ಗುಲಾಬಿ ದಳಗಳ ಉಪಯೋಗ

ಗುಲಾಬಿ ದಳಗಳ ಉಪಯೋಗ

ಗುಲಾಬಿ ಹೂವುಗಳ ಸೌಂದರ್ಯವನ್ನು ವರ್ಣಿಸಲು ಅಸಾಧ್ಯ ಎನ್ನುತ್ತಾರೆ. ಹಲವಾರು ಬಗೆಯ ಬಣ್ಣ ಬಣ್ಣದ ಗುಲಾಬಿ ಹೂವುಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಗುಲಾಬಿ ಹೂವಿನ ದಳಗಳಿಂದಲೂ ಬಹಳ ಪ್ರಯೋಜನವಿದೆ ಎನ್ನುವ ಸಂಗತಿ ನಿಮಗೆ ಗೊತ್ತೇ? ಗುಲಾಬಿಯ ದಳಗಳು ಆ ಹೂವಿಗೆ ಸೌಂದರ್ಯ ನೀಡುವುದರ ಜೊತೆಗೆ ಅದರಲ್ಲಿ ಬಹಳಷ್ಟು ಔಷಧೀಯ ಗುಣಗಳು ಇವೆ. ಗುಲಾಬಿಯ ದಳಗಳು ಆರೋಗ್ಯಕ್ಕಾಗಿ ಹಾಗೂ ನಿಮ್ಮ ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಸಹಕಾರಿ.

ಗುಲಾಬಿ ದಳಗಳಲ್ಲಿ ವಿಟಮಿನ್ ಎ, ಸಿ, ಇ, ಕಬ್ಬಿಣ ಮತ್ತು ಕ್ಯಾಲ್ಸಿಯಂ ಇವೆ. ನಾವು ಶತಮಾನಗಳಿಂದ ರೋಸ್ ವಾಟರ್ ಅನ್ನು ಉಪಯೋಗಿಸುತ್ತಾ ಬರುತ್ತಿದ್ದೇವೆ. ಅಂದೆಲ್ಲಾ ಗುಲಾಬಿಯ ದಳಗಳಿಂದಲೇ ರೋಸ್ ವಾಟರ್ ತಯಾರಿಸುತ್ತಿದ್ದರು. ಈಗೆಲ್ಲಾ ಕೃತಕ ಸುವಾಸನೆ ಮತ್ತು ಬಣ್ಣಗಳನ್ನು ಬಳಸಿ ರೋಸ್ ವಾಟರ್ ತಯಾರಿಸುತ್ತಾರೆ. ಇದು ಆರೋಗ್ಯಕ್ಕೆ ಹಾನಿಕರ. ಬಹಳ ಕಡೆ ರೋಸ್ ವಾಟರ್ ಅನ್ನು ಅಡುಗೆಗೂ ಬಳಕೆ ಮಾಡುತ್ತಾರೆ. ಗುಲಾಬಿ ಹೂವುಗಳಿಂದ ತೆಗೆದ ಎಣ್ಣೆಯನ್ನು ಬಹಳ ವರ್ಷಗಳಿಂದ ಸುಗಂಧ ದ್ರವ್ಯಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಗುಲಾಬಿ ದಳಗಳ ಕೆಲವು ಉಪಯೋಗಗಳನ್ನು ಗಮನಿಸೋಣ…

* ಗುಲಾಬಿ ದಳಗಳನ್ನು ಬಳಸಿ ತಯಾರಿಸಿದ ರೋಸ್ ವಾಟರ್ ಬಳಕೆಯಿಂದ ಮುಖದ ಮೇಲಿನ ಕಲೆಗಳು ದೂರವಾಗುತ್ತವೆ. ದಿನಂಪ್ರತಿ ಗುಲಾಬಿದಳಗಳನ್ನು ಸೇವಿಸಿದರೆ ನಿಮ್ಮ ಸೌಂದರ್ಯ ವೃದ್ಧಿಸುತ್ತದೆ.

* ದಿನವೂ ನಿಗದಿತ ಪ್ರಮಾಣದಲ್ಲಿ ಗುಲಾಬಿ ದಳಗಳನ್ನು ಸೇವನೆ ಮಾಡುತ್ತಾ ಬಂದರೆ ಹೃದಯದ ಸಮಸ್ಯೆ ಕಡಿಮೆಯಾಗುತ್ತದೆ.

* ಗುಲಾಬಿ ಹೂವಿನಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾ ನಿರೋಧಕ ಗುಣಗಳು ಇರುವುದರಿಂದ ಇವು ಚರ್ಮವನ್ನು ಒಳಗಿನಿಂದ ಸ್ವಚ್ಛ ಪಡಿಸುತ್ತವೆ.

