ಗಿರಿಕಂದರ ಎಸ್ಟೇಟ್

ಗಿರಿಕಂದರ ಎಸ್ಟೇಟ್

ಪುಸ್ತಕದ ಲೇಖಕ/ಕವಿಯ ಹೆಸರು
ಗಿರಿಮನೆ ಶ್ಯಾಮರಾವ್
ಪ್ರಕಾಶಕರು
ಗಿರಿಮನೆ ಪ್ರಕಾಶನ, ಲಕ್ಸ್ಮಿಪುರಂ ಬಡಾವಣೆ, ಸಕಲೇಶಪುರ-೫೭೩೧೩೪, ದೂ: ೯೭೩೯೫೨೫೫೧೪
ಪುಸ್ತಕದ ಬೆಲೆ
ರೂ.೨೦೦.೦೦, ಮುದ್ರಣ: ೨೦೨೦

‘ಮಲೆನಾಡಿನ ರೋಚಕ ಕಥೆಗಳು’ ಇದರ ೧೦ ನೆಯ ಭಾಗವೇ 'ಗಿರಿಕಂದರ ಎಸ್ಟೇಟ್'. ಎಂದಿನಂತೆ ಲೇಖಕರಾದ ಗಿರಿಮನೆ ಶ್ಯಾಮರಾವ್ ಅವರು ಪರಿಸರವನ್ನು ತಮ್ಮ ಬರಹದಲ್ಲಿ ಹೊದ್ದುಕೊಂಡು ರೋಚಕ ಕಥನ ಮಾಲೆಯನ್ನು ಪೋಣಿಸಿದ್ದಾರೆ. ಅವರೇ ತಮ್ಮ ಕೃತಿಯ ಬಗ್ಗೆ ಬೆನ್ನುಡಿಯಲ್ಲಿ ಹೀಗೆ ಬರೆದುಕೊಂಡಿದ್ದಾರೆ. “ಇದು ಮಲೆನಾಡಿನ ರೋಚಕ ಕಥೆಗಳ ಸರಣಿಯ ಹತ್ತನೆಯ ಭಾಗ. ‘ಶೋಧ' ಎಂಬ ಹೆಸರಿನಲ್ಲಿ ‘ಮಂಗಳ' ವಾರಪತ್ರಿಕೆಯಲ್ಲಿ ಮೂಡಿಬಂದ ಜನಪ್ರಿಯ ಧಾರಾವಾಹಿ. ವೈವಿಧ್ಯಮಯವಾದ ಮಲೆನಾಡಿನ ರೋಚಕತೆಗಳ ಚಿತ್ರಣ ಇದರಲ್ಲೂ ಇದೆ. ಮಲೆನಾಡಿನ ಭಾಗವಾಗಿ ತೆಗೆದುಕೊಳ್ಳುವ ಇದರ ಮತ್ತೊಂದು ಮಗ್ಗುಲೇ ಅರೆಮಲೆನಾಡು. ಅದರ ನಂತರವೇ ಬಯಲು ಪ್ರದೇಶ ಸಿಗುವುದು. ಕಥೆಯ ಮೂಲಕ ಅಂತಹಾ ಅರೆಮಲೆನಾಡಿಗೆ ನಿಮ್ಮನ್ನು ಕರೆದೊಯ್ಯುವ ಪ್ರಯತ್ನ ಇದರಲ್ಲಿದೆ. ಪಶ್ಚಿಮಘಟ್ಟ ಪ್ರದೇಶಗಳು ಮನುಷ್ಯರ ವಾಸಕ್ಕೆ ಯೋಗ್ಯವಲ್ಲ. ಅದು ಪ್ರಾಣಿಗಳು ವಾಸ ಮಾಡುವ ಜಾಗ. ನಾವೀಗ ಅದನ್ನು ಅತಿಕ್ರಮಿಸಿ ಪ್ರಾಣಿಗಳನ್ನು ಹೊರದೂಡುತ್ತಾ ಅಥವಾ ನಾಶ ಮಾಡುತ್ತಾ ಅಲ್ಲಿ ನಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದೇವೆ ಅಷ್ಟೇ. ಈ ಅರೆಮಲೆನಾಡೇ ಮನುಷ್ಯವಾಸಕ್ಕೆ ನಿಜಕ್ಕೂ ಯೋಗ್ಯವಾದ ಸ್ಥಳ. ಇಲ್ಲಿ ಬೆಳೆಯುವ ಬೆಳೆಯೂ ಹುಲುಸು. ಕಾಫಿ ಮತ್ತು ‘ಕಪ್ಪು ಚಿನ್ನ' ಎಂದೇ ಪ್ರಸಿದ್ಧವಾದ ಕಾಳುಮೆಣಸು ಬೆಳೆಯಲು ಪ್ರಶಸ್ಥವಾದ ಪ್ರದೇಶ ಇದೇ. ತಪ್ಪಿ ಹೋದ ಹೆತ್ತವರನ್ನು ಡಿ.ಎನ್.ಎ. ತಂತ್ರಜ್ಞಾನದ ಮೂಲಕ ಹುಡುಕುವ ರೋಚಕ ಕಲ್ಪನೆಯ ಕಾದಂಬರಿಯ ಜೊತೆಗೇ ಸಾಗುವ ಇಲ್ಲಿನ ಪ್ರಕೃತಿ ಚಿತ್ರಣ ಮಾತ್ರ ನೈಜ.”

