ಯ ನ್ಯಾಯಾಧೀಶರು ಈಗ ಸುಪ್ರೀಂ ಕೋರ್ಟಿಗೆ ನ್ಯಾಯಾಧೀಶರಾಗಿ ಭಡ್ತಿ ಹೊಂದಿ ಹೋಗಬೇಕಾದ ಮುನ್ನ ನಿಕಾಲೆ ಮಾಡಬೇಕಾದ ಅನಿವಾರ್ಯತೆಯಲ್ಲಷ್ಟೇ ಪ್ರಕಟವಾಗಿದೆ ಎಂಬ ಸಂಗತಿಗಳು ಈ ಬಗ್ಗೆ ಇನ್ನಷ್ಟು ಪ್ರಶ್ನೆಗಳನ್ನು ಎತ್ತಬಲ್ಲವು. ಹಾಗಾಗಿ, ಸರ್ಕಾರ ತಾನು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿಕೊಂಡಿದ್ದಂತೆ ನಿಜವಾಗಿ ಕನ್ನಡ ಅಭಿವೃದ್ಧಿಗೆ ಬದ್ಧವಾಗಿದ್ದರೆ, ನ್ಯಾ|| ರಾಮಾ ಜೋಯಿಸರೂ ಸೇರಿದಂತೆ ಕನ್ನಡಕ್ಕೆ ಸಾಂಸ್ಕೃತಿಕ ದೃಷ್ಟಿಯಿಂದ ಬದ್ಧವಾದ ಕಾನೂನು ತಜ್ಞರು, ಶಿಕ್ಷಣ ತಜ್ಞರು ಮತ್ತು ಕನ್ನಡ ಬುದ್ಧಿಜೀವಿಗಳು ಹಾಗೂ ಕಾರ್ಯಕರ್ತರೊಂದಿಗೆ ವ್ಯವಧಾನದಲ್ಲಿ ವ್ಯಾಪಕ ಚರ್ಚೆ ನಡೆಸಿ, ಈ ತೀರ್ಪಿಗೆ ಕೂಡಲೇ ಸುಪ್ರೀಂ ಕೋರ್ಟಿನಿಂದ ತಡೆಯಾಜ್ಞೆ ಪಡೆಯುವ ಏರ್ಪಾಡು ಮಾಡಬೇಕು.