ಭಾಷಾ ಪ್ರಯೋಗ ಲಹರಿ

ಭಾಷಾ ಪ್ರಯೋಗ ಲಹರಿ

ಬರಹ

ಭಾಷೆಯ ಪ್ರಯೋಗವು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನರೂಪ ತಾಳುವುದನ್ನು ಎಲ್ಲರೂ ಗಮನಿಸಿಯೇ ಇದ್ದೇವೆ. ಹೀಗೆ ಆಯಾ ಪ್ರಾಂತ್ಯದಲ್ಲಿಯೂ ಮತ್ತೊಂದಿಷ್ಟು ಒಳವೈವಿಧ್ಯಗಳನ್ನು ಕಾಣಲಿಕ್ಕೆ ಸಾಧ್ಯ. ಜನಾಂಗೀಯ ಪ್ರಭೇದ ಎಂದರೂ ಆದೀತೇನೊ. ಕೆಲ ವರ್ಷಗಳ ಹಿಂದಿನವರೆಗೂ ಕೊಪ್ಪಳದಲ್ಲಿ ಸ್ಥಳೀಯ ಸಾರಿಗೆಗೆ ಕುದುರೆಗಾಡಿಗಳ ಉಪಯೋಗ ಹೆಚ್ಚು ರೂಢಿಯಲ್ಲಿತ್ತು. (ಈಗಲೂ ಕುದುರೆ ಗಾಡಿಗಳು ಇವೆಯಾದರೂ ಆಟೋರಿಕ್ಷಾಗಳ ಪ್ರಾಬಲ್ಯ ಜಾಸ್ತಿ) ಟಾಂಗಾ ಎಂದು ಇವುಗಳನ್ನು ಕರೆಯುತ್ತಾರೆ. ಇವುಗಳ ಮಾಲಿಕರು ಶೇಕಡಾ ೯೯ ಮುಸ್ಲಿಮರು. ಆದರೂ ಕರ್ಮಠ ವರ್ಗದವರಲ್ಲ. ನನಗೆ ತಿಳಿದಂತೆ ಸಾಂಪ್ರದಾಯಿಕ ಮಸೀದಿಯಲ್ಲಿ ಇವರ ವ್ಯವಹಾರಗಳೇನೂ ನಡೆಯುವುದಿಲ್ಲ. ಹೆಸರುಗಳೂ ಸಹ ಅಷ್ಟೇ. ಹುಶೇನಪ್ಪ, ಯಮನೂರಪ್ಪ, ರಾಜಾ ಭಕ್ಷಿ, ಕಾಶೆಮ್ಮ (ಹೆಣ್ಣು) ಯಮನೂರವ್ವ (ಹೆಣ್ಣು) ಹೀಗೆ ಒಂದು ರೀತಿಯ ಸೂಫಿ ಎನ್ನುವ ಮನಸ್ತತ್ತ್ವದವರು. ಭಾಷೆಯೂ ಇದೇ ರೀತಿ, ಒಂದಿಷ್ಟು ಉರ್ದು ಒಂದಿಷ್ಟು ಕನ್ನಡ. ಯಾವ ಸಂದರ್ಭದಲ್ಲಿ ಯಾವ ಭಾಷೆಯು, ಯಾವ ಜಾಗದಲ್ಲಿ ಮಿಶ್ರಣವಾಗುತ್ತದೆ ಎಂದು ಅವರ ಬಾಯಿಗಷ್ಟೇ ಗೊತ್ತು. ಅದರ ಅರ್ಥ ಎದುರಿಗಿರುವವ ಇನ್ನೊಬ್ಬ ಯಮನೂರಪ್ಪನೇ ಆಗಿದ್ದರೆ ಮಾತ್ರ ಗೊತ್ತಾಗಲು ಸಾಧ್ಯ. ಇಲ್ಲವಾದರೆ ಇವರೊಂದಿಗೆ ಯಾವುದಾದರೂ ರೀತಿಯಲ್ಲಿ ನಿತ್ಯ ವಹಿವಾಟು ಇರಬೇಕು. ಇಲ್ಲಿ ನೋಡಿ ಒಂದೆರಡು ತಮಾಶೆಯ ಸಂವಾದ ಪ್ರಸಂಗಗಳಿವೆ.