ಗಿರಿಕಂದರ ಎಸ್ಟೇಟ್ ಮಾಲಕ ರಮಾಕಾಂತ್ ಇವರ ಮಗ ಮನು ಬೆಂಗಳೂರಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದನು. ತಂದೆಯ ಅನಾರೋಗ್ಯವನ್ನು ಪರೀಕ್ಷಿಸಲು ರಕ್ತ ಪರೀಕ್ಷೆ ಮಾಡುವ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಡಿ.ಎನ್.ಎ. ಪರೀಕ್ಷೆಯನ್ನು ಮಾಡಿ ತನ್ನ ಹಾಗೂ ಅಪ್ಪನ ರಕ್ತ ಹೊಂದಾಣಿಕೆಯನ್ನು ಪರೀಕ್ಷಿಸುತ್ತಾನೆ. ಫಲಿತಾಂಶ ಅವನಿಗೆ ಆಘಾತ ತರುತ್ತದೆ. ಅದರ ಪ್ರಕಾರ ರಮಾಕಾಂತ್ ಅವನ ಅಪ್ಪನಾಗಿರುವುದಿಲ್ಲ. ಅಮ್ಮ ಸುಮತಿಯ ರಕ್ತದ ಜೊತೆಗೆ ಹೊಂದಾಣಿಕೆ ಮಾಡುವಾಗ ಅದೂ ಜೋಡಣೆಯಾಗುವುದಿಲ್ಲ. ಹಾಗಾದರೆ ಮನು ಅವರ ಅಪ್ಪ ಅಮ್ಮ ಯಾರು? ಈ ಕುತೂಹಲ ಓದುಗರನ್ನು ಬಿಡದೇ ಕಾಡುತ್ತದೆ.

