ಕರ್ನಾಟಕದ ಹಿಮಾಲಯ ಎಂಬ ಖ್ಯಾತಿಯ ಮುಳ್ಳಯ್ಯನಗಿರಿ
ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಪಶ್ಚಿಮ ಘಟ್ಟಗಳ ಬಾಬಾಬುಡನ್ಗಿರಿ ಬೆಟ್ಟಸಾಲಿನಲ್ಲಿರುವ ಒಂದು ಸುಂದರವಾದ ಶಿಖರ. ಕರ್ನಾಟಕದ ಅತ್ಯುನ್ನತ ಪರ್ವತ ಶಿಖರವೆಂದೇ ಖ್ಯಾತವಾಗಿರುವ ಇದರ ಎತ್ತರ 6,330 ಅಡಿಗಳು (1930 ಮೀಟರ್). ಇದು ಕರ್ನಾಟಕದ ಹಿಮಾಲಯವೆಂದೇ ಪ್ರಸಿದ್ದಿ ಪಡೆದಿದ್ದು, ಹಿಮಾಲಯ ಮತ್ತು ನೀಲಗಿರಿ ಬೆಟ್ಟಗಳ ನಡುವಣ ಪ್ರದೇಶದಲ್ಲಿನ ಅತಿ ಎತ್ತರದ ಪರ್ವತವೆಂದೂ ಇದು ಪ್ರಸಿದ್ಧಿಯಾಗಿದೆ. ಈ ಬೆಟ್ಟದ ಮೇಲ್ಬಾಗದಲ್ಲಿ ಅಂದರೆ ಬೆಟ್ಟದ ತುದಿಯಲ್ಲಿ ಮುಳ್ಳಯ್ಯನ ದೇವಸ್ಥಾನ ಹಾಗೂ ಮಠವಿದೆ. ಹಬ್ಬ ಹರಿದಿನಗಳಂದು ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸಿ ಮುಳ್ಳಯ್ಯ ಸ್ವಾಮಿಯನ್ನು ಪೂಜಿಸುತ್ತಾರೆ.
ಚಾರಣಿಗರ ಸ್ವರ್ಗವೆನಿಸಿದ ಮುಳ್ಳಯ್ಯನ ಬೆಟ್ಟದ ಮೇಲ್ಬಾಗಕ್ಕೆ ಹೋಗಲು ರಸ್ತೆಯೂ ಇದೆ. ಚಾರಣ ಮಾಡಲೆಂದೇ ಮತ್ತೊಂದು ಕಾಲುದಾರಿಯೂ ಇದ್ದು, ಇದನ್ನು 'ಸರ್ಪದ ಹಾದಿ' ಎಂದು ಕರೆಯಲಾಗುತ್ತದೆ. ದೇವಾಲಯದಿಂದ ಸ್ವಲ್ಪ ಕೆಳಗೆ ಹೋದರೆ ಎರಡು ನೈಸರ್ಗಿಕ ಗುಹೆಗಳಿರುವುದು ಇಲ್ಲಿನ ಇನ್ನೊಂದು ವಿಶೇಷ. ಈ ಗುಹೆಗಳ ಮಾರ್ಗವಾಗಿ ಸಾಗಿದರೆ ಮುಳ್ಳಯ್ಯಸ್ವಾಮಿಗಳ ದೇವಾಲಯದ ಗರ್ಭಗುಡಿಯವರೆಗೆ ಹೋಗಬಹುದು. ಬೆಟ್ಟದ ಮೇಲಿನಿಂದ ಕಾಣಸಿಗುವ ನೋಟವು ಅತ್ಯಂತ ವಿಹಂಗಮ ಮತ್ತು ಆಹ್ಲಾದಕರವಾಗಿದ್ದು, ಇಲ್ಲಿನ ಸೌಂದರ್ಯ ಪ್ರವಾಸಿಗರನ್ನು ದಂಗುಗೊಳಿಸುತ್ತದೆ.
ಮುಳ್ಳಯ್ಯನಗಿರಿ ಅದೊಂದು ಪ್ರಕೃತಿಯ ಸರ್ವ ಸೌಂದರ್ಯವನ್ನೂ ಹೊದ್ದು ಮಲಗಿದ ಪರ್ವತ ಶ್ರೇಣಿ, ಕಾಫಿ ನಾಡೆಂದು ಕರೆಯುವ ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್ ಗಿರಿ ಬೆಟ್ಟಕ್ಕೆ ತಾಗಿಕೊಂಡಂತಿದೆ ಮುಳ್ಳಯ್ಯನ ಗಿರಿ. ಗಿರಿಯಲ್ಲಿ ನಿಂತು ಕೆಳಗೆ ನೋಡಿದರೆ ಆರೋಗ್ಯವಂತ ಮನುಷ್ಯನಿಗೂ ಒಂದು ಕ್ಷಣ ಎದೆ ಹೊಡೆದುಕೊಳ್ಳುವಂಥ ಪ್ರಪಾತ, ಎದುರಾಗುವ ಹೆಬ್ಬಂಡೆಗಳನ್ನು ದಾಟಿ ದುರ್ಗಮ ಹಾದಿಯಲ್ಲಿ ಬೆಟ್ಟದ ತುದಿ ತಲುಪಬೇಕಾದರೆ ಹರಸಾಹಸ ಮಾಡಬೇಕು.
ಚಿಕ್ಕಮಗಳೂರಿನಿಂದ ಕೇವಲ 33 ಕಿ.ಮೀ. ದೂರದಲ್ಲಿರುವ ಬಾಬಾಬುಡನ್ಗಿರಿಗೆ ಪೇಟೆಯಿಂದ ಖಾಸಗಿ ಮತ್ತು ಸರಕಾರಿ ಬಸ್ ವ್ಯವಸ್ಥೆ ಇದೆ. ಬಾಬಾಬುಡನ್ಗಿರಿಗೆ ತಾಗಿಕೊಂಡಂತಿರುವ ಮುಳ್ಳಯ್ಯನ ಗಿರಿಗೆ ತಲುಪಬೇಕಾದರೆ ಚಿಕ್ಕಮಗಳೂರಿನಿಂದ 39 ಕಿ.ಮೀ. ದೂರ. ಕಡಿದಾದ ಏರು ರಸ್ತೆಯಲ್ಲಿ ಸಾಗುತ್ತಿದ್ದಂತೆ ಪ್ರಕೃತಿ ಸೊಬಗು ಮೂಕವಿಸ್ಮಿತಗೊಳಿಸುತ್ತದೆ. ಸುತ್ತಲೂ ಕಾಡು, ನಡುವೆ ಬೆಟ್ಟ ಕೊರೆದು ನಿರ್ಮಿಸಿದ ಕಾಲು ದಾರಿಯಗಲದ ರಸ್ತೆ, ಸಂಪೂರ್ಣ ತಿರುವು ರಸ್ತೆ, ಎದುರಿನಿಂದ ವೇಗವಾಗಿ ಇಳಿದು ಬರುವ ವಾಹನಗಳತ್ತ ಗಮನ ಇರಬೇಕು. ಮುಂದೆ ಸಾಗುತ್ತಿದ್ದಂತೆ ಸಿನಿಮಾ, ಅಂತರ್ಜಾಲ, ಚಿತ್ರದಲ್ಲಿ ಕಾಣಸಿಗುವ ಹಚ್ಚ ಹಸಿರಿನ ಬೆಟ್ಟಗಳು. ವಾಹನ ನಿಲ್ಲಿಸಿ, ಕಾಲುನಡಿಗೆಯಲ್ಲೇ ಬೆಟ್ಟದ ತುದಿಯ ಮಾರ್ಕಂಡೇಯ ದೇವಸ್ಥಾನಕ್ಕೆ ಹೋಗಬೇಕಾದರೆ ಬರೋಬ್ಬರಿ ಸುಮಾರು 100ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಏರಬೇಕು.
