ಝೆನ್ ಕತೆ: ೨೩: ಕೋಪ

ಝೆನ್ ಕತೆ: ೨೩: ಕೋಪ

ಬರಹ
ಗುರು ಬೆನ್ಕಿಯ ಬಳಿ ಶಿಷ್ಯನೊಬ್ಬ ಬಂದು ಗೋಳಾಡಿಕೊಂಡ. “ಗುರುವೇ, ನನಗೆ ತಡೆಯಲಾರದಷ್ಟು ಕೋಪ ಬಂದುಬಿಡುತ್ತದೆ. ಏನು ಮಾಡಲಿ? ಕೋಪವನ್ನು ಹೇಗೆ ಕಳೆದುಕೊಳ್ಳಲಿ?” “ಬಹಳ ವಿಚಿತ್ರವಪ್ಪಾ ಇದು. ಎಲ್ಲಿ, ನಿನ್ನ ಕೋಪವನ್ನು ತೋರಿಸು, ನೋಡೋಣ” ಎಂದ ಗುರು. “ಹೇಗೆ ಸಾಧ್ಯ? ಈಗ ಕೋಪವನ್ನು ತೋರಿಸಲಾರೆ” ಎಂದ ಶಿಷ್ಯ. “ಹಾಗಾದರೆ ಯಾವಾಗ ತೋರಿಸಬಲ್ಲೆ?” ಎಂದು ಕೇಳಿದ ಗುರು. “ಇದ್ದಕ್ಕಿದ್ದಂತೆ, ಯಾವಾಗಲಾದರೂ ತುಂಬ ಕೋಪ ಬಂದುಬಿಡುತ್ತದೆ” ಎಂದ ಶಿಷ್ಯ. “ಹಾಗಿದ್ದರೆ ಕೋಪ ನಿನ್ನ ಸ್ವಭಾವದ್ದಲ್ಲ. ನಿನ್ನ ನಿಜ ಸ್ವಭಾವವಾದರೆ ನಿನ್ನಲ್ಲಿರುವುದನ್ನು ಯಾವಾಗಬೇಕಾದರೂ ತೋರಬಹುದು. ನೀನು ಹುಟ್ಟಿದಾಗ ಅದು ನಿನ್ನಲ್ಲಿರಲಿಲ್ಲ, ನಿನ್ನ ಅಪ್ಪ ಅಮ್ಮಂದಿರು ನಿನಗೆ ಅದನ್ನು ಕೊಡಲಿಲ್ಲ. ಯೋಚಿಸಿ ನೋಡು” ಎಂದ ಗುರು.