ಮಲ ಹೊರುವ ಪದ್ಧತಿಗೆ ತಡೆ ಯಾವಾಗ?
ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಬಾಲಕನ ಕೈಯಿಂದ ಮಲ-ಮೂತ್ರ ಕಟ್ಟಿದ್ದ ಗುಂಡಿಯನ್ನು ಸ್ವಚ್ಛಗೊಳಿಸಿದ ಮತ್ತೊಂದು ಅಮಾನವೀಯ ಘಟನೆ ವರದಿಯಾಗಿದೆ. ಬಡ ಬಾಲಕನನ್ನು ತುಮಕೂರಿನಿಂದ ಕರೆದೊಯ್ದು ಗುತ್ತಿಗೆದಾರ (ಏಜೆನ್ಸಿ) ಈ ಕೆಲಸ ಮಾಡಿಸಿದ್ದಾರೆ. ಅದೂ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಆವರಣದಲ್ಲಿಯೇ ಘಟನೆ ನಡೆದಿದೆ. ಕೊರಟಗೆರೆ, ರಾಜ್ಯದ ಗೃಹ ಸಚಿವರು ಪ್ರತಿನಿಧಿಸುವ ಕ್ಷೇತ್ರ. ಇಲ್ಲಿಯೇ ಇಂತಹ ಘಟನೆ ಮರು ಕಳಿಸಿರುವುದು ವಿಪರ್ಯಾಸ.
ಮಲ ತುಂಬಿದ ಗುಂಡಿಯನ್ನು ಮನುಷ್ಯರ ಕೈತಿಂದ ಸ್ವಚ್ಛಗೊಳಿಸುವ ದೃಶ್ಯವೇ ಭೀಕರ, ಭೀಬತ್ಸ. ಮನುಷ್ಯರಾದವರಾರೂ ಮುಗ್ಧರನ್ನು ಬಳಸಿ ಈ ಕೆಲಸ ಮಾಡಿಸಲಾರರು. ಮಾಡಿಸಬಾರದು ಕೂಡಾ. ಮಲ ಹೊರುವ ಪದ್ಧತಿ ನಿಷೇಧಿಸಿದ್ದರೂ ಇಂತಹ ಪ್ರಕರಣಗಳು ಮರುಕಳಿಸುತ್ತಿರುವುದು ಕಳವಳಕಾರಿ.
ಕೊರಟಗೆರೆ ಬಸ್ ನಿಲ್ದಾಣದ ಅಧಿಕಾರಿಗಳು ಕೂಡ ಈ ಅನಿಷ್ಟ ಘಟನೆಯ ಹೊಣೆಗಾರರು. ಶಾಲೆಯಲ್ಲಿ ಕುಳಿತು ಪಾಠಕೇಳಬೇಕಿದ್ದ ಬಾಲಕ ಬರಿಮೈಯಿಂದ ಮಲಮೂತ್ರ ಬಾಚಿ ಹಾಕುವುದನ್ನು ಈ ಅಧಿಕಾರಿಗಳು ನೋಡಿಕೊಂಡು ಸುಮ್ಮನಿದ್ದರು ಎನ್ನುವುದೇ ಅಚ್ಚರಿಯ ಸಂಗತಿ. ಸದ್ಯಕ್ಕೆ ಗುತ್ತಿಗೆದಾರ ಸೇರಿ ನಾಲ್ವರ ವಿರುದ್ಧ ತಹಶೀಲ್ದಾರ್ ದೂರು ನೀಡಿದ್ದಾರೆ. ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದು ಇಲ್ಲಿಗೆ ಮುಗಿಯಬಾರದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಆಗಲೇ ಬೇಕು.
