ಪಾತಾಳದಲ್ಲಿ ಪಾಪಚ್ಚಿ
ಖ್ಯಾತ ಆಂಗ್ಲ ಬರಹಗಾರರಾದ ಚಾರ್ಲ್ಸ್ ಲುಡ್ಟಿಜ್ ಡಾಜ್ ಸನ್ (Charles Lutwidge Dodgson) ಲೂಯಿ ಕರೋಲ್ ಎಂಬ ಗುಪ್ತನಾಮದಲ್ಲಿ ಬರೆದ ಆಲೀಸ್ ಇನ್ ವಂಡರ್ ಲ್ಯಾಂಡ್ (Alice in Wonderland) ಎಂಬ ಮಕ್ಕಳ ಕಥಾ ಸಂಕಲನವನ್ನು ಹೊರತಂದಿದ್ದರು. ಕನ್ನಡದ ಖ್ಯಾತ ಸಾಹಿತಿ ನಾ ಕಸ್ತೂರಿ ಇವರು ಈ ಕಥಾ ಸಂಕಲನವನ್ನು ಬಹಳ ಸೊಗಸಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಇಂಗ್ಲಿಷ್ ನ ಆಲೀಸ್ ಕನ್ನಡಕ್ಕೆ ಬರುವಾಗ ಪಾಪಚ್ಚಿ ಆಗಿದ್ದಾಳೆ.
ಕನ್ನಡ ಪುಸ್ತಕ ಪ್ರಾಧಿಕಾರವು ೧೯೩೫, ೧೯೭೩, ೧೯೯೮ ವರ್ಷಗಳಲ್ಲಿ ಈ ಕೃತಿಯನ್ನು ಮರು ಮುದ್ರಣ ಮಾಡಿತ್ತು. ಈಗ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಅವರು ಮುದ್ರಿಸಿದ್ದಾರೆ. ಲೂಯಿ ಕರೋಲ್ ಎಂಬ ಗುಪ್ತನಾಮದಿಂದ ಈ ಕಥೆಗಳನ್ನು ಬರೆದ ಚಾರ್ಲ್ಸ್ ತಾನು ಇವುಗಳನ್ನು ಬರೆದೇ ಇಲ್ಲ ಎಂದು ವಾದಿಸುತ್ತಿದ್ದರಂತೆ. ಅವರು ಎಂದೂ ಲೂಯಿ ಕರೋಲ್ ಮತ್ತು ತಾವು ಒಬ್ಬರೇ ಎಂದು ಹೇಳಿಕೊಳ್ಳಲೇ ಇಲ್ಲ.
ಕನ್ನಡದ ಮೊದಲ ಮುದ್ರಣದ ಸಮಯದಲ್ಲಿ ಅನುವಾದಕರಾದ ನಾ ಕಸ್ತೂರಿ ಇವರು ತಮ್ಮ ಮಾತುಗಳಲ್ಲಿ ಹೇಳಿರುವುದು ಹೀಗೆ..."ಪಾಪಚ್ಚಿಯ ಮೂಲವ್ಯಕ್ತಿಯಾದ ‘ಆಲಿಸ್' ಳ ಕಥೆಯನ್ನು ಇಂದು ಓದಿ ಆನಂದಿಸದಿರುವವರು ಅಪರೂಪ. ಪಾಶ್ಚಾತ್ಯ ದೇಶಗಳಲ್ಲಿ ಪ್ರತಿಯೊಂದು ಮಗುವಿಗೂ ಅವಳ ಪರಿಚಯವು ಚೆನ್ನಾಗಿ ಉಂಟು. ಕೇವಲ ಮಕ್ಕಳಿಗೆ ಮಾತ್ರವೇ ಅಲ್ಲ, ಎಲ್ಲ ವಯಸ್ಸಿನವರಿಗೂ ಅವಳು ಅಚ್ಚುಮೆಚ್ಚಾಗಿ ಪರಿಣಮಿಸಿದ್ದಾಳೆ. ಏಕೆಂದರೆ, ನಾವೆಲ್ಲರೂ ಅವಳಂತೆಯೇ. ಹೆಚ್ಚು ಕಡಿಮೆ, ಸ್ವಪ್ನ ಜೀವಿಗಳು. ಅದೂ ಅಲ್ಲದೆ, ಪ್ರಕೃತಿಯ ನಿಯಮಗಳೆಂಬ ವಜ್ರ ಶೃಂಖಲೆಗೊಳಗಾಗಿರುವ ನಮಗೆಲ್ಲರಿಗೂ ಕೆಲವು ವೇಳೆ ಬಿಡುಗಡೆಯ ಹಂಬಲ ಬಾಧಿಸುತ್ತದೆ. ‘ಒಂದು ಕ್ಷಣವಾದರೂ ವೃಧಿಧ್ಯಕ್ಕಾದರೂ ಬಿಸಿಲಿದ್ದು ಮರವಿದ್ದು ನೆಳಲಿರದೆ ಹೋಗದೆ? ಒಂದು ದಿನ ನೀರು ಸುಡಬಾರದೇ? ಒಂದು ಸಲವಾದರೂ ಕಲ್ಲು ಹಕ್ಕಿಯ ತೆರದಿ ಹಾರಾಡಬಾರದೇ? ಒಂದು ಕ್ಷಣವಾದರೂ ದಾಸ್ಯನಿಯಮಗಳಳಿದು ಸ್ವಾತಂತ್ರ್ಯ, ಸ್ವಚ್ಛಂದ್ಯ, ಹುಚ್ಚಾಟವಾಗದೇ?’ ಎಂದು ಪುಟ್ಟಪ್ಪನವರಿಗೆ (ಕುವೆಂಪು) ಅನ್ನಿಸಿದ ಹಾಗೆ ನನಗೂ ಆಗಾಗ ಅನ್ನಿಸುತ್ತದೆ. ಆದ್ದರಿಂದಲೇ ಈ ವೈಜ್ಞಾನಿಕ ಯುಗದಲ್ಲಿಯೂ ಕೂಡ ಇಂಥ ಕಥೆಗಳನ್ನೋದಿ ಆನಂದ ಪಡುವವರ ಸಂಖ್ಯೆ ಹೆಚ್ಚುತ್ತಲೇ ಇರುವುದು..."
ಪಾತಾಳದಲ್ಲಿ ಪಾಪಚ್ಚಿಯ ಕಥೆ ಆರಂಭವಾಗುವುದು ಮೊಲದ ಬಿಲದಿಂದ. ಹೀಗೇ ಪುಟ್ಟ ಪುಟ್ಟ ಘಟನಾವಳಿಗಳ ಜೊತೆ ಸಾಗುವ ಆಕೆಯ ಪಯಣ ಓದುಗರಲ್ಲಿ ಆನಂದ, ರೋಮಾಂಚನ ತರುವುದು. ಕಥೆಗೆ ಪೂರಕವಾದ ರೇಖಾ ಚಿತ್ರಗಳು ಮನಸ್ಸಿಗೆ ಮುದ ನೀಡುತ್ತವೆ. ಸುಮಾರು ೮೦ ಪುಟಗಳ ಈ ಪುಟ್ಟ ಪುಸ್ತಕವು ಮಕ್ಕಳ ಜ್ಞಾನಾರ್ಜನೆಗೆ ಮತ್ತು ಮನೋರಂಜನೆಗೆ ಬಲು ಸಹಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ.
Comments
ಈ ಪುಸ್ತಕವನ್ನು https:/…
ಈ ಪುಸ್ತಕವನ್ನು https://archive.org/details/dli.osmania.3138 ಈ ಕೊಂಡಿಯಲ್ಲಿ ಏನೂ ಖರ್ಚಿಲ್ಲದೆ ಓದಿರಿ . ಅದನ್ನು ಇಳಿಸಿಕೊಳ್ಳಲೂ ಬಹುದು