ನಿಲ್ಲಿಸು ವನಮಾಲೀ, ನಿನ್ನ ಮುರಳಿಯಾ,

ನಿಲ್ಲಿಸು ವನಮಾಲೀ, ನಿನ್ನ ಮುರಳಿಯಾ,

ಬರಹ

ನಿಲ್ಲಿಸು ವನಮಾಲೀ, ನಿನ್ನ ಮುರಳಿಯಾ,

ಕೊಳಲ ಉಲಿಯ ಕೇಳಿದರೆ-
ಎದೆಯದುರಿ ದ್ರವಿಸುವುದು,
ವಿರಹದುರಿ ಲೌಕಿಕವ
ಚಣಕಾಲ ಮರೆಸುವುದು,
ಲೋಕ ನಿಂದೆಗೆ ಹೆದರಿ
ಹುದುಗಿದ್ದ ನೆನಪುಗಳೆಲ್ಲ
ಅಲೆಯಂತೆ ಅಪ್ಪಳಿಸಿ
ನಿನ್ನ ನೆನಪಲ್ಲೇ ನೆನೆಯುವವು,
ಮಿಲನೋತ್ಸವದ ಮತ್ತಲ್ಲಿ
ಚಿತ್ತ ಉನ್ಮತ್ತವಾಗುವುದು.

ನಿಲ್ಲಿಸು ವನಮಾಲೀ, ನಿನ್ನ ಮುರಳಿಯಾ, , ,

ಭಾವರಾಗದ ಬಯಕೆ
ಸ್ಮೃತಿ ಪಟಲವಾಳುವುದು
ಗಾನಗಂಗೆಯಲಿ ಮಿಂದು
ಭವವನ್ನು ಜರಿಯುವುದು.

ನುಡಿಸಿ ಕೊಳಲನು ಹೀಗೆ;

ಈ ಇಹವ ಮುರಿಯದಿರು,
ಮುಳುಗದಿರಲೀ ಅಂಕೆಶಂಕೆಗಳ ಸಂಸಾರ ನೌಕೆ
ಇರಲಿ ಬಿಡು, ಈ ಭವದ ಬದುಕು ಸಾಕೆನಗೆ,
ಇರದಿದ್ದರೂ ಬಂದು ಕೂಡುವನು ನೀನು,

ನಿಲ್ಲಿಸೋ ವನಮಾಲಿ, ಕೊಳಲ ರಾಗವಾ,
ತಡೆಯಲಾರೆನು ನಾನು ಮನದ ಕ್ಲೇಶವಾ!

******