ವಾಹನದಿಂದ ಇಳಿಯುತ್ತಿದ್ದಂತೆ ಮೂಗಿನಲ್ಲಿ ಹನಿ ಹನಿ ಜಿನುಗಲು ಶುರುವಾಗಿ ಬಿಡುತ್ತವೆ. ಕಿವಿಗೊಂದು ಬಟ್ಟೆ ಸುತ್ತಿಕೊಂಡು, ಮೈಗೆ ಕೋಟ್, ಕಾಲಿಗೆ ಶೂ ಧರಿಸಿದ್ದರೆ ಪಯಣ ಒಂಚೂರು ಆರಾಮ ಎನಿಸಬಹುದು. ಇದೊಂದು ಮಂಜಿನ ಮಧ್ಯದ ಪಯಣ. ಪ್ರತಿನಿತ್ಯ ಬಾಬಾಬುಡನ್ಗಿರಿಗೆ ಬರುವ ಸಾವಿರಾರು ಭಕ್ತರು, ಪ್ರವಾಸಿಗರು ಮುಳ್ಳಯ್ಯನಗಿರಿಗೂ ಭೇಟಿ ನೀಡುತ್ತಾರೆ. ಇಲ್ಲಿಗೆ ಹೋಗಲು ಆಗಸ್ಟ್ನಿಂದ ನವೆಂಬರ್ ಸೂಕ್ತ ಸಮಯ, ಇಲ್ಲಿಗೆ ಹೋಗಲು ಚಿಕ್ಕಮಗಳೂರಿನಿಂದ ದಿನ ಬಾಡಿಗೆ ಲೆಕ್ಕದಲ್ಲಿ ವಾಹನಗಳು ಲಭ್ಯ. ರಾತ್ರಿ ವೇಳೆ ತಂಗಲು ಬೆಟ್ಟದಲ್ಲಿ ಅವಕಾಶವಿಲ್ಲ. ಪ್ರಕೃತಿ ಪ್ರಿಯರಿಗೆ ಸುಂದರ ತಾಣ ಅಷ್ಟೆ.
ಚಿಕ್ಕಮಗಳೂರು ಎಂದಾಕ್ಷಣ ನೆನಪಿಗೆ ಬರುವ ಚೆಲುವಿನ ತಾಣ ಬಾಬಾಬುಡನ್ಗಿರಿ, ಅಲ್ಲೀಗ ಸೌಂದರ್ಯ ಉಪಾಸನೆಯೊಂದಿಗೆ ಭಕ್ತಿಯ ಘಾಟೂ ಉಂಟು. ಈ ಬುಡನ್ಗಿರಿಗಿಂತಲೂ ಎತ್ತರದಲ್ಲಿ ಉನ್ನತವಾದ ಮತ್ತೊಂದು ತಾಣ ಮುಳ್ಳಯ್ಯನ ಗಿರಿ. ಸದ್ಯಕ್ಕಿಲ್ಲಿ ಸೌಂದರ್ಯ ಆರಾಧಕರದ್ದೇ ಉಪಾಸನೆ.
ಮುಳ್ಳಯ್ಯನ ಗಿರಿ ಹೆಸರಿನಲ್ಲಷ್ಟೇ ಮುಳ್ಳು, ನೋಟಕ್ಕಿದು ಮೋಹಕ ಸಿರಿ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬಾಬಾ ಬುಡನ್ಗಿರಿ ಶ್ರೇಣಿಯಲ್ಲಿ ಎದ್ದು ಕಾಣುವ ಮುಳ್ಳಯ್ಯನ ಗಿರಿ ಸೌಂದರ್ಯದ ದಿಬ್ಬ. ರಾಜ್ಯದ ಬೆಟ್ಟಸಾಲಿನಲ್ಲಿ ಮಾತ್ರವೇನು ಹಿಮಾಲಯ ಮತ್ತು ನೀಲಗಿರಿಗಳ ನಡುವಿನ ಎತ್ತರದ ಪರ್ವತಗಳ ಸಾಲಿನಲ್ಲಿ ಮುಳ್ಳಯ್ಯನ ಗಿರಿಗೆ ಉನ್ನತ ಸ್ಥಾನವಿದೆ.
