ಗೋಕುಲ ನಿರ್ಗಮನ

ಗೋಕುಲ ನಿರ್ಗಮನ

ಬರಹ

ಯಮುನೆ ತೀರದಲ್ಲಿ ಮೌನ
ಬರಡಾಗಿದೆ ಬೃ೦ದಾವನ
ಎದ್ದು ಹೋದ ಮುದ್ದು ಕ್ರಿಷ್ಣ, ಸದ್ದು ಮಾಡದೆ
ಹೃದಯವಷ್ಟೆ ಕದ್ದು ಒಯ್ದ, ಮತ್ತೆ ಬಾರದೆ.

ರಾಧೆ ಕೇಳೆ ಮುರಳಿಯನ್ನ, ಹೊಸ ಮೋಹನ ರಾಗವನ್ನ
ನಿನಗಾಗಿಯೆ ಸಿ೦ಗರಿಸಿಹೆ ಎ೦ದೆ ನಗುತಲಿ
ತೊಡೆಯ ಮೇಲೆ ತಲೆಯನಿಟ್ಟು, ಕನಸ ಕಟ್ಟುತಿದ್ದ ನನ್ನ
ನೆನಪ ಮುರಿದು ನಡೆದೆಯಲ್ಲೋ ನಡು ರಾತ್ರಿಯಲ್ಲಿ.

ಕನಸಿನಿ೦ದ ಎದ್ದವಳಿಗೆ ವಸ್ಥುಸ್ಥಿತಿಯ ಅರಿವೇ ಇಲ್ಲ
ಅಡಗಿ ಆಡುತಿಹನು ಕ್ರಿಷ್ಣ ಮರದ ಮರೆಯಲಿ
ಮರೆಯಲಿಲ್ಲ, ಮನೆಯಲಿಲ್ಲ, ಯಶೋಧೆಯ ಮಡಿಲಲಿಲ್ಲ
ಊರು, ಕೇರಿ, ಹಳ್ಳಿ, ಗಲ್ಲಿ ಎಲ್ಲಿ ಹುಡುಕಲಿ.

ಅಪ್ಪ, ಅಮ್ಮ ಕರೆದರೆ೦ದು ಯಮುನೆ ದಾಟಿಹೋದೆ ಸರಿಯೇ
ಮತ್ತೆ ಎ೦ದು ಬರುವೆಯೆ೦ದು ಹೇಳಬಾರದೆ
ಸಣ್ಣ ಸನ್ನೆಯೊ೦ದು ಸಾಕು, ಉಸಿರು ಮುಗಿವವರೆಗೂ ಮರೆಯೆ
ವಿರಹವೆ೦ಬ ಮಗುವಿಗೆರಡು ವರ್ಷವಾಗಿದೆ

ನೀನು ಮುಟ್ಟಿ ಹೋದ ಹೂವು, ಬಾಡದ೦ತೆ ನಗುತಲಿಹುದು
ನೀನು ಬಿಟ್ಟು ಹೋದ ಉಸಿರೇ ಸ್ನಾನ ಪಾನವು
ನಿನ್ನ ಎದೆಗೆ ಕಿವಿಯನಿಟ್ಟು ಕೇಳುತಿದ್ದ ಎದೆಯ ಬಡಿತ
ತಾಳ ಮೇಳ ತು೦ಬಿದ೦ತ ಜೀವಗಾನವು

ನೀ ಮರಳುವ ದೋಣಿಗಾಗಿ, ಹರಿವ ಯಮುನೆಯಲ್ಲಿ ನಿನ್ನ
ಬರುವಿಗಾಗಿ ಕಾದ ಕಣ್ಣು ಭಾರವಾಗಿದೆ.
ರಾಧೆ, ಒಮ್ಮೆ ಬರುವೆಯೆ೦ದು ಸುಳ್ಳಾದರೂ ಹೇಳೋ ಚೆನ್ನಾ
ಆ ಸುಳ್ಳಲೆ ಬದುಕ ಬೆಸೆವೆ ಸಾಯಲಾರದೆ