ಒಂದು ದಿನ ನಾನು ಕೊಪ್ಪಳದ ಬಸ್ ಸ್ಟ್ಯಾಂಡಿನಿಂದ ಭಾಗ್ಯನಗರದಲ್ಲಿರುವ ನಮ್ಮ ದೊಡ್ಡಪ್ಪನ ಮನೆಗೆ ಹೊರಟಿದ್ದೆ. ಬಸ್ ನಿಲ್ದಾಣದಿಂದ ಹೊರಗೆ ಬರುವುದೇ ತಡ, ಟಾಂಗಾವಾಲಾಗಳು ಶುರು ಹಚ್ಚಿಕೊಂಡರು. ಬರ್ರೀ ಸರs, ನಂ ಟಾಂಗಾದಾsಗ ಬರ್ರೀ, ಲಗೂನ(ತಕ್ಷಣವೇ) ಹೋಗsಮಂತ (ಹೋಗೋಣವಂತೆ) ಬರ್ರಿ, ಅಚ್ಚಾಗ್(ಅವನ ಕಡೆ) ಯಾಕ್ ಹೊಂಟೀರೀs ಸರs, ಅದ್ರಾಗೆಲ್ಲ ಗಾವಾಗ್ಗಿಲ್ಲ(ಆರಾಮದಾಯಕವಾಗುವುದಿಲ್ಲ) ಬರ್ರಿs. ಬಾಜಾರ್ದಾಗ (ಮೈನ್ ರೋಡಿನಲ್ಲಿ) ಹೋಗಂಗಿಲ್ಲ ಬರ್ರಿ ಸರs, ಸೀದsನ ಹೊಕ್ಕೇನಂತ. ಸರಿ, ಯಾವುದೋ ಒಂದರಲ್ಲಿ ಹತ್ತಿ ಕುಳಿತು ಹೊರಟೆ. ದಾರಿಯಲ್ಲಿ ರೈಲು ಗೇಟು ಮುಚ್ಚಿತ್ತು. ನಮ್ಮ ಗಾಡಿಯವ ಒಂದೆಡೆ ನಿಲ್ಲಿಸಿದ. ಪಕ್ಕದಲ್ಲಿ ಇನ್ನೊಂದು ಟಾಂಗಾದವನು ಬಂದು ನಿಂತ. ಶುರುವಾಯಿತು ಇಬ್ಬರ ಸಂವಾದ.

ಅವನು: "ಕ್ಯಾ ಬ ರಫಿಕಣ್ಣ, ಕಾಂ ಜಾನಾ ಇನೆ?"

ಇವನು: "ಹ್ಯಾಂಚ್ ಬಾ, ಮಹೇಶ್ವರಿ ಕನೆ"

ಅವನು: "ಕೆತ್ತ ಲಿಯ"

ಇವನು: "ಜ್ಯಾದ ನೈ ಚೋಡ್ ಬಾ, ಕಾಲಿ ಅತ್ರುಪೈ. ಕ್ಯಾ ಬಿ ನೈ ಆತ"

ಅವನು: "ಆಜ್ ದುಪರ್ಕು ಉಣ್ಣಕ ಘರ್ ಕು ಗಯಾ ಥಾ, ಘರ್ ಕಿ ಪೀಚೆ ಕಳ್ಳಿ ಸಾಲ್ ಮೆ ಎಕ್ ದೊಣ್ಣಿಕಟ ಬೈಟ್ಯ ಥ, ಫೇಂಕು ಐಸ ಪತ್ಥರ್ ಸೆ ಮಾರ್ಯಾ ಕಿ ಏಕ್ದಂ ಕತ್ರಸ್ಗಂಡ್ ಗಿರ್ ಪಡ್ಯ ದೇಕ್"