ವಾಸ್ತವ್ಯಕ್ಕೆ ಚಿಕ್ಕಮಗಳೂರಿಗೆ ಮರಳಬೇಕು. ಮುಳ್ಳಯ್ಯನ ಗಿರಿಯಿಂದ ಕೆಮ್ಮಣ್ಣುಗುಂಡಿಗೆ ಅಥವಾ ಬಾಬಾ ಬುಡನ್ಗಿರಿಗೆ ಟ್ರಕ್ಕಿಂಗ್ ಹೋಗುವವರುಂಟು. ಅಂತೆಯೇ ಅಲ್ಲಿಂದ ಇಲ್ಲಿಗೂ ಸಾಹಸಿಗಳು ಹಾದಿ ಸವೆಸುತ್ತಾರೆ. ಈ ಚಾರಣದ ಹಾದಿಯುದ್ದಕ್ಕೂ ಜೀವ ತಂಪಾಗಿಸುವ ಹಸಿರಿದೆ. ಕೃಷಿಕನ ಕಲಾಕೃತಿಗಳಂತೆ ಕಾಣಿಸುವ ಕಾಫಿತೋಟಗಳ ಸಾಲುಗಳಿವೆ. ಅಲ್ಲಲ್ಲಿ ನೀರಿನ ಸೆಲೆಗಳೂ ಕಾಣಿಸುತ್ತವೆ. ಮಣ್ಣಿನ ಪರಿಮಳ, ಪ್ರಕೃತಿ ಗಂಧ, ಹಕ್ಕಿಗಾನ, ನೀರ ಆದ್ರತೆಯನ್ನು ಕೂಡಿಸಿಕೊಂಡು ಆವರಿಸಿಕೊಳ್ಳುವ ಗಾಳಿ ಚಾರಣಿಗರಿಗೆ ಖುಷಿ ನೀಡುತ್ತದೆ.
ಮುಳ್ಳಯ್ಯನ ಗಿರಿ ಬೆಟ್ಟದಲ್ಲಿ ಪರಿಸರದಲ್ಲಿ, ವಿಶೇಷವಾಗಿ ನೆತ್ತಿಯಲ್ಲಿ ಗಾಳಿ ಚಲನೆಯ ವೇಗ ಹೆಚ್ಚು. ಇರುಳಿನಲ್ಲಂತೂ ವೇಗ ಇಮ್ಮಡಿಸಿಕೊಳ್ಳುವ ಗಾಳಿ ಹಲವಾರು ಕಥೆಗಳ ಉಸುರಿ ಮುಂದೆ ಸಾಗುತ್ತದೆ. ಬೆಟ್ಟದ ಮೇಲೊಂದು ದೇಗುಲವೂ ಇದೆ. ಬೆಟ್ಟದ ನೆತ್ತಿಯಿಂದ ಸುತ್ತಲ ಕಾಡನ್ನು, ಕಾಡ ಸೆರಗಿನ ಊರುಗಳನ್ನು ನೋಡುವುದೇ ಒಂದು ಸುಖ, ಸೂರ್ಯೋದಯ, ಸೂರ್ಯಾಸ್ತ, ಮಾಯದ ಇರುಳು, ಮಾಂತ್ರಿಕ ಗಾಳಿ-ಮುಳ್ಳಯ್ಯನ ಗಿರಿಯಲ್ಲಿ ಪ್ರತಿಕ್ಷಣವೂ ಮಧುರ, ಜೀವಪರವಾಗಿದೆ !
"ಪ್ರಕೃತಿಯ ಪರಿಮಳ, ಸೌಂದರ್ಯದ ಸಾಮರಸ್ಯ, ಹಿಮಾಲಯದ ಹಿರಿಮೆ, ಜಗತ್ತಿನೆಲ್ಲಡೆ ಹುಡುಕುವ ಪ್ರಕೃತಿ ಆಹ್ಲಾದಕರ ಎಲ್ಲವೂ ಇಲ್ಲಿ ಸಿಗುವುದು ಖಂಡಿತ" .... ಬನ್ನಿ ಪ್ರವಾಸ ಹೋಗೋಣ - ಮುಳ್ಳಯ್ಯನಗಿರಿಗೆ....
(ಚಿತ್ರಗಳು : ಅಂತರ್ಜಾಲ ಕೃಪೆ)
-ರಮೇಶ ನಾಯ್ಕ, ಉಪ್ಪುಂದ, ಬೈಂದೂರು