ಮೊಳಕೆ ಬರಿಸಿದ ಹೆಸರುಕಾಳನ್ನು ದಿನವೂ ತಿನ್ನಿ !

ಮೊಳಕೆ ಬರಿಸಿದ ಹೆಸರುಕಾಳನ್ನು ದಿನವೂ ತಿನ್ನಿ !

ಮೊಳಕೆ ಬರಿಸಿದ ಧಾನ್ಯಗಳು ಬಹಳ ಆರೋಗ್ಯದಾಯಕವೂ, ಸ್ವಾದಿಷ್ಟವೂ ಆಗಿರುತ್ತದೆ. ಮೊಳಕೆ ಬರಿಸಿದ ಕಾಳುಗಳ ಉಪಯೋಗಗಳು ಅಷ್ಟಿಷ್ಟಲ್ಲ. ಅದರಲ್ಲೂ ಬಹಳ ಪೋಷಕಾಂಶಗಳನ್ನು ಹೊಂದಿರುವ ಹೆಸರು ಕಾಳನ್ನು ಮೊಳಕೆ ಬರಿಸಿ ಸೇವಿಸಿದರೆ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಅಧಿಕವಾಗುತ್ತದೆ. ಮೊಳಕೆ ಬರಿಸಿದ ಹೆಸರು ಕಾಳಿನ ಉಪಯೋಗ ಒಂದೆರಡಲ್ಲ. 

ಮೊಳಕೆ ಬರಿಸಿದ ಹೆಸರು ಕಾಳು ಅಥವಾ ಮೂಂಗ್ ದಾಲ್ (ಹಿಂದಿ) ನಲ್ಲಿ ಪ್ರೊಟೀನ್, ಫೈಬರ್, ಮ್ಯಾಗ್ನೀಷಿಯಂ, ರಂಜಕ, ಪೊಟ್ಯಾಷಿಯಂ, ಸತು, ಕಬ್ಬಿಣ, ತಾಮ್ರ, ವಿಟಮಿನ್ ಎ, ಬಿ, ಸಿ, ಇ ಮೊದಲಾದುವುಗಳು ಹೇರಳವಾಗಿವೆ. ಆರೋಗ್ಯದ ಬಗ್ಗೆ ಕಾಳಜಿ ಇರುವವರು ಬಹುತೇಕವಾಗಿ ಮೊಳಕೆ ಬರಿಸಿದ ಹೆಸರು ಕಾಳುಗಳನ್ನು ತಿನ್ನುವ ಅಭ್ಯಾಸ ಮಾಡಿಕೊಂಡಿದ್ದಾರೆ. ಮೊಳಕೆ ಬರಿಸಿದ ಹೆಸರು ಕಾಳುಗಳನ್ನು ಪದಾರ್ಥ ರೂಪದಲ್ಲಿ, ಸಲಾಡ್ ರೂಪದಲ್ಲಿ ಅಥವಾ ನೇರವಾಗಿ ಸೇವಿಸಬಹುದಾಗಿದೆ. ಇದರಿಂದಾಗಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಅಧಿಕಗೊಂಡು ಹಲವಾರು ರೋಗಗಳಿಂದ ರಕ್ಷಣೆ ಪಡೆಯಬಹುದು.

* ಚರ್ಮದ ಸಮಸ್ಯೆಯ ಪರಿಹಾರಕ್ಕೆ ಈ ಮೊಳಕೆ ಬರಿಸಿದ ಹೆಸರುಕಾಳಿನಲ್ಲಿರುವ ಆಂಟಿಯೋಕ್ಸಿಡೆಂಟ್ ಗಳು ಮತ್ತು ವಿಟಮಿನ್ ಗಳು ಸಹಕಾರ ನೀಡುತ್ತವೆ. ಚರ್ಮಕ್ಕೆ ಹೊಳಪನ್ನು ನೀಡುತ್ತವೆ. 

* ಮೂಳೆಯ ಆರೋಗ್ಯಕ್ಕಾಗಿ ಈ ಕಾಳಿನಲ್ಲಿರುವ ಕ್ಯಾಲ್ಸಿಯಂ ಮತ್ತು ಮ್ಯಾಗ್ನೀಷಿಯಂ ಅಂಶಗಳು ಸಹಕಾರಿ. 

* ಮೊಳಕೆಯೊಡೆದ ಹೆಸರುಕಾಳಿನಲ್ಲಿರುವ ಫೈಟೋಕೆಮಿಕಲ್ ಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಯಂತ್ರಿಸಲು ಸಹಕಾರಿ.

