ಪಾರದರ್ಶಕತೆಯಿರಲಿ

ಪಾರದರ್ಶಕತೆಯಿರಲಿ

ದಿಲ್ಲಿಯ ಹೈಕೋರ್ಟ್ ನ ನ್ಯಾಯಾಧೀಶರೊಬ್ಬರ ಮನೆಯಲ್ಲಿ ಸಂಭವಿಸಿದ ಶಂಕಾಸ್ಪದ ಅಗ್ನಿದುರಂತದ ವೇಳೆ ಅರೆಸುಟ್ಟ ಸ್ಥಿತಿಯಲ್ಲಿ ದೊಡ್ಡ ಮಟ್ಟದ ನಗದು ಹಣ ಕಂಡುಬಂದುದು ನ್ಯಾಯಾಂಗದ ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ದಕ್ಷತೆಯ ಕುರಿತಂತೆ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ನ್ಯಾಯಮೂರ್ತಿ ಯಶವಂತ ಶರ್ಮ ಎಂಬವರ ಮನೆಯಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದಾಗ ಅಲ್ಲಿಗೆ ತೆರಳಿದ ಅಗ್ನಿಶಾಮಕ ದಳದವರಿಗೆ ಅರೆಸುಟ್ಟ ಸ್ಥಿತಿಯಲ್ಲಿರುವ ಭಾರೀ ಪ್ರಮಾಣದ ಹಣದ ರಾಶಿ ಕಂಡುಬಂದಿತ್ತು. ಆದರೆ ಆರಂಭಿಕ ಹಂತದಲ್ಲಿ ನ್ಯಾಯಾಧೀಶರು ಮತ್ತು ಅಗ್ನಿ ಶಾಮಕ ಅಧಿಕಾರಿಗಳು ನೋಟಿನ ರಾಶಿ ಸಿಕ್ಕಿದ್ದನ್ನೇ ಅಲ್ಲಗಳೆದರು. ಆದರೆ ಸುಪ್ರೀಂ ಕೋರ್ಟ್ ನೋಟಿನ ರಾಶಿ ಸಿಕ್ಕಿರುವ ಫೋಟೋ ಮತ್ತು ವಿಡಿಯೋಗಳನ್ನು ಬಿಡುಗಡೆ ಮಾಡಿದಾಗ ಪ್ರಕರಣವು ಬೇರೆಯೇ ಆಯಾಮ ಪಡೆಯಿತು. ಇದೀಗ ಸರ್ವೋಚ್ಛ ನ್ಯಾಯಾಲಯವು ಈ ಪ್ರಕರಣದ ಕುರಿತಂತೆ ತನಿಖೆ ನಡೆಸಲು ಮೂರು ಮಂದಿ ಸದಸ್ಯರ ಸಮಿತಿ ರಚಿಸಿದೆಯೇನೋ ನಿಜ. ಆದರೆ ಇದು ಉತ್ತರಕ್ಕಿಂತಲೂ ಹೆಚ್ಚು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಏಕೆಂದರೆ ಇದು ಆಂತರಿಕವಾಗಿ ನಡೆಯುವ ತನಿಖೆ. ಇದು ಪಾರದರ್ಶಕವಾಗಿರಬಹುದೆ ಅಥವಾ ಪರಿಪೂರ್ಣವಾಗಿರಬಹುದೆ ಎಂಬ ಪ್ರಶ್ನೆಗಳು ಸಹಜವಾಗಿಯೇ ಹುಟ್ಟುತ್ತಿವೆ. ಜತೆಗೇ ಇಂತಹ ಪ್ರಕರಣಗಳಲ್ಲಿ ಶ್ರೀಸಾಮಾನ್ಯರಿಗೊಂದು ನೀತಿ, ನ್ಯಾಯಮೂರ್ತಿಗಳಿಗೊಂದು ನೀತಿ ಸರಿಯೇ? ಎಂಬುದಾಗಿಯೂ ಕೆಲವು ಪರಿಣಿತರು ಪ್ರಶ್ನಿಸುತ್ತಿದ್ದಾರೆ.