* ಗುಲಾಬಿ ದಳಗಳಲ್ಲಿ ನಾರಿನ ಅಂಶ ಹೆಚ್ಚಿದ್ದು, ದೇಹದ ಜೀರ್ಣ ಶಕ್ತಿಯ ಪ್ರಮಾಣವನ್ನು ಹೆಚ್ಚಿಸುತ್ತದೆ.

* ನಿಮ್ಮ ದೇಹದ ತೂಕವನ್ನು ನಿಯಂತ್ರಣದಲ್ಲಿರಿಸಲು ಗುಲಾಬಿಯ ದಳಗಳು ಸಹಕಾರಿಯಾಗಿವೆ. ಇವು ಮಾನಸಿಕ ಒತ್ತಡ ಮತ್ತು ಖಿನ್ನತೆಯ ಸಮಸ್ಯೆಯಿಂದ ನಿಮ್ಮನ್ನು ಮುಕ್ತರನ್ನಾಗಿ ಮಾಡುತ್ತವೆ.

* ಸ್ನಾನ ಮಾಡುವಾಗ ಬಿಸಿ ನೀರಿಗೆ ಗುಲಾಬಿ ಹೂವಿನ ದಳಗಳನ್ನು ಹಾಕಿ ಸ್ವಲ್ಪ ಹೊತ್ತು ಬಿಟ್ಟು ಸ್ನಾನ ಮಾಡಿದರೆ, ಗುಲಾಬಿ ಹೂವಿನ ಸುವಾಸನೆ ನಿಮ್ಮ ಮನಸ್ಸನ್ನು ಮುದಗೊಳಿಸುತ್ತದೆ.

* ಮೂಲವ್ಯಾಧಿಯ ಸಮಸ್ಯೆ ಇರುವವರು ಗುಲಾಬಿ ದಳಗಳನ್ನು ಸೇವಿಸಿದರೆ ಉತ್ತಮ ಫಲಿತಾಂಶ ದೊರೆಯಬಹುದು. ಗುಲಾಬಿ ದಳಗಳ ಬಳಕೆಯಿಂದ ದೇಹದ ಆಯಾಸ ಮತ್ತು ಒತ್ತಡದಿಂದ ಮುಕ್ತಿ ಸಿಗುತ್ತದೆ. ನಿದ್ರಾಹೀನತೆ, ಸುಸ್ತು ಇದರಿಂದಲೂ ಬಿಡುಗಡೆ ಸಿಗುತ್ತದೆ.

* ಗುಲಾಬಿ ದಳಗಳು ದೇಹದ ಮೆಟಬಾಲಿಸಂ ಪ್ರಕ್ರಿಯೆಯನ್ನು ಉತ್ತಮ ಪಡಿಸುವ ಜೊತೆಗೆ ದೇಹದಿಂದ ವಿಷಕಾರಿ ಅಂಶಗಳನ್ನು ದೂರ ಮಾಡುತ್ತದೆ.

* ತಾಜಾ ಗುಲಾಬಿ ದಳಗಳನ್ನು ಕುದಿಯುವ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ, ಸ್ವಲ್ಪ ಜೇನುತುಪ್ಪ ಮತ್ತು ದಾಲ್ಚಿನ್ನಿ ಹುಡಿ ಹಾಕಿ ಮಿಶ್ರಣ ಮಾಡಬೇಕು. ಬೆಳಗಿನ ಸಮಯದಲ್ಲಿ ಖಾಲಿಹೊಟ್ಟೆಯಲ್ಲಿ ಕುಡಿದರೆ ನಿಮ್ಮ ಅತಿಯಾದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

* ಗುಲಾಬಿ ಹೂವಿನ ಪರಿಮಳವನ್ನು ಆಸ್ವಾದಿಸುವುದರಿಂದ ಶ್ವಾಸಕೋಶದ ಸಮಸ್ಯೆಗಳು ಪರಿಹಾರವಾಗಿ, ಮನಸ್ಸು ಪ್ರಫುಲ್ಲವಾಗುತ್ತದೆ. ವಯಸ್ಸಾಗುವಿಕೆಯ ಪ್ರಕ್ರಿಯೆಯನ್ನು ಮುಂದೂಡಬಹುದು.

ಈಗ ತಿಳಿಯಿತಲ್ಲವೇ ಗುಲಾಬಿ ಹೂವು ಕೇವಲ ಸೌಂದರ್ಯಕ್ಕೆ ಮಾತ್ರವಲ್ಲದೇ ಆರೋಗ್ಯಕ್ಕೂ ಸಹಕಾರಿ ಎಂದು. 

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