ಇವನು: ಐಸ ಕ್ಯಾ, ಇವನೌವ್ನ್ ಚೋಡ್ನಾ ನೈ ಥ ಬೆ" ಅಷ್ಟರಲ್ಲಿ ರೈಲು ಹೋಗಿಯಾಯಿತು. ಅವನ ದಾರಿ ಅವನು ಹಿಡಿದು ಹೋದ. ದಾರಿಯಲ್ಲಿ ನಾನು ಕೇಳಿದೆ. "ಅಲ್ಲಪ ರಫಿಕ್ಕು ದೊಣ್ಣಿಕಾಟ ಕಂಡ್ರ ಯಾಕ ಕೊಲ್ತೀರಿ ಅದನ್ನs? ನಿಮಗೇನ್ ಮಾಡ್ಯದ?",

"ಇಲ್ಲೇಳ್ರಿ ಸರs" ಎಂದು ಕಥೆಯೊಂದನ್ನು ಕ್ವಚಿತ್ತಾಗಿ ಹೇಳಿದ. ನನಗದು ತಮಾಶೆಯಾಗಿ ಕಾಣಿಸಿ, ಸುಳ್ಳೇ ಎನಿಸಿದರೂ, ನಮ್ಮಲ್ಲಿಯೂ ಈ ರೀತಿಯಾದ ಕಥೆಗಳಿಗೇನು ಕೊರತೆ ಅಂದು ಕೊಂಡು ಸುಮ್ಮನಾದೆ.

ಅಂದ ಹಾಗೆ ಅವರು ಮಾತಾಡಿದ್ದು ಇಷ್ಟು. "ಏನು ರಫಿಕಣ್ಣ, ಎಲ್ಲಿಗೆ ಹೋಗಬೇಕು ಇವರು?"

"ಇಲ್ಲೇ, ಮಹೇಶ್ವರಿಯ ಹತ್ತಿರ" (ಅದೊಂದು ಟಾಕೀಸು)

"ಎಷ್ಟು ತೊಗೊಂಡೆ?"

"ಹೆಚ್ಚೇನೂ ಇಲ್ಲ ಬಿಡೋ, ಬರಿ ಹತ್ತು ರೂಪಾಯಿ, ಏನೂ ಬರುವುದಿಲ್ಲ"

"ಇವತ್ತು ಮಧ್ಯಾಹ್ಯ ಊಟಕ್ಕೆ (ಉಣ್ಣಕ) ಮನೆಗೆ ಹೋಗಿದ್ದೆ. ಮನೆ ಹಿಂದೆ ಕಳ್ಳಿ ಸಾಲಿನಲ್ಲಿ ಒಂದು ಓತಿಕ್ಯಾತ (ದೊಣ್ಣಿಕಾಟ) ಕುಳಿತಿತ್ತು. ಬೀಸಿ ಕಲ್ಲು ಒಗೆದ್ರೆ, ಏಕ್ ದಂ ಕತ್ತರಿಸಿಕೊಂಡು ಬಿದ್ದುಬಿಡ್ತು."

"ಹಾಗೇನು? ಇವನವ್ವನ, ಬಿಡಬಾರದಿತ್ತು" ಇಳಿದು ವಾಪಸ್ಸು ಬರುವಾಗ ಒಮ್ಮೆ ಟಾಂಗದತ್ತ ನೋಡಿದೆ. ಅದರ ಮೇಲೆ "ಫುಲ್ ಅವರ ಖಾಟೆ" ಎಂದು ಕನ್ನಡದಲ್ಲಿ ಸೊಟ್ಟಸೊಟ್ಟಗೆ ಬರೆದು ಸೊರಗಿಹೋಗಿದ್ದ ಕರಾಟೆ ಪಟುವೊಬ್ಬನನ್ನು ಚಿತ್ರಿಸಿದ್ದ. ತುಂಬ ಹೊತ್ತು ಆಲೋಚಿಸಿದ ಮೇಲೆ ಗೊತ್ತಾಯಿತು ಅದು ಫೂಲ್ ಔರ್ ಕಾಂಟೆ ಎನ್ನುವ ಸಿನಿಮಾ ಹೆಸರು ಹಾಗು ಸೊರಗಿ ಹೋಗಿದ್ದ ಪೈಲ್ವಾನ ಅಜಯ್ ದೇವಗನ್ ಎಂದು.

