ಮಣ್ಣು
ಕೆಲವು ದಿನಗಳ ಹಿಂದೆ ಸಂಪದದಲ್ಲಿ ನನ್ನದೊಂದು ಲೆಖನ "ಮಣ್ಣು ಮುಟ್ಟದವರು [ಮೆಟ್ಟದವರು]" ವನ್ನು ಹಾಕಿದ್ದೆ.
ಈ ಲೆಖನವನ್ನು ಮುದ್ರಿಸಿ ಗೆಳೆಯರಿಗೆ ಓದಲು ಕೊಟ್ಟಿದ್ದೆ. ಆಗೊಬ್ಬ ಆತ್ಮೀಯರು ಪುರಂದರ ದಾಸರು ಮಣ್ಣಿನ ಮಹತ್ವ ವನ್ನು ವಿವರಿಸಿ ಬರೆದುದನ್ನು ರಾಗಬದ್ದವಾಗಿ ಹಾಡಿ ನಮಗೆಲ್ಲಾ ಸಂತಸ ನೀಡಿದ್ದರು.
ಆ ದಾಸರ ಪದವನ್ನು ಈ ಕೆಳಗೆ ಸಂಪದಿಗರೊಂದಿಗೆ ಹಂಚಿಕೊಂಡಿದ್ದೇನೆ.
ಮಣ್ಣಿಂದ ಕಾಯ ಮಣ್ಣಿಂದ
ಮಣ್ಣಿಂದ ಸಕಲ ದರುಶನಗಳೆಲ್ಲಾ
ಮಣ್ಣಿಂದ ಸಕಲ ವಸ್ತುಗಳೆಲ್ಲಾ
ಮಣ್ಣು ಬಿಟ್ಟವರಿಗೆ ಆಧಾರವಿಲ್ಲಾ
ಅಣ್ಣಗಳೆಲ್ಲರೂ ಕೇಳಿರಯ್ಯ !!ಮಣ್ಣಿಂದ!!
ಅನ್ನ ಉದಕ ಊಟವೀಯೋದು ಮಣ್ಣು
ಬಣ್ಣ ಬಂಗಾರ ಬೊಕ್ಕಸವೆಲ್ಲಾ ಮಣ್ಣು
ಉನ್ನತವಾದ ಪರ್ವತವೆಲ್ಲಾ ಮಣ್ಣು
ಕಣ್ಣು ಮೂರುಳ್ಳವನ ಕೈಲಾಸ ಮಣ್ಣು !!೧!!
ದೇವರ ಗುಡಿಮಠ ಮನೆಯೆಲ್ಲಾ ಮಣ್ಣು
ಆವಾಗಲಾಡುವ ಮಡಿಕೆಯು ತಾ ಮಣ್ಣು
ಕೋವಿದರಸರ ಕೋಟೆಗಳೆಲ್ಲಾ ಮಣ್ಣು
ಪಾವನ ಗಂಗೆಯ ತಡಿಯೆಲ್ಲಾ ಮಣ್ಣು !!೨!!
ಭತ್ತ ಭರಣ ಧಾನ್ಯ ಬೆಳೆವುದೇ ಮಣ್ಣು
ಸತ್ತವರನು ಹೂಳಿ ಸುಡುವುದೇ ಆ ಮಣ್ಣು
ಉತ್ತಮವಾದ ವೈಕುಂಠವೇ ಆ ಮಣ್ಣು
ಪುರಂದರ ವಿಠಲನ ಪುರವೆಲ್ಲ ಮಣ್ಣು !!೩!!
ಮಧ್ಯಮಾವರ್ತಿ ರಾಗ, ಛಾಪು ತಾಳದಲ್ಲಿರುವ ಈ ದಾಸರ ಪದವನ್ನು ಕೇಳಲು ಬಹಳ ಮದುರವಾಗಿರುತ್ತದೆ.
ಅವಕಾಶವಾದಾಗ ಕೇಳಿ ಸಂತಸಪಡಿ ಸಂಪದಿಗರೆ.