ಬಾಲಕ ರಕ್ಷಿಸಿದ ಕಾಗೆ
ಅದೊಂದು ದಿನ ಬಾಲಕರಾದ ರಘು ಮತ್ತು ಮಧು ಗುಡ್ಡದಲ್ಲಿ ಅಡ್ಡಾಡುತ್ತಿದ್ದರು. ಅದು ಬೇಸಗೆಯ ಬಿರುಬಿಸಿಲಿನ ದಿನ. ದಣಿದ ಮಧು ಒಂದು ಮರದ ನೆರಳಿನಲ್ಲಿ ಕುಳಿತ. ಆಗ ಅವನಿಗೆ ದೂರದ ಪೊದೆಯಲ್ಲೊಂದು ಹಕ್ಕಿ ಕಾಣಿಸಿತು.
ಅವನು ರಘುವಿಗೆ ಹೇಳಿದ, “ಅಲ್ಲಿ ನೋಡು. ಒಂದು ಹಕ್ಕಿ ಅಲುಗಾಡದೆ ಕುಳಿತಿದೆ.” ಇಬ್ಬರೂ ಅಲ್ಲಿಗೆ ಓಡಿದರು. ಅದೊಂದು ಕಾಗೆ. ರೆಕ್ಕೆಗೆ ಏಟಾಗಿದ್ದ ಅದನ್ನು ರಘು ಎತ್ತಿಕೊಂಡ. ಆಗ ಮಧು ಹೇಳಿದ, “ಇದರಿಂದ ನಮಗೇನೂ ಪ್ರಯೋಜನವಿಲ್ಲ. ಆದರೂ ಒಂದು ಗೂಡಲ್ಲಿಟ್ಟು ನೋಡೋಣ. ಇದು ಹುಷಾರಾದರೆ ಮಾರಬಹುದು.”
"ಛೇ, ಹಕ್ಕಿಗಳನ್ನು ಗೂಡಿನಲ್ಲಿ ಇಡಬಾರದು. ಯಾಕೆಂದರೆ ಅವು ಸ್ವಚ್ಛಂದವಾಗಿ ಹಾರಾಡುವ ಜೀವಿಗಳು. ನಾನು ಇದನ್ನು ಮನೆಗೊಯ್ದು ಆರೈಕೆ ಮಾಡ್ತೇನೆ. ಇದರ ರೆಕ್ಕೆ ಸರಿಯಾದರೆ ಇದನ್ನು ಹಾರಿ ಹೋಗಲು ಬಿಡ್ತೇನೆ” ಎಂದ ರಘು. ಕೆಲವೇ ದಿನಗಳಲ್ಲಿ ಆ ಕಾಗೆಯ ರೆಕ್ಕೆ ಸರಿಯಾಯಿತು. ಅದು ಅತ್ತಿತ್ತ ಹಾರಾಡಲು ಶುರು ಮಾಡಿತು. ಆದರೆ ಅದು ರಘುವಿನ ಮನೆಯಿಂದ ಹಾರಿ ಹೋಗಲಿಲ್ಲ. ಬದಲಾಗಿ ರಘುವಿನ ಮನೆಯ ಟಾಮಿ ನಾಯಿ ಮತ್ತು ಪುಸ್ಸಿ ಬೆಕ್ಕಿನ ಜೊತೆ ಸ್ನೇಹ ಮಾಡಿಕೊಂಡು ಅಲ್ಲೇ ಉಳಿಯಿತು!
ಆ ಕಾಗೆ ಬೇಗನೇ ದನಗಳನ್ನು ಕಾಯಲು ನಾಯಿಗೆ ಸಹಾಯ ಮಾಡಲು ಕಲಿಯಿತು. ಯಾವುದೇ ದನ ಹಿಂಡನ್ನು ಬಿಟ್ಟು ದೂರ ಹೋಗುತ್ತಿದ್ದರೆ, ಅದರ ತಲೆಗೆ ಕುಕ್ಕಿ ಅದು ಹಿಂಡನ್ನು ಪುನಃ ಸೇರಿಕೊಳ್ಳುವಂತೆ ಮಾಡುತ್ತಿತ್ತು. ಹಾಗೆಯೇ ರಘುವಿನ ಅಮ್ಮನಿಗೂ ಸಹಾಯ ಮಾಡಲು ಶುರು ಮಾಡಿತು. ಆಕೆ ಮುಂಜಾನೆ ಗುಡ್ಡಕ್ಕೆ ಹೋಗಿ ಅಣಬೆಗಳನ್ನು ಸಂಗ್ರಹಿಸಿ, ಅವನ್ನು ಮಾರುಕಟ್ಟೆಯಲ್ಲಿ ಮಾರುತ್ತಿದ್ದಳು. ಆ ಕಾಗೆ ಪ್ರತಿದಿನ ಅವಳ ಮುಂದೆ ಹಾರಾಡುತ್ತಾ ದೊಡ್ಡ ಮತ್ತು ರುಚಿಕರ ಅಣಬೆಗಳನ್ನು ತೋರಿಸುತ್ತಿತ್ತು. ಅವೆಲ್ಲ ಅಣಬೆಗಳು ಮಾರುಕಟ್ಟೆಯಲ್ಲಿ ಬಹು ಬೇಗನೇ ಮಾರಾಟವಾಗುತ್ತಿದ್ದವು.
