ತುಳು ಸಂಸ್ಕೃತಿಯ ಹೊನ್ನ‌ ಕಿರೀಟಕ್ಕೆ ಇಟ್ಟ ನವಿಲು ಗರಿ

ತುಳು ಸಂಸ್ಕೃತಿಯ ಹೊನ್ನ‌ ಕಿರೀಟಕ್ಕೆ ಇಟ್ಟ ನವಿಲು ಗರಿ

ಕಳೆದ ಮೂರು ದಿನಗಳಿಂದ ‘ಸಂಪದ’ದಲ್ಲಿ ಪ್ರಕಟವಾಗುತ್ತಿದ್ದ ತುಳುನಾಡಿನ ದೈವಗಳ ಬಗ್ಗೆ ಮಾಹಿತಿಯನ್ನು ‘ಕರಾವಳಿಯ 1001 ದೈವಗಳು' ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ. ಈ ಪುಸ್ತಕವನ್ನು ಬರೆದವರು ಡಾ. ಲಕ್ಷ್ಮೀ ಜಿ ಪ್ರಸಾದ್ ಇವರು. ಇವರ ಬಗ್ಗೆ ಖ್ಯಾತ ಸಾಹಿತಿ ಡಾ. ನಾ ಮೊಗಸಾಲೆ ಅವರು ಬರೆದ ಮಾಹಿತಿ ಇಲ್ಲಿದೆ. 

ಡಾ. ಲಕ್ಷ್ಮೀ ಪ್ರಸಾದ್ (ಲಕ್ಷ್ಮೀ ವಾರಣಾಸಿ) ಅವರು ಕಾಸರಗೋಡು ಜಿಲ್ಲೆಯ ಕೋಳ್ಯೂರು ಗ್ರಾಮದ ವಾರಣಾಸಿ ಮೂಲದವರು .ಇವರ ತಂದೆ ವೇದಮೂರ್ತಿ ನಾರಾಯಣ ಭಟ್ಟರು  ವಿದ್ವಾಂಸರೆಂದು ಪ್ರಸಿದ್ಧರು. ತನ್ನ ಮನೆತನವು ವೈದಿಕಾಚರಣೆಯನ್ನೇ ಹೊಂದಿದ್ದರೂ, ಕುಟುಂಬದಲ್ಲಿ ದೈವದ ಆರಾಧನೆಯನ್ನು ಮಾಡುತ್ತಿರುವುದೇಕೆ ಎಂಬ ಕುತೂಹಲವೇ ಡಾ. ಲಕ್ಷ್ಮೀ ಪ್ರಸಾದ್ ಅವರಿಗೆ ಪ್ರೇರಣೆಯಾಗಿ ಅವರು ಈ ಕುರಿತಾದ ಸಂಶೋಧನೆಗೆ ಇಳಿದರು. 

ಇದರಿಂದ ಕರಾವಳಿ ಕರ್ನಾಟಕದ ಅಂದರೆ ಅವಿಭಜಿತ ದ.ಕ.ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ ಮತ್ತು ಕೊಡಗನ್ನೂ ಒಳಗೊಂಡಂತೆ ದೈವರಾಧನೆಯ ಆಶಯ ಆಕೃತಿಯನ್ನು ನಿರಂತರ ಸಂಶೋಧಿಸಲು ಅವರು ಮುಂದಾದರು. ಈ ನಿರಂತರತೆ ಇಪ್ಪತ್ತೊಂದು  ವರುಷಗಳ ಕಾಲ ನಡೆದುದರ ಪರಿಣಾಮವಾಗಿ ಈ ಮೇಲಿನ ಪ್ರದೇಶಗಳಲ್ಲಿ ಒಟ್ಟು ಎರಡು ಸಾವಿರದ ಇನ್ನೂರ ಮೂವತ್ತು  ದೈವಗಳು ಆರಾಧಿಸಲ್ಪಡುತ್ತವೆ ಎನ್ನುವ ಸತ್ಯ ಗೋಚರಿಸಿತು.

