ಕಾರ್ಯಸಾಧನೆಗೆ ಇರಬೇಕಾದ 3 ಶಕ್ತಿಗಳು

ಕಾರ್ಯಸಾಧನೆಗೆ ಇರಬೇಕಾದ 3 ಶಕ್ತಿಗಳು

 ಯಾವುದೇ ಒಂದು ಕಾರ್ಯ ಸಮಗ್ರವಾಗಿ ನೆರವೇರಬೇಕಾದರೆ ಅದು ಇಚ್ಛಾಶಕ್ತಿ, ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿಗಳಿಂದ ಉಂಟಾಗುತ್ತದೆ. ಯಾವುದೇ ಕಾರ್ಯವನ್ನು ಮಾಡಲು ಇಚ್ಛಾಶಕ್ತಿ ಬೇಕು. ತಾನು ಈ ಕಾರ್ಯವನ್ನು ಮಾಡಬೇಕೆಂಬ ಇಚ್ಛೆಯುಂಟಾಗಬೇಕು. ಇದರಿಂದ ಸ್ಪೂರ್ತಿಯುಂಟಾಗುತ್ತದೆ. ಕೇವಲ ಇಚ್ಛಾಶಕ್ತಿಯೊಂದಿದ್ದರೆ ಸಾಲದು ಅದನ್ನು ಸರಿಯಾಗಿ ವೃದ್ಧಿಗೊಳಿಸಲು ಜ್ಞಾನಶಕ್ತಿಬೇಕು. ಕೆಲಸವನ್ನು ಹೇಗೆ ಮಾಡಬೇಕು? ಏತಕ್ಕಾಗಿ ಮಾಡಬೇಕು? ಅದರಿಂದ ಸಮಾಜಕ್ಕೇನು ಪ್ರಯೋಜನ? ಕೆಲಸವನ್ನು ಹೇಗೆ ಉದ್ಯುಕ್ತಗೊಳಿಸಬೇಕು? ಎಂಬ ವಿಚಾರ ಮಾಡಬೇಕಾಗುತ್ತದೆ. ಇದನ್ನೆ ಜ್ಞಾನಶಕ್ತಿಎಂದು ಕರೆಯುತ್ತಾರೆ. ಇದರಿಂದ ಮನಸ್ಸಿಗೆ ಹೊಸ ಹೊಸವಿಚಾರಗಳು ಸ್ಫುರಣೆಯಾಗುತ್ತದೆ. ಕಾರ್ಯವನ್ನು ಯಶಸ್ವಿಯಾಗಿ ಕೈಗೊಳ್ಳಲು ಅನೇಕ ಮಾರ್ಗಗಳಿದ್ದರೂ ವಿವೇಕದಿಂದ ಸಾತ್ವಿಕಮಾರ್ಗದಲ್ಲಿ ಚಿಂತಿಸಿ ತನಗೂ ಪರರಿಗೂ ಉಪಕಾರವಾಗುವಂತೆ ಕಾರ್ಯಕೈಗೊಳ್ಳುವವನೇ ನಿಜವಾದ ಜಾಣ. ಇಚ್ಛಾಶಕ್ತಿ, ಜ್ಞಾನಶಕ್ತಿ ಇದ್ದರಷ್ಟೇ ಸಾಲದು ಅದನ್ನು ಕ್ರಿಯಾತ್ಮಕಗೊಳಿಸಲು ಕ್ರಿಯಾಶಕ್ತಿಯೂ ಬೇಕು. ಇಚ್ಛಾಶಕ್ತಿಯಿಂದ ಇಚ್ಛೆ ಉಂಟಾದರೆ, ಜ್ಞಾನ ಶಕ್ತಿಯಿಂದ ಕಾರ್ಯಮಾಡುವ ವಿಧಾನವನ್ನು ತಿಳಿಯುತ್ತಾನೆ(ಅದನ್ನೇ ಕಲೆ ಎನ್ನುವುದು) ಇಚ್ಛಾಶಕ್ತಿ, ಜ್ಞಾನಶಕ್ತಿ ಇದ್ದು ಕ್ರಿಯಾಶಕ್ತಿ ಇಲ್ಲದೆ ಇದ್ದರೆ ಏನೂ ಪ್ರಯೋಜನವಿಲ್ಲ. ನಾನು ಕಾರ್ಯ ಮಾಡಬೇಕೆಂಬ ಇಚ್ಛೆ ಇದ್ದು ಮಾಡದಿದ್ದರೆ ಬರೀ ಚಿಂತನೆಯಿಂದ ಏನೂ ಲಾಭ? ಅದನ್ನು ಕಾರ್ಯಗತಗೊಳಿಸಲು ಕ್ರಿಯೆಯನ್ನು ಮಾಡಬೇಕು. ಅಂದರೆ ಯೋಚಿಸಿದಂತೆ  ಕಷ್ಟಪಟ್ಟು ಕೆಲಸ ಮಾಡಬೇಕು ಬರೀ ಹಗಲುಗನಸು ಕಂಡರೆ ಏನೂ ಪ್ರಯೋಜನವಿಲ್ಲ.