ಹೀಗೇ ಒಂದು ವರುಷ ದಾಟಿತು. "ಇದೀಗ ವಸಂತ ಕಾಲ. ಕಾಗೆಯ ರೆಕ್ಕೆಗಳನ್ನು ಸ್ವಲ್ಪ ಕತ್ತರಿಸಬೇಕು. ಇಲ್ಲವಾದರೆ ಅದು ಇಲ್ಲಿಂದ ಹಾರಿ ಹೋಗುತ್ತದೆ. ಆಗ ನಮಗೆ ಒಳ್ಳೆಯ ಅಣಬೆಗಳನ್ನು ಹುಡುಕಲು ಮತ್ತು ದನಗಳನ್ನು ಕಾಯಲು ಕಷ್ಟವಾಗ್ತದೆ” ಎಂದಳು ರಘುವಿನ ತಾಯಿ. "ಬೇಡ, ಹಾಗೆ ಮಾಡಬಾರದು. ರೆಕ್ಕೆ ಕತ್ತರಿಸಿದರೆ ಬಯಲಿನಲ್ಲಿ ವೇಗವಾಗಿ ಹಾರಾಡಲು ಮತ್ತು ಮರಗಳ ಎತ್ತರಕ್ಕೆ ಹಾರಿ ಕೊಂಬೆಗಳಲ್ಲಿ ಕೂರಲು ಕಾಗೆಗೆ ಕಷ್ಟವಾಗ್ತದೆ. ಅದನ್ನು ಹಾಗೇ ಬಿಡೋಣ. ಅದು ಹಾರಿ ಹೋಗೋದಿದ್ದರೆ ಹೋಗಲಿ" ಎಂದ ರಘು.
ಅದೊಂದು ದಿನ ಕಾಗೆ ರಘುವಿನ ಮನೆಗೆ ಮರಳಲಿಲ್ಲ. ಅದಾಗಿ ಕೆಲವು ವಾರ ಅದರ ಸುಳಿವೇ ಇಲ್ಲ. ಅನಂತರ ಒಂದು ದಿನ ಮುಸ್ಸಂಜೆಯಲ್ಲಿ ಆ ಕಾಗೆ ಕಿಟಕಿಯಲ್ಲಿ ತೂರಿಕೊಂಡು ರಘುವಿನ ಮನೆಗೆ ವಾಪಾಸು ಬಂತು. ಅದರೊಂದಿಗೆ ಇನ್ನೊಂದು ಕಾಗೆಯೂ ಇತ್ತು. ಅಂದರೆ ಅದು ತನಗೊಬ್ಬ ಸಂಗಾತಿಯನ್ನು ಹುಡುಕಿ, ಆಕೆಯನ್ನು ರಘುವಿನ ಮನೆಗೆ ಕರೆ ತಂದಿತ್ತು.
ಅನಂತರ ಏಳೆಂಟು ವಾರ ಆ ಕಾಗೆಗಳ ಸುಳಿವೇ ಇರಲಿಲ್ಲ. ತದನಂತರ ಒಂದು ದಿನ ಆ ಕಾಗೆ ತನ್ನ ಸಂಗಾತಿ ಮತ್ತು ಮೂರು ಮರಿಕಾಗೆಗಳೊಂದಿಗೆ ರಘುವಿನ ಮನೆಗೆ ಮರಳಿ ಬಂತು. ಅವನ್ನು ಕಂಡು ಪುಸ್ಸಿ ಬೆಕ್ಕು ಮ್ಯಾಂವ್ ಎಂದರೆ, ಟಾಮಿ ನಾಯಿ ಬೊಗಳಿತು. ಕಾಗೆಗಳು ಮನೆಯಲ್ಲೆಲ್ಲ ಸುತ್ತಾಡಿದವು.
