ಬೆಂಗಳೂರಿನ ರಂಗಶಂಕರದಲ್ಲಿ ನಮ್ ಟೀಮ್ ತಂಡದ ‘ಗುಣಮುಖ’
ಬೆಂಗಳೂರಿನ ರಂಗಶಂಕರದಲ್ಲಿ ನಮ್ ಟೀಮ್ ತಂಡದ ‘ಗುಣಮುಖ’ ನಾಟಕವು ಮೇ ೩೧, ೨೦೦೭ರಂದು ಸಂಜೆ ೭.೩೦ಕ್ಕೆ ಪ್ರದರ್ಶನಗೊಳ್ಳಲಿದೆ.
ಪಿ. ಲಂಕೇಶರ ಪ್ರಮುಖ ನಾಟಕ ಗುಣಮುಖ. ಎಲ್ಲ ಕಾಲಕ್ಕೂ ಸಲ್ಲುವ ವಿಷಯವನ್ನು ಅಳವಡಿಸಿಕೊಂಡಿರುವ ಈ ಕೃತಿ ಇಂದು ಹೆಚ್ಚು ಪ್ರಸ್ತುತ. ನಾಡಿನ ರಂಗತಂಡಗಳನ್ನು ಈ ನಾಟಕವನ್ನು ಮತ್ತೆಮತ್ತೆ ರಂಗದ ಮೇಲೆ ತರುತ್ತಿರುವುದೇ ಅದಕ್ಕೆ ಸಾಕ್ಷಿ.
ಪರ್ಷಿಯಾ ದೇಶದ ರಾಜ ನಾದಿರ್ ಭಾರತ ಮೇಲೆ ದಾಳಿ ಮಾಡಿ ಮೊಘಲ್ ಚಕ್ರವರ್ತಿ ನಜರುದ್ದೀನ್‌ನನ್ನು ಸೋಲಿಸುತ್ತಾನೆ. ಲೋಲುಪ ದೊರೆ ನಜರುದ್ದೀನ್‌ಗೆ ರಾಜ್ಯವನ್ನು ರಕ್ಷಿಸಿಕೊಳ್ಳಲು ಆಗುವುದೇ ಇಲ್ಲ. ತನ್ನ ಮಂತ್ರಿಗಳ ಕುತಂತ್ರವೂ ಆತನ ಸೋಲಿಗೆ ಕಾಣವಾಗುತ್ತದೆ.
ಸತತ ಯುದ್ಧದಿಂದ ನಾದಿರ್ ಮನಸ್ಥಿತಿಯೇ ವಿಕೃತವಾಗಿರುತ್ತದೆ. ದಿವಾನ್ ಸಾದತ್‌ಖಾನ್‌ಗೆ ಎಲ್ಲರೆದುರೇ ಒದ್ದು ಅವಮಾನಿಸಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತಾನೆ. ದೊರೆ ನಜರುದ್ದೀನ್ ಕೆನ್ನೆಗೆ ಹೊಡೆಯುತ್ತಾನೆ. ದಿವಾನ್ ಮುಲ್ಕ್‌ನನ್ನು ಕೊಲ್ಲುತ್ತಾನೆ.
ನಾದಿರ್ ಷಾನ ಈ ರಕ್ತಪಿಪಾಸುತನದ ಕಾಯಿಲೆಗೆ ಯಾವ ಹಕೀಮರೂ ಸರಿಯಾದ ಔಷಧ ನೀಡುವುದಿಲ್ಲ. ಕೊನೆಗೆ ಹಕೀಮ್ ಅಲಾವಿಖಾನ್ ಆತನಿಗೆ ಯಾವುದೇ ಔಷಧ ನೀಡದೆ ಆತನ ಕಾಯಿಲೆಯನ್ನು ಗುಣಪಡಿಸುತ್ತಾನೆ. ಆತನಲ್ಲಿರುವ ರಕ್ತಪಿಪಾಸುವನ್ನು ಇಲ್ಲವಾಗಿಸುವುದೇ ಅಲಾವಿಖಾನ್ ನೀಡುವ ಚಿಕಿತ್ಸೆ.
ನಿರ್ದೇಶಕರು
ಶಿವಮೊಗ್ಗದ ನಮ್ ಟೀಮ್ ತಂಡವು ಈ ನಾಟಕವನ್ನು ಖ್ಯಾತ ರಂಗನಿರ್ದೇಶಕ ನಟರಾಜ ಹೊನ್ನವಳ್ಳಿ ಅವರ ನಿರ್ದೇಶನದಲ್ಲಿ ಸಿದ್ಧಪಡಿಸಿದೆ. ನಟರಾಜ ಹೊನ್ನವಳ್ಳಿ ನೀನಾಸಂ ಪದವೀಧರರು. ಅವರು ನಿರ್ದೇಶಿಸಿದ ಮಲ್ಲಿನಾಥನ ಧ್ಯಾನ, ಜುಗಾರಿ ಕ್ರಾಸ್, ಸುಯಿಸೈಡ್ ನೋಟ್, ಕಾಕನ ಕೋಟೆ, ಮಾಸ್ತಿ ಕಥಾವಾಚಿಕೆ ಮುಂತಾದ ನಾಟಕಗಳು ಪ್ರಮಖವಾದವು.
ನಮ್ ಟೀಮ್?!
ಶಿವಮೊಗ್ಗವನ್ನು ಕೇಂದ್ರವಾಗಿಟ್ಟುಕೊಂಡು ರಂಗಚಟುವಟಿಕೆಯಲ್ಲಿ ನಿರತವಾಗಿರುವ ನಮ್ ಟೀಮ್ ರಂಗತಂಡವು ಕಳೆದ ೭ ವರ್ಷದಲ್ಲಿ ೨೧ ನಾಟಕಗಳನ್ನು ಪ್ರಯೋಗಿಸಿದೆ. ನಾಡಿನ ಪ್ರಮುಖ ತಂಡಗಳ ೩೪ ನಾಟಕಗಳನ್ನು ಶಿವಮೊಗ್ಗದಲ್ಲಿ ಆಯೋಜಿಸಿದೆ. ರಂಗರಂಗು, ರಂಗಸುಗ್ಗಿ, ಚಳಿಗಾಲದ ನಾಟಕೋತ್ಸವ, ನೀನಾಸಂ ನಾಟಕೋತ್ಸವ ಸೇರಿದಂತೆ ಹಲವು ಕಾರ್ಯಕ್ರಮವನ್ನು ಆಯೋಜಿಸಿದೆ. ನಾಟಕ ಅಕಾಡೆಮಿ ಶಿವಮೊಗ್ಗದಲ್ಲಿ ಆಯೋಜಿಸಿದ್ದ ದೇಸಿ ರಂಗೋತ್ಸವ ಕಾರ್ಯಕ್ರಮದ ಸಂಯೋಜನೆಯನ್ನು ನಿರ್ವಹಿಸಿದೆ.
ಆಹ್ವಾನ
ರಂಗಶಂಕರದಲ್ಲಿ ಮೇ ೩೧ರಂದು ನಾಟಕ ವೀಕ್ಷಿಸಿ, ಅಭಿಪ್ರಾಯ ತಿಳಿಸಿ, ರಂಗನಿರಂತರತೆಗೆ ಸಹಕಾರ ನೀಡಿ