* ಹೆಸರು ಹಾಳು ಮೊಳಕೆ ಬರಿಸಿ ನಿಯಮಿತವಾಗಿ ಸೇವನೆ ಮಾಡುವುದರಿಂದ ರಕ್ತಹೀನತೆ ಅಥವಾ ಅನೀಮಿಯಾದ ಸಮಸ್ಯೆ ಕಾಣಿಸಲಾರದು. ಏಕೆಂದರೆ ಇದರಲ್ಲಿರುವ ಕಬ್ಬಿಣಾಂಶ ಮತ್ತು ಪ್ರೋಟೀನ್ ರಕ್ತಹೀನತೆಯನ್ನು ನಿವಾರಿಸುವಲ್ಲಿ ಸಹಕಾರಿ.

* ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮೊಳಕೆ ಕಾಳು ಬಹಳ ಸಹಕಾರಿ. ಇದರಲ್ಲಿರುವ ಜೀವಸತ್ವಗಳು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿ ದೇಹದ ಆರೋಗ್ಯವನ್ನು ಕಾಪಾಡುತ್ತದೆ.

* ನಿಮ್ಮ ಮಾನಸಿಕ ಒತ್ತಡವನ್ನು ನಿವಾರಿಸುವಲ್ಲಿ ಮೊಳಕೆ ಬರಿಸಿದ ಹೆಸರು ಕಾಳು ಬಹಳ ಸಹಾಯ ಮಾಡುತ್ತದೆ. ಈ ಕಾಳುಗಳು ನರಮಂಡಲವನ್ನು ಶಮನಗೊಳಿಸುವ ಮೂಲಕ ಒತ್ತಡ ನಿವಾರಣೆ ಮಾಡುತ್ತದೆ. 

* ಅಧಿಕ ಫೈಬರ್ ಮತ್ತು ಉತ್ಕರ್ಷಣ ನಿರೋಧಕ ಗುಣಗಳೊಂದಿಗೆ ಸಮೃದ್ಧವಾಗಿರುವ ಮೊಳಕೆ ಬರಿಸಿದ ಹೆಸರು ಕಾಳುಗಳು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಹೃದಯದ ಕಾಯಿಲೆಗಳಿಂದ ದೂರವಿಡುತ್ತದೆ. 

* ಮಧುಮೇಹಿಗಳು ಅಥವಾ ಡಯಾಬಿಟೀಸ್ ಸಮಸ್ಯೆ ಇರುವವರು ಈ ಕಾಳುಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ನಿಯಂತ್ರಣದಲ್ಲಿರುತ್ತದೆ.

* ಈ ಕಾಳುಗಳಲ್ಲಿರುವ ಫೈಬರ್ ಅಂಶಗಳು ನಾವು ತಿಂದ ಆಹಾರವನ್ನು ಜೀರ್ಣ ಮಾಡಲು ಸಹಕಾರಿಯಾಗಿದೆ. ಇದರಿಂದ ಹೊಟ್ಟೆಯ ಮತ್ತು ಅಜೀರ್ಣದ ಸಮಸ್ಯೆಗಳು  ಕಾಡುವ ಸಾಧ್ಯತೆಗಳು ಕಡಿಮೆ.

* ಹೆಸರು ಕಾಳುಗಳು ಕಡಿಮೆ ಕ್ಯಾಲೊರಿಗಳನ್ನು ಹೊಂದಿರುವುದರಿಂದ ಮತ್ತು ಅಧಿಕ ಪ್ರೋಟೀನ್ ಅಂಶಗಳಿರುವುದರಿಂದ ಇದರ ಸೇವನೆ ತೂಕ ನಿಯಂತ್ರಣದಲ್ಲಿ ಸಹಕಾರಿಯಾಗಿದೆ. ಈ ಕಾರಣಗಳಿಂದ ಮೊಳಕೆ ಬರಿಸಿದ ಹೆಸರು ಕಾಳುಗಳನ್ನು ದಿನಂಪ್ರತಿ ನಿಮ್ಮ ಆಹಾರದಲ್ಲಿ ಬಳಕೆ ಮಾಡುವುದು ಉತ್ತಮ.

(ಆಧಾರ)

ಚಿತ್ರ ಕೃಪೆ:ಅಂತರ್ಜಾಲ ತಾಣ