ಕಾಲದ ಮಹಿಮೆಯಲ್ಲಿ ಖಯ್ಯಾಮರ ಹಿರಿಮೆ!
“We are in truth but pieces on this chess board of life, which in the end we leave, only to drop one by one into the grave of nothingness”- ಉಮರ್ ಖಯ್ಯಾಮ್
ಉರ್ದು ಮತ್ತು ಫಾರ್ಸಿ ಸಾಹಿತ್ಯ ಕ್ಷೇತ್ರದಲ್ಲಿ ಮಿರ್ಜಾ ಗಾಲಿಬ್`ನ ಗಝಲ್`ಗಳು, ಮೀರ್ ತಕ್ಕಿ ಮೀರ್`ನ ನಝಮ್`ಗಳು ಮತ್ತು ಉಮರ್ ಖಯ್ಯಾಮ್`ನ ರುಬಾಯಿಗಳು ಸುಪ್ರಸಿದ್ಧವಾಗಿದೆ. ಅತ್ಯುತ್ಕೃಷ್ಟ ರುಬಾಯಿಗಳ ರಚನೆಗೆ ಹೆಸರುವಾಸಿಯಾದ "ಖಯ್ಯಾಮ್" ಖ್ಯಾತಿಯ ಉಮರ್ ಇಬ್ನ್ ಇಬ್ರಾಹಿಂ ಖಯ್ಯಾಮ್ (1048 - 1131) ಅವರು ಕೇವಲ ಫಾರ್ಸಿ-ಉರ್ದು ಕವಿಯಾಗದೇ, ಗಣಿತಶಾಸ್ತ್ರ, ಖಗೋಳಶಾಸ್ತ್ರ, ತತ್ವಶಾಸ್ತ್ರ ಮತ್ತು ಪರ್ಷಿಯನ್ ಕಾವ್ಯಕ್ಕೆ ಕರುಣಿಸಿದ ಅಪಾರ ಕೊಡುಗೆಗಳಿಂದ ಹೆಸರುವಾಸಿಯಾಗಿದ್ದಾರೆ. 1859ರಲ್ಲಿ ಎಡ್ವರ್ಡ್ ಫಿಟ್ಜ್ಗೆರಾಲ್ಡ್ (Edward FitzGerald) ಅವರು ಖಯ್ಯಾಮ್ ಅವರ ರುಬಾಯಿಗಳನ್ನು (Quadrants) ಆಂಗ್ಲ ಭಾಷೆಗೆ ಭಾಷಾಂತರಿಸಿದರು. ಖಯ್ಯಾಮ್ ಅವರ ರುಬಾಯಿಗಳ ಭಾವಾನುವಾದ 'The Rubaiyat of Omar Khayyam'ವು ಐರೋಪ್ಯ ಖಂಡಾದ್ಯಂತ ಜನಪ್ರಿಯತೆ ಕಂಡಿತು.
ಖಯ್ಯಾಮ್ ಅವರು ಸೆಲ್ಜುಕ್ ಸಾಮ್ರಾಜ್ಯದ ರಾಜಧಾನಿಯಾದ ನಿಶಾಪುರದಲ್ಲಿ ಜನಿಸಿ, ತಮ್ಮ ಬಾಲ್ಯವನ್ನು ಅಲ್ಲೇ ಕಳೆದರು. ಬಾಲ್ಯದಲ್ಲೇ ಅವರ ಜಾಣ್ಮೆ ಮತ್ತು ಪ್ರತೀಭೆಗಳನ್ನು ಗುರುತಿಸಿದ ಅವರ ಗುರುಗಳು, ಅವರನ್ನು ಉನ್ನತ ವ್ಯಾಸಂಗಕ್ಕಾಗಿ ಅವರನ್ನು ಖೋರಾಸನ್ ನಲ್ಲಿ ಇಮಾಮ್ ಮುವಾಫಕ್ ನಿಶಾಪುರಿ ಅವರಲ್ಲಿ ಕಳುಹಿಸಿದರು. ಖೋರಾಸನ್ ನಲ್ಲಿ ಖಯ್ಯಾಮ್ ಅವರು ಸುಪ್ರಸಿದ್ಧ ಗಣಿತಜ್ಞರಾದ ಅಬು ಹಸನ್ ಬಹ್ಮನ್ಯರ್ ಬಿನ್ ಮಾರ್ಜ್ಬಾನ್ ಅವರಲ್ಲಿ ವಿಜ್ಞಾನ, ತತ್ವಶಾಸ್ತ್ರ, ಗಣಿತಶಾಸ್ತ್ರ ಮತ್ತು ಖಗೋಳಶಾಸ್ತ್ರವನ್ನು ಅಧ್ಯಯನಿಸಿದರು.