ಒಬ್ಬ ನಿರುದ್ಯೋಗಿಗೆ ದಾರಿಯಲ್ಲಿ ಒಂದು ಮಡಿಕೆ ಸಿಕ್ಕಿತು. ಆ ಮಡಿಕೆಯನ್ನು ತೆಗೆದುಕೊಂಡುಹೋಗಿ ತಾನು ಮಲಗುವ ಮಂಚದ ಬುಡಕ್ಕೆ ಇಟ್ಟು ಅದನ್ನೇ ನೋಡುತ್ತಾ ಚಿಂತಲಾರಂಭಿಸಿದನು. ಮಡಿಕೆ ಎಷ್ಟು ಚೆನ್ನಾಗಿದೆ, ಇದರ ಬೆಲೆ ಎಷ್ಟಿರಬಹುದು? ಐದುರೂಪಾಯಿಗಳಿಷ್ಟಿರಬಹುದೇ, ನಾನು ಈ ರೀತಿಯ ಒಂದು ಮಡಿಕೆಯನ್ನು ಮಾಡಿ ಮಾರಿದರೆ ಐದು ರೂಪಾಯಿಸಿಗುತ್ತದೆ. ಅದರಲ್ಲಿ ಮೂರು ರೂಪಾಯಿ ಲಾಭವಿರುತ್ತದೆ. ನಾನು ಒಂದು ಮಡಿಕೆಯ ಕಾರ್ಖಾನೆಯನ್ನೇ ಮಾಡಿದರೆ ಹೇಗೆ ಸಾವಿರಾರು ರೂಪಾಯಿಗಳ ಲಾಭವಾಗುತ್ತದೆ. ನಾನು ಸಾವಿರ ಜನರಿಗೆ ಉದ್ಯೋಗವನ್ನು ಸಹ ಕೊಡಬಹುದು. ಸಂಬಂಧಿಗಳಲ್ಲಿ ಹಾಗೂ ಊರಿನಲ್ಲಿ ನನ್ನ ಪ್ರತಿಷ್ಟೆಯು ಹೆಚ್ಚುತ್ತದೆ. ನಾನು ದೊಡ್ಡ ಶ್ರೀಮಂತನು ಸಹ ಆಗಬಹುದು. ನಂತರ ಬಂದ ಲಾಭದಲ್ಲಿ  ಒಂದು ಕಬ್ಬಿಣದ ಕಾರ್ಖಾನೆಯನ್ನು ಮಾಡಬಹುದು, ನಂತರ ಒಂದು ಚಿನ್ನದ ಗಣೀಯನ್ನೇ ಆರಂಭಿಸಬಹುದು. ಹೀಗೆ ನಾನು ಈ ಊರಿಗೇ ದೊಡ್ಡ ಶ್ರೀಮಂತನಾಗಬಹುದು ಇತ್ಯಾದಿ ವಿಚಾರಗಳನ್ನು ಚಿಂತಿಸುತ್ತಾ ಬಾಯಾರಿಕೆಯಿಂದ ನೀರುಕುಡಿಯಲು ಅಡಿಗೆ ಮನೆಗೆ ಹೊರಟನು ಏಳುವ ರಭಸದಲ್ಲಿ ಕಾಲುತಾಗಿ ಮಡಿಕೆ ಮಂಚದಿಂದ ಬಿದ್ದು ಹೊಡೆದು ಹೋಯಿತು. ಈ ಮಡಿಕೆಯಿಂದ ಏನು ಪ್ರಯೋಜನವಿಲ್ಲವೆಂದು ಚಿಂತಿಸಿ ನೀರು ಕುಡಿಯುಲು ಹೋದನು. ಅವನ ಹಗಲು ಕನಸು ಕೂಡ ಹೊಡೆದು ಹೋಯಿತು. ಇಲ್ಲಿ ಅವನ ಕನಸು ಇಚ್ಛಾಶಕ್ತಿ ಮಾತ್ರ ಸೀಮಿತವಾದಂತಾಯಿತು. ಈ ರೀತಿಯಾದ ಹಗಲು ಕನಿಸಿನಿಂದ ಏನು ಪ್ರಯೋಜನವಾಗುವುದಿಲ್ಲ, ದೃಢಸಂಕಲ್ಪದಿಂದ ಕಾರ್ಯವನ್ನು ಸಾಧಿಸಬೇಕು ಅದಕ್ಕಾಗಿ ಸಂಸ್ಕೃತದಲ್ಲಿ ಈ ಸುಭಾಷಿತವನ್ನು ಹೇಳಿದ್ದಾರೆ.

