ಭೀಕರ ಸುಂಟರಗಾಳಿಗಳು (ಭಾಗ 1)

ಭೀಕರ ಸುಂಟರಗಾಳಿಗಳು (ಭಾಗ 1)

ಸುತ್ತಿ ಸುತ್ತಿ ಬರುವ ಭೀಕರ ಪ್ರಚಂಡ ಬಿರುಗಾಳಿಯೇ ಸುಂಟರಗಾಳಿ! ಈ ಶಕ್ತಿಶಾಲಿಯಾದ ಗಾಳಿ ಗಂಟೆಗೆ ಸುಮಾರು 75 ಕಿಲೋಮೀಟರ್ ರಿಂದ 200 ಕಿಲೋಮೀಟರ್ ವೇಗದಲ್ಲಿ ಬೀಸುತ್ತಾ, ಸುತ್ತುತ್ತಾ, ಮೇಲಕ್ಕೆ ಏರುತ್ತಾ ಸುಮಾರು 600 ಮೈಲಿಗಳ ವ್ಯಾಪ್ತಿಯಲ್ಲಿ ರುದ್ರನರ್ತನವನ್ನೇ ಮಾಡಿಬಿಡುತ್ತದೆ. ಈ ಭೀಕರ ತಾಂಡವ ನೃತ್ಯಕ್ಕೆ ಸಿಲುಕಿದ ಯಾರಿಗೂ ಖಂಡಿತ ಉಳಿಗಾಲವಿಲ್ಲ! ಈ ಸುಂಟರಗಾಳಿ ಆರ್ಭಟ ಒಂದು ವಾರದ ಕಾಲ ಮುಂದುವರಿಯುವ ಸಾಧ್ಯತೆ ಇರುತ್ತದೆ. ನಂತರ ಕ್ರಮೇಣ ಕಡಿಮೆ ವೇಗದೊಂದಿಗೆ ಸಮುದ್ರದ ಮೇಲೆ ಹಾರುತ್ತಾ ಕೊನೆಗೊಮ್ಮೆ ಶಾಂತವಾಗುತ್ತದೆ. ಈ ಸುಂಟರಗಾಳಿಗಳು ಉತ್ತರ ಅಮೆರಿಕದಲ್ಲಿ ಹೆಚ್ಚು ಪ್ರಮಾಣದಲ್ಲಿ ಕಾಣಿಸುತ್ತವೆ. ಈ ಸುಂಟರಗಾಳಿಯಿಂದ ಆಗುವ ಅನಾಹುತಗಳು ಅಪಾರ. ಪ್ರಪಂಚದ ಕೆಲವು ಭೀಕರ ಸುಂಟರಗಾಳಿಗಳು ಏನೆಲ್ಲಾ ಹಾನಿಯನ್ನು ಉಂಟು ಮಾಡಿವೆ ಎಂದು ತಿಳಿಯೋಣ..

1970ರ ಭೋಲಾ ಸುಂಟರಗಾಳಿ (Bhola Cyclone): ಇದೊಂದು ಉಷ್ಣವಲಯದಲ್ಲಿ ಎದ್ದ ಭೀಕರ ಮಾರಣಾಂತಿಕ ಸುಂಟರಗಾಳಿ.  ನವೆಂಬರ್ 12, 1970 ರಲ್ಲಿ ಇಂದಿನ ಬಾಂಗ್ಲಾದೇಶದಲ್ಲಿ ಎದ್ದ ಈ ಬಿರುಗಾಳಿ ಅಪಾರ ಹಾನಿಯನ್ನೇ ಉಂಟುಮಾಡಿತು. ಇದು ಪಶ್ಚಿಮ ಬಂಗಾಳದಲ್ಲೂ ಭೀಕರ ಪರಿಣಾಮ ಉಂಟುಮಾಡಿತು. ಇದನ್ನು ಐತಿಹಾಸಿಕ ಸುಂಟರಗಾಳಿಯೆಂದು ಕರೆಯಬಹುದೇನೋ? ಇದು ತೆಗೆದುಕೊಂಡ ಮಾನವ ಬಲಿ ಸುಮಾರು ಮೂರು ಲಕ್ಷದಿಂದ ಐದು ಲಕ್ಷ! ಅಕ್ಷರಶಃ ಗಂಗಾನದಿಯ ಮುಖಜ ಪ್ರದೇಶದ ಹಳ್ಳಿಗಳು, ಮನೆ ಮಠಗಳು, ಪ್ರಾಣಿಗಳು ಸರ್ವವೂ ಒಂದೇ ಹೊಡೆತದಲ್ಲಿ ಕೊಚ್ಚಿ ನಿರ್ಮಾಣಗೊಂಡವು.

