ಬ್ರಿಟಿಷರನ್ನು ಆಳುವ ದಿನ ಬರಲಿ

ಅತೀವ ರಾಜಕೀಯ ಬಿಕ್ಕಟ್ಟು ಹಾಗೂ ಸಚಿವರ ಸರಣಿ ರಾಜಿನಾಮೆ ಬೆನ್ನಲ್ಲೇ ಪ್ರಧಾನಿ ಹುದ್ದೆಗೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಕೊನೆಗೂ ರಾಜೀನಾಮೆ ಕೊಟ್ಟಿದ್ದಾರೆ. ಅದರ ಬೆನ್ನಲ್ಲೇ ಜಗತ್ತಿನ ಪ್ರಬಲ ರಾಷ್ಟ್ರವೊಂದರ ಮುಂದಿನ ಪ್ರಧಾನಿ ಹುದ್ದೆ ರೇಸ್ ನಲ್ಲಿ ಭಾರತೀಯ ಮೂಲದ ರಿಷಿ ಸುನಕ್ ಹೆಸರು ಮುಂಚೂಣಿಯಲ್ಲಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಅದರಲ್ಲೂ ಸುನಕ್ ಕರ್ನಾಟಕದ ಅಳಿಯ ಎಂಬುದು ಇನ್ನಷ್ಟು ಕೋಡು ಮೂಡಿಸುವ ವಿಚಾರ. ಅಕ್ಟೋಬರ್ ನಲ್ಲಿ ನಿಗದಿಯಾಗಿರುವ ಕನ್ಸರ್ವೇಟಿವ್ ಪಕ್ಷದ ಸಮಾವೇಶದ ವೇಳೆಗೆ ಹೊಸ ನಾಯಕನನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ಪೂರ್ಣಗೊಳ್ಳುವವರೆಗೆ ೫೮ವರ್ಷದ ಜಾನ್ಸನ್ ಉಸ್ತುವಾರಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಜಾನ್ಸನ್ ರಾಜೀನಾಮೆ ಬೆನ್ನಲ್ಲೇ ಹಲವು ಪ್ರಮುಖ ಸಂಭಾವ್ಯ ಉತ್ತರಾಧಿಕಾರಿಗಳನ್ನು ಸೂಚಿಸಲಾಗಿದೆಯಾದರೂ, ಯಾವುದೇ ಸ್ಪಷ್ಟವಾದ ಹೆಸರುಗಳು ಅಂತಿಮವಾಗಿಲ್ಲ. ಬ್ರಿಟನ್ ನ ಮೊದಲ ಹಿಂದೂ ವೈಸ್ ಚಾನ್ಸಲರ್ ಆಗಿದ್ದ ರಿಷಿ ಸುನಕ್ ಪ್ರಧಾನಿ ಹುದ್ದೆಗೆ ಎಲ್ಲ ರೀತಿಯಿಂದಲೂ ಅರ್ಹರು. ಖಾಸಗಿ ಸಂಪತ್ತು ಮತ್ತು ಕುಟುಂಬ ತೆರಿಗೆ ವ್ಯವಸ್ಥೆ ವಿವಾದ ವಿಚಾರವಾಗಿ ಒಂದಷ್ಟು ಸುದ್ದಿಗೆ ಗ್ರಾಸವಾಗಿದ್ದರಾದರೂ ಸಾಮಾಜಿಕ ಮಾಧ್ಯಮದಲ್ಲಿ ಉನ್ನತ ಪ್ರೊಫೈಲ್ ಹೊಂದಿದ್ದಾರೆ. ಹೀಗಾಗಿ ಒಂದು ಕಾಲದಲ್ಲಿ ಭಾರತವನ್ನು ಆಳಿದ್ದ ಬ್ರಿಟಿಷ್ ಸಾಮ್ರಾಜ್ಯವನ್ನು ಭಾರತೀಯರೊಬ್ಬರು ಆಳುವ ದಿನಗಳು ಬಂದಿದೆಯೇ ಎಂಬುವುದು ಕುತೂಹಲದ ಸಂಗತಿ. ೧೪೫೩ರಲ್ಲಿ ಆಟೋಮನ್ ಟರ್ಕಿಸ್ತಾನದವರು ಕಾನ್ ಸ್ಟಾಂಟಿನೋಪಲ್ ಅನ್ನು ವಶಪಡಿಸಿಕೊಳ್ಳುವ ಮೂಲಕ ಐರೋಪ್ಯ ದೇಶಗಳು ಮತ್ತು ಏಷ್ಯಾದ ದೇಶಗಳ ನಡುವಿನ ವ್ಯಾಪಾರಕ್ಕೆ ದೊಡ್ದ ಪೆಟ್ಟು ಬಿತ್ತು. ಹೀಗಾಗಿ ಭೂಮಾರ್ಗದ ದೇಶಗಳ ನಡುವಿನ ವ್ಯಾಪಾರಕ್ಕೆ ದೊಡ್ದ ಪೆಟ್ಟು ಬಿತ್ತು. ಹೀಗಾಗಿ ಭೂ ಮಾರ್ಗದ ಅನ್ವೇಷಣೆಗೆ ವಾಸ್ಕೋಡಿಗಾಮ ಹೊರಟಿದ್ದು, ೧೪೯೮ರಲ್ಲಿ ಕೇರಳದ ಕಲ್ಲಿಕೋಟೆ ತಲುಪಿದ್ದು ಜಗತ್ತಿನಲ್ಲಿ ವಸಾಹತುಶಾಹಿಯ ಹೊಸ ಯುಗ ಆರಂಭವಾಗಿದ್ದು ಇತಿಹಾಸ. ನಂತರ ಭಾರತ ಸೇರಿದಂತೆ ಹಲವಾರು ರಾಷ್ಟ್ರಗಳನ್ನು ಬ್ರಿಟನ್ ವಸಾಹತುಗಳನ್ನಾಗಿ ಶತಮಾನಗಳ ಕಾಲ ಆಳ್ವಿಕೆ ಮಾಡಿತು. ಭಾರತವನ್ನು ೨೦೦ ವರ್ಷಗಳ ಕಾಲ ಆಳಿದ ಬ್ರಿಟನ್ ಅನ್ನು ಇದೀಗ ಭಾರತ ಆಳುವ ದಿನಗಳು ಬಂದಿದೆಯೇ ಎನ್ನುವ ಚರ್ಚೆ ಸಾರ್ವಜನಿಕ ವಲಯದಲ್ಲಿ ಆರಂಭವಾಗಿದೆ. ಭಾರತೀಯರೊಬ್ಬರು ಬ್ರಿಟನ್ ಪ್ರಧಾನಿಯಾಗಿ ಭಾರತದ ಮೌಲ್ಯ, ಸಾಮರ್ಥ್ಯವನ್ನು ಜಗತ್ತಿಗೆ ತಿಳಿಸುವಂತಾಗಲಿ.
ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೦೯-೦೭-೨೦೨೨
ಚಿತ್ರ ಕೃಪೆ: ಇಂಟರ್ನೆಟ್ ತಾಣ