ಹಿರಿಯ ಜಾನಪದ ತಜ್ಞರೂ ವಿದ್ವಾಂಸರೂ ಆಗಿರುವ ಪ್ರೊ| ಬಿ.ಎ.ವಿವೇಕ ರೈ ಅವರು ತಮ್ಮ ಮಹಾಪ್ರಬಂಧದಲ್ಲಿ (1985) ಇನ್ನೂರ ಅರುವತ್ತೇಳು  ,ಇನ್ನೋರ್ವ ಜಾನಪದ ವಿದ್ವಾಂಸ ಪ್ರೊ| ಚಿನ್ನಪ್ಪಗೌಡರು ಇದನ್ನು ಪರಿಷ್ಕರಿಸಿ  ತಮ್ಮ ಮಹಾಪ್ರಬಂಧದಲ್ಲಿ (1990) ಮುನ್ನೂರು , ಮುಂದೆ ರಘುನಾಥ ವರ್ಕಾಡಿಯವರು ತಮ್ಮ ‘ಕಂಡಂಬಾರು ಮಲರಾಯ’ ಕೃತಿಯಲ್ಲಿ (2011) ನಾಲ್ಕು ನೂರ ಏಳು ದೈವಗಳ ಹೆಸರುಗಳನ್ನು ಪಟ್ಟಿ ಮಾಡಿದ್ದಾರೆ.

ಆಮೇಲೆ ಈ ಬಗ್ಗೆ ಸಂಶೋಧನೆ ನಡೆದದ್ದು ಕಡಿಮೆ ಅಥವಾ ಈ ಅರಿವಿನಲ್ಲೆ ಗಿರಕಿ ಹೊಡೆದದ್ದೇ ಹೆಚ್ಚು. ಆದರೆ ಡಾ. ಲಕ್ಷ್ಮಿ ಪ್ರಸಾದ್ ಅವರ ಆಸಕ್ತಿ ಅಥವಾ ಜಿಜ್ಞಾಸೆಯು ತಾವು ರಚಿಸಿದ ಮಹಾಪ್ರಬಂಧದ ಹೊತ್ತಿಗೆ (2007) ಸಾವಿರದ ನಾಲ್ಕು ನೂರ ಮೂವತ್ತೈದು ದೈವಗಳ ಕ್ಷೇತ್ರ ಕಾರ್ಯದ ತನಕ ಹಬ್ಬಿತು. ಇದೀಗ ಅವರು ಎರಡು ಸಾವಿರದ ಇನ್ನೂರ ಮೂವತ್ತು   ದೈವಗಳನ್ನು ಸಾಕ್ಷಿ ಸಮೇತ ಗುರುತಿಸಿ ನಾಡು ಬೆರಗಾಗುವಂತೆ ಮಾಡಿದ್ದಾರೆ.

ತುಳು ಸಂಸ್ಕೃತಿಯ ಪ್ರಧಾನ ಅಂಗವಾಗಿ ದೈವಾರಾಧನೆ ಇದೆ. ಅದು ಇಲ್ಲದ ತುಳು ಸಂಸ್ಕೃತಿಯೇ ಇಲ್ಲ ಎನ್ನುವುದು ಅದರ ಪಾರಮ್ಯ. ನಂಬಿಕೆಯ ಆಧಾರದ ಮೇಲೆ ನಿಂತಿರುವ ಈ ಆರಾಧನಾ ಪದ್ಧತಿಯು ಶತಮಾನಗಳ ಪರಂಪರೆಯುಳ್ಳದ್ದು. ಇಂಥ ಸಂಸ್ಕೃತಿಯ ಬೇರುಗಳ ಆಳಕ್ಕೆ ಇಳಿದು ಚಿನ್ನವನ್ನು ಅಗೆದು ತೆಗೆದು ಪುಟಕ್ಕಿಡುವ ಹಾಗೆ ಮಾಡುವ ಕೆಲಸವು ಸಂಕೀರ್ಣವೂ, ಸಂಕಷ್ಟದ್ದೂ ಹೌದು, ಹಾಗೆಯೇ ಪುರುಷರಿಗಷ್ಟೇ ಸೀಮಿತ ಎನ್ನುವಂತಿದ್ದ ಈ ಸಂಶೋಧನೆಯನ್ನು  ಮಹಿಳೆಯರು ಮಾಡಬಹುದೆನ್ನುವಂತೆ ಡಾ.ಲಕ್ಷ್ಮೀ ಪ್ರಸಾದರು ಮಾಡಿ ತೋರಿಸಿದ್ದಾರೆ. 