ಮನೆಗೆ ಬಂದರೆ, ಅಲ್ಲಿ ಮನೆ ಕಟ್ಟುವ ಕೆಲಸದ ಮೇಸ್ತ್ರಿಯೊಬ್ಬ ತನ್ನ ಸಹಾಯಕನೊಂದಿಗೆ ಮಾತನಾಡುತ್ತಿದ್ದುದು ಕಿವಿಗೆ ಬಿತ್ತು. "ಬೇ ಸರ್ಫ್ರಾಜ್ ಲಿಂಗಪ್ಪಾ ಕೆ ಘರ ಕು ಗಯ ತ ಕ್ಯ?"

"ಗಯ ತ"

" ಕ್ಯಾ ಬೋಲ್ಯಾ ಉನೆ"

" ಜಬ್ ಮೈ ಗಯ. ಉನೋ ಕ್ಯಾ ಕಿ ಕರ್ತೆ ಬೈಟ ತ, ಮೈ ಜಾಕು ಬೋಲ್ಯ, ಸರs ನಮ್ಮಣ್ಣಾರು ಕಳ್ಸ್ಯಾರ, ರೊಕ್ಕ ಕೊಡsಬೇಕಂತ ರೀ"

"ವೊ ಮಂಜೆ ಮಾಲೂಮs, ಫಿರ್ ಕ್ಯಾ ಬೋಲ್ಯಾ?"

"ನಾಳೆ ಮಧ್ಯಾನ ಬಾ ಹೋಗಲೆ, ಕೊಡಮಂತ ಎಲ್ಲಿ ಹೊಕ್ಕತಿ ನಿಂ ರೊಕ್ಕs ಕತೆ ಬೋಲ್ಯ"

"ವೊ ಬೋಲ್ಯ, ತೂ ಆಯ, ಕ್ಯಾ ಕರ್ನ ಬೇ ತುಮೆ ಲೇಕೆ. ಕಾಮ್ ಕ ನೈ ತುಮೆ"

" ನೈ ದಾ, ಮೈ ಜೋರ್ ಸೆ ಪೂಚ್ಯ ತೊ, ವ್ ಗರ್ಮ್ ಹೊ ಕೆ "ಲೇ ಕೊಡಂಗಿಲ್ ಹೋಗಲೆ. ಏನ್ಮಾಡ್ತಿಯಲೆ? ತೊಗsಲ ಕಿತ್ತs ಚಪ್ಲೀ ಹೊಲಸತೀನ ಮಗನs" ಕರ್ಕು ಗಾಲಿ ದಿಯಾ ಮಂಜೆ"

"ಐವಾ ಇವನೌನ, ಇನೋ ಕ್ಯಾಬ ಹಮರ ಸರ್ ಖಾ ರಾ?" ಹೀಗೆ ಇವರ ತಿಣುಕಾಟ ನಡೆದೇ ಇತ್ತು. ನಾನು ನಗುತ್ತಲೇ ಕೈಕಾಲು ಮುಖ ತೊಳೆದು ಊಟಕ್ಕಣಿಯಾದೆ.

