ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
ನಮ್ಮ ಮಾಧ್ಯಮಗಳು ಸ್ವಯಂ ನಿಯಂತ್ರಣವನ್ನು ಅನುಸರಿಸಬೇಕೆಂದು ಒಬ್ಬ ಓದುಗ ಹಾಗೂ ನೋಡುಗಳಾಗಿ ನಾನು ಒತ್ತಾಯಿಸುತ್ತಿದ್ದೇನೆ.
ಏಕೆಂದರೆ, ಮಾಧ್ಯಮಗಳು ಇಬ್ಬದಿ ನೀತಿ ಪ್ರದರ್ಶಿಸುತ್ತಿವೆ. ಖಾಸಗಿ ಬದುಕನ್ನು ರಸವತ್ತಾಗಿ ಬಣ್ಣಿಸುವ ಹಿಂದೆ ವಿಕೃತ ಮನಸ್ಸು ಮಾತ್ರ ಇರಲು ಸಾಧ್ಯ. ಏರಿದವನು ಕೆಳಗೆ ಬಿದ್ದರೆ ಮಾಧ್ಯಮಕ್ಕೆ ಎಂಥದೋ ವಿಕೃತ ಆನಂದ. ತಕ್ಕ ಶಾಸ್ತಿಯಾಯಿತು ಎಂಬ ಭಾವನೆ. ಸಲ್ಮಾನ್ಖಾನ್ ಹಾಗೈ ವಿವೇಕ್ ಒಬೆರಾಯ್ ಜೊತೆ ಐಶ್ವರ್ಯಾ ರೈ ಸಂಬಂಧ ಮುರಿದಾಗ ಮಾಧ್ಯಮ ಆನಂದಪಟ್ಟಂತೆ ವರ್ತಿಸಿತು. ಮಾನ್ಯತಾ-ಸಂಜಯ್ ದತ್ತ ವಿವಾಹ ವಿವಾದ ಹುಟ್ಟಿದ್ದೂ ಇಂಥದೇ ಮನಃಸ್ಥಿತಿಯಿಂದ.
ನನಗೆ ಗೊತ್ತಿರುವಂತೆ, ಮಾಧ್ಯಮದಲ್ಲಿ ಕೆಲಸ ಮಾಡುವ ಬಹುತೇಕ ಜನ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು. ಆದರೆ, ಅವರ ಒಡನಾಟ ಮೇಲ್ವರ್ಗದ (ಆರ್ಥಿಕವಾಗಿ) ಜನರ ಜೊತೆ. ನಿತ್ಯ ಅವರ ಜೀವನಶೈಲಿ, ಖ್ಯಾತಿ, ರೂಪ, ಅವಕಾಶ ಕಂಡು ಮಾಧ್ಯಮದವರಲ್ಲಿ ಮತ್ಸರ ಉಂಟಾಗುತ್ತದೆ ಎಂದು ಕಾಣಿಸುತ್ತದೆ. ಅದಕ್ಕೆಂದೇ ಅದನ್ನು ವಿಕೃತವಾಗಿ ಚಿತ್ರಿಸುವ ಮೂಲಕ, ಸಾರ್ವಜನಿಕ ಚರ್ಚೆಯ ವಿಷಯವನ್ನಾಗಿಸುವ ಮೂಲಕ ಇವರು ವಿಕೃತ ಆನಂದ ಅನುಭವಿಸುತ್ತಾರೆ.