1070ರಲ್ಲಿ ಸಮರಖಂಡಿನಲ್ಲಿ ಬಂದು ನೆಲೆಸಿದ ಖಯ್ಯಾಮ್ ಅವರು, ತಮ್ಮ ಅಧ್ಯಯನದೊಂದಿಗೆ ಸಂಶೋಧನೆಯನ್ನು ನೆರವೇರಿಸಲು ಪ್ರಾರಂಭಿಸಿದರು. ಅವರು ಅಬು ತಾಹಿರ್ ಅಬ್ದ್ ಅಲ್-ರೆಹಮಾನ್ ಇಬ್ನ್ ಅಲಕ್ ಅವರ ಮಾರ್ಗದರ್ಶನದಲ್ಲಿ ಬೀಜಗಣಿತವನ್ನು ಅವಲೋಕಿಸುವ ಕುರಿತು ತಮ್ಮ ಪ್ರಸಿದ್ಧ ಗ್ರಂಥವನ್ನು ರಚಿಸಲು ಪ್ರಾರಂಭಿಸಿದರು. ಅದನ್ನನುಸರಿಸಿ, ಕ್ರಮೇಣವಾಗಿ ಅವರು ಗಣಿತಶಾಸ್ತ್ರದಲ್ಲಿ ನೈಪುಣ್ಯತೆಯನ್ನು ಸಾಧಿಸಲು ಪ್ರಾರಂಭಿಸಿದರು. ತರುವಾಯ, ಖಯ್ಯಾಮ್ ಅವರು ಗಣಿತಶಾಸ್ತ್ರದೊಂದಿಗೆ ಖಗೋಳಶಾಸ್ತ್ರದಲ್ಲೂ ಸಂಶೋಧನೆಯನ್ನು ನೆರವೇರಿಸಿ, ಕೊಡುಗೆಗಳನ್ನು ಕರುಣಿಸಲು ಪ್ರಾರಂಭಿಸಿದರು.
ಉಮರ್ ಖಯ್ಯಾಮ್ ಅವರು ಗಣಿತಜ್ಞನಾಗಿ ತಮ್ಮ ಬದುಕಿನಲ್ಲಿ ಸುಪ್ರಸಿದ್ಧನಾಗಿದ್ದರು. ಓರ್ವ ಸಫಲ ಗಣಿತಜ್ಞರಾಗಿ ಖಯ್ಯಾಮ್ ಅವರು ಗಣಿತ ಕ್ಷೇತ್ರಕ್ಕೆ ಕರುಣಿಸಿದ ಕೊಡುಗೆಗಳು ಅಗಣಿತವಾಗಿದೆ. Classification of Solution of Cubic Equations ಕುರಿತಾದ ಅವರ ಸಂಶೋಧನೆಗಾಗಿ ಅವರು ಗಣಿತ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದಾರೆ; ಅವರು ಶಂಕುವಿನಾಕಾರದ ಛೇದಕ ಕುರಿತಿರುವ ಜ್ಯಾಮಿತೀಯ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸಲು ದುಡಿದಿದ್ದಾರೆ. Parallel Axiomನಂತಹ ಜಟಿಲ ವಿಷಯವನ್ನು ಅರ್ಥೈಸಿಕೊಳ್ಳಲು ಖಯ್ಯಾಮ್ ಅವರ ಕೆಲವು ಕೃತಿಗಳು ಉಪಯುಕ್ತಕರವಾಗಿದೆ ಎಂದು ಹಲವಾರು ಆಧುನಿಕ ಗಣಿತಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. ತಮ್ಮ ಕೃತಿ 'The Treatise on the Division of a Quadrant of a Circle'ನಲ್ಲಿ ಜ್ಯಾಮಿತಿಯ ಸಮಸ್ಯೆಗಳನ್ನು ಬೀಜಗಣಿತದ ಮಾದರಿಯಲ್ಲಿ ವ್ಯಕ್ತಪಡಿಸಿ ಅವುಗಳಿಗೆ ಪರಿಹಾರವನ್ನು ಒದಗಿಸುವಲ್ಲಿ ಅವರು ಸಫಲವಾದರು. ಆಧುನಿಕ ಖಗೋಳಶಾಸ್ತ್ರಕ್ಕೆ ಈ ಬೆಳವಣಿಗೆ ಬಹಳ ಉಪಯುಕ್ತವಾಗಿದೆ. ಅವರು ರಚಿಸಿದ ಗಣಿತದ ಬೃಹತ್ ಮೇರುಕೃತಿಗಳಲ್ಲಿ ಈ ಮೂರು ವಿಶ್ವಕೋಶಗಳು ಸುಪ್ರಸಿದ್ಧಿಗೊಳಿಸಿದೆ:
1. A commentary on the difficulties concerning the postulates of Euclid's Elements.
2. On the division of a quadrant of a circle.
3. On proofs for problems concerning Algebra.
ಹಾಗೆಯೇ, ಖಗೋಳಶಾಸ್ತ್ರಜ್ಞರಾಗಿ ಅವರು ಸೌರವರುಷದ (Solar Year) ಅವಧಿಯನ್ನು ನಿಷ್ಕೃಷ್ಠತೆಯೊಂದಿಗೆ ಲೆಕ್ಕ ಹಾಕಿದರು. ಅವರು 'ಜಲಾಲಿ ಕ್ಯಾಲೆಂಡರ್'ಅನ್ನು ವಿನ್ಯಾಸಗೊಳಿಸಿದರು: ಇದು ಸುಮಾರು ಒಂದು ಸಹಸ್ರಮಾನದ ನಂತರವೂ ಬಳಕೆಯಲ್ಲಿರುವ 'ಪರ್ಷಿಯನ್ ಕ್ಯಾಲೆಂಡರ್'ಗೆ ಆಧಾರವನ್ನು ಒದಗಿಸಿದ ಅತ್ಯಂತ ನಿಖರವಾದ ಕ್ಯಾಲೆಂಡರ್ ಆಗಿದೆ. ಪ್ರಸ್ತುತ ದಿನಗಳಲ್ಲಿ ಚಾಲ್ತಿಯಲ್ಲಿರುವ 'Gregorian Calendar'ವು ಖಯ್ಯಾಮ್ ಅವರ 'ಜಲಾಲಿ ಕ್ಯಾಲೆಂಡರ್'ನಿಂದ ಪ್ರೇರಿತವಾಗಿದೆ. 1582ರ ವರ್ಷದಲ್ಲಿ ಜಲಾಲಿ ಕ್ಯಾಲೆಂಡರಿನ ನಿಖರತೆಯು ಗ್ರೆಗೋರಿಯನ್ ಕ್ಯಾಲೆಂಡರ್ಗಿಂತ ಹೆಚ್ಚಾಗಿತ್ತು!