ಪಟ್ಟೇಗಾರರು ಎನ್ನುವ ಇನ್ನೊಂದು ಜನಾಂಗ ಹರಿಹರ ಮತ್ತು ಹುಬ್ಬಳ್ಳಿಯಲ್ಲಿ ಹೆಚ್ಚು ಸಂಘಟಿತರು. ಇವರ ಭಾಷೆಯ ಹೆಸರೇ "ಪಂಚರಂಗೀ". ಮರಾಠಿ, ಗುಜರಾತಿ, ಕನ್ನಡ,ಹಿಂದಿ ಹಾಗು ಒಂದಿಷ್ಟು ಕೊಂಕಣಿಯನ್ನೋ ಮಾರವಾಡಿಯನ್ನೋ ಮಿಶ್ರಮಾಡಿದರೆ ಪಂಚರಂಗಿಯು ಸಿದ್ಧ. ಇಬ್ಬರು ಪಟ್ಟೇಗಾರರು ಮಾತನಾಡುವಾಗ ಯಾವ ಮಾತಿಗೆ ಯಾವ ಭಾಷೆಯನ್ನು ಬೇಕಾದರೂ ಉಪಯೋಗಿಸಿ ಪ್ರಯೋಗ ಮಾಡಬಹುದು. ಇಂತಹ ಶಬ್ದಕ್ಕೆ ಇಂತಹುದೇ ಭಾಷೆಯೆನ್ನುವ ನಿಯಮವೇನೂ ಇಲ್ಲ. ಉದಾಹರಣೆ: ಕೋಲು ಎನ್ನುವುದಕ್ಕೆ ಲಕಡೀ ಎಂದರೂ ಆದೀತು ಬಡಿಗೆ ಎಂದರೂ ಆದೀತು, ಡಂಡಾ ಎಂದರೂ ನಡೇದೀತು. ಒಟ್ಟಿನಲ್ಲಿ ಬೇರೆ ಬೇರೆ ಭಾಷೆಯ ಶಬ್ದಗಳು ನಿರರ್ಗಳವಾಗಿ ಆದರೆ ಸಂಪೂರ್ಣ ಅರ್ಥವತ್ತಾಗಿ ಬಾಯಿಯಿಂದ ಬರುತ್ತಿರುತ್ತವೆ. ಭಾಷೆ ಗೊತ್ತಿಲ್ಲದವನು ಪಕ್ಕದಲ್ಲಿದ್ದರೆ ಕಣ್ಣು ಕಟ್ಟಿ ಪಿರಮಿಡ್ಡಿನಲ್ಲಿ ಬಿಟ್ಟಂತೆ ಅವನ ಸ್ಥಿತಿ. ಕೆಳಗೆ ಒಂದೆರಡು ಉದಾಹರಣೆಗಳು. ಇನ್ನೊಮ್ಮೆ ದಾವಣಗೆರೆಯಿಂದ ಹರಿಹರಕ್ಕೆ ಬಸ್ಸಿನಲ್ಲಿ ಬರ್ತಾ ಇದ್ದೆ. ಅದರಲ್ಲಿಯೇ ಇಬ್ಬರು ಪಟ್ಟೇಗಾರರು ದಾವಣಗೆರೆಯಿಂದ ಮಾತನಾಡುತ್ತಲೆ ಬರುತ್ತಿದ್ದರು. ದಾರಿಯಲ್ಲಿ ಸೆಕೆಂಡ್ ಗೇಟ್ ಎನ್ನುವ ಜಾಗದಲ್ಲಿ ಗೇಟು ಮುಚ್ಚಿತ್ತು. ಹೊರಗೆ ತುಂಬಾ ಬಿಸಿಲಿದ್ದ ಕಾರಣ, ಬಸ್ಸು ನಿಂತ ಮರುಕ್ಷಣವೇ ಒಳಗೆ ಧಗೆ ಶುರುವಾಯಿತು. ಸೆಕೆ ಪ್ರಾರಂಭವಾದ ಕೆಲ ಕ್ಷಣದಲ್ಲಿ ಅಂಗಿಯ ಒಂದೆರಡು ಗುಂಡಿಗಳನ್ನು ಬಿಚ್ಚಿಕೊಂಡು ಒಬ್ಬ ಇನ್ನೊಬ್ಬನಿಗೆ ಹೇಳಿದ. ಕೆವ್ಡ ಶೆಕಿ ಬಾ? ಮೈ ತುಂಬ ಬೆವ್ರ್ ಆಕ್ ಛೊಡ್ಯ!" (ಎಷ್ಟು ಸೆಕೆಯಪ್ಪ, ಮೈ ತುಂಬ ಬೆವರು ಬಂದು ಬಿಟ್ಟಿತು) ಇನ್ನೊಬ್ಬ "ಔಂ ಬಾ ಫ್ಯಾನ್ ಬಿ ನಮ್ಮೆ ಕ್ಯಾ ಭಿ ನಮ್ಮೆ" (ಹೂನಪ್ಪ, ಫ್ಯಾನೂ ಇಲ್ಲ ಏನೂ ಇಲ್ಲ)

