ಭಾರತ ಸರ್ಕಾರದ ಒಂಬತ್ತು ವರ್ಷಗಳು… (ಭಾಗ 2)
5) ಮೋದಿಯವರ ವಿದೇಶಾಂಗ ನೀತಿಯು ದೇಶದ ಭದ್ರತೆಗೆ ಪೂರಕವೇ ? ಮಾರಕವೇ ?
ಗುಜರಾತಿ ಮೂಲದ ಮೋದಿಯವರು ನೀತಿ ನಿಯಮಗಳಿಗಿಂತ ಎಲ್ಲದರಲ್ಲೂ ಲಾಭದ ದೃಷ್ಟಿಕೋನದಿಂದಲೇ ನೋಡುತ್ತಾರೆ. ಆ ದೃಷ್ಟಿಯಿಂದ ಈ ಕ್ಷಣದಲ್ಲಿ ಭಾರತಕ್ಕೆ ಅವರ ಅತ್ಯಂತ ಕ್ರಿಯಾಶೀಲ ವಿದೇಶಿ ಭೇಟಿಗಳಿಂದ ಸ್ವಲ್ಪಮಟ್ಟಿಗೆ ಲಾಭವಾಗುತ್ತಿರುವುದು ನಿಜ. ವ್ಯಾಪಾರ ವಹಿವಾಟಿನ ಜೊತೆಗೆ ಭಾರತದ ಬಗ್ಗೆ ವಿದೇಶಿಯರಲ್ಲಿ ಒಳ್ಳೆಯ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂಬುದಾಗಿ ಬಿಂಬಿಸುತ್ತಿದ್ದಾರೆ. ವೈಯಕ್ತಿಕವಾಗಿಯೂ ತಮ್ಮ ಇಮೇಜನ್ನು ವಿಶ್ವ ಮಟ್ಟದಲ್ಲಿ ಹೆಚ್ಚಿಸಿಕೊಂಡಿದ್ದಾರೆ. ರಷ್ಯಾ ಮತ್ತು ಅಮೆರಿಕಾದೊಂದಿಗೆ ಬ್ಯಾಲೆನ್ಸ್ ಮಾಡುತ್ತಿದ್ದಾರೆ.
ಆದರೆ ಮೋದಿಯವರ ನಂತರದ ಆಡಳಿತಗಾರರಿಗೆ ಈ ರೀತಿಯ ವೈಯುಕ್ತಿಕ ಮಟ್ಟದ ವಿದೇಶಾಂಗ ನೀತಿ ಅನುಸರಿಸುವುದು ಕಷ್ಟ. ಅಲಿಪ್ತ ನೀತಿಯ ನಮ್ಮ ಅತ್ಯುತ್ತಮ ವಿದೇಶಾಂಗ ನೀತಿ ಎಡಬಿಡಂಗಿಯಾಗುವ ಸಾಧ್ಯತೆಯೂ ಇದೆ. ಶಾಂತಿಯ ಕಾಲದಲ್ಲಿ ಅದರ ಪರಿಣಾಮ ಗೊತ್ತಾಗುವುದಿಲ್ಲ. ಆದರೆ ಯುದ್ದ, ವ್ಯಾಪಾರದ ಸಂಘರ್ಷ ಮುಂತಾದ ಸಂದರ್ಭದಲ್ಲಿ ವಿದೇಶಾಂಗ ನೀತಿ ಅಗ್ನಿ ಪರೀಕ್ಷೆಗೆ ಒಳಪಡುತ್ತದೆ. ವಿದೇಶಾಂಗ ನೀತಿಯನ್ನು ವೈಯಕ್ತಿಕ ಇಚ್ಛೆಯ ಮಟ್ಟಕ್ಕೆ ಇಳಿಸಿದ ಅಪಕೀರ್ತಿ ಮೋದಿಯವರಿಗೆ ಸಲ್ಲುತ್ತದೆ.
6) ಭಾರತದ ಭದ್ರತಾ ದೃಷ್ಟಿಯಿಂದ ಮೋದಿಯವರ ಸಾಧನೆ ಏನು ?