ಟೈಫೂನ್ ನೀನಾ 1975: ಇದು 1975 ರಲ್ಲಿ ಚೀನಾದಲ್ಲಿ ಘಟಿಸಿದ ಸೂಪರ್ ಟೈಫೂನ್ ನೀನಾ ಸುಂಟರಗಾಳಿ!  ಇದು ಚೀನಾದ ದೊಡ್ಡ ಅಣೆಕಟ್ಟಾದ ' ಬ್ಯಾನ್ ಕಿಯೋ ಡ್ಯಾಮ್' ಅನ್ನು ಹೇಳಹೆಸರಿಲ್ಲದಂತೆ ಕೊಚ್ಚಿ ಹಾಕಿತ್ತು. ಇದರಿಂದ ಜಲಪ್ರಳಯವೇ ಆಗಿ ಇತರೆ ಸಣ್ಣಪುಟ್ಟ ಡ್ಯಾಮುಗಳು ಹೇಳಹೆಸರಿಲ್ಲದಂತೆ ನಿರ್ನಾಮವಾಗಿ ಹೋದವು. ಈ ಭೀಕರ ದುರ್ಘಟನೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡರು. ಸಾವಿರಾರು ಹಳ್ಳಿಗಳು ಜಲಾವೃತಗೊಂಡು ಪ್ರಾಣಿಗಳು, ಆಹಾರ ನೀರಿಗೆ ಆಹುತಿಯಾಯಿತು. ಇದನ್ನು ಇತ್ತೀಚಿನ ಎರಡನೆಯ ಅತ್ಯಂತ ಭೀಕರ ಸುಂಟರಗಾಳಿ ಎನ್ನಬಹುದು.

ಕೆನ್ನಾ ಸುಂಟರಗಾಳಿ: ಮೂರನೆಯ ಮಹತ್ವದ ಭೀಕರ ಸುಂಟರಗಾಳಿ ಈ ಕೆನ್ನಾ ಸುಂಟರಗಾಳಿ! ಇದು ಉತ್ತರ ಅಮೇರಿಕದ ಮೆಕ್ಸಿಕೋ ಕರಾವಳಿ ತೀರದಲ್ಲಿ ಬೀಸಿದ ಭೀಕರ ಸುಂಟರಗಾಳಿ. 25 ಅಕ್ಟೋಬರ್ 2002ರಲ್ಲಿ ಉಂಟಾದ ಈ ಸುಂಟರಗಾಳಿ ಸ್ಯಾನ್ ಬ್ಲಾಸ್ ಮತ್ತು ನಯಾರಿತ್ ನಗರಗಳನ್ನು ಬಲಿತೆಗೆದುಕೊಂಡಿತ್ತು. 16 ಅಡಿ ವಿಸ್ತಾರವಾದ ಭೀಕರ ಗಾಳಿಯ ಅಲೆಗಳು ಸುಮಾರು ಗಂಟೆಗೆ 140 ಮೈಲಿ ವೇಗದಲ್ಲಿ ಬೀಸಿ ಸಂಪೂರ್ಣ ಆಹುತಿ ತೆಗೆದುಕೊಂಡವು. ಇದರಿಂದ ಸುಮಾರು 101 ದಶಲಕ್ಷ ಡಾಲರ್ ಮೌಲ್ಯದ ಹಾನಿಯಾಗಿರಬಹುದೆಂದು ಅಂದಾಜಿಸಲಾಗಿದೆ.

ಇಂಕಿ ಸುಂಟರಗಾಳಿ: ಸಪ್ಟಂಬರ್ 1992 ಒಂದು ದಿನ ಪುಟ್ಟ ದ್ವೀಪವಾದ ಹವಾಯಿಯ ಜನ ಕಡಲ ಅಲೆಗಳೊಂದಿಗೆ ಆಟವಾಡುತ್ತಾ ಮೈಮರೆತಿದ್ದಾಗ ಯಾವ ಸುಳಿವು ಕೊಡದೆ ಹೆಮ್ಮಾರಿಯಂತೆ ಭೂಮಿಗೆ ಬೀಸಿದ ಈ ಭೀಕರ ಬಿರುಗಾಳಿ ಇದು. ಅತ್ಯಾಶ್ಚರ್ಯವೆಂದರೆ ಈ ಸುಂಟರಗಾಳಿಗೆ ಸಿಲುಕಿ ಸತ್ತವರು ಕೇವಲ ಆರು ಜನರು! ಇಂತಹ ಪ್ರಾಕೃತಿಕ ದುರಂತಗಳನ್ನು ಅನೇಕ ಬಾರಿ ಸಮರ್ಥವಾಗಿ ಎದುರಿಸಿದ್ದ ಹವಾಯಿಯ ಜನರಿಗೆ ಪ್ರಕೃತಿಯೇ ಎದೆಗಾರಿಕೆಯನ್ನು ಕಲಿಸಿತ್ತು. ಆದರೆ ಇಂಕಿ ಸುಂಟರಗಾಳಿಯಿಂದ ಈ ಪುಟ್ಟ ದ್ವೀಪ ಅನುಭವಿಸಿದ ನಷ್ಟ 1.8 ಶತಕೋಟಿ ಡಾಲರ್ ಗಳು!

(ಮುಂದುವರಿಯುತ್ತದೆ)

-ಕೆ. ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