ದೊಡ್ಡಪತ್ರೆ ಔಷಧಕ್ಕೂ, ಆಹಾರಕ್ಕೂ ಉಪಯುಕ್ತ

ಸಾಧಾರಣವಾಗಿ ದೊಡ್ಡಪತ್ರೆ (ಸಾಂಬಾರು ಬಳ್ಳಿ/ಸೊಪ್ಪು) ಬಗ್ಗೆ ಒಂದಿಷ್ಟು ಔಷಧಿ ಬಲ್ಲವರಲ್ಲಿ ತಿಳಿದೇ ಇರುತ್ತದೆ. ಮನೆಯ ಅಂಗಳದಲ್ಲಿ ಇರುವ ಉಪಯುಕ್ತ ಔಷಧೀಯ ಗಿಡಗಳಲ್ಲಿ ಇದು ಒಂದು. ಕುಂಡದಲ್ಲಿಯೂ ಬೆಳೆಸಬಹುದಾದ ಸಸ್ಯ.
ಆಹಾರಕ್ಕೂ ಉಪಯುಕ್ತವಾಗಿದೆ. ತಂಬುಳಿ, ಸಾರು, ಚಟ್ನಿ, ಚಟ್ನಿ ಪುಡಿ, ಬೋಂಡಾ ಇನ್ನಿತರೆ ಖಾದ್ಯಗಳಲ್ಲಿ ಒಳ್ಳೆಯ ರುಚಿಯನ್ನು ಮತ್ತು ಆರೋಗ್ಯವನ್ನು ಕೊಡುವಂತಹ ಬಹು ಉಪಯೋಗಿ ಸಸ್ಯ.
ಈ ಸಸ್ಯದ ಬಳಕೆಯಿಂದ ಆಗುವ ಉಪಯೋಗಗಳು:
1) ಕಣ್ಣಿನ ರೆಪ್ಪೆಗೆ ಇದರ ರಸವನ್ನು ಹಚ್ಚುವುದರಿಂದ ಕಣ್ಣು ನೋವು ನಿವಾರಣೆ ಆಗುತ್ತದೆ.
2) ಎಲೆಯ ರಸವನ್ನು ತೆಗೆದು ಎಣ್ಣೆಯೊಂದಿಗೆ ಸೇರಿಸಿ ತಲೆಗೆ ಹಚ್ಚುವುದರಿಂದ ತಲೆ ಶೂಲೆ ಗುಣವಾಗುತ್ತದೆ.
3) ಎರಡು ಚಮಚ ಸೊಪ್ಪಿನ ರಸ ಅದಕ್ಕೆ ಎರಡು ಚಮಚ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ಅಜೀರ್ಣದ ಹೊಟ್ಟೆಯ ನೋವು ಗುಣವಾಗುತ್ತದೆ.
4) ಸೊಪ್ಪನ್ನು ಪೇಸ್ಟ್ ನಂತೆ ಅರೆದು ಜೀರಿಗೆ ಪುಡಿ ಸೇರಿಸಿ ಉಪಯೋಗಿಸುವುದರಿಂದ ಹೊಟ್ಟೆ ಶೂಲೇ ಗುಣವಾಗುತ್ತದೆ.
5) ಸ್ವಲ್ಪ ಉಪ್ಪು ಸೇರಿಸಿ ಸೊಪ್ಪಿನೊಂದಿಗೆ ಅರೆದು ಹಚ್ಚುವುದರಿಂದ ಪಿತ್ತ ಬಾಧೆ ಗುಣವಾಗುತ್ತದೆ.
6) ಎಲೆಯನ್ನು ಅರೆದು ಹಚ್ಚುವುದರಿಂದ ಆಗತಾನೇ ಆದ ಗಾಯ ಬೇಗನೆ ಗುಣವಾಗುತ್ತದೆ.
7) 21 ದಿನ ಪ್ರತಿದಿನ ಬಿಡದೆ ಸೊಪ್ಪಿನ ರಸವನ್ನು ಜೇನು ಸೇರಿಸಿ ಸೇವಿಸುವುದರಿಂದ ಕಾಮಾಲೆ ಗುಣವಾಗುತ್ತದೆ.
8) ಎರಡು ದೊಡ್ಡಪತ್ರೆಎಲೆ ಹತ್ತು ತುಳಸಿ ಎಲೆ ಒಂದು ವೀಳ್ಯದೆಲೆ ಸೇರಿಸಿ ಅರೆದು ಎರಡು ಚಮಚ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ಕಫ ನೆಗಡಿ ಕೆಮ್ಮು ಶೀತ ಎಲ್ಲವೂ ಗುಣವಾಗುತ್ತದೆ.
9) 21 ದಿನ ಸೊಪ್ಪಿನ ರಸ ಸೇವಿಸುವುದರಿಂದ ಮೂತ್ರದ ಇನ್ಫೆಕ್ಷನ್ ಮತ್ತು ಸಣ್ಣ ಸಣ್ಣ ಕಲ್ಲುಗಳಿದ್ದರೆ ಗುಣವಾಗುತ್ತದೆ. ಇದಕ್ಕೆ ಸಂಸ್ಕೃತದಲ್ಲಿ ಪಾಷಾಣಭೇದಿ ಎನ್ನುವ ಹೆಸರೂ ಇದೆ.
10) ಒಂದು ಎಲೆ ಒಂದು ಕಾಳು ಮೆಣಸು ಹಾಕಿ ಮೂರು ಹೊತ್ತು ಚೆನ್ನಾಗಿ ಜಗಿಯುವುದರಿಂದ ಟ್ರಾನ್ಸ್ಲೀಸ್ ಗುಣವಾಗುತ್ತದೆ.
11) ಜರಿ, ಚೇಳು, ಜೇನುಹುಳು ಇವುಗಳು ಕಚ್ಚಿದಾಗ ಎಲೆಯ ರಸವನ್ನು ಹಚ್ಚುವುದರಿಂದ ಗುಣವಾಗುತ್ತದೆ.
12) ಎಲೆಯರಸವನ್ನು ಜೇನುತುಪ್ಪದೊಂದಿಗೆ ಸೇರಿಸಿ ಹೊಟ್ಟೆಗೆ ತೆಗೆದುಕೊಳ್ಳುವುದರಿಂದ ಮಕ್ಕಳ ಜ್ವರ ಕೆಮ್ಮು ನೆಗಡಿ ಕಫ ಎದೆ ಉರಿ ಗುಣವಾಗುತ್ತದೆ ಮತ್ತು ಸೊಪ್ಪಿನ ರಸವನ್ನು ಎದೆ ಮತ್ತು ಬೆನ್ನಿಗೆ ಹಚ್ಚುವುದರಿಂದ ಕಫ ಕರಗುತ್ತದೆ ಗೊರಗೊರ ಶಬ್ದ ಬರುವುದು ನಿಲ್ಲುತ್ತದೆ.
13) ಸಂಧಿವಾತದಲ್ಲಿ ಎಲೆಯ ರಸವನ್ನು ಲೇಪಿಸುವುದರಿಂದ ಊತ ಗುಣವಾಗುತ್ತದೆ.
14) ಚಟ್ನಿ ಮಾಡಿ ಸೇವಿಸುವುದರಿಂದ ಅಜೀರ್ಣ ಕಫ ಮೈ ಕೈ ನೋವು ಎಲ್ಲವೂ ಗುಣವಾಗುತ್ತದೆ. ಇದು ಆಹಾರವು ಹೌದು ಔಷಧೀಯೂ ಹೌದು.
-ಸುಮನಾ ಮಳಲಗದ್ದೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