ಮಾಧ್ಯಮದಲ್ಲಿ ನನ್ನ ಗೆಳತಿಯರು ಹಾಗೂ ಗೆಳೆಯರು ತುಂಬ ಜನ ಇದ್ದಾರೆ. ಅವರೊಂದಿಗೆ ಅನೇಕ ಸಾರಿ ಈ ಬಗ್ಗೆ ಚರ್ಚಿಸಿದ್ದೇನೆ. ವಾದಿಸಿದ್ದೇನೆ. ಮುನಿಸಿಕೊಂಡಿದ್ದೇನೆ. ಆದರೂ, ನನ್ನ ಅಭಿಪ್ರಾಯ ಬದಲಾಗಿಲ್ಲ. ಇಷ್ಟು ದಿನದ ಬೆಳವಣಿಗೆಗಳನ್ನು ನೋಡಿದ ನಂತರ ಅವು ಬದಲಾಗುವ ಸಾಧ್ಯತೆಗಳೂ ಕಾಣುತ್ತಿಲ್ಲ.
ಖಾಸಗಿ ಬದುಕೆಂಬುದು ಪ್ರತಿಯೊಬ್ಬನ ವೈಯಕ್ತಿಕ ಸ್ವತ್ತು. ಅದರಲ್ಲಿ ಕೈ ಹಾಕಲು ಸರ್ಕಾರಕ್ಕೇ ಅಧಿಕಾರವಿಲ್ಲ. ಇನ್ನು ಮಾಧ್ಯಮಕ್ಕಂತೂ ಅವಕಾಶವೇ ಇಲ್ಲ. ಆದರೂ ಕೈ ಹಾಕುತ್ತಾರೆ. ನಾವು ನೋಡಿಕೊಂಡು ಸುಮ್ಮನೇ ಕೂಡುತ್ತೇವೆ. ಕ್ರೈಂ ವರದಿಗಳು, ಕಾರ್ಯಕ್ರಮಗಳು ಬರತೊಡಗಿದನಂತರ, ಖಾಸಗಿ ಬದುಕೆಂಬುದು ಜನಸಾಮಾನ್ಯರ ಪಾಲಿಗೂ ಇಲ್ಲವಾಗಿದೆ.
ಇದಕ್ಕೆ ಸ್ವಯಂ ನೀತಿ ಸಂಹಿತೆ ಬೇಕು. ಏಕೆಂದರೆ, ಕಾನೂನು ಮಾಡಿದರೆ, ಅದರಡಿ ತೂರಿಕೊಳ್ಳುವ ಪ್ರಯತ್ನ ಪ್ರಾರಂಭವಾಗುತ್ತದೆ. ಇದರಿಂದ ಇನ್ನಷ್ಟು ವಿಕೃತಿ ಸೃಷ್ಟಿಯಾಗುವ ಅಪಾಯವಿದೆ. ಮಾಧ್ಯಮದಲ್ಲಿರುವವರೂ ನಮ್ಮಂತೆ ಸಾಮಾನ್ಯ ಮನುಷ್ಯರೇ. ನಮ್ಮ ರಾಗದ್ವೇಷಗಳು ಅವರಲ್ಲೂ ಇವೆ. ಆದರೆ, ಅವರ ರಾಗದ್ವೇಷ ಖಾಸಗಿಯಾಗಿ ಉಳಿಯದೇ ನಾಡಿನಾದ್ಯಂತ ಹರಡುವುದರಿಂದ, ಅವರ ಭಾವನೆಗಳು ಅವರ ನಿಯಂತ್ರಣದಲ್ಲಿ ಇದ್ದರೆ ಉತ್ತಮ.
ಆದ್ದರಿಂದ, ಮಾಧ್ಯಮಮಿತ್ರರು ಈ ಬಗ್ಗೆ ಸ್ವಯಂ ನಿಯಂತ್ರಣ ಹಾಕಿಕೊಳ್ಳಲಿ. ಆಯಾ ಪತ್ರಿಕೆಗಳು ಹಾಗೂ ಚಾನೆಲ್ಗಳ ಸಂಪಾದಕರೂ ಇತ್ತ ಯೋಚಿಸಬೇಕು.
- ಪಲ್ಲವಿ. ಎಸ್.
Comments
ಉ: ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
In reply to ಉ: ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ by girish.rajanal
ಉ: ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