ಪ್ರಾರಭ್ಯತೇ ನ ಖಲು ವಿಘ್ನಭಯೇನ ನೀಚೈ: ಪ್ರಾರಭ್ಯ ವಿಘ್ನವಿಹತಾ ವಿರಮಂತಿ ಮಧ್ಯಾ:
ವಿಘ್ನೈ: ಪುನ:ಪುನರಪಿ ಪ್ರತಿಹನ್ಯಮನಾ: ಪ್ರಾರಭ್ಯಮುತ್ತಮಜನಾ: ನ ಪರಿತ್ಯಜಂತಿ ||

ಕಾರ್ಯರಂಭ ಮಾಡಿದರೆ ವಿಘ್ನಗಳು ಬಂದು ಬಿಡಬಹುದೆಂದು ಚಿಂತಿಸಿ ನೀಚರು(ಸೋಮಾರಿಗಳು) ಕಾರ್ಯವನ್ನು ಆರಂಭವೇ ಮಾಡುವುದಿಲ್ಲವಂತೆ.  ಇನ್ನು ಮಧ್ಯದವರು ವಿಘ್ನಗಳು ಬಂದೋಡನೆಯೇ ಅಯೋ ಸಾಕಷ್ಟು ತೊಂದರೆಯಾಯಿತು ಈ ರೀತಿ ವಿಘ್ನಗಳು ಉಂಟಾದರೆ ಕಾರ್ಯಸಾಧನೆ ಆಗುವುದಿಲ್ಲವೆಂದು ಮಧ್ಯದಲ್ಲಿಯೇ ಬಿಟ್ಟುಬಿಡುತ್ತಾರೆ. ಆದರೆ ಉತ್ತಮರ ಮಾರ್ಗವೇ ಬೇರೆ. ಅವರು ಕಾರ್ಯದ ನಡುವೆ ಸಾಕಷ್ಟು ವಿಘ್ನಗಳು ಬಂದರೆ ಮತ್ತೆ ಮತ್ತೆ ಎದುರಿಸಿ ಕಾರ್ಯಸಾಧನೆ ಮಾಡುತ್ತಾರೆ. ಆದ್ದರಿಂದ ನಾವು ಸಹ ಉತ್ತಮರಾಗಬೇಕು. ಕಾರ್ಯವನ್ನು ಸಂಪೂರ್ಣಗೊಳಿಸಲು ವೃದ್ಧ ಸ್ಯೈಯೋಗವು ಬೇಕು. ವೃದ್ಧ ಸಂಯೋಗ ಎಂದರೆ ಜ್ಞಾನಿಗಳ ತಿಳಿದವರ, ಗುರುಹಿರಿಯರ, ಅನುಭವಸ್ಥರ ಮಾರ್ಗದರ್ಶನ. ಹಿರಿಯರ ಮಾರ್ಗದರ್ಶನವಿದ್ದರೆ ಅವನಿಗೆ ಕಷ್ಟಗಳೇನೂ ಕಡಿಮೆಯಾಗುವುದಿಲ್ಲ. ಆದರೆ ಅದನ್ನು ಎದುರಿಸುವ ಸಾಮರ್ಥ್ಯವು ಬರುತ್ತದೆ. ಎಲ್ಲದಕ್ಕೂ ಸಂಕಲ್ಪವೇ ಮೂಲ ಕಾರಣ. ನಾನು ಈ ಕಾರ್ಯವನ್ನು ಮಾಡಬೇಕೆಂಬ ಸಂಕಲ್ಪ ಉಂಟಾದರೆ ಕಾರ್ಯವನ್ನು ಹೇಗೆ ಮಾಡಬೇಕೆಂದು ಚಿಂತಿಸಲು ಸಾಧ್ಯ. ಸಂಕಲ್ಪವಿಲ್ಲದೇ ಯಾವ ಕಾರ್ಯವನ್ನು ಮಾಡಲು ಸಾಧ್ಯವಿಲ್ಲ.  ಸಂಕಲ್ಪವು ದೃಢವಾಗಿದ್ದಲ್ಲಿ ಕಾರ್ಯವು ಆಗಿಯೇ ತೀರುತ್ತದೆ. ಕೇವಲ ನಾನು ಕಾರ್ಯವನ್ನು ಮಾಡಬೇಕೆಂಬ ಸಂಕಲ್ಪ ಇರದೆ ನಾನು ಇದೇ ರೀತಿ ಕಾರ್ಯಮಾಡಬೇಕೆಂಬ ಸಂಕಲ್ಪ ಬೇಕು. ಆಗಲೇ ಕಾರ್ಯಕ್ಕೆ ಮಹತ್ವ ಬರುತ್ತದೆ. ಯಾವುದು ಹೇಗಿರುತ್ತದೆಯೊ ಹಾಗೆಯೇ ಅದನ್ನು ಹಾಗೆಯೇ ಒಪ್ಪಿಕೊಳ್ಳುವುದು ಮನುಷ್ಯನಿಗಿಂತ ಹಿಂದಿದ್ದ ಜೀವಿಗಳ ಲಕ್ಷಣ.  ಆದರೆ ಯಾವುದು ಹೇಗಿರುತ್ತದೆಯೋ
ಅದಕ್ಕಿಂದ ಮಿಗಿಲಾಗಿ ಯಾವುದು ಹೇಗಿರಬೇಕು ಹಾಗೆ ಅದನ್ನು ಮಾಡುವತ್ತ ಪ್ರಯತ್ನ ನಡೆಸುವುದು ಮನುಷ್ಯನ ವೈಶಿಷ್ಟ್ಯ. ಮನುಷ್ಯನು ಜ್ಞಾನವನ್ನು ಹೊಂದಲು ಸಾಧ್ಯವೇ ಹೊರತು ಪ್ರಾಣಿಗಳಲ್ಲ. ಅದಕ್ಕೆ ಜ್ಞಾನೇನ ಹೀನಾ: ಪಶುಭಿಸ್ಸಮಾನಾಃ ಎಂದು ಋಷಿಗಳು ಹೇಳಿದ್ದಾರೆ.