1074-75ರಲ್ಲಿ, ಪರ್ಶಿಯ ದೇಶದಲ್ಲಿ ಖಗೋಳ ವೀಕ್ಷಣಾ ಮಂದೀರವನ್ನು ನಿರ್ಮಿಸಲು ಮತ್ತು ಪರ್ಷಿಯನ್ ಕ್ಯಾಲೆಂಡರ್ ಅನ್ನು ಅಭಿವೃದ್ಧಿಸಲು ಉಮರ್ ಖಯ್ಯಾಮ್ ಅವರನ್ನು ಸುಲ್ತಾನ್ ಮಲಿಕ್ ಷಾ ಆಯ್ಕಿಸಿದರು. ಖಗೋಳ ವೀಕ್ಷಣೆಗಳನ್ನು ಪುನಃ ನೆರವೇರಿಸಿ ಮತ್ತು ಉನ್ನತ ಮಟ್ಟದ ಖಗೋಳ ಕೋಷ್ಟಕವನ್ನು ಪರಿಷ್ಕರಿಸಲು ಖಯ್ಯಾಮ್ ಅವರ ನಿರ್ದೇಶನದಲ್ಲಿ ಎಂಟು ವಿದ್ವಾಂಸರ ಸಮಿತಿಯೊಂದನ್ನು ಸುಲ್ತಾನ್ ಮಲಿಕ್ ಷಾ ಅವರು ನಿಯೋಜಿಸಿದ್ದರು. ಖಯ್ಯಾಮ್ ಅವರ ಕೃತಿಯು 'ಇಲ್ಮ್ ಉಲ್ ನಜಮ್'ವು ನಕ್ಷತ್ರಗಳ ಕುರಿತು ಬರೆದಿರುವ ಬ್ರಹತ್ ಗ್ರಂಥವಾಗಿದೆ!
ಪರ್ಷಿಯನ್ ಭಾಷೆಯಲ್ಲಿ ರಚಿತಗೊಂಡ ಖಯ್ಯಾಮ್ ಅವರ ಕವಿತೆಗಳು ಫಾರ್ಸಿ, ಅರಬ್ಬೀ ಮತ್ತು ಉರ್ದು ಭಾಷೆಯಾಡುವವರಲ್ಲಿ ಜನಪ್ರಿಯತೆಗೊಳಿಸಿತು; ವಿಶೇಷತಃ ಚತುರ್ಪದಿ ರೂಪದಲ್ಲಿ ರಚಿತಗೊಂಡ 'ಖಯ್ಯಾಮ್ ಅವರ ರುಬಾಯಿಯಾತ್'ಗಳು ಬಹಳ ಪ್ರಸಿದ್ಧಿಗಳಿಸಿತು. ಅವುಗಳು ಆಂಗ್ಲ ಭಾಷೆಯಲ್ಲಿ ಅನುವಾದಗೊಳ್ಳುತ್ತಿದ್ದಂತೆ, ಐರೋಪ್ಯ ಕಾವ್ಯತಜ್ಞರ ಗಮನ ಸೆಳೆದು, ಜಗದ್ಪ್ರಸಿದ್ಧಿಗೊಳಿಸಿತು.
1942ರಲ್ಲಿ ಅಗಾಥಾ ಕ್ರಿಸ್ಟಿ (Agatha Christie) ಅವರು ತಮ್ಮ ಕೃತಿ "The Moving Finger" ಕಾದಂಬರಿಯ ಶೀರ್ಷಿಕೆಯು ಉಮರ್ ಖಯ್ಯಾಮ್ ಅವರ ರುಬಾಯಿಯೊಂದರಿಂದ ಪ್ರೇರಿತವಾಗಿದೆ. ಕ್ಲಿಂಟೊನ್-ಲೆವಿನ್ಸ್ಕಿ ಹಗರಣದ ಕುರಿತು ನೀಡಿದ ಕ್ಷಮಾ ಭಾಷಣದಲ್ಲಿ ಅಮೆರಿಕಾದ 42ನೇ ಅಧ್ಯಕ್ಷರು ಬಿಲ್ ಕ್ಲಿಂಟೊನ್ ಅವರು ಖಯ್ಯಾಮ್ ಅವರ ರುಬಾಯಿಯೊಂದನ್ನು ಶ್ವೇತಭವನದಲ್ಲಿ ಪಠಿಸಿದರು. ಮಾರ್ಟಿನ್ ಲೂಥರ್ ಕಿಂಗ್ ಅವರು ತಮ್ಮ "ಬಿಯಾಂಡ್ ವಿಯೆಟ್ನಾಂ: ಎ ಟೈಮ್ ಟು ಬ್ರೇಕ್ ಸೈಲೆನ್ಸ್" ಉಪನ್ಯಾಸದಲ್ಲಿ ಈ ಚತುರ್ಪದಿಯನ್ನು ಉಲ್ಲೇಖಿಸಿದ್ದಾರೆ: “We may cry out desperately for time to pause in her passage, but time is adamant to every plea and rushes on. Over the bleached bones and jumbled residues of numerous civilizations are written the pathetic words, ‘Too late.’ There is an invisible book of life that faithfully records our vigilance or our neglect. Omar Khayyam is right: ‘The moving finger writes, and having writ moves on'."