ಇನ್ನೊಮ್ಮೆ ನಮ್ಮ ಮನೆಯ ಹತ್ತಿರ ವಿಡಿಯೋ ಕೆಸೆಟ್ಟು ಮಾರುವ ಅಂಗಡಿಗೆ ಹೋಗಿದ್ದೆ. ಮಾಲೀಕ ಇರಲಿಲ್ಲ. ಅವನ ಮನೆಯೂ ಆದೇ ಆಗಿತ್ತು, ಅವನ ಅತ್ತಿಗೆ ರಂಪ ಮಾಡುತ್ತಿದ್ದ ಮಗುವನ್ನು ಕುರಿತು ಹೇಳುತ್ತಿದ್ದುದು; ಕ್ಯಾ ಬಾ ಅಮರೂsತು ಕ್ಯಾ ಖಾತೆ ತುಮೆ? (ಏನೋ ಅಮೃತ್ ನೀನು ಏನು ತಿಂತೀಯಾ) ಮಗು ಅಳು ನಿಲ್ಲಿಸಲಿಲ್ಲ.

ಬಾಳೆಹಣ್ ಖಾತೆ ಕಿ ಮಾವಿನ್ ಹಣ್? (ಬಾಳೆಯ ಹಣ್ಣೋ ಅಥವಾ ಮಾವಿನಹಣ್ಣೋ?) ಮಗು ಸುಮ್ಮನಾಯಿತು.

ಔ.... ಬಾಳೇಹಣ್ ಖಾತ ಕ್ಯಾ ತುಮೆ? (ಓ ಬಾಳೆಯ ಹಣ್ಣು ತಿಂತೀಯಾ ನೀನು?) ಮಗು ಮತ್ತೆ ಅಳತೊಡಗಿತು.

ಬಾಳೆಹಣ್ ನಕ್ಕೊ ಕ್ಯಾ? ಮಾವಿನ್ ಹಣ್? (ಬಾಳೆಯ ಹಣ್ಣು ಬೇಡವೇ? ಮತ್ತೆ ಮಾವಿನ ಹಣ್ಣು?) ಮಗು ಜೋರಾಗಿ ಅಳತೊಡಗಿತು.

ಆಗ ಮಗುವಿನ ಅಜ್ಜಿ ಸೊಸೆಯನ್ನು ಕುರಿತು ಶೀತsಲs! ಹಣ್ ನಕ್ಕೋ ರೇ ಸಂಡಿಗಿ ಖಾತ ಕ್ಯಾ ದೇಖೋ (ಲೇ ಶೀತಲ್! ಹಣ್ಣು ಬೇಡವೇ... ಸಂಡಿಗೆ (ಆಂಗಡಿಯಲ್ಲಿ ಸಿಗುವ ಮ್ಯಾಕರೋನಿ) ತಿಂತಾನೇನೋ ನೋಡು)

ತಮಿಳುನಾಡಿನಲ್ಲಿ ಶತಮಾನಗಳಿಂದ ನೆಲೆಗೊಂಡಿರುವ ಮಾಧ್ವ ಸಮುದಾಯದ ಜನರ ಮಾತೃಭಾಷೆ ಇಂದಿಗೂ ಕನ್ನಡವೇ. ಆದರೆ ಅಲ್ಲಿ ನೆಲೆಸಿ ತಲೆಮಾರುಗಳೇ ಕಳೆದು ಹೋಗಿವೆಯಾದ್ದರಿಂದ ಕನ್ನಡದಲ್ಲಿ ತಮಿಳಿನ ಛಾಯೆ ಎದ್ದು ಕಾಣುತ್ತದೆ. ಮತ್ತೆ ಅದರಲ್ಲಿಯೇ ಮದರಾಸಿನ ಕಡೆಯವರೊಂದು ತೆರದ ಕನ್ನಡ, ಕುಂಭಕೋಣದವರೊಂದು ನಮೂನೆಯ ಕನ್ನಡ, ಕೊಂಗು ಪ್ರದೇಶವೆನಿಸಿದ ಕೊಯಂಬತ್ತೂರಿನವರೊಂದು ಮಾದರಿಯ ಕನ್ನಡ ಮಾತನಾಡುತ್ತಾರೆ.

