ಬೆಳಕೇ ಇಲ್ಲದ ಬಾಂದಳದಲ್ಲಿ

ಬೆಳಕೇ ಇಲ್ಲದ ಬಾಂದಳದಲ್ಲಿ

ಕವನ



ಚಂದಿರ ವಂಚಿತ ತಾರೆಗಳು

ಅವ ಕ್ಷೀಣಿಸೋ ಘಳಿಗೆಗೆ ಕಾದಿಹವು

ಬೆಳಕೇ ಇಲ್ಲದ  ಬಾಂದಳದಲ್ಲಿ ಬೀಗುವ

ಕನಸನು ನೋಡಿಹವು



ಕನಸು ನನಸಾಗುವ ಈ ದಿನದಂದು

ಏಕೆ ಕಾಡಿದೆ ನಿಮ್ಮ, ಮಾತ್ಸರ್ಯದ  ಛಾಯೆ?

ಬೆಳಕಿನೂರ ದೀಪಗಳು ಬೆಳಗುವ ಪರಿಯು

ನಿಮ್ಮಲ್ಲಿ  ಈರ್ಷೆಯಾ  ಮನೆ ಕಟ್ಟಿದೆಯೇ ?



ಮನೆಯಾಚೆ ತೂಗಿರುವ ಆಕಾಶಬುಟ್ಟಿಗಳು

ಚಿಣ್ಣರ ಕೈಯಲ್ಲಿ ಚಿನಕುರಳಿಗಳು

ಬೆಳಕ ಹೂವು ಆಗಸಕ್ಕೆ ಚಿಮ್ಮುವ ಮಸಿಕುಡಿಕೆಗಳು

ನಿಮ್ಮ ಕಡೆ ಸುಯ್ಯ್ ಎಂದು ಧಾವಿಸುತ್ತಿರುವ ಬಣ್ಣದ ರಾಕೆಟ್ಟುಗಳು

ಎಲ್ಲವೂ ನಿಮ್ಮ ಬೆಳಗುವ, ಹೊಳೆಯುವ ಮೊಗಗಳಿಗೆ

ಸಾಟಿಯಾದಾವೆಂಬ ಹಳಹಳಿಯೋ ನಿಮಗೆ?



ಮನೆಯ ಅಂಗಳದಲ್ಲಿ , ರಂಗವಲ್ಲಿಯ ಸಾಲುಗಳಲ್ಲಿ

ಪ್ರಕಾಶಮಾನವಾಗಿ ಬೆಳಗುತ್ತಿರುವ ದೀಪಗಳು

ನಿಮ್ಮ ಪುಂಜಗಳ ಮನಮೋಹಕ ಆಕೃತಿಯ

ವಿಜ್ರಂಭಣೆಯನ್ನು ನೀರಸ ಗೊಳಿಸಾವೆಂಬ ಆತಂಕವೇ ನಿಮಗೆ ?



ಎಲ್ಲಕಡೆಯಿಂದಲೂ ಬೂಮಿಯ ಬೆಳಗುತ್ತಿರುವ ನಿಮಗೆ

ಇಂದು ದೀಪಾವಳಿ ಎಂಬುದು ಮರೆತು ಹೋಯಿತೇ ?

ಮನಸಿನ ಬೆಳಕು, ಕನಸಿನ ಬೆಳಕು , ದೀಪದ ಬೆಳಕಿನೊಟ್ಟಿಗೆ ಸೇರಿ

ನಿಮ್ಮ ಕಡೆ ನಗು ಮುಖಮಾಡಿ,

ವರುಷವೆಲ್ಲ ಹರುಷತರುವ, ನಿಮ್ಮೆಲ್ಲರಿಗೆ 

ಕೃತಜ್ಞತೆಯೀವ ಪರಿಯಷ್ಟೇ ಈ ಬೆಳಕಿನ ಹಬ್ಬ .

ಶುಭಾಶಯಗಳು ನಿಮಗೆ ಈ ಬೆಳಕಿನಾಹಬ್ಬಕೆ

ಶುಭಾಶಯಗಳು ನಿಮಗೆ ಈ ಬೆಳಕಿನಾಹಬ್ಬಕೆ



ಧನ್ಯವಾದಗಳು 

ಶ್ರೀನಿವಾಸ ಮಹೇಂದ್ರಕರ್