ನೆನಪಿಡಿ!
ಒಂದು ತುಂಡು ಬ್ಯಾಂಡೇಜು,
ಗಾಯಕ್ಕೆ ಸವರುವ ಮುಲಾಮು
ಇರದಿದ್ದರೂ ಚಿಂತಿಲ್ಲ
ಚುಚ್ಚುವ ಸೂಜಿ, ಜೋಡಿಸುವ ನೂಲು
ಇರಲಿ ಮನೆಯಲ್ಲಿ...
ನೆನಪಿಡಿ -
ನಾವು ಯುನಿಫಾರ್ಮುಗಳನ್ನು
ಶಾಲೆಗೆ ಕಳುಸಿಸುತ್ತಿದ್ದೇವೆ
ಮಕ್ಕಳನ್ನಲ್ಲ!
ಹೇಳಲೊಂದು ದೂರಿನ ಪ್ರತಿ
ದನಿಯೆತ್ತಲೊಂದು ಕವಿತೆಸಾಲು
ಇರದಿದ್ದರೂ ಚಿಂತಿಲ್ಲ
ಕುಂಚ, ಬಣ್ಣ, ಕೆಲ ಮುಖವಾಡಗಳು
ಇರಲಿ ಜೇಬಿನಲ್ಲಿ
ನೆನಪಿಡಿ -
ನಾವು ವೇಷಗಳನ್ನು ಆರಿಸುತ್ತಿದ್ದೇವೆ
ಜನಪ್ರತಿನಿಧಿಗಳನ್ನಲ್ಲ!
ನೆರವಿಗೆ ಕೈಚಾಚುವ ಮಾನವೀಯತೆ
ಶೋಶಿತನ ಜೊತೆನಿಲ್ಲುವ ಧೈರ್ಯ
ಇರದಿದ್ದರೂ ಚಿಂತಿಲ್ಲ...
ಸದಾ ಕೈ ಮುಗಿಯುವ ವಿಧೇಯತೆ
ಕಾಲಿಗೆ ಬೀಳುವ ಗುಲಾಮತನ
ಇರಲಿ ಮನಸ್ಸಲ್ಲಿ
ನೆನಪಿಡಿ -
ನಾವು ಮನುಷ್ಯರನ್ನು ಪೂಜಿಸುತ್ತಿದ್ದೇವೆ
ದೇವರನ್ನಲ್ಲ!
ಮುತ್ತಾಡಲು ಪುಟ್ಟ ಮಂಚ
ಜೋಗುಳಕ್ಕೊಂದು ತೂಗು ತೊಟ್ಟಿಲು
ಇರದಿದ್ದರೂ ಚಿಂತಿಲ್ಲ
ಶವಪೆಟ್ಟಿಗೆಗಾಗುವಷ್ಟು ಹಲಗೆಗಳು
ಶಿಲುಬೆಗಾಗುವಷ್ಟು ಕಟ್ಟಿಗೆ
ಇರಲಿ ಕೋಣೆಯ ಮೂಲೆಯಲ್ಲಿ..
ನೆನಪಿಡಿ-
ನಾವು ಶವಸಂಸ್ಕಾರಗಳನ್ನು ಸಂಭ್ರಮಿಸುತ್ತಿದ್ದೇವೆ
ಬದುಕನ್ನಲ್ಲ!
-ವಿಲ್ಸನ್ ಕಟೀಲ್
ಚಿತ್ರ ಕೃಪೆ:ಇಂಟರ್ನೆಟ್ ತಾಣ
