ಚುನಾವಣೆ ಸ್ಪರ್ಧಿಸಿದ ಸಾಫ್ಟ್‍ವೇರ್ ಇಂಜಿನಿಯರ್

ಚುನಾವಣೆ ಸ್ಪರ್ಧಿಸಿದ ಸಾಫ್ಟ್‍ವೇರ್ ಇಂಜಿನಿಯರ್

ಬರಹ

(ಇ-ಲೋಕ-76)(27/5/2008)
 ಅಮೆರಿಕಾದಲ್ಲಿ ತಂತ್ರಾಂಶ ಅಭಿವೃದ್ಧಿ ಕೆಲಸದಲ್ಲಿದ್ದು ಕರ್ನಾಟಕದ ವಿಧಾನಸಭೆ ಚುನಾವಣೆ ಕಣಕ್ಕಿಳಿದ ರವಿಕೃಷ್ಣ ರೆಡ್ಡಿಯವರ ಬಗ್ಗೆ ನಿಮಗೆ ಗೊತ್ತಿರಬಹುದು.ಬೆಂಗಳೂರಿನ ಜಯನಗರದಂತಹ ಸುಶಿಕ್ಷಿತ ಜನರು ಮತದಾರರಾಗುಳ್ಳ ಕ್ಷೇತ್ರದಿಂದ ಕಣಕ್ಕಿಳಿದು ಅವರು ಸಣ್ಣದಾಗಿ ಸುದ್ದಿ ಮಾಡಿದ್ದರು.ಚುನಾವಣಾ ಆಯೋಗ ನಿಗದಿ ಪಡಿಸಿದ ಹತ್ತು ಲಕ್ಷ ಬಜೆಟಿನೊಳಗೇ ಖರ್ಚು ಮಾಡಿ ಸ್ಪರ್ಧಿಸಲು ಅವರು ನಿಶ್ಚೈಸಿದ್ದರು. ಮಾತ್ರವಲ್ಲ,ಈ ಹಣವನ್ನು ಜನರ ವಂತಿಗೆಯಿಂದಲೇ ಸಂಗ್ರಹಿಸುವ ನಿರ್ಧಾರವನ್ನೂ ಅವರು ಮಾಡಿದ್ದರು.ಅವರ ನಿರ್ಧಾರವನ್ನು ಸ್ವಾಗತಿಸಿದವರನೇಕರು ಅವರಿಗೆ ಈ ಹೋರಾಟದಲ್ಲಿ ನೈತಿಕ ಬೆಂಬಲವನ್ನು ನೀಡಿದರೆ,ಇನ್ನು ಅನೇಕರು ವಂತಿಗೆ ನೀಡಿಯೂ ಬೆಂಬಲ ವ್ಯಕ್ತ ಪಡಿಸಿದರು.ಸುಮಾರು ನಾಲ್ಕು ಕಾಲು ಲಕ್ಷ ರುಪಾಯಿ ಹಣ ವಂತಿಗೆಯಾಗಿ ದೇಶ-ವಿದೇಶಗಳಿಂದ ಹರಿದು ಬಂತು.ಅದರ ವಿವರಗಳಿಗೆ http://www.ravikrishnareddy.com/donorlist.html ಕೊಂಡಿಯನ್ನು ನೋಡಿ.ಇವರ ಚುನಾವಣಾ ಖರ್ಚು ಆಯೋಗ ನಿಗದಿಪಡಿಸಿದ ಮೊತ್ತದ ಅರ್ಧದಷ್ಟು ಮಾತ್ರ.