ನಮ್ಮನೆಯವ್ರು ಬೆಳಕ್ಕಾತನೆ ಉಪ್ಪಿಟು ತಿಂದುಟ್ಟು ಹೋಗಿಟ್ಟಿರರು, ಆದ್ರೆ ಈವತ್ತು ಮನೆಗೆ ದಾರೋ ಬಂದಿದ್ರು ಅದಿಕ್ಕೆ ಕೊಂಜ ಲೇಟು. (ಮದರಾಸು)

ಅಲ್ಲವೋ ರಘುನಂದನ! ನೀನು ನಮ್ಮ ಮನೆಗೆ ಊಂಟಕ್ಕೆ ಬರ್ತೆ ಅಂತ ತಾ ಹೇಳಿದ್ದೆ? ಇವಾಂಗ ಎಲ್ಲಿ ತಾಂ ಹೋತ್ತ ಇದ್ದೆ? (ಕುಂಭಕೋಣ)

ಪ್ಯಾಪ್ರಲ್ಲಿ ಬಂದಿದೆ, ಸ್ವಾಮಿಗಳು ಬರ್ತಾ ಇದ್ದಾರಂತೆ, ಹೋಗಾಣ ಅಂತ ಇದ್ದೇನು, ಇಂವಂದೇನೋ ಕೊಂಚ ಪ್ರಾಬ್ಳಮ್ಮು, ಹೀಂಗೆ ಪಬ್ಳಿಕ್ಕಳ್ಳಿ ಕುಣೀತಾ ಇದ್ದಾನು. ಏನೂ ತಾಂ ಗೊತ್ತಾಗ್ತಾ ಇಲ್ಲ. (ಕೋಯಮತ್ತೂರು)

ಆಂಧ್ರದ ಕಡಪ, ತಿರುಪತಿ ಹಾಗು ನೆಲ್ಲೂರಿನ ಕನ್ನಡವೂ ಕೇಳೋದಿಕ್ಕೆ ಒಂದು ರೀತಿಯ ತಮಾಶೆ ಎನ್ನಿಸುವಂತಹ ಲಹರಿಯನ್ನುಂಟು ಮಾಡುತ್ತದೆ. ಕಾರ್ಯಭಾರದಿಂದು ಈ ಎಲ್ಲ ಪ್ರದೇಶಗಳಲ್ಲಿಯೂ ಬಹುಕಾಲ ನಿಲ್ಲುವಂತಹ ಪ್ರಸಂಗಗಳು ನನಗೆ ಬಂದಿವೆಯಾದ್ದರಿಂದ ಈ ಎಲ್ಲ ಬಗೆಯ ಲಹರಿಗಳು ಒಂದಿಷ್ಟು ಪರಿಚಯ. ನನಗೆ ಅನ್ನಿಸಿದ್ದೇನೆಂದರೆ, ಕನ್ನಡ ಸಾಹಿತ್ಯದ ಅಂಚುಗಳು ಗಡಿ ದಾಟಿ ಈ ಎಲ್ಲ ಪ್ರದೇಶಗಳಿಗೂ ಹರಡಬೇಕು ಮತ್ತು ಅದನ್ನು ನಿರಂತರವಾಗಿ ಪೋಷಿಸಿಕೊಂಡು ಬರುವಂತಹ ವಾತಾವರಣ ನಿರ್ಮಿತಿಯಾಗಬೇಕು. ಅಂದಾಗಲೇ ಈ ಎಲ್ಲವರ್ಗದ ಜನರ ಮುಂದಿನ ಪೀಳಿಗೆ ಕನ್ನಡವನ್ನು ಪ್ರೀತಿಸುತ್ತದೆ. ವಿಶೇಷವಾಗಿ ತಮಿಳುನಾಡಿನಲ್ಲಿ. ಯಾಕಂತ ಗೊತ್ತಾಯ್ತಲ್ಲ?

ಎನಗಿಂತ ಕಿರಿಯರಿಲ್

ಲ ರಘುನಂದನ