ಮರುದಿನ ಪುನಃ ಅವು ಕಣ್ಮರೆಯಾದವು. ಅನಂತರ ಹಲವು ವಾರ ಅವು ಯಾರಿಗೂ ಕಾಣ ಸಿಗಲಿಲ್ಲ. ಅಕ್ಟೋಬರಿನಲ್ಲಿ ಒಂದು ದಿನ ಬೆಳಗ್ಗೆ ರಘು ಮನೆಯ ಹತ್ತಿರದ ತೊರೆಗೆ ಹೋಗಿ ಮೀನು ಹಿಡಿಯಲಿಕ್ಕಾಗಿ ಗಾಳ ಹಾಕಿ ಕಾದು ಕುಳಿತ.
ಆಗ ಒಮ್ಮೆಲೇ ಅವನ ಹಿಂಬದಿಯಿಂದ ಜೋರಾಗಿ ಗುಟುರು ಹಾಕುವ ಸದ್ದು ಕೇಳಿಸಿತು. ಹಿಂದಕ್ಕೆ ತಿರುಗಿ ನೋಡಿದ ರಘು ಬೆಚ್ಚಿ ಬಿದ್ದ. ದೊಡ್ಡ ಗೂಳಿಯೊಂದು ರಘುವಿನತ್ತ ಧಾವಿಸಿ ಬರುತ್ತಿತ್ತು. ಅದು ರಘುವಿನ ಪಕ್ಕದ ಹೊಲದ ಯಜಮಾನನ ಗೂಳಿ. ಹಗ್ಗ ಬಿಚ್ಚಿಕೊಂಡ ಅದು ನುಗ್ಗಿ ಬರುತ್ತಿತ್ತು.
ರಘುವಿಗೆ ಆ ಗೂಳಿಯ ಅಪಾಯದ ಬಗ್ಗೆ ತಿಳಿದಿತ್ತು. ಯಾಕೆಂದರೆ ಅದನ್ನು ಕಟ್ಟಿ ಹಾಕಿದ್ದ ಆವರಣದ ಗೇಟಿನಲ್ಲಿ "ಎಚ್ಚರ! ಅಪಾಯಕಾರಿ ಗೂಳಿಯಿದೆ” ಎಂಬ ಫಲಕವನ್ನು ನೇತು ಹಾಕಿದ್ದರು. ರಘು ಮೀನಿನ ಗಾಳವನ್ನು ಅಲ್ಲೇ ಎಸೆದು ಓಡ ತೊಡಗಿದ. ಆದರೆ ಗೂಳಿ ಅವನನ್ನು ಅಟ್ಟಿಸಿಕೊಂಡು ಬಂತು. ರಘುವಿಗೆ ಎಲ್ಲಿಗೆ ಓಡುವುದೆಂದು ಗೊಂದಲವಾಯಿತು. ಯಾವ ದಿಕ್ಕಿಗೆ ಓಡಿದರೂ ಗೂಳಿ ಬೆನ್ನಟ್ಟುತ್ತಿತ್ತು; ಅವನ ಹತ್ತಿರಹತ್ತಿರ ಬರುತ್ತಿತ್ತು.
ರಘುವಿನ ಕಾಲುಗಳು ಸೋಲುತ್ತಿದ್ದವು. ತನಗಿನ್ನು ಓಡಲಾಗದು, ತಾನು ನೆಲಕ್ಕೆ ಕುಸಿಯುತ್ತೇನೆ ಎಂದು ರಘು ಹೆದರಿದಾಗ ಅಲ್ಲೊಂದು ವಿಸ್ಮಯ ನಡೆಯಿತು. ಆಕಾಶದಿಂದ ಒಂದು ಕಲ್ಲಿನಂತೆ ಕಪ್ಪು ಹಕ್ಕಿಯೊಂದು ನೇರವಾಗಿ ಕೆಳಕ್ಕೆ ಹಾರಿ ಬಂದು ಗೂಳಿಯ ತಲೆಗೆ ಕುಕ್ಕಿತು. ಆ ಹಕ್ಕಿ ಗೂಳಿಯ ತಲೆಯ ಮೇಲೆ ಕುಳಿತು, ಅದರ ಮೂಗಿಗೆ ಇನ್ನೊಮ್ಮೆ ಜೋರಾಗಿ ಕುಕ್ಕಿತು. ಗೂಳಿ ಕಂಗಾಲಾಗಿ ಹಿಂದಕ್ಕೆ ತಿರುಗಿ, ಜೋರಾಗಿ ಗುಟುರು ಹಾಕುತ್ತಾ ಓಡ ತೊಡಗಿತು.
ಆ ಕಾಗೆ ರಘುವಿನ ತಲೆಯ ಮೇಲೆ ಒಂದು ಸುತ್ತು ಹಾಕಿ ಹಾರಿ ಹೋಯಿತು. ಅದುವೇ ಆ ದಿನ ರಘು ಪೊದೆಯಿಂದ ರಕ್ಷಿಸಿದ್ದ ಕಾಗೆ!