 ರವಿಕೃಷ್ಣ ರೆಡ್ಡಿಯವರು ಚುನಾವಣಾ ಅಭ್ಯರ್ಥಿಯಾಗಿ ಕಹಿ ಅನುಭವವನ್ನೇ ಉಂಡರು.ಅವರಿಗೆ ಚುನಾವಣಾ ಆಯೋಗ ನೀಡಿದ್ದ ನಗಾರಿ ಚಿನ್ಹೆಗೂ,ಮತಪೆಟ್ಟಿಗೆಯಲ್ಲಿ ಕಾಣಿಸಿಕೊಂಡ ಗುರುತಿಗೂ ವ್ಯತ್ಯಾಸವಿತ್ತು!ಅವರು ಈ ಬಗ್ಗೆ ಚುನಾವಣಾ ಆಯೋಗಕ್ಕೆ ನೀಡಿದ್ದ ದೂರಿಗೆ ಆಯೋಗ ಉತ್ತರಿಸುವ ಸೌಜನ್ಯವನ್ನೂ ತೋರಿಸಿಲ್ಲವಂತೆ! ಜಯನಗರ ಕ್ಷೇತ್ರದಲ್ಲಿ ಮರುಚುನಾವಣೆ ಬಯಸಿ ಅವರು ನ್ಯಾಯಾಲಯದ ಕಟಕಟೆ ಏರುವುದರಲ್ಲಿದ್ದಾರೆ.ಮರುಚುನಾವಣೆ ನಡೆದಾಗಲಾದರೂ,ಎಲ್ಲ ಅಭ್ಯರ್ಥಿಗಳೂ ಹತ್ತು ಲಕ್ಷಕ್ಕಿಂತ ಹೆಚ್ಚಿನ ಹಣ ಖರ್ಚು ಮಾಡದಂತೆ ಆಯೋಗವು ಮುತುವರ್ಜಿ ವಹಿಸಬೇಕು ಎನ್ನುವುದು ರೆಡ್ಡಿಯವರ ಅಭಿಲಾಷೆ.ಆಯೋಗವು ನಿಯಮಗಳನ್ನು ಬಿಗಿಗೊಳಿಸಿದ ನಾಟಕವನ್ನಷ್ಟೇ ಆಡುತ್ತಿದೆ.ಅಭ್ಯರ್ಥಿಗಳು ಕೋಟಿಗಟ್ಟಲೆ ಖರ್ಚು ಮಾಡುವುದು ಗೊತ್ತಿದ್ದೂ,ಅದರ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎನ್ನುವುದು ಅವರ ಅಳಲು.
ಲಂಡನಿನಿಂದ ನ್ಯೂಯಾರ್ಕಿಗೆ "ದುರ್ಬೀನು"
 ಲಂಡನಿನ ಥೇಮ್ಸ್ ನದಿ ದಡದಿಂದ ನ್ಯೂಯಾರ್ಕಿನ ಬ್ರೂಕ್ಲಿನ್ ಸೇತುವೆಯ ಪ್ರದೇಶವನ್ನು ವೀಕ್ಷಿಸುವ ಅವಕಾಶವನ್ನು ನೀಡುವ "ದುರ್ಬೀನು" ಈಗ ಸಿದ್ಧವಾಗಿದೆ.ಈ ದುರ್ಬೀನು ಮೂವತ್ತೇಳು ಅಡಿ ಉದ್ದವಾಗಿದ್ದು,ಹನ್ನೊಂದು ಅಡಿ ಎತ್ತರವನ್ನು ಹೊಂದಿದೆ.ಅಲೆಕ್ಸಾಂಡರ್ ಸ್ಟಾನ್‌ಹೋಪ್ ಎಂಬ ಇಂಜಿನಿಯರ್ ಕಂಡಿದ್ದ ಶತಮಾನಗಳ ಹಿಂದಿನ ಕನಸು ಈಗ ನನಸಾಗಿದೆ.ಆತ ಅಟ್ಲಾಂಟಿಕ್ ಸಮುದ್ರದ ಕೆಳಗೆ ಸುರಂಗ ಮಾರ್ಗವನ್ನು ಮಾಡಿ,ಅದರ ಇಕ್ಕೆಲಗಳಲ್ಲಿ ದೂರದರ್ಶಕ ಸಾಧನವನ್ನಿಟ್ಟು,ಲಂಡನಿನವರು ನ್ಯೂಯಾರ್ಕಿನವರನ್ನು ವೀಕ್ಷಿಸುವಂತಾಗ ಬೇಕೆಂದು ಕನಸು ಕಂಡಿದ್ದ. ಆದರೆ ಈಗದು ಕಾರ್ಯಗತವಾಗಲು ಸುರಂಗ ಅಗತ್ಯವಾಗಲಿಲ್ಲ.