ಈ ಆಧುನಿಕ ಕಾಲದಲ್ಲಿ ಶೌಚಗುಂಡಿ ಸ್ವಚ್ಛಗೊಳಿಸಲು ಮನುಷ್ಯರನ್ನು ಬಳಸಿಕೊಳ್ಳುವುದು ಅಮಾನವೀಯವಷ್ಟೇ ಅಲ್ಲ, ಅನಾಗರಿಕವೂ ಹೌದು. ಈ ಕೆಲಸಗಳಿಗಾಗಿ ನೂರಾರು ರೀತಿಯ ಯಂತ್ರೋಪಕರಣಗಳು ಅಭಿವೃದ್ಧಿಗೊಂಡಿದೆ. ಮಲೀನ ಗುಂಡಿ ಸ್ವಚ್ಛಗೊಳಿಸಲು ಜೆಟ್ಟಿಂಗ್ ಯಂತ್ರ ಬಳಸಬೇಕು. ಮನುಷ್ಯರನ್ನು ಗುಂಡಿಗಳಿಗೆ ಇಳಿಸಬಾರದು ಎನ್ನುವ ಕಡ್ಡಾಯ ನಿಯಮ ಇದೆ. ಎಂಥದ್ದೇ ಸಂದರ್ಭದಲ್ಲೂ ಮಲ ಸ್ವಚ್ಛತೆಗೆ ಯಂತ್ರಗಳನ್ನೇ ಬಳಸಬೇಕು. ಗುತ್ತಿಗೆ ನೀಡುವ ವೇಳೆ ಈ ಎಲ್ಲ ಷರತ್ತುಗಳನ್ನು ಸ್ಥಳೀಯ ಆಡಳಿತ ಏಜೆನ್ಸಿಗಳಿಗೆ ವಿಧಿಸಿಯೇ ಇರುತ್ತದೆ. ಆದರೂ ಕೊರಟಗೆರೆಯಲ್ಲಿ ಗುತ್ತಿಗೆದಾರ ಸಂಸ್ಥೆ ಈ ಲೋಪ ಎಸಗಿದೆ.
ಬಸ್ ನಿಲ್ದಾಣದ ಒಳಗೆ ಖಾಸಗಿ ಯಂತ್ರೋಪಕರಣ ಸಾಗಣೆಗೆ ನಿರ್ಬಂಧ ಇರುವುದರಿಂದ ತುರ್ತು ರಿಪೇರಿಗೆ ಕೆಲಸಗಾರರನ್ನೇ ಕಳಿಸಬೇಕಾಯಿತು ಎಂದು ಗುತ್ತಿಗೆದಾರ ಏಜೆನ್ಸಿ ಸಬೂಬು ಹೇಳಿದೆ. ಇದಕ್ಕೆ ಬಸ್ ನಿಲ್ದಾಣದ ಅಧಿಕಾರಿಗಳು ಹಾರಿಕೆಯ ಉತ್ತರ ನೀಡಿ ಜಾರಿಕೊಳ್ಳುವ ಯತ್ನ ಮಾಡಿರುವುದು ಪ್ರಮಾದವೇ ಸರಿ.
ಇಂತಹ ಕೆಲಸಗಳಲ್ಲಿ ತೊಡಗುವ ವ್ಯಕ್ತಿಗಳ ಆರೋಗ್ಯ ಸಂಪೂರ್ಣ ಹಾಳಾಗುತ್ತದೆ. ಮಲಗುಂಡಿ ಸ್ವಚ್ಛ ಮಾಡುವ ಬಹುಪಾಲು ಮಂದಿ ಮದ್ಯ ಸೇವನೆಯ ಚಟಕ್ಕೆ ಈಡಾಗುತ್ತಾರೆ. ಇದರಿಂದಲೂ ಅವರ ಆರೋಗ್ಯ ಹಾಗೂ ಆರ್ಥಿಕ ಸ್ಥಿತಿ ಅಧ್ವಾನಗೊಳ್ಳುತ್ತದೆ. ಇದೆಲ್ಲದರ ಹೊಣೆಯನ್ನು ಏಜೆನ್ಸಿಗಳ ಹೆಗಲಿಗೆ ಹೊರಿಸಿ ದಂಡಿಸಬೇಕು.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೧೨-೧೧-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