ಉಮರ್ ಖಯ್ಯಾಮ್ ಅವರ ಸ್ಮರಣಾರ್ಥ ಗೂಗಲ್ ಎರಡು ಗೂಗಲ್ ಡೂಡಲ್ಗಳನ್ನು ಬಿಡುಗಡೆ ಮಾಡಿತು. ಯುರೋಪ್ ಖಂಡಾದ್ಯಂತ ಪ್ರಸಿದ್ಧ ಖಗೋಳ ವಿಶ್ವವಿದ್ಯಾಲಯಗಳ ಅಂಗಳದಲ್ಲಿ ಉಮರ್ ಖಯ್ಯಾಮ್ ಅವರ ಅಮೃತಶಿಲೆಯಿಂದ ಕೆತ್ತಿದ ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ವಿಯೆನ್ನಾದಲ್ಲಿರುವ ವಿಶ್ವಸಂಸ್ಥೆಯ ಕಛೇರಿಯಲ್ಲಿ ಇರಾನ್ ಕೊಡುಗೆಯಾಗಿ ನೀಡಿದ ಖಯ್ಯಾಮ್'ರವರ ಪ್ರತಿಮೆಯನ್ನು ಪರ್ಷಿಯನ್ ವಿದ್ವಾಂಸರ ಮಂಟಪದ ಭಾಗವಾಗಿ ಸ್ಥಾಪಿಸಲಾಗಿದೆ.
ಅಲ್ಲದೇ, ಉಮರ್ ಖಯ್ಯಾಮ್ ಅವರು ಖಗೋಳಶಾಸ್ತ್ರ ಮತ್ತು ಗಣಿತಶಾಸ್ತ್ರಕ್ಕೆ ಕರುಣಿಸಿದ ಅಗಣಿತ ಕೊಡುಗೆಗಳನ್ನು ಎತ್ತಿ ಹಿಡಿಯುತ್ತ 1970ರಲ್ಲಿ ಅಂತಾರಾಷ್ಟ್ರೀಯ ಖಗೋಳಶಾಸ್ತ್ರ ಸಂಘವು [IAU] ತಿಂಗಳಿನ ಅಂಗಳದಲ್ಲಿರುವ ಬೃಹತ್ ಬಾಂಬುಕುಳಿಯೊಂದನ್ನು ಅವರ ಶುಭನಾಮದಿಂದ ನಾಮಕರಣಗೊಳಿಸಿದರು. 1980ರಲ್ಲಿ ರಷಿಯಾದ ಖಗೋಳತಜ್ಞೆ Lyudmila Zhuravlyova ಅವರು ಕಂಡು ಹಿಡಿದ ಕ್ಷುದ್ರಗ್ರಹವಾದ 'Minor Planet 3095' ಅನ್ನು ಖಯ್ಯಾಮ್ ಅವರ ಹೆಸರಿನಿಂದ ಗುರುತಿಸಲು ಆರಂಭಿಸಲಾಗಿದೆ!
-ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