ಈಗ ಸಾಧ್ಯವಾಗಿರುವ ದೂರದರ್ಶಕ,ಅಂತರ್ಜಾಲ ಸಂಪರ್ಕವನ್ನು ಬಳಸಿ ಕೆಲಸ ಮಾಡುತ್ತದೆ.ಇದರಲ್ಲಿ ಅತ್ಯಂತ ಸ್ಪಷ್ಟ ಚಿತ್ರ ಮೂಡಿಸುವ ಕ್ಯಾಮರಾದ ಮೂಲಕ ದೃಶ್ಯ ಸೆರೆ ಹಿಡಿದು,ಅದನ್ನು ಅಂತರ್ಜಾಲ ಮೂಲಕ ಮತ್ತೊಂದು ಕಡೆಗೆ ರವಾನಿಸಿ,ಅಲ್ಲಿನ ದುರ್ಬೀನಿನ ತೆರೆಯಲ್ಲಿ ದೃಶ್ಯ ಮೂಡಿಸಿ,ಅಲ್ಲಿ ನೈಜ ದೃಶ್ಯ ನೋಡುವ ಅನುಭವವನ್ನು ನೋಡುಗರಿಗೆ ನೀಡಲಾಗುತ್ತದೆ.
 ಸೈಂಟ್ ಜಾರ್ಜ್ ಎನ್ನುವ ಕಲಾವಿದ ಈ ದೂರದರ್ಶಕವನ್ನು ಸ್ಥಾಪಿಸಿದ.ಭೂಮಿಯನ್ನು ಕೊರೆದು ಒಂದು ಕಡೆಯಿಂದ ಭೂಮಿಯ ಇನ್ನೊಂದು ಕಡೆಗೆ ನೋಡಬೇಕು ಎನ್ನುವ ತನ್ನ ಬಾಲ್ಯದ ಕನಸನ್ನು ಆತ ನನಸಾಗಿಕೊಂಡ ಬಗೆ ಹೀಗೆ.
ಮಂಗಳನ ಅಂಗಳದಲ್ಲಿಳಿಯುವ ಅಗ್ನಿಪರೀಕ್ಷೆ
 ಮಂಗಳನ ಅಧ್ಯಯನ ನಡೆಸಲು ನಾಸಾವು ಫೀನಿಕ್ಸ್ ಎಂಬ ಬಾಹ್ಯಾಕಾಶ ವಾಹನವನ್ನು ಕಳುಹಿಸಿದ್ದು,ಕಳೆದ ಆಗಸ್ಟಿನಲ್ಲಿ.ಅದು ಮಂಗಳನ ಸನಿಹ ಬಂದಿದ್ದು ಮಂಗಳನ ಅಂಗಳಕ್ಕಿಳಿಯುವ ಕ್ಷಣ ಸಮೀಪಿಸಿದೆ,ನಿರೀಕ್ಷೆಯಂತೆ ನಡೆದರೆ,ನಾಸಾ ತನ್ನ ಯೋಜನೆಯಲ್ಲಿ ಯಶಸ್ವಿಯಾಯಿತೇ ಎನ್ನುವುದು ಈ ಲೇಖನ ಓದುವಾಗ ನಿಮಗೆ ಗೊತ್ತಾಗಿರುತ್ತದೆ.ಮಂಗಳನ ವಾತಾವರಣದಿಂದ ನೆಲಕ್ಕಿಳಿಯಲು ಫೀನಿಕ್ಸ್ ಬರೇ ಏಳು ನಿಮಿಷ ತೆಗೆದುಕೊಳ್ಳಲಿದೆ.ಅದು ನೆಲಕ್ಕೆ ಅಪ್ಪಳಿಸದೆ ನಿಧಾನವಾಗಿ ಇಳಿಯಲು ಅದರ ಪ್ಯಾರಾಚ್ಯೂಟ್ ತೆರೆದುಕೊಳ್ಳಲಿದೆ.ವೇಗವನ್ನಿಳಿಸಲು ತ್ರಸ್ಟರ್ ರಾಕೆಟುಗಳನ್ನು ಉರಿಸಲಾಗುತ್ತದೆ.ವಾಹನದ ಮೂರು ಕಾಲುಗಳು ತೆರೆದುಕೊಂಡು,ಅದು ನೆಲದಲ್ಲಿ ನಿಲ್ಲಲು ನೆರವಾಗಲಿವೆ.ಗಂಟೆಗೆ ಹದಿಮೂರು ಸಾವಿರ ಮೈಲು ವೇಗದಲ್ಲಿ ಸಾಗುತ್ತಿರುವಂತೆ ಇಳಿಯಬೇಕಾದ ಕಾರಣ ಈ "ಭೂ" ಸ್ಪರ್ಶ ಹೇಳಿದಷ್ಟು ಸುಲಭವಲ್ಲ.ನಾಸಾ ಮಂಗಳನ ಅಂಗಳಕ್ಕಿಳಿಸಲು ನಡೆಸಿದ ಪ್ರಯತ್ನಗಳಲ್ಲಿ ಅರೆವಾಸಿ ಪ್ರಯತ್ನಗಳು ವಿಫಲವಾಗಿವೆ.