ಒಬ್ಬ ಯುವಕನಿಗೆ ದೊಡ್ಡ ಭಾಷಣಕಾರನಾಗಬೇಕೆಂದ ಆಸೆ ಇತ್ತು. ಅದಕ್ಕೆ ತಕ್ಕಂತೆ ಸಾಕಷ್ಟು ಅಧ್ಯಯನ ಮಾಡಿ ಜ್ಞಾನವನ್ನು ಸಂಪಾದಿಸಿಕೊಂಡನು. ಆದರೆ ಅವನಿಗೆ ಸಭೆಯಲ್ಲಿ ನಿಂತು ಭಾಷಣ ಮಾಡಲು ಅಂಜಿಕೆ ಇದ್ದ ಫಲವಾಗಿ ಕ್ರಿಯಾತ್ಮಕಗೊಳಿಸಲು ವಿಫಲನಾದನು.  ಇನ್ನು ಕಾರ್ಯೋನ್ಮುಕನಾಗುವುದು, ಹಾಕಿದ ಯೋಜನೆಯಂತೆ, ಮಾಡಿದ ಯೋಚೆನೆಯಂತೆ, ಗುರು-ಹಿರಿಯರ ಮಾರ್ಗದರ್ಶನದಲ್ಲಿ ಕಾರ್ಯ ಸಿದ್ಧಿಗೋಸ್ಕರ ಶ್ರಮಿಸುವುದು ಕಷ್ಟಪಡದೆಯೇ ಯಾವುದೂ ಮಹತ್ಕಾರ್ಯ ಸಿದ್ಧಿಸುವುದಿಲ್ಲ. ಅಡೆತಡೆ ಇಲ್ಲದ ರಸ್ತೆಯಲ್ಲಿ ವಾಹನವನ್ನು ಓಡಿಸುವುದರಿಂದ, ಮೋಡಗಳಿಲ್ಲದಿದ್ದಾಗ ವಿಮಾನವನ್ನು ಹಾರಿಸುವವನು ಉತ್ತಮ ಚಾಲಕ ನಾಗುವುದಿಲ್ಲ. ಅಡೆತಡೆಗಳನ್ನು ದಾಟುವುದರಿಂದಲೇ ಉತ್ತಮನಾಗುತ್ತಾನೆ.