ಸ್ವಲ್ಪ ಮಟ್ಟಿಗೆ ಆಕ್ರಮಣಕಾರಿ ಮತ್ತು ಯುದ್ದೋತ್ಸಾಹಿ ಮೋದಿಯವರು ದೇಶದ ರಕ್ಷಣೆಗಾಗಿ ಹೆಚ್ಚಿನ ಮಹತ್ವ ನೀಡಿದ್ದಾರೆ ಎಂಬುದು ನಿರ್ವಿವಾದ. ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಖರೀದಿಯನ್ನು ಮಾಡುತ್ತಿದ್ದಾರೆ. ವಿದೇಶೀ ಶಕ್ತಿಗಳ ಜೊತೆ ಪ್ರಬಲ ರಕ್ಷಣಾ ಒಪ್ಪಂದ ಮಾಡಿಕೊಂಡಿದ್ದಾರೆ. ಆತ್ಮ ನಿರ್ಬರ ಭಾರತ ಎಂಬ ಪರಿಕಲ್ಪನೆಯ ಅಡಿಯಲ್ಲಿ ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಶ್ರಮಿಸುತ್ತಿದ್ದಾರೆ. ಸೈನ್ಯದ ಆಧುನಿಕತೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.
ಈ ವಿಷಯದಲ್ಲಿ ಅವರ ಸಾಧನೆ ತೃಪ್ತಿಕರ ಅಥವಾ ಹೆಮ್ಮೆ ಪಡುವಂತೆ ಇದೆ. ಭಾರತದ ರಕ್ಷಣಾ ವ್ಯವಸ್ಥೆ ಬಲಗೊಂಡಿದೆ. ಆದರೂ ಚೀನಾದ ಆಕ್ರಮಣ ತಡೆಯಲು ಸಾಧ್ಯವಾಗಿಲ್ಲ. ಚೀನಾ ಈಗಲೂ ಒಳ ಪ್ರವೇಶಿಸಿದೆ ಎಂದು ವರದಿಗಳು ಹೇಳುತ್ತವೆ. ಭಾರತದ ನಿಜವಾದ ಅಹಿಂಸಾ ಶಕ್ತಿಗೆ ವಿರುದ್ಧವಾಗಿ ಭಾರತವನ್ನು ಶಸ್ತ್ರಾಸ್ತ್ರ ಶಕ್ತಿಯಾಗಿ ಬೆಳೆಸುವ ಪ್ರಯತ್ನ ಎಷ್ಟು ಸರಿ ಎಂಬ ಪ್ರಶ್ನೆ ಕೆಲವರನ್ನು ಕಾಡಬಹುದು.
7) ಮೋದಿ ಸರಳ ವ್ಯಕ್ತಿಯೇ ಅಥವಾ ಆಡಂಬರದ ಪ್ರದರ್ಶನ ಬಯಸುವ ಶೋಕಿ ಸ್ವಭಾವದವರೇ ?
ಕೌಟುಂಬಿಕ ಜವಾಬ್ದಾರಿ ಹೊಂದಿರದ, ಇಳಿ ವಯಸ್ಸಿನಲ್ಲಿಯೂ ಅತ್ಯುತ್ತಮ ಆರೋಗ್ಯ ಕಾಪಾಡಿಕೊಂಡಿರುವ, ಸದಾ ಕ್ರಿಯಾಶೀಲ ವ್ಯಕ್ತಿತ್ವ ಹೊಂದಿರುವ ಮೋದಿಯವರು ಸರಳತೆಯ ಮುಖವಾಡ ಹೊಂದಿರುವ ಆಡಂಬರ ಪ್ರದರ್ಶನದ ವ್ಯಕ್ತಿ. ಮೇಲ್ನೋಟಕ್ಕೆ ಸರಳ ಎಂದು ಹೇಳಿದರು ಅತ್ಯುತ್ತಮ ಗುಣಮಟ್ಟದ ವಸ್ತ್ರ ವಿನ್ಯಾಸ, ಆಹಾರ ಕ್ರಮ, ದೇಹ ಸೌಂದರ್ಯದ ಮುತುವರ್ಜಿ, ಅತಿಹೆಚ್ಚು ಪ್ರಚಾರಪ್ರಿಯ, ಸದಾ ಮುಂಚೂಣಿಯಲ್ಲಿ ಇರಬೇಕು ಎಂದು ಹಾತೊರೆಯುವ ಗುಣ ಸ್ವಭಾವ, ಸರ್ವಾಧಿಕಾರಿ ಮನೋಭಾವವನ್ನು ಗುರುತಿಸಬಹುದು.