ಪಾಸ್‍ವರ್ಡ್ ಕಳ್ಳರಿಗೆ ಐಸಿಐಸಿಐ ಬ್ಯಾಂಕ್ ತಿರುಗೇಟು
 ಬ್ಯಾಂಕಿನ ಅಂತರ್ಜಾಲ ತಾಣಗಳಿಗೆ ಗ್ರಾಹಕರ ಗುಪ್ತಪದಗಳನ್ನು ಕದಿಯುವವರ ಕಾಟ ಇದ್ದೇ ಇದೆ.ಗ್ರಾಹಕರು ಕೀಲಿಮಣೆ ಒತ್ತಿದಾಗ,ಅವರು ಯಾವ  ಕೀಲಿ ಒತ್ತಿದ್ದಾರೆ ಎಂದು ದಾಖಲಿಸುವ ತಂತ್ರಾಂಶಗಳ ಮೂಲಕ ಸಂಗ್ರಹಿಸಿ,ಗುಪ್ತ ಪದವನ್ನು ಕದಿಯುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತದೆ.ಇದಕ್ಕೆ ಐಸಿಐಸಿಐ ಬ್ಯಾಂಕ್ ತನ್ನ ತಾಣದಲ್ಲಿ ಹೊಸ ಪ್ರಯೋಗ ಮಾಡಿದೆ.ಅಲ್ಲಿ ಮಿಥ್ಯಾ ಕೀಲಿ ಮಣೆಯೂ ಇದ್ದು ಗ್ರಾಹಕರು ಬಯಸಿದಲ್ಲಿ ಅದನ್ನು ಆಯ್ದುಕೊಳ್ಳುವ ಸೌಲಭ್ಯವಿದೆ.ಇದನ್ನು ಆಯ್ದರೆ,ತೆರೆಯಲ್ಲಿ ಮೂಡಿರುವ ಕೀಲಿಮಣೆಯ ಅಕ್ಷರಗಳನ್ನು ಮೌಸ್ ಮೂಲಕ ಕ್ಲಿಕ್ಕಿಸಿ,ಗುಪ್ತ ಪದವನ್ನು ಬ್ಯಾಂಕ್ ಸರ್ವರ್‌ಗೆ ಒದಗಿಸಬೇಕು.ಕೀಲಿ ಒತ್ತುವುದನ್ನು ಗ್ರಹಿಸುವ ತಂತ್ರಾಂಶಗಳು ಮೌಸ್ ಕ್ಲಿಕ್ಕಿಸುವ ಮೂಲಕ ಒದಗಿಸುವ ಮಾಹಿತಿಯನ್ನು ಗ್ರಹಿಸಲಾರವು.ಭಾರತದ ಮಟ್ಟಿಗೆ ಇದು ಹೊಸ ಪ್ರಯೋಗವೇ ಇರಬಹುದು.

ashokworld
*ಅಶೋಕ್‌ಕುಮಾರ್ ಎ