“ಉದ್ಯಮೇನೈವ ಸಿದ್ಧ್ಯಂತಿ ಕಾರ್ಯಾಣಿಚ ಮನೊರಥೈ: ನಹಿಸುಪ್ತಸ್ಯ ಸಿಂಹಸ್ಯ ಪ್ರವಿಶನ್ತಿ ಮುಖೆ ಮೃಗಾ:||

ಅದರಿಂದ ಕಷ್ಟಗಳನ್ನು, ವಿಘ್ನಗಳನ್ನು ಎದುರಿಸಿ ಮುನ್ನುಗ್ಗಬೇಕು. ಉದ್ಯಮದಿಂದಲೇ ಕಾರ್ಯ ಸಂಪನ್ನವಾಗುತ್ತದೆ. ಕಷ್ಟಪಟ್ಟು ದುಡಿಯುವುದರಿಂದಲೇ ಫಲ ಸಿಗುತ್ತದೆ. ಸುಮ್ಮನೆ ಮಲಗಿರುವ ಸಿಂಹದ ಬಾಯಿಗೆ ಪ್ರಾಣಿಗಳು ಬಂದು ಬೀಳುವುದಿಲ್ಲ. ಹಾಗಾಗಿ ಕಷ್ಟಪಟ್ಟು ಉದ್ಯಮವನ್ನು ಮಾಡಬೇಕು. ಕಷ್ಟವನ್ನು ಎದುರಿಸುವಲ್ಲಿ ಸಂತೋಷವನ್ನು ಪಡಬೇಕು.

ವಿಶ್ವಾಮಿತ್ರ ಋಷಿಗೆ ತೀರ್ವವಾದ ಇಚ್ಛಾಶಕ್ತಿ, ಜ್ಞಾನಶಕ್ತಿ, ಕ್ರಿಯಾಶಕ್ತಿ ಇದ್ದ ಕಾರಣ ಗ್ರಾಯತ್ರಿ ಮಂತ್ರವನ್ನು ಕಂಡು ಹಿಡಿದು ಮಂತ್ರ ದೃಷ್ಟಾರನಾದನು. ಬ್ರಹ್ಮಋಷಿಯಾದನು, ಗೋತ್ರ ಪ್ರವರ್ತಕನಾದನು. ಪರೋಪಕಾರದಿಂದ ಪುಣ್ಯ ಬರುತ್ತದೆ ಎಂದು ಹೇಳಿದ್ದಾರೆ ಹೊರತು, ಅಪಕಾರದಿಂದ ಪುಣ್ಯ ಬರುತ್ತದೆ ಎಂದು ಎಲ್ಲೂ ಹೇಳಿಲ್ಲ. ಹಾಗಾಗಿ ಕ್ರಿಯೇ ವಿನಾಶಿಕಾರಿಯಾಗಿರದೆ, ರಚನಾತ್ಮಕವಾಗಿರಬೇಕು.
ಲಲಿತಾ ಸಹಸ್ರ ನಾಮದಲ್ಲಿ ದೇವಿಯನ್ನು ಇಚ್ಛಾಶಕ್ತಿಜ್ಞಾನಶಕ್ತಿಕ್ರಿಯಾಶಕ್ತಿಸ್ವರೂಪಿಣೀ ಎಂದು ಸ್ಮರಿಸಿರುವುದರಿಂದ ಇವುಗಳ ಮಹತ್ವ ಕಾರ್ಯಸಾಧನೆಯಲ್ಲಿ ಅತ್ಯಧಿಕವಾಗಿದೆಯೆಂದು ತಿಳಿದುಬರುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಇಚ್ಛಾಶಕ್ತಿ, ಜ್ಞಾನಶಕ್ತಿ, ಕ್ರಿಯಾಶಕ್ತಿಯನ್ನು  ಚೆನ್ನಾಗಿ ತಿಳಿದುಕೊಂಡರೆ ತನ್ನ ಜೀವನದ ಧ್ಯೇಯವನ್ನು ತಲುಪಲು ಸಾಧ್ಯ.

ಜೀವೋತ್ತಮ ಹೆಚ್. ರಾವ್ ಮೈಸೂರು

Comments