ಈ ನಡುವೆ ಎಸ್ಟೇಟ್ ಲೆಕ್ಕಾಚಾರವನ್ನು ಪರೀಕ್ಷಿಸಲು ಬರುತ್ತಿದ್ದ ಭಾವನ ಎಂಬ ಹುಡುಗಿಯ ಪರಿಚಯ ಅವನಿಗೆ ಅನಿರೀಕ್ಷಿತ ಅಪಘಾತದ ಮೂಲಕ ಆಗುತ್ತದೆ. ಭಾವನಾ ಬಡ ಮನೆಯ ಹುಡುಗಿ, ತಂದೆಗೆ ಸ್ವಲ್ಪ ಮಾನಸಿಕ ಕಾಯಿಲೆ, ತಾಯಿ ಹತ್ತಿರದ ಮನೆಗಳಿಗೆ ಕೆಲಸಕ್ಕೆ ಹೋಗುತ್ತಾಳೆ. ಒಬ್ಬಳು ತಂಗಿ. ಇದ್ದ ಒಬ್ಬ ಗಂಡು ಮಗ ನೀರಿನಲ್ಲಿ ಮುಳುಗಿ ಸತ್ತ ಬಳಿಕ ಮನೆಯ ಸ್ಥಿತಿಯೇ ಅಧೋಗತಿಯಾಗಿ ಹೋಯಿತು. ಭಾವನಾ ಕೊನೆಯ ವರ್ಷದ ಸಿಎ ಪರೀಕ್ಷೆ ಬರೆಯುವವಳಿದ್ದಳು, ಅವಳ ತಂಗಿ ಸಿಂಚನಾ ಇಂಜಿನಿಯರಿಂಗ್ ಕೊನೆಯ ವರ್ಷ. ಈ ವರ್ಷ ಕಳೆದರೆ ಮತ್ತೆ ಇಬ್ಬರಿಗೂ ಉತ್ತಮ ನೌಕರಿ ದೊರೆತು ಬಾಳು ಬೆಳಗುತ್ತದೆ ಎಂಬ ನಿರೀಕ್ಷೆಯಲ್ಲಿರುತ್ತಾರೆ ಎಲ್ಲರೂ. ಆದರೆ ಆಗುವುದೇ ಬೇರೆ... ಅವರ ಹಾಗೂ ಮನುವಿನ ಕುಟುಂಬದಲ್ಲಿ ಬೀಸಿದ ಬಿರುಗಾಳಿಯಾದರೂ ಏನು? 

ಕಾದಂಬರಿ ಓದುತ್ತಾ ಓದುತ್ತಾ ಒಂದು ರೀತಿ ಪತ್ತೇದಾರಿ ಕಾದಂಬರಿಯಂತೆ ಓದಿಸಿಕೊಂಡುಹೋಗುತ್ತದೆ. ಕಾದಂಬರಿಯ ತುಂಬೆಲ್ಲಾ ಅರೆಮಲೆನಾಡಿನ ಚಿತ್ರಣವಿದೆ. ಸುಂದರ ಪರಿಸರ, ಆಗಾಗ ಸುರಿಯುವ ಮಳೆ, ಕಾಫಿ, ಕಾಳುಮೆಣಸಿನ ಘಮ ಮನಸೆಳೆಯುತ್ತದೆ. ಆಗಾಗ ರೋಚಕ ತಿರುವುಗಳನ್ನು ತೆಗೆದುಕೊಳ್ಳುವ ಕಾದಂಬರಿ ಅಂತ್ಯದವರೆಗೆ ನಿಮ್ಮನ್ನು ತುದಿಗಾಲಿನಲ್ಲಿ ನಿಲ್ಲಿಸುತ್ತದೆ. ಪುಸ್ತಕದಲ್ಲಿ ಹಲವಾರು ಯೋಗ್ಯ ಮಾಹಿತಿಗಳು ಇವೆ. ಉದಾಹರಣೆಗೆ ಡಿ.ಎನ್.ಎ ಬಗ್ಗೆ, ಪೆಥೋಲೋಜಿ ಬಗ್ಗೆ, ಮನೋರೋಗದ ವಿಷಯ ಹಾಗೂ ಪರಿಹಾರದ ದಾರಿ ಹೀಗೆ ಹಲವು ವಿಷಯಗಳನ್ನು ವಿವರವಾಗಿ ಬರೆಯಲಾಗಿದೆ.  