ಹೀಗೆ ಒಟ್ಟಾರೆಯಾಗಿ ನರೇಂದ್ರ ಮೋದಿಯವರು ಮೇಲ್ನೋಟಕ್ಕೆ ದೇಶವನ್ನು ಸುಭದ್ರ ಮತ್ತು ಪ್ರಗತಿಯ ಹಾದಿಯಲ್ಲಿ ನಡೆಸುತ್ತಿದ್ದಾರೆ ಎನಿಸಿದರು ಆಂತರ್ಯದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬಹುದೊಡ್ಡ ಅಪಾಯ ಮತ್ತು ಸವಾಲನ್ನು ಒಡ್ಡುತ್ತಿದ್ದಾರೆ. ಏಕ ವ್ಯಕ್ತಿ ಪ್ರದರ್ಶನ ನೀಡುತ್ತಿದ್ದಾರೆ. ನಡೆ ನುಡಿಯ ನಡುವೆ ಸಾಕಷ್ಟು ಅಂತರದಲ್ಲಿ ಕೆಲಸ ಮಾಡುತ್ತಾರೆ.
ಏನೇ ಆಗಲಿ, ಗೋವಾ, ಮಣಿಪುರ, ಮಧ್ಯಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ಮುಂತಾದ ರಾಜ್ಯಗಳ ರಾಜಕೀಯ ನಡೆಗಳು ಮತ್ತು ಜಾರಿ ನಿರ್ದೇಶನಾಲಯದ ದುರುಪಯೋಗ ಮೋದಿ ಆಡಳಿತದ ಕಪ್ಪು ಚುಕ್ಕೆಗಳಾಗಿ ಇತಿಹಾಸದಲ್ಲಿ ದಾಖಲಾಗುತ್ತದೆ. ಶ್ರೀಮಂತರ ಪರ ಬಡವರ ವಿರೋಧಿ ಆಪಾದನೆಯಿಂದ ಮುಕ್ತವಾಗುವುದು ಕಷ್ಟ. ಹಾಗೆಯೇ ಕೆಲವರ ಪಾಲಿಗೆ ಆಧುನಿಕ ಭಾರತದ ಶಿಲ್ಪಿ, ಸನಾತನ ಧರ್ಮದ ಪುನರುಜ್ಜೀವನ ಮಾಡಿದ ಮಹಾನ್ ಹಿಂದೂ ನಾಯಕ, ಇತಿಹಾಸ ಬದಲಿಸಿದ ಹರಿಕಾರ ಎಂದೂ ದಾಖಲಾಗಬಹುದು.
ಒಟ್ಟಿನಲ್ಲಿ ನಮ್ಮ ದೇಶದ ಪ್ರಧಾನಿಯವರ ಒಂಬತ್ತು ವರ್ಷಗಳ ಆಡಳಿತದ ಅವಧಿಯನ್ನು ಸಂವಿಧಾನಾತ್ಮಕ ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ವಿಮರ್ಶಿಸುವ ಒಂದು ಸರಳ ವೈಯಕ್ತಿಕ ಪ್ರಯತ್ನವಿದು. ಇದು ಪರಿಪೂರ್ಣವೇನು ಅಲ್ಲ. ವಿಮರ್ಶೆಯ ವ್ಯಾಪ್ತಿ ತುಂಬಾ ವಿಶಾಲವಾದುದು. ಇದು ಸಾಮಾನ್ಯ ವ್ಯಕ್ತಿಯಾದ ನನ್ನ ಅಭಿಪ್ರಾಯ ಮಾತ್ರ. ಇದಕ್ಕಿಂತ ಭಿನ್ನ ಅಭಿಪ್ರಾಯ ನಿಮ್ಮದಾಗಿದ್ದರೆ ಅದನ್ನೂ ಸ್ವಾಗತಿಸುತ್ತಾ....
(ಮುಗಿಯಿತು)
-ವಿವೇಕಾನಂದ ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