ಬೇರೆ ಸಂದರ್ಭದಲ್ಲಾಗಿದರೆ ಇಂತಹ ಹಣ ದೊರಕಿದ ಕೂಡಲೇ ಎಫ್ ಐ ಆರ್ ದಾಖಲಾಗುತ್ತಿತ್ತು. ಮತ್ತು ಆದಾಯ ತೆರಿಗೆ ಅಧಿಕಾರಿಗಳು ರಂಗ ಪ್ರವೇಶಿಸುತ್ತಿದ್ದರು. ಆದರೆ ನ್ಯಾಯಾಧೀಶರಾದ ಕಾರಣ ಇಲ್ಲಿ ಅದಾವುದೂ ಆಗಿಲ್ಲ. ಅಂತಹ ಉಪಕ್ರಮಗಳಿಗೆ ಅವರು ಅತೀತರೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇಷ್ಟಕ್ಕೂ ನ್ಯಾಯಾಧೀಶರ ಮನೆಯಲ್ಲಿ ಸಿಕ್ಕಿದ ಹಣ ಯಾರದ್ದು? ಅಲ್ಲಿ ಉಂಟಾದ ಅಗ್ನಿ ದುರಂತವು ಆಕಸ್ಮಿಕವೇ ಅಥವಾ ಉದ್ದೇಶಪೂರ್ವಕವಾಗಿ ಆದುದೆ ಅಥವಾ ನ್ಯಾಯಾಧೀಶರನ್ನು ಸಿಲುಕಿಸಲು ಯಾರಿಂದಲಾದರೂ ನಡೆದ ಪಿತೂರಿಯೇ? ಇದೆಲ್ಲ ಹೊರಬರಬೇಕಾದರೆ ಪೋಲೀಸ್ ತನಿಖೆಯೇ ಸೂಕ್ತವಲ್ಲವೇ? ನ್ಯಾಯಾಲಯವು ನೇಮಿಸಿದ ಸಮಿತಿಗೆ ಇಷ್ಟು ಆಳಕ್ಕಿಳಿದು ತನಿಖೆ ನಡೆಸುವ ಸಾಮರ್ಥ್ಯವಿದೆಯೇ? ಇವೆಲ್ಲ ಪ್ರಶ್ನೆಗಳು ಇದರ ಬೆನ್ನಿಗೇ ಹುಟ್ಟಿಕೊಳ್ಳುತ್ತವೆ. ಇದೇ ವೇಳೆ, ನ್ಯಾಯಾಧೀಶರ ನೇಮಕದಲ್ಲಿ ಕೊಲಿಜಿಯಂ ಪಾತ್ರದ ಕುರಿತಂತೆಯೂ ಕೆಲವರು ಪ್ರಶ್ನೆ ಎತ್ತಲಾರಂಭಿಸಿದ್ದಾರೆ. ಇತೀಚಿನ ವರ್ಷಗಳಲ್ಲಿ ನ್ಯಾಯಾಂಗ ಕೂಡಾ ಭ್ರಷ್ಟಗೊಳ್ಳುತ್ತಿದೆಯೇ ಎಂಬ ಅನುಮಾನಗಳು ಹುಟ್ಟಿಕೊಳ್ಳುತ್ತಿರುವ ಸಂದರ್ಭದಲ್ಲಿ ಉಂಟಾಗಿರುವ ಈ ಬೆಳವಣಿಗೆ ನ್ಯಾಯಾಂಗದ ಘನತೆಗೆ ಹಾನಿ ತರುವಂತಿದೆ. ನ್ಯಾಯಾಂಗವು ಈ ಕುರಿತಾದ ತನಿಖೆಯಲ್ಲಿ ಹೆಚ್ಚಿನ ಪಾರದರ್ಶಕತೆ ಪ್ರದರ್ಶಿಸಬೇಕಾಗಿದೆ ಹಾಗೂ ನ್ಯಾಯಾಂಗದ ಪರಿಶುದ್ಧತೆ ಕಾಯುವ ರೀತಿಯಲ್ಲಿ ಕಾರ್ಯಾಚರಿಸಬೇಕಾಗಿದೆ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೨೭-೦೩-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