ಓದುಗರೊಂದಿಗೆ.. ಎಂಬ ಮುನ್ನುಡಿಯಲ್ಲಿ “ಮನುಷ್ಯರ ಮನಸ್ಸಿನ ಆಟಗಳು ವಿಚಿತ್ರ, ವೈವಿಧ್ಯಮಯ. ಕೆಲವರಿಗೆ ಯಾರಿಗೂ ತೊಂದರೆ ಮಾಡದೆಯೇ ಚೆನ್ನಾಗಿ ಬದುಕಬೇಕೆಂಬ ಆಸೆ. ಕೆಲವರಿಗೆ ಇನ್ನೊಬ್ಬರ ಬದುಕನ್ನು ನುಂಗಿಯಾದರೂ ತಾನು ಚೆನ್ನಾಗಿ ಬದುಕಬೇಕೆಂಬ ದುರಾಸೆ. ಇನ್ನು ಕೆಲವರಿಗೆ ತಮಗೆ ಬೇಕಾದದ್ದು ಸಿಗಲಿಲ್ಲ ಎಂಬ ನಿರಾಸೆ. ಇದರ ನಡುವೆ ತನಗಾಗಿ ಯಾವ ತರಹದ ಆಸೆಯನ್ನೂ ಇಟ್ಟುಕೊಳ್ಳದೆ ಬದುಕೆಲ್ಲಾ ಮತ್ತೊಬ್ಬರಿಗಾಗಿ ಜೀವ ಸವೆಸುವ ಜನಗಳೂ ಇರುತ್ತಾರೆ. ಹಾಗೆಯೇ ಕೆಲವರು ಅಪ್ಪ ಅಮ್ಮ ಇರುವಾಗ ಅದರ ಬೆಲೆಯೇ ತಿಳಿಯದೆ ನಡೆದುಕೊಳ್ಳುವವರು, ಕೆಲವರು ಬದುಕನ್ನು ಅರ್ಥಮಾಡಿಕೊಂಡು ಅವರನ್ನು ಚೆನ್ನಾಗಿ ನೋಡಿಕೊಳ್ಳುವವರು, ಇನ್ನು ಕೆಲವರು ಅಪ್ಪ ಅಮ್ಮನ ಪ್ರೀತಿಯಿಂದಲೇ ವಂಚಿತರಾದವರು ಇರುತ್ತಾರೆ. ಇದರ ನಡುವೆ ಅಪ್ಪ ಅಮ್ಮ ಯಾರು ಎಂದೇ ತಿಳಿಯದವರ ಸಂಕಟದ ಆಳ ಅನುಭವಿಸಿದವರಿಗಷ್ಟೇ ಗೊತ್ತು. ಹೆತ್ತವರೆಂದು ಭಾವಿಸಿದವರೇ ಹೆತ್ತವರಲ್ಲ ಎಂದು ತಿಳಿದಾಗ, ಅದರಲ್ಲೂ ಹೆತ್ತವರೆಂದು ತಿಳಿದವರಿಗೂ ಅದರ ಬಗ್ಗೆ ತಿಳಿಯದಿರುವಂಥಾ ಪರಿಸ್ಥಿತಿ ನಿರ್ಮಾಣವಾದರೆ ಏಳುವ ಪ್ರಶ್ನೆಗಳು ಬಹಳ.” ಎಂದು ಬರೆದಿದ್ದಾರೆ. ಪುಸ್ತಕ ಓದುತ್ತಾ ಓದುತ್ತಾ ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಒಂದೊಂದಾಗಿ ಉತ್ತರ ದೊರೆಯುತ್ತಾ ಹೋಗುತ್ತದೆ.

೨೬೪ ಪುಟಗಳ ಈ ಪುಸ್ತಕವನ್ನು ಓದಲು ಪ್ರಾರಂಭಿಸಿದರೆ ಮುಗಿಸಿಯೇ ಕೆಳಗಿಡುತ್ತೀರಿ. ಶಂಭುರಿತ್ತಿಯವರ ಸುಂದರ ಮುಖಪುಟ ವಿನ್ಯಾಸ ಈ ಹೊತ್ತಗೆಯನ್ನು ಅಲಂಕರಿಸಿದೆ. ಇದು ಮಲೆನಾಡಿನ ರೋಚಕ ಕಥೆಗಳು ಸರಣಿಯ ಮುಂದುವರಿದ ಭಾಗವಾದರೂ ಈ ಪುಸ್ತಕವನ್ನು ಪ್ರತ್ಯೇಕವಾಗಿ ಓದಿದರೆ ಯಾವ ಮಾಹಿತಿ ಕೊರತೆಯೂ ಆಗುವುದಿಲ್ಲ.