ಇದಕ್ಕೆ ಅವರು ಹುಟ್ಟಿದ ಗಂಡು ಮೆಟ್ಟಿನ ನೆಲದ ಪ್ರಭಾವ ಎಷ್ಟು ಕಾರಣವೋ ಅಷ್ಟೇ ಅವರ ಗಂಡೆದೆಯೂ ಕೂಡಾ! ಡಾ. ಲಕ್ಷ್ಮೀ ಪ್ರಸಾದರು ಸಂಸ್ಕೃತ( ಮೊದಲನೆಯ ರ‌್ಯಾಂಕ್) ಹಿಂದಿ ಮತ್ತು ಕನ್ನಡ( ನಾಲ್ಕನೆಯ ರ‌್ಯಾಂಕ್), ದಲ್ಲಿ ಸ್ನಾತಕೋತ್ತರ ಪದವೀಧರರು. ಒಂದು  ಎಂ.ಫಿಲ್ ಪದವಿ  ಹಾಗೂ ಎರಡು ಪಿ.ಹೆಚ್.ಡಿ ಪದವಿಗಳ‌ ಗರಿಯೂ ಅವರ ಸಾಧನೆಗೆ ದಕ್ಕಿದೆ. 

ಬದುಕನ್ನು ಅಧ್ಯಯನ ,ಅಧ್ಯಾಪನ ಮತ್ತು ಸಂಶೋಧನೆಗಳಿಗೆ  ಮೀಸಲಿಟ್ಟಿರುವ ಅವರ ಈ ಇಪ್ಪತ್ತಮೂರನೆಯ   ಕೃತಿ ಅವರ ಮಹಾತ್ವಾಕಾಂಕ್ಷೆಯ ಶಿಖರ. ಸರಕಾರದ ಆಶ್ರಯವಿಲ್ಲದೆ, ಅಕಾಡಮಿಗಳ ಪ್ರೋತ್ಸಾಹವಿಲ್ಲದೆಯೇ  ತನಗೆ ತಾನೇ ಸ್ವಯಂ ಭೂವಾಗಿ ನಡೆಸಿದ ಈ ಕ್ಷೇತ್ರ ಕಾರ್ಯ ಆಧಾರಿತ ಅಧ್ಯಯನ ಅಪರೂಪದಲ್ಲಿ ಅಪರೂಪದ್ದು. ಭೂತ ಕಟ್ಟುವ ಜನಾಂಗದವರಿಂದ ಮತ್ತು ಇನ್ನಿತರ ಸಂಸ್ಕೃತಿ ಚಿಂತಕರ ಮೂಲದ ಐತಿಹ್ಯಗಳಿಂದ ಸಂಗ್ರಹಿಸಲ್ಪಟ್ಟು ವಿಶ್ಲೇಷಿಸಲ್ಪಟ್ಟ ಅವರ ಸಂಶೋಧನೆಯ  ಆಯ್ದ ಸಾವಿರದ ಇನ್ನೂರ ಎಂಟು ದೈವ(1228)ಗಳ ಮಾಹಿತಿಗಳನ್ನು ಈ ಗ್ರಂಥದಲ್ಲಿ ಅವರು ಅನಾವರಣಗೊಳಿಸಿದ್ದಾರೆ. ಇದು ತುಳು ಸಂಸ್ಕೃತಿಯ ಹೊನ್ನ ಕಿರೀಟಕ್ಕೆ ಇಟ್ಟ ನವಿಲಗರಿ.

ಇದು ‘ಪಿಂತಿಲ್ಲ ಮುಂತಿಲ್ಲ’ ಎನ್ನುವ ಜಾನಪದ ಸಂಶೋಧನೆಯ ಆಚಾರ್ಯಕೃತಿಯಾಗಿದ್ದು ‘ಅಯ್ಯಯ್ಯ ಎಂಚ ಪೊರ್ಲಾಂಡ್‍ಂದ್ ತುಳುವರು ಮೈಯುಬ್ಬಿ ಹೇಳಬೇಕಣ್ಣ’ ಎನ್ನುವುದನ್ನು ಈ ಕಾಲದಲ್ಲಿ ಅನುರಣಿಸಲು ಕಾರಣವಾಗಿರುವ ವಿಸ್ಮಯ.

- ಡಾ.ನಾ ಮೊಗಸಾಲೆ, ಕಾಂತಾವರ